ರಾಜ್ಯದ ಪ್ರಮುಖ ವಾಣಿಜ್ಯ ನಗರಿಯಾದ
ಚಿಂತಾಮಣಿ ನಗರವು ಇತ್ತೀಚಿನ ದಿನಗಳಲ್ಲಿ ಸಾಹಿತ್ಯ ನಗರಿಯಾಗಿಯೂ ರೂಪಗೊಳ್ಳುತ್ತಿದೆ.ಇಲ್ಲಿ
ಪ್ರತಿನಿತ್ಯ ಒಂದಲ್ಲಾ ಒಂದು ಸಾಹಿತ್ಯಿಕ ,ಸಾಂಸ್ಕೃತಿಕ ಹಾಗೂ ಆಧ್ಯತ್ಮಿಕ ಕಾರ್ಯಕ್ರಮಗಳು
ನಡೆಯುತ್ತಲೇ ಇರುತ್ತವೆ.ಕನ್ನಡ ಪರ ಕಾರ್ಯಕ್ರಮಗಳಿಗೂ ಯಾವುದೇ ಕೊರತೆಯಿಲ್ಲ.
ಕನ್ನಡಾಭಿಮಾನಿಗಳು ಕನ್ನಡ ಭಾಷೆಯ
ಏಳಿಗೆಗಾಗಿ ವಿವಿಧ ರೀತಿಯಲ್ಲಿ ತಮ್ಮದೇ ಆದ ಕೊಡುಗೆಗಳನ್ನು ನೀಡುತ್ತಿದ್ದಾರೆ.ಹೀಗಿರುವಲ್ಲಿ
ಇಲ್ಲಿನ ಕನ್ನಡಾಭಿಮಾನಿ ಕಾಲೇಜು ವಿದ್ಯಾರ್ಥಿ ಕೆ.ಎನ್.ಅಕ್ರಂಪಾಷ ನಹ ಈ ನಿಟ್ಟಿನಲ್ಲಿ
ಕ್ರಿಯಾಶೀಲರಾಗಿ ತಾಲ್ಲೂಕಿನಲ್ಲಿ ನಡೆಯುವ ಸಾಹಿತ್ಯಿಕ, ಸಾಂಸ್ಕೃತಿಕ ಸುದ್ಧಿ-ಸಮಾಚಾರಗಳನ್ನು ಜನ
ಸಮುದಾಯಕ್ಕೆ ತಿಳಿಯ ಪಡಿಸಲಿಕ್ಕಾಗಿ, ಉದಯೋನ್ಮುಖರಿಗೆ ಅವಕಾಶ ಕಲ್ಪಿಸಲಿಕ್ಕಾಗಿ ಹಾಗೂ ಎಲೆಮರೆ
ಕಾಯಿಯಂತಿರುವ ಪ್ರತಿಭಾವಂತರನ್ನು ಬೆಳಕಿಗೆ ತರಲಿಕ್ಕಾಗಿ “ ಕನ್ನಡ ಕವಿವಾಣಿ” ಎಂಬ ಮಾಸಪತ್ರಿಕೆಯೊಂದನ್ನು ಹೊರತಂದಿದ್ದಾರೆ.
ಈ ಪತ್ರಿಕೆಯು ಯಾವುದೇ ಅಬ್ಬರ
ಆಡಂಬರಗಳಿಲ್ಲದೆ ಎಪ್ರಿಲ್ ೨೦೧೪ ರಲ್ಲಿ ತಾಲ್ಲೂಕಿನ ದೊಡ್ಡಬೊಮ್ಮನ ಹಳ್ಳಿಯಲ್ಲಿ ನಡೆದ ಮನೆಗೊಂದು
ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಸಾಹಿತ್ಯಾಭಿಮಾನಿ ಆದ್ಯಾತ್ಮಿಕ ಗುರುಗಳಾದ ಗಡದಾಸನಹಳ್ಳಿ ಶ್ರೀ
ಈರೇಗೌಡಸ್ವಾಮಿಜಿಯವರು ಲೋಕಾರ್ಪಣೆ ಮಾಡಿದರು.ಈ ಪತ್ರಿಕೆಯಲ್ಲಿ ಕಾವ್ಯಧಾರೆ ,ತಿಂಗಳ ಚುಟುಕು,
ಹಾಸ್ಯ ಲೋಕ, ಚಿಣ್ಣರು ಬಿಡಿಸಿದ ಚಿತ್ರ, ಕವಿಪರಿಚಯ, ಸಾದರ ಸ್ವೀಕಾರ, ರಸಪಶ್ನೆ
ಸ್ಪರ್ಧೆ?,ತಿಂಗಳ ವಿಶೇಷ, ಶಿಕ್ಷಣ ಲೋಕ, ಚಿಂತನ ಲೋಕ, ಆರೋಗ್ಯ, ಬಾಲಜಗತ್ತು, ನಿಮ್ಮ ಅನಿಸಿಕೆ,
ಸಂಪಾದಕೀಯ ಮುಂತಾದ ಅಂಕಣಗಳಿದ್ದು ಓದುಗರ ಗಮನ ಸೆಳೆದಿವೆ.
