ಮಂಗಳವಾರ, ನವೆಂಬರ್ 28, 2017

ನವೆಂಬರ್-೩೦ : ಮೈಲಾಂಡ್ಲಹಳ್ಳಿಯಲ್ಲಿ ನಾಡಗೀತೆ ಬರವಣಿಗೆ ಸ್ಪರ್ಧೆ

ಕೋಲಾರದ ರೆಲ್ಟನ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಹಾಗೂ ಚಿಂತಾಮಣಿಯ ಕನ್ನಡ ಕವಿವಾಣಿ ಮಾಸ ಪತ್ರಿಕೆಯ ಸಂಯುಕ್ತಾಶ್ರಯದಲ್ಲಿ ನವೆಂಬರ್ ೩೦ ರ ಗುರುವಾರ ಮಧ್ಯಾಹ್ನ ೧:೩೦ ಗಂಟೆಗೆ ಸರಿಯಾಗಿ ತಾಲ್ಲೂಕಿನ ಮೈಲಾಂಡ್ಲಹಳ್ಳಿಯ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೬೨ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ಕುವೆಂಪು ರಚಿತ ನಾಡಗೀತೆ ಬರವಣಿಗೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ರೆಲ್ಟನ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ರಿಯಾಜ್ ಅಹಮದ್ ರವರು ತಿಳಿಸಿದ್ದಾರೆ.


     ಕಾರ್ಯಕ್ರಮಕ್ಕೆ ಮುಖ್ಯಅತಿಥಿಗಳಾಗಿ ರಾಜ್ಯಪ್ರಶಸ್ತಿ ಪುರಸ್ಕೃತ ಶಿಕ್ಷಕ ಹಾಗೂ ಕವಿವಾಣಿ ಪತ್ರಿಕೆಯ ಸಂಪಾದಕರಾದ ಕೆ.ಎನ್.ಅಕ್ರಂಪಾಷ, ತಾಲ್ಲೂಕು ಸರ್ಕಾರಿ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಅಶೋಕ್ ಕುಮಾರ್, ಕನ್ನಡಿಗರ ಸಾರಥ್ಯ ಸಂಘಟನೆಯ ಜಿಲ್ಲಾಧ್ಯಕ್ಷ ಅಂಬರೀಶ್, ಸದರಿ ಶಾಲೆಯ ಮುಖ್ಯಶಿಕ್ಷಕಿ ಹಸೀನಾ ಬೇಗಂ,ಚುಟುಕು ಕವಿ ಶಿ.ಮ.ಮಂಜುನಾಥ, ಲೇಖಕಿ ಜೀನತ್ ಉನ್ನೀಸಾ, ದೊಡ್ಡತಮ್ಮನ ಹಳ್ಳಿಯ ಯುವಕವಿ ಗಂಗರಾಜು ಹಾಗೂ ಎಸ್.ಡಿ.ಎಂ.ಸಿ ಅಧ್ಯಕ್ಷರು ಹಾಗೂ ಸದಸ್ಯರು ಸೇರಿದಂತೆ ಮುಂತಾದ ಗ್ರಾಮದ ಗಣ್ಯರು ಭಾಗವಹಿಸಲಿದ್ದಾರೆಂದು ಅವರು ವಿವರಿಸಿದ್ದಾರೆ.

ಭಾನುವಾರ, ನವೆಂಬರ್ 26, 2017

ಹಸೀನಾ ಬೇಗಂರನ್ನು ಅಭಿನಂದಿಸಿದ ಗಣ್ಯರು

ಚಿಂತಾಮಣಿ: ಅಜ್ಜಂಪುರ ಜಿ.ಸೂರಿ ಪ್ರತಿಷ್ಠಾನ, ರತ್ನ ಪ್ರಕಾಶನ ಕಡೂರು ಹಾಗೂ ಸೂರಿ ಸೃಷ್ಠಿಯ ಬರಹ ಲೋಕ ವಾಟ್ಸಪ್ ಬಳಗದ ವತಿಯಿಂದ ೬೨ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕಡೂರಿನಲ್ಲಿ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ಚಿಂತಾಮಣಿಯಿಂದ ಆಯ್ಕೆಯಾಗಿದ್ದ ವಿಚಾರವಾದಿ ಚಿಂತಕಿ ಹಸೀನಾ ಬೇಗಂ ರವರು ತಮ್ಮ ಸ್ವರಚಿತ ನಾನು ಹಿಂದೂಸ್ತಾನಿ ಮುಸಲ್ಮಾನ ಎಂಬ ಕವನವನ್ನು ವಾಚಿಸಿದರು. ಹಸೀನಾ ಬೇಗಂ ವಾಚಿಸಿದ ಕವನವು ಎಲ್ಲರ ಮೆಚ್ಚುಗೆ ಗಳಿಸಿತು.

Haseena Begum Chintamani Kannada Kavivani


            ಈ ಸಂದರ್ಭದಲ್ಲಿ ಹಸೀನಾ ಬೇಗಂ ರವರಿಗೆ ಸೂರಿ ಪ್ರತಿಷ್ಠಾನದ ಅಧ್ಯಕ್ಷ ಸೂರಿ ಶ್ರೀನಿವಾಸ್ ರವರು ನೆನಪಿನ ಕಾಣಿಕೆ ಪ್ರಶಸ್ತಿ ಪತ್ರವನ್ನು ನೀಡಿ ಅಭಿನಂದಿಸಿದರು.  ಕಾರ್ಯಕ್ರಮದಲ್ಲಿ ಬೆಂಗಳೂರಿನ ಕರ್ನಾಟಕ ರಾಜ್ಯ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರ ಭೂಪತಿ ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಎಸ್.ಶರತ್ ಕೃಷ್ಣಮೂರ್ತಿರವರು ಉಪಸ್ಥಿತರಿದ್ದರು.

ಗುರುವಾರ, ನವೆಂಬರ್ 23, 2017

ಅಕ್ರಂಪಾಷರನ್ನು ಅಭಿನಂದಿಸಿದ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ



ಚಿಂತಾಮಣಿ: ಅಜ್ಜಂಪುರ ಜಿ.ಸೂರಿ ಪ್ರತಿಷ್ಠಾನ, ರತ್ನ ಪ್ರಕಾಶನ ಕಡೂರು ಹಾಗೂ ಸೂರಿ ಸೃಷ್ಠಿಯ ಬರಹಲೋಕ ವಾಟ್ಸಪ್ ಬಳಗದ ವತಿಯಿಂದ ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಕವಿಗೋಷ್ಠಿಗೆ ಚಿಂತಾಮಣಿಯಿಂದ ಆಯ್ಕೆಯಾಗಿದ್ದ ರಾಜ್ಯಪ್ರಶಸ್ತಿ ಪುರಸ್ಕೃತ ಯುವಬರಹಗಾರ ಹಾಗೂ ಜೈನ್ ಪಬ್ಲಿಕ್ ಶಾಲೆಯ ಶಿಕ್ಷಕ ಕೆ.ಎನ್.ಅಕ್ರಂಪಾಷರವರು ಕವಿಗೋಷ್ಠಿಯಲ್ಲಿ ಮಾತನಾಡಿದ ಗೌರಿ ಎಂಬ ಸ್ವರಚಿತ ಕವನ ವಾಚಿಸಿ ಎಲ್ಲರ ಗಮನಸೆಳೆದರು.

  
ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಆಗಮಿಸಿದ್ದ ಬೆಂಗಳೂರಿನ ಕರ್ನಾಟಕ ರಾಜ್ಯ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರ ಭೂಪತಿ ರವರು ಅಕ್ರಂಪಾಷರವರಿಗೆ ನೆನಪಿನ ಕಾಣಿಕೆ ಪ್ರಶಸ್ತಿ ಪತ್ರವನ್ನು ನೀಡಿ ಅಭಿನಂದಿಸಿದರಲ್ಲದೆ, ತಮ್ಮ ಸಾಹಿತ್ಯ ಕೃಷಿಯನ್ನು ಹೀಗೆ ಮುಂದುವರಿಸಿ ಎಂದು ಶುಭಹಾರೈಸಿದರು.ಈ ಸಂದರ್ಭದಲ್ಲಿ ಚಿಕ್ಕಮಗಳೂರಿನ ಸಾಹಿತಿ ಡಾ.ಮಂಜುಳಾ ಹುಲ್ಲಳ್ಳಿ, ಶೃಂಗೇರಿಯ ಸಾಹಿತಿ ಡಾ.ಆಗುಂಬೆ ಗಣೇಶ್ ಹೆಗಡೆ, ಕವಿ ಅರಗರವಿ, ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಎಸ್.ಶರತ್ ಕೃಷ್ಣಮೂರ್ತಿ, ಸೂರಿ ಶ್ರೀನಿವಾಸ್ ರವರುಗಳು ಉಪಸ್ಥಿತರಿದ್ದರು.

