ಶುಕ್ರವಾರ, ನವೆಂಬರ್ 10, 2017

ಸಾಮಾಜಿಕ ಕಳಕಳಿಯ ಆದರ್ಶ ಶಿಕ್ಷಕಿ ಹಸೀನಾಬೇಗಂ

haseena begum kannada kavivani
 
   
ಇತ್ತೀಚಿನ ದಿನಗಳಲ್ಲಿ ಗುರುಶಿಷ್ಯರ ಸಂಬಂಧ ಮೊದಲಿನಂತಿಲ್ಲ. ಗುರವಿನ ಬಗ್ಗೆ ಜನಸಮುದಾಯಕ್ಕೆ ಇದ್ದ ಗೌರವಾದರಗಳು ಸಹ ಕಡಿಮೆಯಾಗುತ್ತಿವೆ ಎಂದರೆ ತಪ್ಪಾಗಲಾರದು. ಆದರೂ ಸಹ ಬೆರಳೆಣಿಕೆಯಷ್ಟು ಮಂದಿ ಶಿಕ್ಷಕರು ತಮ್ಮ ಸ್ಥಾನದ ಗೌರವವನ್ನು ಉಳಿಸಿಕೊಂಡು ಜನಸಾಮಾನ್ಯರ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ. ಇಂತಹವರಲ್ಲಿ 
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯ ಹಸೀನಾ ಬೇಗಂರವರು ಒಬ್ಬರಾಗಿದ್ದಾರೆ. ಹಸೀನಾ ಬೇಗಂ ರವರು ತಾಲ್ಲೂಕಿನ ಮೈಲಾಂಡ್ಲಹಳ್ಳಿ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸುಮಾರು ೩೫ ವರ್ಷಗಳಿಂದ ಶಿಕ್ಷಕಿಯಾಗಿ ವಿವಿಧ ಶಾಲೆಗಳಲ್ಲಿ ಸೇವೆ ಸಲ್ಲಿಸಿರುವ ಇವರು ಎಲ್ಲೂ ಸಹ ಕರ್ತವ್ಯ ಲೋಪವನ್ನು ಎಸಗದೆ ಕರ್ತವ್ಯ ನಿಷ್ಠೆ ತೋರಿದ್ದು, ಶಿಕ್ಷಣ ಇಲಾಖೆಯ ವಿದ್ಯಾರ್ಥಿಗಳ ಹಾಗೂ ಪೋಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

haseena begum kannada kavivani

haseena begum kannada kavivani


ಬಹುತೇಕ ಕಡೆಗಳಲ್ಲಿ ಸರ್ಕಾರಿ ಕನ್ನಡ ಶಾಲೆಗಳು ಮುಚ್ಚಲ್ಪಡುತ್ತಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಹಾಜರಾತಿ ಮತ್ತು ದಾಖಲಾತಿ ಕ್ಷೀಣಿಸುತ್ತಿರುವುದು ಕಾಣಬಹುದಾಗಿದೆ.ಪರಿಸ್ಥಿತಿ ಹೀಗಿರುವಾಗ ಮೈಲಾಂಡ್ಲಹಳ್ಳಿಯ ಈ ಕನ್ನಡ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಅತ್ಯಧಿಕವಾಗಿರುವುದು ಗಮನಾರ್ಹವಾಗಿದೆ.ಇದಕ್ಕೆ ಹಸೀನಾ ಬೇಗಂರವರ ಕಾರ್ಯವೈಖರಿಯೇ ಕಾಣವೆಂದರೆ ತಪ್ಪಾಗಲಾರದು. ಸುಮಾರು ೫ ವರ್ಷಗಳಿಂದ ಸದರಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಸೀನಾ ರವರು ಶಾಲಾ ಮಕ್ಕಳಿಗೆ ಪ್ರೀತಿಯ ಶಿಕ್ಷಕಿಯಾಗಿದ್ದಾರೆ. ತಾನು ಕೆಲಸ ನಿರ್ವಹಿಸುತ್ತಿರುವ ಶಾಲೆಯನ್ನು ಖಾಸಗಿ ಶಾಲೆಗಳನ್ನು ಮೀರಿಸುವಂತೆ ಮಾಡಿರುವುದು ಗಮನಾರ್ಹ ಅಂಶವಾಗಿದೆ. ಮಕ್ಕಳೊಂದಿಗೆ ಮಗುವಂತೆ ಬೆರೆತು ಮಕ್ಕಳ ಮನಮುಟ್ಟುವಂತೆ ಸರಳವಾಗಿ ಪಾಠಪ್ರವಚನಗಳನ್ನು ಕಲಿಸುತ್ತಿದ್ದಾರೆ.ಈ ಶಾಲೆಗೆ ಸುತ್ತಮುತ್ತಲ ಐದಾರು ಗ್ರಾಮಗಳ ಮಕ್ಕಳ ಸಹ ದಾಖಲಾಗುತ್ತಿದ್ದು ಇವರಲ್ಲಿ ಅನೇಕ ಮಂದಿ ಕಡುಬಡವರಾಗಿದ್ದಾರೆ.ಈ ಶಾಲೆಯಲ್ಲಿ ಕಲಿತ ಹಲವಾರು ಮಕ್ಕಳು ಮುಂದಿನ ಶಾಲಾ ಕಾಲೇಜುಗಳಲ್ಲೂ ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದುತ್ತಿದ್ದಾರೆ.

