ಮಂಗಳವಾರ, ಅಕ್ಟೋಬರ್ 27, 2015

ಕವಿವಾಣಿ ವಿಶೇಷಾಂಕ ಅರ್ಥಪೂರ್ಣವಾಗಿದೆ: ಜಿ.ಭಾಗೀರಥಿ

ಚಿಂತಾಮಣಿ ತಾಲ್ಲೂಕು ಸಿರಿಗನ್ನಡ ವೇದಿಕೆಯ ವತಿಯಿಂದ ಮೂಡಿಬರುತ್ತಿರುವ ಕನ್ನಡ ಕವಿವಾಣಿ ಪತ್ರಿಕೆಯ ದೀಪಾವಳಿ ವಿಶೇಷಾಂಕವು ಬಹಳ ಅರ್ಥಪೂರ್ಣವಾಗಿದೆ ಎಂದು ಹಿರಿಯ ಕವಯತ್ರಿ ಜಿ.ಭಾಗೀರಥಿ ಅಭಿಪ್ರಾಯಪಟ್ಟರು.


    ನಗರದ ಟ್ಯಾಂಕ್ ಬಂಡ್ ರಸ್ತೆಯಲ್ಲಿರುವ ಶ್ರೀ ಸಾಯಿಬಾಬಾ ಮಂದಿರದಲ್ಲಿ ಅಯೋಜಿಸಲಾಗಿದ್ದ ವಿಶೇಷಾಂಕ ಬಿಡುಗಡೆ ಸಮಾರಂಭದಲ್ಲಿ ದೀಪಾವಳಿ ವಿಶೇಷಾಂಕವನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು ಪತ್ರಿಕೆಯು ಉದಯೋನ್ಮುಖರಿಗೆ ದಾರಿದೀಪವಾಗಿದೆಯಲ್ಲದೆ, ಸಾಹಿತ್ಯ ಕ್ಷೇತ್ರದಲ್ಲಿ ಎಲೆಮರೆಕಾಯಿಗಳಂತಿರುವ ಪ್ರತಿಭೆಗಳನ್ನು ಹೊರತರುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಉಚಿತವಾಗಿ ವಿತರಿಸಲ್ಪಡುತ್ತಿರುವ ಈ ಪತ್ರಿಕೆಯು ಸಾಹಿತ್ಯಾಸಕ್ತರಿಗೇಯೆಲ್ಲದೆ, ವಿದ್ಯಾರ್ಥಿಗಳಿಗೂ, ಶಿಕ್ಷಕರಿಗೂ ಸಹ ಬಹಳಷ್ಟು ಉಪಯುಕ್ತವಾಗಿದ್ದು ಜೊತೆಗೆ ಸಂಗ್ರಯೋಗ್ಯವೂ ಆಗಿದೆ ಎಂದು ಕೊಂಡಾಡಿದರು.

     ಹಿರಿಯ ಸಮಾಜಸೇವಕರಾದ ಆರ್.ಬಿ.ನಾರಾಯಣಸ್ವಾಮಿ ಮಾತನಾಡಿ ಎಲ್ಲರೀತಿಯಲ್ಲೂ ಅತ್ಯುತ್ತಮವಾಗಿ ಮೂಡಿಬರುತ್ತಿರುವ ಕವಿವಾಣಿ ಪತ್ರಿಕೆಯು ಸಮಾಜಮುಖಿ ಪತ್ರಿಕೆಯಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಎಂದರಲ್ಲದೆ, ಈ ಪತ್ರಿಕೆಗೆ ಉಜ್ವಲ ಭವಿಷ್ಯವಿದ್ದು ನೂರ್ಕಾಲ ಮುನ್ನಡೆಯಲೆಂದು ಶುಭಹಾರೈಸಿದರು.

      ಸಮಾಜ ಜ್ಯೋತಿ ರಾಜ್ಯಪ್ರಶಸ್ತಿ ಪುರಸ್ಕೃತರಾದ ಚಿಂತಕಿ ಹಸೀನಾಬೇಗಂ ಮಾತನಾಡಿ ಕಾಲೇಜು ವಿದ್ಯಾರ್ಥಿಯೋರ್ವನ ಸಂಪಾದಕತ್ವದಲ್ಲಿ ಮೂಡಿಬರುತ್ತಿರುವ ಕವಿವಾಣಿ ಪತ್ರಿಕೆಯು ರಾಜ್ಯ ಮತ್ತು ಹೊರರಾಜ್ಯಗಳಲ್ಲೂ ತನ್ನ ಕಂಪನ್ನು ಬೀರುತ್ತಿರುವುದು ಶ್ಲಾಘನೀಯ ಸಂಗತಿ ಎಂದರಲ್ಲದೆ, ಸಮಾಜದಲ್ಲಿ ಶಾಂತಿ-ಸೌಹಾರ್ದತೆ ನೆಲೆಗೊಳ್ಳಲು ಸಾಹಿತ್ಯ ದಿಂದ ಮಾತ್ರ ಸಾಧ್ಯವೆಂದ ಅವರು ಈ ನಿಟ್ಟಿನಲ್ಲಿ ಕವಿವಾಣಿ ಕಾಯೋನ್ಮುಖವಾಗಿದೆ ಎಂದು ಬಣ್ಣಿಸಿದರು.