ಬುಧವಾರ, ನವೆಂಬರ್ 22, 2017

ಕವಿಗೋಷ್ಠಿ ಸಮಾರಂಭದ ಕೆಲವು ದೃಶ್ಯಾವಳಿಗಳು

ಅಜ್ಜಂಪುರ ಜಿ.ಸೂರಿ ಪ್ರತಿಷ್ಠಾನ, ರತ್ನ ಪ್ರಕಾಶನ ಕಡೂರು ಹಾಗೂ ಸೂರಿ ಸೃಷ್ಠಿಯ ಬರಹ ಲೋಕ ವಾಟ್ಸಪ್ ಬಳಗದ ವತಿಯಿಂದ ೬೨ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ನವೆಂಬರ್ ೧೯ ಭಾನುವಾರದಂದು ಕಡೂರಿನಲ್ಲಿ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ಚಿಂತಾಮಣಿಯ ಕವಿಗಳು ಕವನ ವಾಚಿಸಿದರು. ಈ ಸಮಾರಂಭದ ಕೆಲವು ದೃಶ್ಯಾವಳಿಗಳು ಕ್ಯಾಮೆರಾ ಕಣ್ಣಲ್ಲಿ ಸೆರೆಯಾದದ್ದು ಹೀಗೆ:














ಪೃಥ್ವಿ ಸೂರಿಯನ್ನು ಸನ್ಮಾನಿಸಿದ ಕನ್ನಡ ಕವಿವಾಣಿ ಪತ್ರಿಕಾ ಬಳಗ


ಚಿಂತಾಮಣಿ: ಅಜ್ಜಂಪುರ ಜಿ.ಸೂರಿ ಪ್ರತಿಷ್ಠಾನ, ರತ್ನ ಪ್ರಕಾಶನ ಕಡೂರು ಹಾಗೂ ಸೂರಿ ಸೃಷ್ಠಿಯ ಬರಹಲೋಕ ವಾಟ್ಸಪ್ ಬಳಗದ ವತಿಯಿಂದ ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ಕಾರ್ಯಕ್ರಮದ ಆಯೋಜಕರಾಗಿದ್ದ ಖ್ಯಾತ ಕನ್ನಡದ ಅನುವಾದಕ ಅಜ್ಜಂಪುರ ಸೂರಿ ರವರ ಮೊಮ್ಮಗ ಪೃಥ್ವಿ ಸೂರಿರವರನ್ನು ಚಿಂತಾಮಣಿಯ ಕನ್ನಡ ಕವಿವಾಣಿ ಪತ್ರಿಕಾ ಬಳಗದ ವತಿಯಿಂದ ಹೃದಯಸ್ಪರ್ಶಿಯಾಗಿ ಸನ್ಮಾನಿಸಲಾಯಿತು.

   ಈ ಸಂದರ್ಭದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ||ವಸುಂಧರಾ ಭೂಪತಿ, ಕವಿವಾಣಿ ಸಂಪಾದಕ ಕೆ.ಎನ್.ಅಕ್ರಂಪಾಷ, ಪತ್ರಿಕಾ ಬಳಗದ ನಂಜಪ್ಪರೆಡ್ಡಿ, ಶಿ.ಮ.ಮಂಜುನಾಥ, ರಾಮಚಂದ್ರಾರೆಡ್ಡಿ(ಸ್ವಾಮಿಜಿ), ಹಸೀನಾ ಬೇಗಂ, ಗಂಗರಾಜು, ಎ.ವಿ.ಮಂಜುನಾಥ, ಜೀನತ್ ಉನ್ನೀಸಾ ರವರುಗಳು ಉಪಸ್ಥಿತಿರಿದ್ದರು.

ಸೋಮವಾರ, ನವೆಂಬರ್ 13, 2017

ರಾಜ್ಯಮಟ್ಟದ ಕವಿಗೋಷ್ಠಿಗೆ ಚಿಂತಾಮಣಿ ಐದು ಮಂದಿ ಕವಿಗಳು ಆಯ್ಕೆ


ಚಿಂತಾಮಣಿ: ಅಜ್ಜಂಪುರ ಜಿ.ಸೂರಿ ಪ್ರತಿಷ್ಠಾನ, ರತ್ನ ಪ್ರಕಾಶನ ಕಡೂರು ಹಾಗೂ ಸೂರಿ ಸೃಷ್ಠಿಯ ಬರಹ ಲೋಕ ವಾಟ್ಸಪ್ ಬಳಗದ ವತಿಯಿಂದ ೬೨ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ನವೆಂಬರ್ ೧೯ ಭಾನುವಾರದಂದು ಕಡೂರಿನಲ್ಲಿ ಆಯೋಜಿಸಲಾಗಿರುವ ರಾಜ್ಯಮಟ್ಟದ ಕವಿಗೋಷ್ಠಿಗೆ ಚಿಂತಾಮಣಿಯ ಕವಿಗಳಾದ ಕನ್ನಡ ಸಾಹಿತ್ಯ ಬಳಗದ ಅಧ್ಯಕ್ಷ ನಂಜಪ್ಪರೆಡ್ಡಿ, ರಾಜ್ಯಪ್ರಶಸ್ತಿ ಪುರಸ್ಕೃತ ಯುವಬರಹಗಾರ ಕೆ.ಎನ್.ಅಕ್ರಂಪಾಷ, ಚುಟುಕು ಕವಿ ಶಿ.ಮ.ಮಂಜುನಾಥ, ಕವಯತ್ರಿ ಹಾಗೂ ಲೇಖಕಿ ಜೀನತ್ ಉನ್ನೀಸಾ ಹಾಗೂ ಚಿಕ್ಕಬಳ್ಳಾಪುರದ ದೊಡ್ಡತಮ್ಮನ ಹಳ್ಳಿಯ ಯುವಕವಿ ಗಂಗರಾಜು ರವರುಗಳನ್ನು ಆಯ್ಕೆಮಾಡಲಾಗಿದೆ ಆಯೋಜಕರಾದ ಪೃಥ್ವಿ ಸೂರಿ ರವರು ತಿಳಿಸಿದ್ದಾರೆ.


   ರಾಜ್ಯಮಟ್ಟದ ಕವಿಗೋಷ್ಠಿಗೆ ಆಯ್ಕೆಯಾಗಿರುವ ಈ ಐದು ಮಂದಿ ಕವಿಗಳು ನವೆಂಬರ್ ೧೯ ರಂದು ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ನಡೆಯಲಿರುವ ಅದ್ಧೂರಿ ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ಕವನವಾಚಿಸಲಿದ್ದಾರೆ.ಕವಿಗೋಷ್ಠಿಯನ್ನು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ವಸುಂಧರ ಭೂಪತಿ ರವರು ಉದ್ಘಾಟಿಸಲಿದ್ದು, ಚಿಕ್ಕಮಗಳೂರಿನ ಖ್ಯಾತ ಸಾಹಿತಿಗಳಾದ ಡಾ||ಮಂಜುಳಾ ಹುಲ್ಲಳ್ಳಿ ಅಧ್ಯಕ್ಷತೆ ವಹಿಸಿಲಿದ್ದಾರೆ.

ಅಭಿನಂದನೆ: ರಾಜ್ಯಮಟ್ಟದ ಕವಿಗೋಷ್ಠಿಗೆ ಆಯ್ಕೆಯಾಗಿರುವ ಈ ಐದು ಮಂದಿ ಕವಿಗಳನ್ನು ಚಿಂತಾಮಣಿಯ ಹಲವು ಕನ್ನಡ ಪರ ಸಂಘಟನೆಗಳು, ಕವಿ ಕಲಾವಿದರು, ಅಭಿಮಾನಿಗಳು ಅಭಿನಂದಿಸಿದ್ದಾರೆ.

ಶುಕ್ರವಾರ, ನವೆಂಬರ್ 10, 2017

ಸಿ.ಬಿ.ಹನುಮಂತಪ್ಪನವರ ಪರಿಚಯ ಮತ್ತು ಸಾಧನೆ


c b hanumantappa kannada kavivani

ಹೆಸರು                      : ಸಿ.ಬಿ.ಹನುಮಂತಪ್ಪ
ತಂದೆ ತಾಯಿ ಹೆಸರು       : ಚಿಕ್ಕಬೈರಪ್ಪ - ಅಕ್ಕಲಮ್ಮ
ಜನ್ಮಸ್ಥಳ                    : ಚಿರುವನಹಳ್ಳಿ ,ಶ್ರೀನಿವಾಸಪುರ ತಾಲ್ಲೂಕು
ಜನ್ಮ                        : ೧೯೪೯
ವಿದ್ಯಾರ್ಹತೆ                : ಎಂ.ಎ ,ಬಿ.ಎಡ್ ,ಕೆ.ಇ.ಎಸ್
ಸೇವೆಗೆ ಸೇರಿದ ದಿನಾಂಕ  : ೫-೦೮-೧೯೮೦
ನಿವೃತ್ತಿ ದಿನಾಂಕ           : ೩೦-೦೧-೨೦೦೭
ಈಗಿನ ವಿಳಾಸ             : ಸಿ.ಬಿ.ಹನುಮಂತಪ್ಪ, ಅನುರಾಗ ನಿಲಯ,ಕಿಶೋರ್ ವಿದ್ಯಾ ಭವನದ ಮುಂಭಾಗ
                               ಅಂಜನಿ ಬಡಾವಣೆ, ಚಿಂತಾಮಣಿ - ೫೬೩ ೧೨೫
ಮೊಬೈಲ್ ಸಂಖ್ಯೆ           : ೯೯೭೨೬೨೬೭೦೧

