ಮಂಗಳವಾರ, ಸೆಪ್ಟೆಂಬರ್ 12, 2017

ತ್ಯಾಗ ಬಲಿದಾನಗಳ ಪ್ರತೀಕ- ಬಕ್ರೀದ್

ಬಕ್ರೀದ್ ಇದು ಜಗತ್ತಿನಾದ್ಯಂತ ಇರುವ ಮುಸ್ಲಿಂ ಬಾಂಧವರು ಹೆಮ್ಮೆಯಿಂದ ಹಾಗೂ ಭಕ್ತಿಪೂರಕವಾಗಿ ಆಚರಿಸುವ ಹಬ್ಬಗಳಲ್ಲಿ ಒಂದಾಗಿದೆ.ಈ ಪವಿತ್ರಹಬ್ಬವನ್ನು ಈದ್-ಏ-ಅಜಹ ಅಥವಾ ಈದುಲ್ ಜುಹಾ ಎಂತಲೂ ಕರೆಯುತ್ತಾರೆ.ಹೀಗೆಂದರೆ ಬಲಿದಾನ ಕೊಡುವ ಹಬ್ಬ ಎಂದರ್ಥ.ಪ್ರಾಣಿ ಬಲಿ ಕೊಡುವುದು ಈ ಹಬ್ಬದ ವಿಶೇಷ ವೈಶಿಷ್ಟವಾಗಿದೆ.
   ಈ ಹಬ್ಬದಂದು ಬಲಿದಾನ ಕೊಡುವುದಕ್ಕೆ ಒಂದು ಐತಿಹಾಸಿಕ ಧಾರ್ಮಿಕ ಹಿನ್ನಲೆ ಇದೆ.ಆದೇನೆಂದರೆ ಸಮಾರು ನಾಲ್ಕು ಸಾವಿರದ ಐದುನೂರು ವರ್ಷಗಳ ಹಿಂದೆ ಹಜ್ರತ್ ಎಂಬ ಒಬ್ಬ ಪೈಗಂಬರ್ ಪ್ರವಾದಿ ಇದ್ದರು.ಏಕದೇವೋಪಾಸನೆಯಲ್ಲಿ ಅಚಲ ನಂಬಿಕೆಯುಳ್ಳವರಾಗಿದ್ದ ಅವರು ಇರಾಕ್ ದೇಶದಲ್ಲಿ ಇಸ್ಲಾಂ ಧರ್ಮ ಪ್ರಚಾರಕ್ಕೆ ಕಂಕಣಬದ್ಧರಾಗಿ ನಿಂತವರಲ್ಲಿ ಮೊದಲಿಗರು.ಇವರ ಹೊಸ ಸಿದ್ಧಾಂತಕ್ಕೆ ಮಣಿಯದ ಕೆಲವರು ತೀವ್ರ ವಿರೋಧವನ್ನು ವ್ಯಕ್ತ ಪಡಿಸಿದರು.ಈ ಪರಿಸ್ಥಿತಿಯಲ್ಲಿ ಹಜ್ರತ್ ಇಬ್ರಾಹಿಂರವರು ತಮ್ಮ ವಿರೋಧಿಗಳನ್ನು ಬಿಟ್ಟು ಪ್ಯಾಲಿಸ್ತಿನ್ ನಗರಕ್ಕೆ ಹೋದರು.
   ಹಜ್ರತ್ ಸಾರಾಬೀಬಿಯವರು ಇಬ್ರಾಹಿಂರವರ ಧರ್ಮ ಪತ್ನಿಯಾದರು.ಈ ದಂಪತಿಗಳಿಗೆ ಸಂತಾನ ಭಾಗ್ಯವಿಲ್ಲದೆ ಬಹಳ ಚಿಂತಾಕ್ರಾಂತರಾಗಿದ್ದರು.ಮುಂದೆ ಮಕ್ಕಳಾಗುವ ಭರವಸೆ ಇಲ್ಲದೆ ಸಾರಾಬೀಬಿಯವರು ತಮ್ಮ ದಾಸಿಯಾಗಿದ್ದ ಹಾಜಿರಾಳನ್ನು ದ್ವಿತೀಯ ಪತ್ನಿಯನ್ನಾಗಿ ಸ್ವೀಕರಿಸಲು ಪತಿಗೆ ಒತ್ತಾಯಿಸಿದಾಗ ಇಬ್ರಾಹಿಂರವರು ಹಾಜಿರಾಳನ್ನು ದ್ವಿತೀಯ ಪತ್ನಿಯಾಗಿ ಸ್ವೀಕರಿಸಿಕೊಂಡರು.