ಪತ್ರಿಕೆಯ ಸಂಪಾದಕರಾಗಿರುವ
ಕೆ.ಎನ್.ಅಕ್ರಂಪಾಷ ರವರು ಸ್ವತಃ ಸುದ್ಧಿ-ಸಮಾಚಾರಗಳನ್ನು ಸಂಗ್ರಹಿಸುವುದರ ಜೊತೆಗೆ ಪತ್ರಿಕೆಯ
ಅಕ್ಷರ ಜೋಡಣೆಯನ್ನು (ಡಿಟಿಪಿ) ಹಾಗೂ ವಿನ್ಯಾಸವನ್ನೂ ಸಹ ಮಾಡುತ್ತಾರೆ.ಇಷ್ಟೆಲ್ಲಾ
ವಿಶೇಷತೆಗಳನ್ನು ಹೊಂದಿರುವ ೨೪ ಪುಟಗಳನೊಳಗೊಂಡ ಕವಿವಾಣಿ ಪತ್ರಿಕೆಯು ಸಾಹಿತ್ಯಾಸಕ್ತರಿಗೆ
ಉಚಿತವಾಗಿ ದೊರೆಯುತ್ತಿರುವುದು ಅಚ್ಚರಿಯ ಹಾಗೂ ಆನಂದದ ಸಂಗತಿಯಾಗಿದೆ.
ಸ್ಥಳೀಯ ಸರ್ಕಾರಿ ಬಾಲಕರ ಪದವಿ ಕಲೇಜಿನಲ್ಲಿ
ಅಂತಿಮ ಬಿಎಸ್ಸಿ (ಸಿಬಿಜಡ್) ವ್ಯಾಸಂಗ ಮಾಡುತ್ತಿರುವ ಇವರು ಬಾಲ್ಯದಿಂದಲೂ ಕನ್ನಡದ
ಅಭಿಮಾನಿಯಾಗಿದ್ದು.ಸಾಹಿತ್ಯದ ಬಗ್ಗೆ ಒಲವು ಹೊಂದಿದ್ದಾರೆ.ಈಗಾಗಲೇ ಅವರ ಹಲವಾರು ಬರಹಗಳು ನಾಡಿನ
ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಗೊಂಡು ಜನಪ್ರಿಯವಾಗಿವೆ.ಬಿಡುವಿನ ಸಮಯದಲ್ಲಿ ಪತ್ರಿಕೆಯನ್ನು
ಸಿದ್ಧ ಪಡಿಸುವ ಕಾರ್ಯದಲ್ಲಿ ಇವರು ಮಗ್ನರಾಗುತ್ತಾರೆ.
ಇದುವರೆವಿಗೂ ಪತ್ರಿಕೆಯ ೨೦ ಸಂಚಿಕೆಗಳು
ಹೊರಬಂದಿದ್ದು ಕನ್ನಡಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿವೆ.ಈ ಪತ್ರಿಕೆಯ ಖರ್ಚುವೆಚ್ಚಗಳನ್ನು
ತಿಂಗಳಿಗೊಬ್ಬರಂತೆ ಸಾಹಿತ್ಯಾಭಿಮಾನಿಗಳು ಭರಿಸುತ್ತಿದ್ದಾರೆ.ಸಂಪೂರ್ಣವಾಗಿ ಖಾಸಗಿ
ಪ್ರಸಾರಕ್ಕಾಗಿ ಸೀಮಿತವಾಗಿರುವ ಈ ಪತ್ರಿಕೆಯು ಈಗಾಗಲೇ ಬೀದರ್, ಬೆಳಗಾವಿ, ಹಾವೇರಿ, ದಾರವಾಡ,
ಮಂಡ್ಯ, ಮೈಸೂರು, ಕೋಲಾರ, ಬೆಂಗಳೂರು, ಉಡುಪಿಯೂ ಸೇರಿದಂತೆ ರಾಜ್ಯದ ಹಾಗೂ ಹೊರರಾಜ್ಯದ (ಮುಂಬೈ,
ಕಾಸರಗೋಡು, ಪುಣೆ, ಥಾನೆ, ಅಂದ್ರಪ್ರದೇಶ,ತಮಿಳುನಾಡು, ಕೇರಳ, ) ಹಲವು ಭಾಗಗಳಲ್ಲಿನ ಕನ್ನಡ
ಸಾಹಿತ್ಯಾಸಕ್ತರ ಕೈಸೇರಿದೆ.