ಸೇವಾ ವಿವರಗಳು
ಶಿಕ್ಷಕರಾಗಿ
೧) ಸಬರಮತಿ ಪ್ರೌಢಶಾಲೆ, ಸುಗಟೂರು, ಕೋಲಾರ ತಾಲ್ಲೂಕು
೨) ಸರ್ಕಾರಿ ಪ್ರೌಢಶಾಲೆ, ಸಾದಲಿ, ಶಿಡ್ಲಘಟ್ಟ ತಾಲ್ಲೂಕು

ಮುಖ್ಯ ಶಿಕ್ಷಕರಾಗಿ
೧) ಸರ್ಕಾರಿ ಪ್ರೌಢಶಾಲೆ, ಸಾದಲಿ, ಶಿಡ್ಲಘಟ್ಟ ತಾಲ್ಲೂಕು
೨) ಸರ್ಕಾರಿ ಪ್ರೌಢಶಾಲೆ, ಯಲ್ಲಂಪಲ್ಲಿ, ಬಾಗೇಪಲ್ಲಿ ತಾಲ್ಲೂಕು
೩) ಸರ್ಕಾರಿ ಪ್ರೌಢಶಾಲೆ, ಚಿಕ್ಕ ಕುಂತೂರು, ಮಾಲೂರು ತಾಲ್ಲೂಕು
೪) ಸರ್ಕಾರಿ ಪ್ರೌಢಶಾಲೆ, ಗಂಜಿಗುಂಟೆ, ಶಿಡ್ಲಘಟ್ಟ ತಾಲ್ಲೂಕು

ಅಧಿಕಾರಿಗಳಾಗಿ
೧) ಸಹಾಯಕ ಶಿಕ್ಷಣಾಧಿಕಾರಿ, ಶಿಡ್ಲಘಟ್ಟ ತಾಲ್ಲೂಕು
೨) ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ, ಅವಿಭಾಜ್ಯ ಕೋಲಾರ ಜಿಲ್ಲೆ
೩) ಹಿರಿಯ ಉಪನ್ಯಾಸಕರು, ಕೋಲಾರ ಡಯಟ್
೪) ಕ್ಷೇತ್ರ ಶಿಕ್ಷಣಾಧಿಕಾರಿ, ಚಿಂತಾಮಣಿ ತಾಲ್ಲೂಕು
೫) ಕ್ಷೇತ್ರ ಶಿಕ್ಷಣಾಧಿಕಾರಿ, ಶಿಡ್ಲಘಟ್ಟ ತಾಲ್ಲೂಕು
೬) ಜಿಲ್ಲಾ ಉಪಸಮನ್ವಯಾಧಿಕಾರಿ, ಅವಿಭಾಜ್ಯ ಕೋಲಾರ ಜಿಲ್ಲೆ
೭) ಹಿರಿಯ ಕಾರ್ಯಕ್ರಮಾಧಿಕಾರಿಗಳು, ಸರ್ವ ಶಿಕ್ಷಣ ಅಭಿಯಾನ, ಕೋಲಾರ ಜಿಲ್ಲೆ
೮) ಉಪ ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ಕೋಲಾರ ಜಿಲ್ಲೆ
 
ಸಾಹಿತ್ಯ ಕ್ಷೇತ್ರದಲ್ಲಿ ಸೇವೆ
* ಶಿಕ್ಷಕ-ಶಿಕ್ಷಣ - ಕೃತಿ
* ಪರಿಸರ ಪ್ರಜ್ಞೆ - ಕೃತಿ
* ಅಕ್ಷರ ಸೌರಭ - ಕೃತಿ
* ಬೆಳಕು - ಕವನ ಸಂಕಲನ
* ಹಾಡಿ ಕಲಿಯೋಣ ಬಾ- ಕವನ ಸಂಕಲನ
* ಅನುರಾಗ - ಕವನ ಸಂಕಲನ ( ಪ್ರಕಟಣೆಗೆ ಸಿದ್ಧವಾಗಿದೆ)
* ಹಾಡುತ್ತಾ ಆಡುತ್ತಾ ಕಲಿಯೋಣ - ಕ್ರಿಯಾ ಸಂಶೋಧನೆ
* ನೆಲದ ಜೋಗುಳ - ಧ್ವನಿಸುರುಳಿ
* ಪಠ್ಯಾಧಾರಿತ ಧ್ವನಿಸುರುಳಿಗಳು - ೧-೫ನೇ ತರಗತಿ
* ಸಾಧನಾ ಹಾದಿ(ಕೈಪಿಡಿ) ೧೦ನೇ ತರಗತಿಗಳಿಗೆ.

ಸಂಗ್ರಹಣಾ ಕೃತಿಗಳು
* ಗಾಂಧಿಜಿ ಉಪನಿಷತ್ತು ಮಾಲೆ
* ಸುತ್ತೋಣ ಬನ್ನಿ ಕರ್ನಾಟಕ
* ಗೋಳದ ಮತ್ತೊಂದು ಸುತ್ತು
* ಡಾ|| ಹೆಚ್.ಎನ್.ವ್ಯಕ್ತಿಚಿತ್ರಗಳು
* ಕಾರ್ಗಿಲ್ ಕದನ-೧೯೯೯
* ಕಾಡುಗಳ್ಳ ವೀರಪ್ಪನ್

ಸಂಪಾದಿತ ಕೃತಿಗಳು
* ಸಿಡಿಲು ಸಿಂಚನ
* ಗುರುವಂದ್ಯರು

ಇತರೆ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ವಿವರ
* ರಾಜ್ಯ ಮಟ್ಟದ ವಾರ್ತಾಪತ್ರಿಕೆ ಸದಸ್ಯರಾಗಿ
* ಜಿಲ್ಲಾ ಸಾಕ್ಷರ ಭಾರತ್ ಸಮಿತಿ ಸದಸ್ಯರು
* ಸಾಕ್ಷರತಾ ಆಂದೋಲನದಲ್ಲಿ ನಾಟಕ ಪ್ರದರ್ಶನ
* ಪ್ರೇರಕರಾಗಿ ಕಲಿಕಾ ಕೇಂದ್ರ ನಿರ್ವಹಣೆ
* ಬಾಲಕಾರ್ಮಿಕ ಮಕ್ಕಳಿಗೆ ವಿಶೇಷ ಬೋಧನೆ
* ಅಲೆಮಾರಿ ಜನಾಂಗ ಮಕ್ಕಳಿಗೆ ಟೆಂಟ್ ಶಾಲೆ ಪ್ರಾರಂಭ
* ಕನ್ನಡ ಸಾಹಿತ್ಯ ವೇದಿಕೆ ಅಧ್ಯಕ್ಷರಾಗಿ ಸೇವೆ
* ಮಾನವೀಯ ಮೌಲ್ಯಗಳ ಕುರಿತು ಉಪನ್ಯಾಸ ಕಾರ್ಯಕ್ರಮಗಳು
* ಕಸದಿಂದ ರಸ-ಪಠೋಪಕರಣಗಳ ಸಿದ್ಧತೆ
* ಚಿಕ್ಕಬಳ್ಳಾಪುರ ಜಿಲ್ಲಾ ಶೈಕ್ಷಣಿಕ ಸುಗಮಕಾರರಾಗಿ ಸೇವೆ.

ಪ್ರಶಸ್ತಿಗಳು ಮತ್ತು ಸಾಧನೆ
೧) ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಣಾಧಿಕಾರಿ ಪ್ರಶಸ್ತಿ.
೨) ರಾಜ್ಯ ಮಟ್ಟದ ಕರ್ನಾಟಕ ಚೇತನ ಪ್ರಶಸ್ತಿ
೩) ರಾಜ್ಯ ಮಟ್ಟದ ರಂಗಶ್ರೀ ಕಾವ್ಯ ಸೌರಭ ಪ್ರಶಸ್ತಿ.
೪) ರಾಜ್ಯ ಮಟ್ಟದ ಚುಟುಕುಸಿರಿ ಪ್ರಶಸ್ತಿ
೫) ಅಖಿಲಭಾರತ ಸಾಹಿತ್ಯ ಸಮ್ಮೇಳನಗಳಲ್ಲಿ ಕವನ ವಾಚನ
೬) ರಾಜ್ಯಮಟ್ಟದ ಕವಿಗೋಷ್ಠಿಗಳಲ್ಲಿ ಕವನ ವಾಚನ
೭) ಚಿಂತಾಮಣಿ ತಾಲ್ಲೂಕು ತೃತೀಯ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ

ಸಾಮಾಜಿಕ ಕಳಕಳಿಯ ಆದರ್ಶ ಶಿಕ್ಷಕಿ ಹಸೀನಾಬೇಗಂ

haseena begum kannada kavivani
 
   
ಇತ್ತೀಚಿನ ದಿನಗಳಲ್ಲಿ ಗುರುಶಿಷ್ಯರ ಸಂಬಂಧ ಮೊದಲಿನಂತಿಲ್ಲ. ಗುರವಿನ ಬಗ್ಗೆ ಜನಸಮುದಾಯಕ್ಕೆ ಇದ್ದ ಗೌರವಾದರಗಳು ಸಹ ಕಡಿಮೆಯಾಗುತ್ತಿವೆ ಎಂದರೆ ತಪ್ಪಾಗಲಾರದು. ಆದರೂ ಸಹ ಬೆರಳೆಣಿಕೆಯಷ್ಟು ಮಂದಿ ಶಿಕ್ಷಕರು ತಮ್ಮ ಸ್ಥಾನದ ಗೌರವವನ್ನು ಉಳಿಸಿಕೊಂಡು ಜನಸಾಮಾನ್ಯರ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ. ಇಂತಹವರಲ್ಲಿ 
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯ ಹಸೀನಾ ಬೇಗಂರವರು ಒಬ್ಬರಾಗಿದ್ದಾರೆ. ಹಸೀನಾ ಬೇಗಂ ರವರು ತಾಲ್ಲೂಕಿನ ಮೈಲಾಂಡ್ಲಹಳ್ಳಿ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸುಮಾರು ೩೫ ವರ್ಷಗಳಿಂದ ಶಿಕ್ಷಕಿಯಾಗಿ ವಿವಿಧ ಶಾಲೆಗಳಲ್ಲಿ ಸೇವೆ ಸಲ್ಲಿಸಿರುವ ಇವರು ಎಲ್ಲೂ ಸಹ ಕರ್ತವ್ಯ ಲೋಪವನ್ನು ಎಸಗದೆ ಕರ್ತವ್ಯ ನಿಷ್ಠೆ ತೋರಿದ್ದು, ಶಿಕ್ಷಣ ಇಲಾಖೆಯ ವಿದ್ಯಾರ್ಥಿಗಳ ಹಾಗೂ ಪೋಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

haseena begum kannada kavivani

haseena begum kannada kavivani


ಬಹುತೇಕ ಕಡೆಗಳಲ್ಲಿ ಸರ್ಕಾರಿ ಕನ್ನಡ ಶಾಲೆಗಳು ಮುಚ್ಚಲ್ಪಡುತ್ತಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಹಾಜರಾತಿ ಮತ್ತು ದಾಖಲಾತಿ ಕ್ಷೀಣಿಸುತ್ತಿರುವುದು ಕಾಣಬಹುದಾಗಿದೆ.ಪರಿಸ್ಥಿತಿ ಹೀಗಿರುವಾಗ ಮೈಲಾಂಡ್ಲಹಳ್ಳಿಯ ಈ ಕನ್ನಡ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಅತ್ಯಧಿಕವಾಗಿರುವುದು ಗಮನಾರ್ಹವಾಗಿದೆ.ಇದಕ್ಕೆ ಹಸೀನಾ ಬೇಗಂರವರ ಕಾರ್ಯವೈಖರಿಯೇ ಕಾಣವೆಂದರೆ ತಪ್ಪಾಗಲಾರದು. ಸುಮಾರು ೫ ವರ್ಷಗಳಿಂದ ಸದರಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಸೀನಾ ರವರು ಶಾಲಾ ಮಕ್ಕಳಿಗೆ ಪ್ರೀತಿಯ ಶಿಕ್ಷಕಿಯಾಗಿದ್ದಾರೆ. ತಾನು ಕೆಲಸ ನಿರ್ವಹಿಸುತ್ತಿರುವ ಶಾಲೆಯನ್ನು ಖಾಸಗಿ ಶಾಲೆಗಳನ್ನು ಮೀರಿಸುವಂತೆ ಮಾಡಿರುವುದು ಗಮನಾರ್ಹ ಅಂಶವಾಗಿದೆ. ಮಕ್ಕಳೊಂದಿಗೆ ಮಗುವಂತೆ ಬೆರೆತು ಮಕ್ಕಳ ಮನಮುಟ್ಟುವಂತೆ ಸರಳವಾಗಿ ಪಾಠಪ್ರವಚನಗಳನ್ನು ಕಲಿಸುತ್ತಿದ್ದಾರೆ.ಈ ಶಾಲೆಗೆ ಸುತ್ತಮುತ್ತಲ ಐದಾರು ಗ್ರಾಮಗಳ ಮಕ್ಕಳ ಸಹ ದಾಖಲಾಗುತ್ತಿದ್ದು ಇವರಲ್ಲಿ ಅನೇಕ ಮಂದಿ ಕಡುಬಡವರಾಗಿದ್ದಾರೆ.ಈ ಶಾಲೆಯಲ್ಲಿ ಕಲಿತ ಹಲವಾರು ಮಕ್ಕಳು ಮುಂದಿನ ಶಾಲಾ ಕಾಲೇಜುಗಳಲ್ಲೂ ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದುತ್ತಿದ್ದಾರೆ.

   ಹಸೀನಾ ಬೇಗಂ ರವರು ತನ್ನ ಸೇವೆಯನ್ನು ಶಿಕ್ಷಣ ಕ್ಷೇತ್ರಕ್ಕೆ ಸೀಮಿತಗೊಳಿಸದೆ ಇತರೆ ಸಮಾಜ ಸೇವಾ ಕಾರ್ಯಗಳಲ್ಲೂ ತೊಡಗಿಸಿಕೊಂಡಿದ್ದಾರೆ. ತನಗೆ ಬರುವ ಸಂಬಳದಲ್ಲಿ ಸ್ವಲ್ಪಭಾಗ ಸಮಾಜಸೇವಾ ಕಾರ್ಯಕ್ರಮಗಳಿಗೆ, ಕನ್ನಡ ಕಾರ್ಯಕ್ರಮಗಳಿಗೆ ಖರ್ಚು ಮಾಡುತ್ತಿರುವುದು ಅಚ್ಚರಿಯಾದರೂ ನಿಜ ಸಂಗತಿಯಾಗಿದೆ. ಇಷ್ಟೇ ಅಲ್ಲದೆ ಎಲ್ಲಾದರೂ ಬಾಲ್ಯವಿವಾಹಗಳು ನಡೆದರೆ ಧೈರ್ಯದಿಂದ ಅಧಿಕಾರಿಗಳಿಗೆ, ಪೋಲಿಸರಿಗೆ ತಿಳಿಸಿ ಆ ಬಾಲ್ಯವಿವಾಹವನ್ನು  ತಡೆಯುತ್ತಾರೆ. ಈಗಾಗಲೇ ಅನೇಕ ಬಾಲ್ಯವಿವಾಹಗಳನ್ನು ತಡೆದು ಆಮಾಯಕ ಹೆಣ್ಣುಮಕ್ಕಳನ್ನು ಅಪಾಯದಿಂದ ರಕ್ಷಿಸಿ ಅವರ ಬಾಳಿಗೆ ಬೆಳಕಾಗಿದ್ದಾರೆ. ಪ್ರತಿಭಾವಂತ ವಿದ್ಯಾರ್ಥಿಗಳು ಬಡತನದಿಂದ ಶಾಲೆ ಬಿಟ್ಟರೆ ಅವರ ಮನೆಗೆ ತೆರಳಿ ಅವರ ಪೋಷಕರಿಗೆ ಬುದ್ಧಿ ಹೇಳಿ ಬಡತನ ಶಿಕ್ಷಣಕ್ಕೆ ಅಡ್ಡಿಯಾಗುವುದಿಲ್ಲ ಎಂದು ಮನವರಿಕೆ ಮಾಡಿಕೊಟ್ಟು ಅಂತಹ ವಿದ್ಯಾರ್ಥಿಗಳ ವ್ಯಾಸಂಗದ ಜವಾಬ್ದಾರಿಯನ್ನು ತಾನೇ ವಹಿಸಿದ್ದಾರೆ.