   ತದನಂತರ ಅವರು ದೇವರನ್ನು ಕುರಿತು ಓ ದೇವರೇ ನಮಗೆ ವಿದ್ಯಾವಂತನೂ, ಬುದ್ಧಿವಂತನೂ, ದೈವಭಕ್ತನೂ ಆದ ಒಬ್ಬ ಮಗನನ್ನು ದಯಪಾಲಿಸು ಎಂಬುದಾಗಿ ಪ್ರಾರ್ಥಿಸಿದರು.ಈ ದಂಪತಿಗಳ ಪ್ರಾರ್ಥನೆ ಫಲಕಾರಿಯಾಯಿತು.ಅವರಿಗೆ ಸುಂದರವಾದ ಗಂಡು ಮಗುವೊಂದು ಜನಿಸಿತು.ಈ ದೇವರು ಕೊಟ್ಟ ಮಗನಿಗೆ ಇಸ್ಮಾಯಿಲ್ ಎಂದು ನಾಮಕರಣ ಮಾಡಿದರು.ಸರ್ವರ ಕಣ್ಮಣಿಯಾಗಿದ್ದ ಈ ಮುದ್ದು ಮಗುವನ್ನು ಅತ್ಯಂತ ಅಕ್ಕರೆ ಮತ್ತು ಜಾಗರೂಕತೆಯಿಂದ ಸಾಕಿ ಸಲುಹಿದರು.
  ಹೀಗೆ ಹಜ್ರತ್ ಇಬ್ರಾಹಿಂ ಸಂತಸದ ಸವಿಯನ್ನು ಅನುಭವಿಸುತ್ತಿದ ಸಂದರ್ಭದಲ್ಲಿ ಅವರ ಬಾಳಿನಲ್ಲಿ ಅಲ್ಲೋಲ ಕಲ್ಲೂಲವಾದ ಘಟನೆಯೊಂದು ನಡೆಯಿತು.ಅದೇನೆಂದರೆ ಇದ್ದಕ್ಕಿದ್ದಂತೆ ಅವರು ಒಂದು ವಿಚಿತ್ರವಾದ ಕನಸನ್ನು ಕಂಡರು.ಆ ಕನಸಿನಲ್ಲಿ ಅಲ್ಲಾಹನುಹೇ ಇಬ್ರಾಹಿಂ ನೀನು ಭಕ್ತಿ ಮತ್ತು ದಾನ-ಧರ್ಮಗಳಿಗೆ ಎತ್ತಿದ ಕೈ.ಇದೀಗ ನನಗೆ ಅತ್ಯಂತ ಪ್ರಿಯನಾದ ನಿನ್ನ ಮುದ್ದುಮಗ ಇಸ್ಮಾಯಿಲ್‌ನನ್ನು ನನ್ನ ಹೆಸರಿನಲ್ಲಿ ಬಲಿಕೊಡಬೇಕೆಂದು ನುಡಿದಂತಾಯಿತು.
   ಈ ಅನಿರೀಕ್ಷಿತ ವಾಣಿಯನ್ನು ಆಲಿಸಿದ ಹಜ್ರತ್ ಇಬ್ರಾಹಿಂ ವಿಸ್ಮಯ ಚಕಿತರಾದರು.ಆದರೆ ಅಲ್ಲಾಹನ ಇಚ್ಚೆಗೆ ವಿರುದ್ಧವಾಗಿ ನಡೆಯಲು ಅವರು ಸಿದ್ಧರಿರಲಿಲ್ಲ.ದೇವರಿಂದ ವರವಾಗಿ ಪಡೆದ ಮಗನನ್ನು ದೇವರಿಗೆ ಒಪ್ಪಿಸುವುದರಲ್ಲಿ ತಪ್ಪೇನಿಲ್ಲ ಎಂಬ ನಿರ್ಧಾರಕ್ಕೆ ಬಂದರು.ಅದರಂತೆಯೇ ಆನಂದೋಲ್ಲಾಸಗಳ ಸಕಾರ ಮೂರ್ತಿಯಂತಿದ್ದ ಬಾಲಕ ಇಸ್ಮಾಯಿಲ್‌ನನ್ನು ತನ್ನ ತಂದೆಯೊಡನೆ ಸೌದೆ ತರಲು ಕಾಡಿಗೆ ಹೋಗಲು ಸಿದ್ಧ ಮಾಡಿದರು.ಇದಾವುದನ್ನೂ ಅರಿಯದ ಬಾಲಕ ತಂದೆಯೊಡನೆ ಕಾಡಿನಲ್ಲಿ ಬಹುದೂರ ಪ್ರಾಯಾಣಿಸಿದನು.