   ಹಸೀನಾ ಬೇಗಂ ರವರು ತನ್ನ ಸೇವೆಯನ್ನು ಶಿಕ್ಷಣ ಕ್ಷೇತ್ರಕ್ಕೆ ಸೀಮಿತಗೊಳಿಸದೆ ಇತರೆ ಸಮಾಜ ಸೇವಾ ಕಾರ್ಯಗಳಲ್ಲೂ ತೊಡಗಿಸಿಕೊಂಡಿದ್ದಾರೆ. ತನಗೆ ಬರುವ ಸಂಬಳದಲ್ಲಿ ಸ್ವಲ್ಪಭಾಗ ಸಮಾಜಸೇವಾ ಕಾರ್ಯಕ್ರಮಗಳಿಗೆ, ಕನ್ನಡ ಕಾರ್ಯಕ್ರಮಗಳಿಗೆ ಖರ್ಚು ಮಾಡುತ್ತಿರುವುದು ಅಚ್ಚರಿಯಾದರೂ ನಿಜ ಸಂಗತಿಯಾಗಿದೆ. ಇಷ್ಟೇ ಅಲ್ಲದೆ ಎಲ್ಲಾದರೂ ಬಾಲ್ಯವಿವಾಹಗಳು ನಡೆದರೆ ಧೈರ್ಯದಿಂದ ಅಧಿಕಾರಿಗಳಿಗೆ, ಪೋಲಿಸರಿಗೆ ತಿಳಿಸಿ ಆ ಬಾಲ್ಯವಿವಾಹವನ್ನು  ತಡೆಯುತ್ತಾರೆ. ಈಗಾಗಲೇ ಅನೇಕ ಬಾಲ್ಯವಿವಾಹಗಳನ್ನು ತಡೆದು ಆಮಾಯಕ ಹೆಣ್ಣುಮಕ್ಕಳನ್ನು ಅಪಾಯದಿಂದ ರಕ್ಷಿಸಿ ಅವರ ಬಾಳಿಗೆ ಬೆಳಕಾಗಿದ್ದಾರೆ. ಪ್ರತಿಭಾವಂತ ವಿದ್ಯಾರ್ಥಿಗಳು ಬಡತನದಿಂದ ಶಾಲೆ ಬಿಟ್ಟರೆ ಅವರ ಮನೆಗೆ ತೆರಳಿ ಅವರ ಪೋಷಕರಿಗೆ ಬುದ್ಧಿ ಹೇಳಿ ಬಡತನ ಶಿಕ್ಷಣಕ್ಕೆ ಅಡ್ಡಿಯಾಗುವುದಿಲ್ಲ ಎಂದು ಮನವರಿಕೆ ಮಾಡಿಕೊಟ್ಟು ಅಂತಹ ವಿದ್ಯಾರ್ಥಿಗಳ ವ್ಯಾಸಂಗದ ಜವಾಬ್ದಾರಿಯನ್ನು ತಾನೇ ವಹಿಸಿದ್ದಾರೆ.