haseena begum kannada kavivani

     
ಹೀಗೆ ನಡೆದಿರುವ ಒಂದು ಪ್ರಸಂಗವನ್ನು ತಿಳಿಸಲೇಬೇಕು ಅದು ತಾನು ಕಾರ್ಯನಿರ್ವಹಿಸುತ್ತಿರುವ ಶಾಲೆಯ ವಿದ್ಯಾರ್ಥಿನಿ ೭ನೇ ತರಗತಿ ಉತ್ತೀರ್ಣಳಾದ ನಂತರ ಅವಳ ತಂದೆ ತಾಯಿಗಳು ಬಡತನದ ಕಾರಣದಿಂದ ಅವಳನ್ನು ಮುಂದಿನ ತರಗತಿಗೆ ಕಳುಹಿಸದೇ ಕುರಿ ಮೇಯಿಸಲು ಕಳುಹಿಸಿದ್ದರು.ಈ ವಿಷಯವನ್ನು ಗ್ರಾಮದ ಜನರಿಂದ ತಿಳಿದ ಹಸೀನಾ ಬೇಗಂ ತಕ್ಷಣ ಸಂಬಂಧ ಪಟ್ಟ ಅಧಿಕಾರಿಗಳಿಗೆ ತಿಳಿಸಿ ಅವರೊಂದಿಗೆ ಅವರ ಮನೆಗೆ ತೆರಳಿ ಪೋಷಕರಿಗೆ ಬುದ್ಧಿವಾದ ಹೇಳಿ ಆ ವಿದ್ಯಾರ್ಥಿನಿಯ ಶೈಕ್ಷಣಿಕ ಖರ್ಚನ್ನು ತಾನೇ ಭರಿಸುವುದಾಗಿ ಭರವಸೆ ನೀಡಿ ಮರಳಿ ಆ ವಿದ್ಯಾರ್ಥಿಯನ್ನು ಶಾಲೆಗೆ ಕರೆತಂದಿದ್ದು ಗಮನಾರ್ಹ ವಿಷಯವಾಗಿದೆ. ತಾನು ಹೇಳಿದಂತೆ ಆ ವಿದ್ಯಾರ್ಥಿನಿಯ ಖರ್ಚನ್ನು ಹಸೀನಾ ರವರೇ ಭರಿಸುತ್ತಿದ್ದು ಇಂದು ಆ ವಿದ್ಯಾರ್ಥಿನಿ ಉನ್ನತ ವ್ಯಾಸಂಗ ಮಾಡುತ್ತಿದ್ದಾಳೆ. ಹೀಗೇ ಹತ್ತು ಹಲವಾರು ಹೆಣ್ಣು ಮಕ್ಕಳ ಬಾಳಿಗೆ ಬೆಳಕಾಗಿದ್ದಾರೆ.ಜೊತೆಗೆ ಕೌಟುಂಬಿಕ ಕಲಹಗಳು ನಡೆದಾಗ ಅವುಗಳನ್ನು ಪರಿಹರಿಸಿ ಅವರನ್ನು ಒಳ್ಳೆಯ ಮಾರ್ಗದಲ್ಲಿ ನಡೆಯುವಂತೆ ತಿಳಿಹೇಳುತ್ತಾರೆ.ಹೀಗಾಗಾಗಿ ಹಲವಾರು ಮಂದಿ ಇಂದು ಸುಖವಾಗಿ ಬಾಳುತ್ತಿದ್ದಾರೆ.ಆದ್ದರಿಂದ ಹಸೀನಾ ಬೇಗಂ ರವರು ಮಹಿಳೆಯರ ಆಶಾಕಿರಣವೆಂದೇ ಖ್ಯಾತರಾಗಿದ್ದಾರೆ.

     ಈ ಹಿಂದೆ ಸರ್ಕಾರದ ಸಾಕ್ಷರ ಆಂದೋಲನ ಕಾರ್ಯಕ್ರಮದಲ್ಲಿ ತಾಲ್ಲೂಕು ಸಂಯೋಜಕಿಯಾಗಿ ಸುಮಾರು ೧೦ ವರ್ಷಗಳ ಕಾಲ ಉತ್ತಮವಾಗಿ ಕಾರ್ಯನಿರ್ವಹಿಸಿ ತಾಲ್ಲೂಕಿನಲ್ಲಿ ಸಾಕ್ಷರತಾ ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿದ್ದಾರಲ್ಲದೆ, ಅನೇಕ ಅನಕ್ಷರಸ್ಥರಿಗೆ ಅಕ್ಷರವನ್ನು ಕಲಿಸಿ ಅವರನ್ನು ವಿದ್ಯಾವಂತರನ್ನಾಗಿ ಮಾಡುವ ನಿಟ್ಟಿನಲ್ಲೂ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ.ಅಷ್ಟೇ ಅಲ್ಲದೆ ಗಂಡನಿಂದ ದೂರವಾಗಿರುವ, ವಿಚ್ಛೇದನ ಪಡೆದಿರುವ ಅಸಹಾಯಕ ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಇತರೆ ಬಡ ಹೆಣ್ಣು ಮಕ್ಕಳಿಗೆ ಮೇಣದ ಬತ್ತಿ, ಅಗರ ಬತ್ತಿ ತಯಾರಿಕೆ, ಟೈಲರಿಂಗ, ಲಲಿತ ಕಲೆ ಹೀಗೇ ಹಲವಾರು ವೃತ್ತಿ ತರಬೇತಿಗಳನ್ನು ಉಚಿತವಾಗಿ ನೀಡಿ ಅವರನ್ನು ಸಬಲರನ್ನಾಗಿಸಿ ಅವರ ಕಾಲ ಮೇಲೆ ಅವರು ನಿಲ್ಲುವಂತೆ ಮಾಡಿದ್ದಾರೆ.ಇಂದು ಇವರಿಂದ ತರಬೇತಿ ಪಡೆದ ಹಲವಾರು ಹೆಣ್ಣುಮಕ್ಕಳು ತಮ್ಮ ಭವಿಷ್ಯವನ್ನು ರೂಪಿಸಿಕೊಂಡಿದ್ದಾರೆ.

    ಬರೀ ಇಷ್ಟೇ ಅಲ್ಲದೇ ಹಸೀನಾ ಬೇಗಂ ಸಾಹಿತ್ಯ ಕೃಷಿಯಲ್ಲೂ ತೊಡಗಿರುವುದು ಸಂತೋಷದ ಸಂಗತಿಯಾಗಿದೆ. ಹಸೀನಾ ರವರು ವಿಚಾರ ಪೂರ್ಣ, ಪ್ರಚಲಿತ, ಸಾಮಾಜಿಕ ಸಮಸ್ಯೆ, ಮಹಿಳೆಯ ದೌರ್ಜನ್ಯ, ವರದಕ್ಷಿಣೆ, ಬಾಲ್ಯ ವಿವಾಹ ಸೇರಿದಂತೆ ಹಲವಾರು ವಿಚಾರ ಪೂರ್ಣ ಲೇಖನಗಳಿಂದ ಪ್ರಸಿದ್ದಿಯಾಗಿದ್ದಾರೆ. ಇವರ ಹಲವು ಬರಹಗಳು ಈಗಾಗಲೇ ನಾಡಿನ ಹಲವು ಪತ್ರಿಕೆಗಳಲ್ಲಿ, ನಿಯತಕಾಲಿಕೆಗಳಲ್ಲಿ, ಕವನಸಂಕಲನಗಳಲ್ಲಿ ಹಾಗೂ ಸ್ಮರಣ ಸಂಚಿಕೆಗಳಲ್ಲಿ ,ವಾರಪತ್ರಿಕೆ ,ಮಾಸಪತ್ರಿಕೆಗಳಲ್ಲಿ ಬೆಳಕು ಕಂಡಿವೆ.ಹಲವು ಮಂದಿ ಉದಯೋನ್ಮುಖ ಬರಹಗಾರರ ಕೃತಿಗಳಿಗೆ ಮುನ್ನುಡಿ,ಆಶಯ ನುಡಿಗಳನ್ನು ಬರೆದುಕೊಟ್ಟು ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದಾರೆ.

    ಮಾತೃಭಾಷೆ ಉರ್ದು ಆಗಿದ್ದರೂ, ಹಿಂದಿ ಪದವೀಧರೆಯಾಗಿದ್ದರೂ ಸಹ  ಅಪ್ಪಟ ಕನ್ನಡ ಪ್ರೇಮಿಯಾಗಿರುವ ಇವರು ಕನ್ನಡದಲ್ಲಿ ಸಾಕಷ್ಟು ಪರಿಣಿತಿಯನ್ನು ಪಡೆದವರಾಗಿದ್ದು, ಉತ್ತಮ ವಾಗ್ಮಿಗಳೂ ಆಗಿದ್ದಾರೆ.ವಿವಿಧ ಕನ್ನಡ ಹಾಗೂ ಇತರೆ ಕಾರ್ಯಕ್ರಮಗಳಿಗೆ ಇವರನ್ನು ಮುಖ್ಯ ಭಾಷಣಕಾರರನ್ನಾಗಿ ಆಹ್ವಾನಿಸುತ್ತಾರೆ. ಸರಳ ಸಜ್ಜನಿಕೆಯ, ನೇರ ನುಡಿ, ಮೃದು ಸ್ವಭಾವದ, ಹಸನ್ಮುಖಿ ವ್ಯಕ್ತಿಯಾಗಿರುವ ಹಸೀನಾ ಬೇಗಂ ರವರಿಗೆ ಅವರ ಸಾಹಿತ್ಯ ಮತ್ತು ಸಾಮಾಜ ಸೇವೆಯನ್ನು ಗುರುತಿಸಿ ಹಲವಾರು ಕನ್ನಡ ಪರ ಸಂಘ ಸಂಸ್ಥೆಗಳು ಅವರನ್ನು ಸನ್ಮಾನಿಸಿ ಗೌರವಿಸಿದೆ.