   ಈ ದೂರ ಪ್ರಯಾಣದಿಂದ ಚಕಿತನಾದ ಬಾಲಕ ಇಸ್ಮಾಯಿಲ್ ತನ್ನನ್ನು ಇಷ್ಟು ದೂರ ಕರೆತರಲು ಕಾರಣವೆನೆಂದು ತನ್ನ ತಂದೆಯನ್ನು ಕೇಳಿದನು.ಆಗ ಬೇರೆ ವಿಧಿಯಿಲ್ಲದೆ ಹಜ್ರತ್ ಇಬ್ರಾಹಿಂರವರು ಕನಸಿನ ವಿಚಾರಗಳನ್ನೆಲ್ಲಾ ತಿಳಿಸಿದರು.ತಂದೆಯ ಮಾತುಗಳನ್ನು ಆಲಿಸಿದ ಬಾಲಕ ಇಸ್ಮಾಯಿಲ್ ತನ್ನ ತಂದೆಯನ್ನು ಉದ್ದೇಶಿಸಿ ಮಾತನಾಡಿದ ಬಾಲಕ ಇಸ್ಮಾಯಿಲ್ ಅಪ್ಪಾಜಿ ನನ್ನನ್ನು ಬೇಗನೆ ಅಲ್ಲಾಹನಿಗೆ ಅರ್ಪಿಸಿರಿ.ಬಲಿ ಕೊಡುವಾಗ ತಡವರಿಸದ ಹಾಗೆ ನನ್ನ ಕೈಕಾಲುಗಳನ್ನು ಹಗ್ಗದಿಂದ ಕಟ್ಟಿರಿ.ಮುದ್ದು ಮಗನನ್ನು ಬಲಿ ಕೊಡುವಾಗ ನಿಮಗೆ ಪುತ್ರವಾತ್ಸಲ್ಯ ಉಕ್ಕಿ ಬಂದು ಅತೀವ ನೋವಾಗಬಹುದು.ಅದಕ್ಕಾಗಿ ಈ ಭೀಕರ ದೃಶ್ಯ ಕಾಣದ ಹಾಗೆ ನಿಮ್ಮ ಕಣ್ಣುಗಳಿಗೆ ಬಟ್ಟೆ ಕಟ್ಟಿಕೊಳ್ಳಿ.ಈ ಪವಿತ್ರ ಕಾರ್ಯವನ್ನು ಬೇಗನೆ ನಿರ್ವಹಿಸಿ ಧನ್ಯರಾಗಿರಿ ಎಂದನು.
  ಮಗನ ಮಾತನ್ನು ಆಲಿಸಿದ ಹಜ್ರತ್ ಇಬ್ರಾಹಿಂರವರು ಅವನ ಸಲಹೆಯಂತೆಯೇ ಮುದ್ದು ಮಗನ ಶಿರವನ್ನು ಕೊಯ್ಯಲು ಮುಂದಾದರು.ಆದರೆ ಈ ಖಡ್ಗವು ಹರಿಯಲಿಲ್ಲ.ಮೂರು ಬಾರಿ ಪ್ರಯತ್ನಿಸಿದರೂ ಫಲಕಾರಿಯಾಗಲಿಲ್ಲ ಇದರಿಂದ ಅತೀವ ಕೋಪಗೊಂಡ ಹಜ್ರತ್ ಇಬ್ರಾಹಿಂರವರು ತಮ್ಮ ಬಳಿ ಇದ್ದ ಖಡ್ಗವನ್ನು ಬಿಸಾಡಿದರು.
   ಕೆಳಗೆ ಬಿದ್ದ ಈ ಖಡ್ಗವು ಇಬ್ರಾಹಿಂರವರನ್ನು ಕುರಿತು ಕುತ್ತಿಗೆಯನ್ನು ಕೊಯ್ಯುವಾಗ ನೀನು ಕಿಂಚಿತ್ತೂ ಹರಿಯಬೇಡ ಎಂದು ನನಗೆ ಅಲ್ಲಾಹನಿಂದ ಕಟ್ಟಾಜ್ಞೆಯಾಗಿತ್ತು.ಅದರಂತೆ ನಾನು ಸ್ವಲ್ಪವೂ ಹರಿಯದೆ ಅಲ್ಲಾಹನ ಆದೇಶವನ್ನು ಪಾಲಿಸಿದ್ದೇನೆ ಎಂದಿತು.