haseena begum kannada kavivani

     
ಹೀಗೆ ನಡೆದಿರುವ ಒಂದು ಪ್ರಸಂಗವನ್ನು ತಿಳಿಸಲೇಬೇಕು ಅದು ತಾನು ಕಾರ್ಯನಿರ್ವಹಿಸುತ್ತಿರುವ ಶಾಲೆಯ ವಿದ್ಯಾರ್ಥಿನಿ ೭ನೇ ತರಗತಿ ಉತ್ತೀರ್ಣಳಾದ ನಂತರ ಅವಳ ತಂದೆ ತಾಯಿಗಳು ಬಡತನದ ಕಾರಣದಿಂದ ಅವಳನ್ನು ಮುಂದಿನ ತರಗತಿಗೆ ಕಳುಹಿಸದೇ ಕುರಿ ಮೇಯಿಸಲು ಕಳುಹಿಸಿದ್ದರು.ಈ ವಿಷಯವನ್ನು ಗ್ರಾಮದ ಜನರಿಂದ ತಿಳಿದ ಹಸೀನಾ ಬೇಗಂ ತಕ್ಷಣ ಸಂಬಂಧ ಪಟ್ಟ ಅಧಿಕಾರಿಗಳಿಗೆ ತಿಳಿಸಿ ಅವರೊಂದಿಗೆ ಅವರ ಮನೆಗೆ ತೆರಳಿ ಪೋಷಕರಿಗೆ ಬುದ್ಧಿವಾದ ಹೇಳಿ ಆ ವಿದ್ಯಾರ್ಥಿನಿಯ ಶೈಕ್ಷಣಿಕ ಖರ್ಚನ್ನು ತಾನೇ ಭರಿಸುವುದಾಗಿ ಭರವಸೆ ನೀಡಿ ಮರಳಿ ಆ ವಿದ್ಯಾರ್ಥಿಯನ್ನು ಶಾಲೆಗೆ ಕರೆತಂದಿದ್ದು ಗಮನಾರ್ಹ ವಿಷಯವಾಗಿದೆ. ತಾನು ಹೇಳಿದಂತೆ ಆ ವಿದ್ಯಾರ್ಥಿನಿಯ ಖರ್ಚನ್ನು ಹಸೀನಾ ರವರೇ ಭರಿಸುತ್ತಿದ್ದು ಇಂದು ಆ ವಿದ್ಯಾರ್ಥಿನಿ ಉನ್ನತ ವ್ಯಾಸಂಗ ಮಾಡುತ್ತಿದ್ದಾಳೆ. ಹೀಗೇ ಹತ್ತು ಹಲವಾರು ಹೆಣ್ಣು ಮಕ್ಕಳ ಬಾಳಿಗೆ ಬೆಳಕಾಗಿದ್ದಾರೆ.ಜೊತೆಗೆ ಕೌಟುಂಬಿಕ ಕಲಹಗಳು ನಡೆದಾಗ ಅವುಗಳನ್ನು ಪರಿಹರಿಸಿ ಅವರನ್ನು ಒಳ್ಳೆಯ ಮಾರ್ಗದಲ್ಲಿ ನಡೆಯುವಂತೆ ತಿಳಿಹೇಳುತ್ತಾರೆ.ಹೀಗಾಗಾಗಿ ಹಲವಾರು ಮಂದಿ ಇಂದು ಸುಖವಾಗಿ ಬಾಳುತ್ತಿದ್ದಾರೆ.ಆದ್ದರಿಂದ ಹಸೀನಾ ಬೇಗಂ ರವರು ಮಹಿಳೆಯರ ಆಶಾಕಿರಣವೆಂದೇ ಖ್ಯಾತರಾಗಿದ್ದಾರೆ.