    ಇಷ್ಟೆಲ್ಲಾ ಸೇವೆಯನ್ನು ಮಾಡುತ್ತಿರುವ ಹಸೀನಾ ಬೇಗಂ ರವರು ಎಂದೂ ಪ್ರಶಸ್ತಿ ಪುರಸ್ಕಾರಗಳನ್ನು ಬಯಸಿದವರಲ್ಲ. ಪ್ರಶಸ್ತಿಗಾಗಿ ಅರ್ಜಿ ಹಾಕಿದವರಲ್ಲ, ಅರ್ಜಿ ಹಾಕಿ ನಿಮಗೆ ರಾಜ್ಯಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಕೊಡಿಸುತ್ತೇವೆ ಎಂದಾಗಲೂ ತಾನು ಅರ್ಜಿ ಹಾಕುವುದಿಲ್ಲ ಎಂದು ಪ್ರಶಸ್ತಿ ನಿರಾಕರಿಸಿದ ಆದರ್ಶ ಶಿಕ್ಷಕಿಯಾಗಿದ್ದಾರೆ.ಹಸೀನಾ ಬೇಗಂ ರವರ ಈ ಎಲ್ಲಾ ಆದರ್ಶ ಕಾರ್ಯಗಳನ್ನು ತಿಳಿದುಕೊಂಡ ಬೀದರ್ ನ ದೇಶಪಾಂಡೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದವರು ಕಳೆದ ವರ್ಷ ರಾಜ್ಯಮಟ್ಟದ ಸಮಾಜ ಜ್ಯೋತಿ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದಾರೆ. ಮುಖ್ಯಶಿಕ್ಷಕಿಯಾದರೂ ಯಾವುದೇ ಜಾತಿ ಬೇಧವಿಲ್ಲದೆ ಎಲ್ಲರೊಂದಿಗೆ ಬೆರೆಯುತ್ತಾ, ಗರ್ವದಿಂದ ಮೆರೆಯದೆ ಸರಳ ಜೀವನ ನಡೆಸುತ್ತಿರುವ ಸಾಮಾಜಿಕ ಕಳಕಳಿಯ ಹೊಂದಿರುವ ಆದರ್ಶ ಶಿಕ್ಷಕಿ ಹಸೀನಾ ಬೇಗಂ ರವರ ಬದುಕು ಸಾಧನೆ ಇತರರಿಗೆ ಮಾದರಿಯಾಗಿದೆ.

ಕೆ.ಎನ್.ಅಕ್ರಂಪಾಷ
ಯುವಕವಿ
ಚಿಂತಾಮಣಿ-೫೬೩೧೨೫
ಮೊ: ೯೬೧೧೧೭೫೩೮೦

 

ಮಾತನಾಡಿದ ಗೌರಿ


ನಾನು ನಿಮ್ಮ ಗೌರಿ
ಕನ್ನಡ ನಾಡಿನ ಕುವರಿ
ಹಿಡಿದಿದ್ದೆ ವಿಚಾರವಾದದ ದಾರಿ
ಕೋಮುವಾದಿಗಳು ಹಾಕಿದರು
ನನ್ನ ಬೆನ್ನಿಗೆ ಚೂರಿ
ನಾನು ಜೀವನದುದ್ದಕ್ಕೂ ಕೋಮುವಾದ,
ಅಸ್ಪೃಶ್ಯತೆ,ಅಸಮಾನತೆಗಳ
ವಿರುದ್ಧ ಹೋರಾಡಿದೆ
ಅನೇಕ ಮಂದಿ ಸಮಾಜ
ಘಾತುಕರ ಮುಖವಾಡ ಕಳಿಚಿದೆ
ನಕ್ಸಲ್ ಎಂಬ ನರಕದಲ್ಲಿ ಸಿಲುಕಿದ್ದವರ
ಸಮಾಜಕ್ಕೆ ಬರಮಾಡಿಕೊಂಡೆ
ಅವರ ಬದುಕನ್ನು ಹಸನಾಗಿಸಿದೆ
ಕೋಮುವಾದವ ಖಂಡಿಸಿದೆ
ಕೋಮುವಾದಿಗಳ ವಿರುದ್ಧ
ದಿಟ್ಟತನದಿ ಹೋರಾಡಿದೆ.
ಅವರ ಮನದಲ್ಲಿ ನಡುಕ ಹುಟ್ಟಿಸಿದ್ದೆ
ಗೌರಿಲಂಕೇಶ್ ಪತ್ರಿಕೆಯ ಸಂಪಾದಕಿಯಾಗಿ
ವಿಚಾರವಾದಿ ಲೇಖಕಿಯಾಗಿ
ನಾನು ಪ್ರಗತಿ ಪರರ ಬೆಂಬಲಕ್ಕೆ ನಿಂತೆ.
ಮತೀಯವಾದಿಗಳ ಕುತಂತ್ರಗಳ ಬಯಲಿಗೆಳೆದೆ
ಇನ್ನೂ ಅನೇಕ ಪ್ರಗತಿ ಪರ
ಕಾರ್ಯಗಳನ್ನು ಮಾಡಬೇಕೆಂದಿದ್ದೆ
ಆದರೆ ನನ್ನ ವಿಚಾರವಾದವ ಸಹಿಸದ
ಕೆಲ ಶಿಖಂಡಿಗಳು ನನ್ನ ಮೇಲೆ ಗುಂಡು ಹಾರಿಸಿದರು.
ಇಂದು ನಾನು ಕನ್ನಡ ನಾಡಿನಲ್ಲಿಲ್ಲ
ಆದರೂ ಜಗತ್ತಿನ ಮನೆ-ಮನಗಳಲ್ಲಿ ಉಳಿದಿರುವೆನಲ್ಲ
ಗೌರಿಯನ್ನು ಕೊಂದೆವೆಂದು ಸಂತಸದಿ ಬೀಗದಿರಿ
ನೀವು ಕೊಂದಿರುವುದು ಒಬ್ಬ ಗೌರಿಯನ್ನು
ಆದರೆ ನಿಮ್ಮಿಂದ ಕೊಲ್ಲಲಾಗದು ನನ್ನ ಸಿದ್ದಾಂತಗಳನ್ನು
ಸಂತೋಷದಿ ಹೆಮ್ಮೆಪಡದಿರಿ ಸತ್ತಳೆಂದು ಗೌರಿ
ಹತ್ತಿರದಲ್ಲಿ ಉಳಿದ ಗೌರಿಯರು ಕಟ್ಟುತ್ತಾರೆ ನಿಮ್ಮ ಗೋರಿ

ಕೆ.ಎನ್.ಅಕ್ರಂಪಾಷ
ರಾಜ್ಯಪ್ರಶಸ್ತಿ ಪುರಸ್ಕೃತ ಬರಹಗಾರ/ ಶಿಕ್ಷಕ
ಸಂಪಾದಕರು, ಕನ್ನಡ ಕವಿವಾಣಿ ಪತ್ರಿಕೆ
ಮೊ:೯೬೧೧೧೭೫೩೮೦

ಟಿಪ್ಪುವಿನ ಆಡಳಿತ ಜಗತ್ತಿಗೆ ಮಾದರಿ


ಕರ್ನಾಟಕದ ಇತಿಹಾಸದಲ್ಲಿ ಮಾತ್ರವೇ ಅಲ್ಲ ಭಾರತದ ಇತಿಹಾಸದಲ್ಲಿ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಮಹತ್ತರವಾದ ವ್ಯಕ್ತಿತ್ವವುಳ್ಳವನಾಗಿದ್ದಾನೆ. ಸ್ವಾತಂತ್ರ್ಯವನ್ನು ತನ್ನ ಪ್ರಾಣಕ್ಕಿಂತ ಅಧಿಕವಾಗಿ ಕಂಡವನು ಟಿಪ್ಪು ಸುಲ್ತಾನ್. ನಾಡಿನ ಸ್ವಾಭಿಮಾನಿಯಾಗಿ ವೈಯುಕ್ತಿ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಹುತಾತ್ಮನಾದನು.
        
        ಟಿಪ್ಪು ತುಂಬಾ ಸ್ವಾಭಿಮಾನಿಯಾಗಿದ್ದನು.ಸ್ವಾಭಿಮಾನವನ್ನು ಕಡೆಗಣಿಸಿದ್ದರೆ, ನಿಜಾಮರಂತೆ ಇನ್ನೂ ಅನೇಕ ವರ್ಷಗಳ ಕಾಲ ಮುಂದುವರೆಯುತ್ತಿದ್ದ. ನರಿಯಂತೆ ನೂರು ದಿನ ಬದುಕುವ ಬದಲು ಹುಲಿಯಂತೆ ಹೋರಾಡಿ ಒಂದೇ ದಿನವಾದರೂ ಸ್ವಾಭಿಮಾನದಿಂದ ಬದುಕುವುದು ಲೇಸೆಂಂದು ಸಾರಿದವನು ಟಿಪ್ಪು ಸುಲ್ತಾನ್. ವ್ಯಕ್ತಿತ್ವದಲ್ಲಿ ಮಾತ್ರವಲ್ಲದೆ ರಾಜ್ಯಾಡಳಿತದಲ್ಲೂ ಟಿಪ್ಪುಸುಲ್ತಾನ್ ಜಗತ್ತಿಗೆ ಮಾದರಿಯಾಗಿದ್ದಾನೆ. ರಾಜ್ಯದ ಹಾಗೂ ಪ್ರಜೆಗಳ ಸಲುವಾಗಿ ನಿಂತರ ದುಡಿಮೆ ಟಿಪ್ಪುವಿನದ್ದಾಗಿತ್ತು. ಉತ್ಸಾಹದಿಂದ ಚಿಮ್ಮುತ್ತಿದ್ದ ಅಧಿಕಾರಿಗಳನ್ನು ತನ್ನ ಕಡೆ ಕೇಂದ್ರೀಕರಿಸಿಕೊಂಡು ಸಮಾಲೋಚನೆ ಮಾಡುತ್ತಿದ್ದನು. ಟಿಪ್ಪುವಿನ ಪತ್ರವ್ಯವಹಾರ ನೋಡಿದರೆ ಟಿಪ್ಪು ತನ್ನ ಆಡಳಿತದಲ್ಲಿ ತುಂಬಾ ಆಸಕ್ತಿಇರುವದರ ಬಗ್ಗೆ ಗೋಚರವಾಗುತ್ತದೆ.