ರಾಜ್ಯದ ಹಿರಿಯ ಸಾಹಿತಿಗಳಲೊಬ್ಬರಾದ
ಸಿರಿಗನ್ನಡ ವೇದಿಕೆಯ ರಾಜ್ಯಾಧ್ಯಕ್ಷರಾಗಿರುವ ಎಂ.ಎಸ್.ವೆಂಕಟರಾಮಯ್ಯನವರು ಇವರ ಸಾಹಿತ್ಯಾಸಕ್ತಿ
ಹಾಗೂ ಕನ್ನಡಾಭಿಮಾನವನ್ನು ಗುರುತಿಸಿ ಚಿಂತಾಮಣಿ ತಾಲ್ಲೂಕು ಸಿರಿಗನ್ನಡ ವೇದಿಕೆಯ
ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ. ಇತ್ತೀಚೆಗೆ ಬೀದರ್ ಜಿಲ್ಲೆಯ ದೇಶಪಾಂಡೆ ಸಾಹಿತ್ಯ ಮತ್ತು
ಸಾಂಸ್ಕೃತಿಕ ಪ್ರತಿಷ್ಠಾನದವರು ಕಿರಿಯ ವಯಸ್ಸಿನಲ್ಲಿ ಇಷ್ಟೆಲ್ಲಾ ಸಾಧನೆ ಮಾಡುತ್ತಿರುವ
ಅಕ್ರಂಪಾಷ ರವರಿಗೆ ಅವರ ಸಾಧನೆ ಮತ್ತು ಸೇವೆಯನ್ನು ಪರಿಗಣಿಸಿ ೨೦೧೫-೧೬ ಸಾಲಿನ “ಸಾಹಿತ್ಯ ಪ್ರತಿಭಾ ರತ್ನ” ರಾಜ್ಯ ಪ್ರಶಸ್ತಿಯನ್ನು ನೀಡಿ
ಪುರಸ್ಕರಿಸಿದ್ದಾರೆ. ಇಷ್ಟೇ ಅಲ್ಲದೆ ಅಕ್ರಂ ರವರ ಸಾಹಿತ್ಯ ಸೇವೆಯನ್ನು ಗುರುತಿಸಿ ಹಲವಾರು
ಕನ್ನಡ ಪರ ಸಂಘಟನೆಗಳು ಸನ್ಮಾನಿಸಿ ಗೌರವಿಸಿವೆ.ಕಾಲೇಜು ವಿದ್ಯಾರ್ಥಿಯ ಈ ಮಹತ್ತರ ಕಾರ್ಯಕ್ಕೆ
ಜಿಲ್ಲೆಯ ಹಿರಿಯ ಸಾಹಿತಿಗಳು,ಕಲಾವಿದರು,ಕವಿಗಳು, ಮಾಧ್ಯಮದವರು ಸಹಕಾರ ನೀಡಿ
ಪ್ರೋತ್ಸಾಹಿಸುತ್ತಿರುವುದು ಹೆಮ್ಮಯ ಸಂಗತಿಯಾಗಿದೆ.
ಅಕ್ರಂಪಾಷ ಮುಂದಿನ ದಿನಗಳಲ್ಲಿ
ಪತ್ರಿಕೆಯನ್ನು ಮತ್ತಷ್ಟು ವೈವಿಧ್ಯಮಯವಾಗಿ ಹೊರ ತರುವ ಆಕಾಂಕ್ಷೆಯನ್ನು ಹೊಂದಿದ್ದಾರೆ.ಕಾಲೇಜು
ವ್ಯಾಸಂಗದ ಜೊತೆಯಲ್ಲೇ ಕನ್ನಡಮ್ಮನ ಸೇವೆಗೆ ಮುಂದಾಗಿರುವ ಇವರ ಕಾರ್ಯ ವೈಖರಿ ಎಲ್ಲರ ಗಮನ
ಸೆಳೆದಿದೆ.ಒಟ್ಟಾರೆಯಾಗಿ ಹೇಳಬೇಕಾದರೆ ಕಾಲೇಜು ವಿದ್ಯಾರ್ಥಿಯ ಈ ಮಹತ್ತರ ಸಾಧನೆಯು ಗಡಿಭಾಗದ
ಸಾಹಿತ್ಯ ಕ್ಷೇತ್ರದಲ್ಲಿ ಒಂದು ಮೌನಕ್ರಾಂತಿಯನ್ನೇ ಆರಂಬಿಸಿದೆ.
:ಹಸೀನಾ ಬೇಗಂ
ರಾಜ್ಯಪ್ರಶಸ್ತಿ ಪುರಸ್ಕೃತ ವಿಚಾರವಾದಿ ಚಿಂತಕಿ, ಚಿಂತಾಮಣಿ