     ಪತ್ರಿಕೆಯ ಸಂಪಾದಕ ಕೆ.ಎನ್.ಅಕ್ರಂಪಾಷ ಮಾತನಾಡಿ ಉದಯೋನ್ಮುಖ ಬರಹಗಾರರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರಾರಂಭವಾದ ಪತ್ರಿಕೆಯು ಕಡಿಮೆ ಅವಧಿಯಲ್ಲಿ ಹೆಚ್ಚು ಸಾಧನೆ ಮಾಡಿ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ ಎಂದರಲ್ಲದೆ, ಅವಕಾಶ ವಂಚಿತ ಪ್ರತಿಭೆಗಳಿಗೂ ಸೂಕ್ತ ವೇದಿಕೆಯನ್ನು ಕಲ್ಪಿಸಿರುವ ಪತ್ರಿಕೆಯು ಸಾಹಿತ್ಯದ ಎಲ್ಲಾ ಪ್ರಕಾರಗಳನ್ನು ಒಳಗೊಂಡು ಕನ್ನಡಿಗರ ಕನ್ನಡಿಯಾಗಿ ಹೊರಹೊಮ್ಮುತ್ತಿದ್ದು, ಇದಕ್ಕೆ ಸಾಹಿತ್ಯಾಸಕ್ತರ ಹಾಗೂ ಕನ್ನಡಾಭಿಮಾನಿಗಳ ಸಹಕಾರವೇ ಕಾರಣವೆಂದು ತಿಳಿಸಿದರು.

     ಓದುಗರ ಪರವಾಗಿ ಮಾತನಾಡಿದ ಕವಿ ನಂಜಪ್ಪರೆಡ್ಡಿ ರವರು ಪತ್ರಿಕೆಯ ಬೆಳವಣಿಗೆಗೆ ಓದುಗರ ಸಹಕಾರವೂ ಬಹಳ ಮುಖ್ಯವೆಂದು ಹೇಳಿದರಲ್ಲದೆ, ಈ ಪತ್ರಿಕೆಯು ಜ್ಞಾನಾರ್ಜನೆಗೆ  ಪೂರಕವಾದ ಪತ್ರಿಕೆಯಾಗಿದ್ದು ಇದರಲ್ಲಿರುವ ಪ್ರತಿಪುಟಗಳೂ ಅರ್ಥಪೂರ್ಣವಾಗಿದ್ದು ಕೊನೆಯ ಪುಟದವರೆವಿಗೂ ಓದಿಸಿಕೊಂಡು ಹೋಗುತ್ತದೆ ಎಂದು ಅಭಿಪ್ರಾಯ ಪಟ್ಟರು.

     ಅಧ್ಯಕ್ಷತೆ ವಹಿಸಿದ್ದ ವೇದಿಕೆಯ ಪ್ರಧಾನ ಕಾರ್ಯದರ್ಶಿ ಸಿ.ವೆಂಕಟರವಣಪ್ಪ ಮಾತನಾಡಿ ಇಂದಿನ ದಿನಗಳಲ್ಲಿ ಸಾಹಿತಿಗಳಿಗೆ ಸೂಕ್ತ ಮನ್ನಣೆ ಸಿಗುತ್ತಿಲ್ಲ , ಸಾಹಿತಿಗಳ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರಲ್ಲದ, ಸಾಹಿತ್ಯ ಹಾಗೂ ಮಾಧ್ಯಮಗಳು ಸಮಾಜಮುಖಿಯಾಗಿ ಕಾರ್ಯನಿರ್ವಹಿಸಿ ವಾಸ್ತವಿಕ ಅಂಶಗಳನ್ನು ಬಿಂಬಿಸಬೇಕೆಂದು ಕೋರಿದರು.

     ಈ ಸಂದರ್ಭದಲ್ಲಿ ಕಸಾಪ ನಿಕಟಪೂರ್ವ ಅಧ್ಯಕ್ಷ ಎನ್.ಮುನಿಕೃಷ್ಣಪ್ಪ, ಜನಪದ ಕಲಾವಿದ ಸೀಕಲ್ ನರಸಿಂಹಪ್ಪ, ಸಮಾಜ ಸೇವಕರಾದ ಎಸ್.ಕೆ.ಎಸ್. ಅಮೀರ್ ಜಾನ್, ರಾಜೇಶ್ವರಿ ನಾರಾಯಣ್, ಎನ್.ಸೀತಮ್ಮ, ಮಾಧವಿ ಪದ್ಮಲತಾ, ಕೆ.ಕೃಷ್ಣಪ್ಪ, ಎಸ್.ಸಿ.ಶ್ರೀನಿವಾಸರೆಡ್ಡಿ, ರಾಯಲ್ ರಮೇಶ್, ಗಾಯಕ ಜೆ.ವಿ.ಜಗನ್ನಾಥ್ , ರಾಜಮ್ಮ ಮುಂತಾದ ಗಣ್ಯರು ಉಪಸ್ಥಿತರಿದ್ದರು.