    ಸವಿಲ್ ಮಿಲಿಟರಿ ಹಾಗೂ ವಾಣಿಜ್ಯ ಕುರಿತು ಅಧಿಕಾರಿಗಳಿಗೆ ಮಾರ್ಗದರ್ಶನ ಮಾಡುತ್ತಿದ್ದನು. ಹಳೆಯದನ್ನು ಉತ್ತಮ ಪಡಿಸುವದು ಹೊಸದನ್ನು ಅನುಷ್ಠಾನಕ್ಕೆ ತರುತ್ತಿದ್ದನು. ಪಾಶ್ಚಿಮಾತ್ಯ ಆಡಳಿತದ ಪದ್ಧತಿಯನ್ನು ಉತ್ತಮ ಪಡಿಸುವಲ್ಲಿ ಹಿಂದು ಮುಂದು ನೋಡುತ್ತಿರಲಿಲ್ಲ. ಹೊಸನಾಣ್ಯ ಪದ್ಧತಿ, ಮಧ್ಯಪಾನೀಯ ಮಾರಾಟಗಳ ನಿಷೇದ, ಪಂಚಾಂಗದ ಸುಧಾರಣೆ, ಹೊಸರೀತಿ ಅಳತೆ ಹಾಗೂ ತೂಕ ಪದ್ಧತಿ, ನೂತನ ಕಂದಾಯ ಪದ್ಧತಿ, ವಾಣಿಜ್ಯ, ಕಾನೂನು, ಆಧುನೀಕರಣದ ಬಗೆಗಿನ ಆಸಕ್ತಿ ಇವೆಲ್ಲವನ್ನು ನೋಡಲಾಗಿ ಪ್ರಸಿದ್ಧ ರಾಜರುಗಳ ಬಗೆಗೆ ಹೋಲಿಸಿದಾಗ ಅವರಿಗಿಂತ ಯಾವುದರಲ್ಲಿಯೂ ಕಡಿಮೆಯಿಲ್ಲದೆ ಎಲ್ಲರಿಗಿಂತ ಮೊದಲ ಸ್ಥಾನದಲ್ಲಿ ಟಿಪ್ಪು ಸುಲ್ತಾನ್ ನಿಲ್ಲುವುದರಲ್ಲಿ ಯಾವುದೇ ಸಂಶಯವಿಲ್ಲ.

   ಹೈದರ ಮತ್ತು ಟಿಪ್ಪುವಿನ ಆಡಳಿತ ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ಕೂಡಿತ್ತು. ಆಡಳಿತ ಕೇಂದ್ರೀಕೃತವಾಗದೇ ವಿಕೇಂದ್ರಿತ ಆಡಳಿತವನ್ನು ಅನುಸರಿಸಿತ್ತು. ಅಂದರೆ ಸ್ಥಳೀಯ ಕಟ್ಟಳೆಯನ್ನು ಅನುಸಾರವಾಗಿ ಆಡಳಿತ ನಡೆಯುತ್ತಿತ್ತು.ನಾಣ್ಯಗಳ ಮೇಲೆ ಶಿವ ಪಾರ್ವತಿಯರ ಚಿತ್ರ ಉಳಿಸಿಕೊಂಡು ಬಂದಿದ್ದನು ಟಿಪ್ಪುಸುಲ್ತಾನ್. ಇದರಿಂದ ನಾವು ಅವರಲ್ಲಿ ಸರ್ವಧರ್ಮ ಬಗೆಗಿನ ಸಮನ್ವಯತೆಯನ್ನು ಕಾಣಬಹುದಾಗಿದೆ. ಮೊಹರು ಹಾಗೂ ರೂಪಾಯಿಗಳನ್ನು ಜಾರಿಗೆ ತಂದ ಕೀರ್ತಿ ಟಿಪ್ಪುವಿಗೆ ಸಲ್ಲುತ್ತದೆ. ಅಷ್ಠೇ ಅಲ್ಲದೆ ಮೊಟ್ಟಮೊದಲ ಬಾರಿಗೆ ಬೆಳ್ಳಿ ನಾಣ್ಯಗಳನ್ನು ಚಲಾವಣೆಗೆ ತಂದ ಸುಲ್ತಾನನೆಂಬ ಹೆಗ್ಗಳಿಗೆಗೆ ಪಾತ್ರವಾಗಿದ್ದಾನೆ.

   ಕೇಂದ್ರಗಳಲ್ಲಿ ಒಟ್ಟು ೧೮ ಇಲಾಖೆಗಳಿದ್ದವು, ಪೋಲಿಸ್ ಹಣಕಾಸು,ನಾಗರಿಕ ವ್ಯವಹಾರಗಳು ವ್ಯವಸ್ಥಿತವಾಗಿ ಕೂಡಿತ್ತು. ಟಿಪ್ಪು ಶಾಸಕಾಂಗ , ನ್ಯಾಯಾಂಗ, ಕಾರ್ಯಾಂಗಳಿಗೆ ತಾನೇ ಸರ್ವೋಚ್ಛ ನಾಯಕನಾಗಿದ್ದನು. ಕಾಗದ ಪತ್ರಗಳನ್ನು ಖುದ್ದಾಗಿ ಪರಿಶೀಲಿಸುತ್ತಿದ್ದನು. ವೇಶ್ಯಾವೃತ್ತಿಯನ್ನು ತೊಡೆದು ಹಾಕಿದ ಮೊದಲ ದೊರೆಯಾಗಿದ್ದನು. ಮೊದಲು ಟಿಪ್ಪು ತನ್ನ ರಾಜ್ಯವನ್ನು ೭ ಪ್ರಾಂತಗಳಾಗಿ ವಿಂಗಡಿಸಿದನು. ನಂತರ ೯ಕ್ಕೆ ಏರಿತು. ತದನಂತರ ಅವುಗಳ ಸಂಖ್ಯೆಯನ್ನು ೧೭ಕ್ಕೆ ಹೆಚ್ಚಿಸಿದನು. ೧೭೯೪ ರಲ್ಲಿ ಪ್ರಾಂತಗಳ ಸಂಖ್ಯೆ ೩೭ಕ್ಕೆ ಏರಿತು. ಪ್ರತಿಯೊಂದು ಪ್ರಾಂತಕ್ಕೆ ಒಬ್ಬ ಸಿವಿಲ್ ಗೌರ‍್ನರ್ ಒಬ್ಬ ಮಿಲಿಟರಿ ಗೌರ‍್ನರ್ ನೇಮಕ ಮಾಡಿದ್ದನು. ಕಂದಾಯ ಆಡಳಿತವನ್ನು ಆಸಿಫ್ ನೋಡಿಕೊಳ್ಳುತ್ತಿದ್ದನು. ಶಾಂತಿ ಪಾಲನಾ ಕರ್ತವ್ಯವನ್ನು ಫೌಜದಾರ ನಿರ್ವಹಿಸುತ್ತಿದ್ದನು. ಆಸಿಫರ ಕೈಕೆಳಗೆ ಶಿರಸ್ತೆದಾರ್, ಗುಮಾಸ್ತರು ಮತ್ತು ಸೇವಕರು ಇರುತ್ತಿದ್ದರು.ಗ್ರಾಮಾಡಳಿತವನ್ನು ಪಟೇಲರು, ಶ್ಯಾನುಬೋಗರು ನೋಡಿಕೊಳ್ಳುತ್ತಿದ್ದರು.