     ಈ ಹಿಂದೆ ಸರ್ಕಾರದ ಸಾಕ್ಷರ ಆಂದೋಲನ ಕಾರ್ಯಕ್ರಮದಲ್ಲಿ ತಾಲ್ಲೂಕು ಸಂಯೋಜಕಿಯಾಗಿ ಸುಮಾರು ೧೦ ವರ್ಷಗಳ ಕಾಲ ಉತ್ತಮವಾಗಿ ಕಾರ್ಯನಿರ್ವಹಿಸಿ ತಾಲ್ಲೂಕಿನಲ್ಲಿ ಸಾಕ್ಷರತಾ ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿದ್ದಾರಲ್ಲದೆ, ಅನೇಕ ಅನಕ್ಷರಸ್ಥರಿಗೆ ಅಕ್ಷರವನ್ನು ಕಲಿಸಿ ಅವರನ್ನು ವಿದ್ಯಾವಂತರನ್ನಾಗಿ ಮಾಡುವ ನಿಟ್ಟಿನಲ್ಲೂ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ.ಅಷ್ಟೇ ಅಲ್ಲದೆ ಗಂಡನಿಂದ ದೂರವಾಗಿರುವ, ವಿಚ್ಛೇದನ ಪಡೆದಿರುವ ಅಸಹಾಯಕ ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಇತರೆ ಬಡ ಹೆಣ್ಣು ಮಕ್ಕಳಿಗೆ ಮೇಣದ ಬತ್ತಿ, ಅಗರ ಬತ್ತಿ ತಯಾರಿಕೆ, ಟೈಲರಿಂಗ, ಲಲಿತ ಕಲೆ ಹೀಗೇ ಹಲವಾರು ವೃತ್ತಿ ತರಬೇತಿಗಳನ್ನು ಉಚಿತವಾಗಿ ನೀಡಿ ಅವರನ್ನು ಸಬಲರನ್ನಾಗಿಸಿ ಅವರ ಕಾಲ ಮೇಲೆ ಅವರು ನಿಲ್ಲುವಂತೆ ಮಾಡಿದ್ದಾರೆ.ಇಂದು ಇವರಿಂದ ತರಬೇತಿ ಪಡೆದ ಹಲವಾರು ಹೆಣ್ಣುಮಕ್ಕಳು ತಮ್ಮ ಭವಿಷ್ಯವನ್ನು ರೂಪಿಸಿಕೊಂಡಿದ್ದಾರೆ.

    ಬರೀ ಇಷ್ಟೇ ಅಲ್ಲದೇ ಹಸೀನಾ ಬೇಗಂ ಸಾಹಿತ್ಯ ಕೃಷಿಯಲ್ಲೂ ತೊಡಗಿರುವುದು ಸಂತೋಷದ ಸಂಗತಿಯಾಗಿದೆ. ಹಸೀನಾ ರವರು ವಿಚಾರ ಪೂರ್ಣ, ಪ್ರಚಲಿತ, ಸಾಮಾಜಿಕ ಸಮಸ್ಯೆ, ಮಹಿಳೆಯ ದೌರ್ಜನ್ಯ, ವರದಕ್ಷಿಣೆ, ಬಾಲ್ಯ ವಿವಾಹ ಸೇರಿದಂತೆ ಹಲವಾರು ವಿಚಾರ ಪೂರ್ಣ ಲೇಖನಗಳಿಂದ ಪ್ರಸಿದ್ದಿಯಾಗಿದ್ದಾರೆ. ಇವರ ಹಲವು ಬರಹಗಳು ಈಗಾಗಲೇ ನಾಡಿನ ಹಲವು ಪತ್ರಿಕೆಗಳಲ್ಲಿ, ನಿಯತಕಾಲಿಕೆಗಳಲ್ಲಿ, ಕವನಸಂಕಲನಗಳಲ್ಲಿ ಹಾಗೂ ಸ್ಮರಣ ಸಂಚಿಕೆಗಳಲ್ಲಿ ,ವಾರಪತ್ರಿಕೆ ,ಮಾಸಪತ್ರಿಕೆಗಳಲ್ಲಿ ಬೆಳಕು ಕಂಡಿವೆ.ಹಲವು ಮಂದಿ ಉದಯೋನ್ಮುಖ ಬರಹಗಾರರ ಕೃತಿಗಳಿಗೆ ಮುನ್ನುಡಿ,ಆಶಯ ನುಡಿಗಳನ್ನು ಬರೆದುಕೊಟ್ಟು ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದಾರೆ.