    ಅಷ್ಟರಲ್ಲೇ ದೇವದೂತರು ಒಂದು ಟಗರಿನ(ಕುರಿಯ) ಸಮೇತ ಆ ಸ್ಥಳಕ್ಕೆ ಆಗಮಿಸಿದರು ಹಾಗೂ ಹಜ್ರತ್ ಇಬ್ರಾಹಿಂರವರನ್ನು ಕುರಿತು ನಿಮ್ಮ ಹಾಗೂ ನಿಮ್ಮ ಮಗನ ತೀರ್ಮಾನಕ್ಕೆ ಅಲ್ಲಾಹನು ಮೆಚ್ಚಿದ್ದಾರೆ.ನಿಮ್ಮ ಮಗನ ಬದಲು ನಾವು ತಂದಿರುವ ಈ ಟಗರನ್ನು ಬಲಿ ಕೊಡಿರಿ ಇದರಿಂದಾಗಿ ದೇವರಿಗೆ ಒಪ್ಪಿಯಾಗುವುದು.ನೀವುಗಳು ದೇವರ ಆದೇಶದಂತೆ ನಡೆದು ಕೊಂಡಿದ್ದಕ್ಕಾಗಿ ನಿಮಗೆ ಖಲೀಲುಲ್ಲಾ ಎಂತಲೂ ನಿಮ್ಮ ಪ್ರೀತಿ ಪಾತ್ರ ಮಗನಿಗೆ ಜಬೀವುಲ್ಲಾ ಎಂತಲೂ ಬಿರುದುಗಳನ್ನು ನೀಡುತ್ತಿದ್ದೇವೆ ಎಂದರು.
   ದೇವದೂತರ ಸಲಹೆಯಂತೆ ಹಜ್ರತ್ ಇಬ್ರಾಹಿಂರವರು ಆ ಟಗರನ್ನು ಬಲಿಯಾಗಿ ಅರ್ಪಿಸಿ ದಯಾಮಯನೂ, ಕರುಣಾನಿಧಿಯೂ ಆದ ಅಲ್ಲಾಹನಿಗೆ ತಮ್ಮ ಕೃತಜ್ಞತೆಯನ್ನು ಸಲ್ಲಿಸಿದರು.ಅಂದಿನಿಂದ ಹಜ್ರತ್ ಇಬ್ರಾಹಿಂ ಖಲೀಲುಲ್ಲಾ ಎಂತಲೂ ಇಸ್ಮಾಯಿಲ್ ಜಬೀವುಲ್ಲಾ ಎಂತಲೂ ಹೆಸರು ಗಳಿಸಿದರು.
  ಈ ಸುಂದರ ಘಟನೆಯ ಸವಿನೆನಪಿಗಾಗಿ ಅಂದಿನಿಂದಲೂ ಬಲಿದಾನ (ಖುರ್ಬಾನಿ) ಕೊಡುವ ಪದ್ಧತಿ ಬಳಕೆಗೆ ಈ ಹಬ್ಬವನ್ನು ಪ್ರಾಣಿಗಳನ್ನು ಬಲಿಕೊಡುತ್ತಾರೆ.ಈ ದಿನ ಸರ್ವರೂ ಶುಚಿಯಾದ ಶುಭ್ರವಸ್ತ್ರಗಳನ್ನು ಧರಿಸಿ ಈದ್ಗಾ ಅಥವಾ ಮಸೀದಿಗಳಿಗೆ ಹೋಗಿ ಅಲ್ಲಿ ವಿಶೇಷ ನಮಾಜನ್ನು ಸಾಮೂಹಿಕವಾಗಿ ಮಾಡುತ್ತಾರೆ.ಬಡ ಬಗ್ಗರಿಗೆ ದಾನ  ಧರ್ಮಗಳನ್ನು ನೀಡುವ ಮೂಲಕ ತ್ಯಾಗ-ಬಲಿದಾನಗಳ ಪ್ರತೀಕವಾದ ಈ ಬಕ್ರೀದ್ ಹಬ್ಬವನ್ನು ಶ್ರದ್ಧಾಭಕ್ತಿಗಳಿಂದ ಆಚರಿಸುತ್ತಾರೆ.ಸಮಸ್ತ ಮುಸ್ಲೀಂ ಬಾಂಧವರಿಗೂ ಬಕ್ರೀದ್ ಹಬ್ಬದ ಶುಭಾಶಯಗಳು.