    ಟಿಪ್ಪು ವಾಣಿಜ್ಯ ವ್ಯಾಪಾರಗಳ ಬಗೆಗೆ ಹೆಚ್ಚಿನ ಆಸಕ್ತಿ ತೋರಿದನು. ಮೆಣಸು, ಮೆಣಸಿನಕಾಯಿ,ಶ್ರೀಗಂಧ,ಏಲಕ್ಕಿ ಹಾಗೂ ಅಕ್ಕಿಗಳ ರಫ್ತಿಗೆ ಸಕ್ರೀಯವಾಗಿ ಪ್ರೋತ್ಸಾಹ ನೀಡಿದನು.ವ್ಯಾಪಾರಿ ಸಂಸ್ಥೆಯೊಂದನ್ನು ಸ್ಥಾಪಿಸಿ ಅದರಲ್ಲಿ ಆಸಕ್ತರಾಗುವಂತೆ ಪ್ರೋತ್ಸಾಹಿಸಿದನು. ಟಿಪ್ಪು ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡಿದನು.ವ್ಯಾಪಾರಿ ಸಂಸ್ಥೆಯೊಂದನ್ನು ಸ್ಥಾಪಿಸಿ ಅದರಲ್ಲಿ ಆಸಕ್ತರಾಗುವಂತೆ ಪ್ರೋತ್ಸಾಹಿಸಿದನು.ಟಿಪ್ಪು ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡಿದನು.ಟರ್ಕಿ, ಫ್ರಾನ್ಸ ಮತ್ತು ಇರಾನ್‌ಗಳಿಂದ ಕುಶಲಕರ್ಮಿಗಳನ್ನು ಕರೆಸಿಕೊಂಡಿದ್ದನು. ಶ್ರೀರಂಗಪಟ್ಟಣ, ಬೆಂಗಳೂರು, ಬಿದನೂರ ಮತ್ತು ಚಿತ್ರದುರ್ಗಗಳಲ್ಲಿ ಸ್ಥಾಪಿಸಿದ ಕಾರಖಾನೆಗಳು ಕತ್ತರಿ,ಮದ್ದುಗುಂಡು, ತುಪಾಕಿ, ಕೋವಿ, ಕಾಗದ, ಗಡಿಯಾರ ಹಾಗೂ ದಿನಬಳಕೆ ವಸ್ತುಗಳನ್ನು ತಯಾರಿಸುತ್ತಿದ್ದರು. ಬರೀ ಇಷ್ಠೇ ಅಲ್ಲದೆ ಟಿಪ್ಪು ಒಳ್ಳೆಯ ರಸ್ತೆಗಳನ್ನು ನಿರ್ಮಿಸಿದನು. ಕೋಟೆಗಳನ್ನು ಭದ್ರಪಡಿಸಿದನು. ಉದ್ಯಾನ, ನಗರ ಸೌಂದರ್ಯ,ಲಾಲ್‌ಬಾಗ್, ಕೆರೆಕಟ್ಟೆಗಳು ಟಿಪ್ಪುವಿನಿಂದಲೇ ನಿರ್ಮಾಣವಾದವು.
   ಟಿಪ್ಪುವಿನ ರಾಜ್ಯದಲ್ಲಿ ಎಲ್ಲ ಮತದವರಿಗೂ ಅವಕಾಶವಿತ್ತು. ಯಾರಿಗೂ ಅನ್ಯಾಯವಾಗಲು ಅವಕಾಶ ಇರಲಿಲ್ಲ. ಶ್ರೀರಂಗಪಟ್ಟಣದ ರಂಗನಾಥ ದೇವಾಲಯದ ನಿರ್ಮಾಣ ಶಾರದಾ ಮಂದಿರದ ಮೂರ್ತಿಯನ್ನು ಪುನರ್ ಪ್ರತಿಷ್ಠಾಪನೆಗೆ ಉದಾರವಾಗಿ ಹಣವನ್ನು ಮಠಾಧೀಶರಿಗೆ ನೀಡಿದನು. ಶೃಂಗೇರಿ ಮಠಾಧೀಶರಿಗೆ ಟಿಪ್ಪು ಬರೆದಿರುವ ಪತ್ರಗಳು ಹಿಂದು ಧರ್ಮದ ಬಗ್ಗೆ ಅವನಲ್ಲಿದ್ದ ಗೌರವಯುತವಾದ ಭಾವನೆಗಳನ್ನು ತೋರ್ಪಡಿಸುತ್ತವೆ. ಹಿಂದುಗಳಿಗೆ ಉನ್ನತ ಹುದ್ದೆಗಳನ್ನು ಬ್ರಾಹ್ಮಣರಿಗೆ ದಾನದತ್ತಿಗಳನ್ನು ನೀಡಿದ್ದು ಅವನ ಪರಮತ ಸಹಿಷ್ಣುತೆಯನ್ನು ತೋರಿಸುತ್ತದೆ.

    ಅಪರಾಧಿಗಳಿಗೆ ಶಿಕ್ಷೆ ವಿಶಿಷ್ಟವಾಗಿತ್ತು. ೧೭೯೨ರಲ್ಲಿ ಟಿಪ್ಪು ಹೊರಡಿಸಿದ ಒಂದು ನವೀನ ನಿಬಂಧನೆಯಲ್ಲಿ ಈ ರೀತಿ ಹೇಳಲಾಗಿದೆ. ತಪ್ಪು ಮಾಡಿದವರಿಗೆ ನಿಮ್ಮ ಸರ್ಕಾರ ದಂಡ ಹಾಕುವ ಪದ್ಧತಿ ಈಗ ಇದೆ. ಇನ್ನು ಮುಂದೆ ತಪ್ಪು ಮಾಡಿದವರಿಗೆ ದಂಡ ವಸೂಲು ಮಾಡುವುದರ ಬದಲು ಅಪರಾಧ ಮಾಡಿದ ವ್ಯಕ್ತಿಯು ತನ್ನ ಗ್ರಾಮದ ಬಳಿ ಮಾವಿನ ಗಿಡಗಳನ್ನು ಮತ್ತು ಎರಡು ಹಲಸಿನ ಗಿಡಗಳನ್ನು ನೆಡತಕ್ಕದ್ದು ಮತ್ತು ಆ ಗಿಡಗಳು ಮೂರು ಮಳ ಎತ್ತರ ಬೆಳೆಯುವವರೆಗೂ ಅಪರಾಧಿಯು ಆ ಗಿಡಗಳಿಗೆ ನೀರು ಹಾಕುತ್ತ ಸಂರಕ್ಷಿಸಬೇಕು. ಇಂತಹ ನವೀನ ರೀತಿಯ ದಂಡನೆಯ ಮೂಲಕ ಮೈಸೂರಿನಲ್ಲಿ ಹಸಿರು ಕ್ರಾಂತಿಗೆ ಅವಕಾಶ ಮಾಡಿಕೊಟ್ಟನು.

   ಇಷ್ಠೆಲ್ಲಾ ಜನಪರ ಕಾರ್ಯಗಳನ್ನು ರೂಪಿಸುವುದರ ಜೊತೆಗೆ ಅವುಗಳನ್ನು ಕಾರ್ಯರೂಪಕ್ಕೆ ತಂದು ನೊಂದಜನರ, ಬಡಜನರ ಬಾಳಲ್ಲಿ ಬೆಳಕು ಮೂಡಿಸಿದ  , ದೇಶಕ್ಕಾಗಿ ಪ್ರಾಣವನ್ನೇ ಅರ್ಪಿಸಿದ ಸರ್ವಧರ್ಮ ಪ್ರೇಮಿ, ಮಾನವತಾವಾದಿ, ಧೀನದಲಿತರ ಆಶಾಜ್ಯೋತಿ ಮೈಸೂರುಹುಲಿ ಟಿಪ್ಪು ಸುಲ್ತಾನ್ ಇಂದು ಕೋಮುವಾದಿಗಳ ಕೈಯಲ್ಲಿ ನಲುಗುತ್ತಿರುವುದು,ಒಂದು ಜಾತಿಗೆ ಸೀಮಿತವಾಗಿರುವುದು, ಕೋಮುವಾದಿ, ದೇಶದ್ರೋಹಿ ಎಂದು ಕರೆಯಲ್ಪಡುತ್ತಿರುವುದು , ಜನರು ಹಾಗೂ ಸರ್ಕಾರ ಇಂದು ಟಿಪ್ಪುವನ್ನು ಮರೆಯುತ್ತಿರುವುದು ನೋವಿನ ಸಂಗತಿಯಾಗಿದೆ. ಸರ್ಕಾರವು ಟಿಪ್ಪುವಿನ ಇತಿಹಾಸದ ಕುರಿತು ಇನ್ನಷ್ಟು ಸಂಶೋಧನೆ ನಡೆಸಿ ಕೋಮುವಾದಿಗಳಿಗೆ ನಿಜ ಇತಿಹಾಸವನ್ನು ತಿಳಿಸುವುದರ ಮೂಲಕ ಕಣ್ತೆರೆಸಬೇಕೆಂದು ಆಶಿಸುತ್ತಾ. ಜನರು ಮತಾಂಧರ ಕೊಂಕು ಮಾತಿಗೆ ಬೆಲೆ ಕೋಡುವುದಿಲ್ಲವೆಂದು ಭಾವಿಸಿ ನವೆಂಬರ್ ೧೦ ಟಿಪ್ಪು ಜನ್ಮ ದಿನವಾದ ಈ ಸಂದರ್ಭದಲ್ಲಿ ಆ ಮಹನೀಯನಿಗೆ ಹೃದಯ ಪೂರ್ವಕ ಅಭಿನಂದನೆಗಳನ್ನು ಅರ್ಪಿಸೋಣ.

ಕೆ.ಎನ್.ಅಕ್ರಂಪಾಷ
ರಾಜ್ಯಪ್ರಶಸ್ತಿ ಪುರಸ್ಕೃತ ಬರಹಗಾರ
ಚಿಂತಾಮಣಿ-೫೬೩೧೨೫
ಮೊ: ೯೬೧೧೧೭೫೩೮೦


ಮೈಸೂರು ಹುಲಿ "ಟಿಪ್ಪು ಸುಲ್ತಾನ್" ಜಯಂತಿ ಆಚರಣೆ

ಕನ್ನಡ ಕವಿವಾಣಿ ಪತ್ರಿಕಾ ಬಳಗದ ವತಿಯಿಂದ ಇಂದು ದೇಶಭಕ್ತ ಮೈಸೂರು ಹುಲಿ "ಟಿಪ್ಪು ಸುಲ್ತಾನ್" ರವರ 268ನೇ ಜಯಂತಿ ಆಚರಣೆ ಮಾಡಲಾಯಿತು.


ಮೈಸೂರಿನ ಹುಲಿ "ಟಿಪ್ಪು ಸುಲ್ತಾನ್" ಜಯಂತಿಯ ಶುಭಾಶಯಗಳು

kannada kavivani