    ಮಾತೃಭಾಷೆ ಉರ್ದು ಆಗಿದ್ದರೂ, ಹಿಂದಿ ಪದವೀಧರೆಯಾಗಿದ್ದರೂ ಸಹ  ಅಪ್ಪಟ ಕನ್ನಡ ಪ್ರೇಮಿಯಾಗಿರುವ ಇವರು ಕನ್ನಡದಲ್ಲಿ ಸಾಕಷ್ಟು ಪರಿಣಿತಿಯನ್ನು ಪಡೆದವರಾಗಿದ್ದು, ಉತ್ತಮ ವಾಗ್ಮಿಗಳೂ ಆಗಿದ್ದಾರೆ.ವಿವಿಧ ಕನ್ನಡ ಹಾಗೂ ಇತರೆ ಕಾರ್ಯಕ್ರಮಗಳಿಗೆ ಇವರನ್ನು ಮುಖ್ಯ ಭಾಷಣಕಾರರನ್ನಾಗಿ ಆಹ್ವಾನಿಸುತ್ತಾರೆ. ಸರಳ ಸಜ್ಜನಿಕೆಯ, ನೇರ ನುಡಿ, ಮೃದು ಸ್ವಭಾವದ, ಹಸನ್ಮುಖಿ ವ್ಯಕ್ತಿಯಾಗಿರುವ ಹಸೀನಾ ಬೇಗಂ ರವರಿಗೆ ಅವರ ಸಾಹಿತ್ಯ ಮತ್ತು ಸಾಮಾಜ ಸೇವೆಯನ್ನು ಗುರುತಿಸಿ ಹಲವಾರು ಕನ್ನಡ ಪರ ಸಂಘ ಸಂಸ್ಥೆಗಳು ಅವರನ್ನು ಸನ್ಮಾನಿಸಿ ಗೌರವಿಸಿದೆ.

    ಇಷ್ಟೆಲ್ಲಾ ಸೇವೆಯನ್ನು ಮಾಡುತ್ತಿರುವ ಹಸೀನಾ ಬೇಗಂ ರವರು ಎಂದೂ ಪ್ರಶಸ್ತಿ ಪುರಸ್ಕಾರಗಳನ್ನು ಬಯಸಿದವರಲ್ಲ. ಪ್ರಶಸ್ತಿಗಾಗಿ ಅರ್ಜಿ ಹಾಕಿದವರಲ್ಲ, ಅರ್ಜಿ ಹಾಕಿ ನಿಮಗೆ ರಾಜ್ಯಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಕೊಡಿಸುತ್ತೇವೆ ಎಂದಾಗಲೂ ತಾನು ಅರ್ಜಿ ಹಾಕುವುದಿಲ್ಲ ಎಂದು ಪ್ರಶಸ್ತಿ ನಿರಾಕರಿಸಿದ ಆದರ್ಶ ಶಿಕ್ಷಕಿಯಾಗಿದ್ದಾರೆ.ಹಸೀನಾ ಬೇಗಂ ರವರ ಈ ಎಲ್ಲಾ ಆದರ್ಶ ಕಾರ್ಯಗಳನ್ನು ತಿಳಿದುಕೊಂಡ ಬೀದರ್ ನ ದೇಶಪಾಂಡೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದವರು ಕಳೆದ ವರ್ಷ ರಾಜ್ಯಮಟ್ಟದ ಸಮಾಜ ಜ್ಯೋತಿ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದಾರೆ. ಮುಖ್ಯಶಿಕ್ಷಕಿಯಾದರೂ ಯಾವುದೇ ಜಾತಿ ಬೇಧವಿಲ್ಲದೆ ಎಲ್ಲರೊಂದಿಗೆ ಬೆರೆಯುತ್ತಾ, ಗರ್ವದಿಂದ ಮೆರೆಯದೆ ಸರಳ ಜೀವನ ನಡೆಸುತ್ತಿರುವ ಸಾಮಾಜಿಕ ಕಳಕಳಿಯ ಹೊಂದಿರುವ ಆದರ್ಶ ಶಿಕ್ಷಕಿ ಹಸೀನಾ ಬೇಗಂ ರವರ ಬದುಕು ಸಾಧನೆ ಇತರರಿಗೆ ಮಾದರಿಯಾಗಿದೆ.

ಕೆ.ಎನ್.ಅಕ್ರಂಪಾಷ
ಯುವಕವಿ
ಚಿಂತಾಮಣಿ-೫೬೩೧೨೫
ಮೊ: ೯೬೧೧೧೭೫೩೮೦

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