ಶುಕ್ರವಾರ, ನವೆಂಬರ್ 10, 2017

ಟಿಪ್ಪುವಿನ ಆಡಳಿತ ಜಗತ್ತಿಗೆ ಮಾದರಿ


ಕರ್ನಾಟಕದ ಇತಿಹಾಸದಲ್ಲಿ ಮಾತ್ರವೇ ಅಲ್ಲ ಭಾರತದ ಇತಿಹಾಸದಲ್ಲಿ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಮಹತ್ತರವಾದ ವ್ಯಕ್ತಿತ್ವವುಳ್ಳವನಾಗಿದ್ದಾನೆ. ಸ್ವಾತಂತ್ರ್ಯವನ್ನು ತನ್ನ ಪ್ರಾಣಕ್ಕಿಂತ ಅಧಿಕವಾಗಿ ಕಂಡವನು ಟಿಪ್ಪು ಸುಲ್ತಾನ್. ನಾಡಿನ ಸ್ವಾಭಿಮಾನಿಯಾಗಿ ವೈಯುಕ್ತಿ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಹುತಾತ್ಮನಾದನು.
        
        ಟಿಪ್ಪು ತುಂಬಾ ಸ್ವಾಭಿಮಾನಿಯಾಗಿದ್ದನು.ಸ್ವಾಭಿಮಾನವನ್ನು ಕಡೆಗಣಿಸಿದ್ದರೆ, ನಿಜಾಮರಂತೆ ಇನ್ನೂ ಅನೇಕ ವರ್ಷಗಳ ಕಾಲ ಮುಂದುವರೆಯುತ್ತಿದ್ದ. ನರಿಯಂತೆ ನೂರು ದಿನ ಬದುಕುವ ಬದಲು ಹುಲಿಯಂತೆ ಹೋರಾಡಿ ಒಂದೇ ದಿನವಾದರೂ ಸ್ವಾಭಿಮಾನದಿಂದ ಬದುಕುವುದು ಲೇಸೆಂಂದು ಸಾರಿದವನು ಟಿಪ್ಪು ಸುಲ್ತಾನ್. ವ್ಯಕ್ತಿತ್ವದಲ್ಲಿ ಮಾತ್ರವಲ್ಲದೆ ರಾಜ್ಯಾಡಳಿತದಲ್ಲೂ ಟಿಪ್ಪುಸುಲ್ತಾನ್ ಜಗತ್ತಿಗೆ ಮಾದರಿಯಾಗಿದ್ದಾನೆ. ರಾಜ್ಯದ ಹಾಗೂ ಪ್ರಜೆಗಳ ಸಲುವಾಗಿ ನಿಂತರ ದುಡಿಮೆ ಟಿಪ್ಪುವಿನದ್ದಾಗಿತ್ತು. ಉತ್ಸಾಹದಿಂದ ಚಿಮ್ಮುತ್ತಿದ್ದ ಅಧಿಕಾರಿಗಳನ್ನು ತನ್ನ ಕಡೆ ಕೇಂದ್ರೀಕರಿಸಿಕೊಂಡು ಸಮಾಲೋಚನೆ ಮಾಡುತ್ತಿದ್ದನು. ಟಿಪ್ಪುವಿನ ಪತ್ರವ್ಯವಹಾರ ನೋಡಿದರೆ ಟಿಪ್ಪು ತನ್ನ ಆಡಳಿತದಲ್ಲಿ ತುಂಬಾ ಆಸಕ್ತಿಇರುವದರ ಬಗ್ಗೆ ಗೋಚರವಾಗುತ್ತದೆ.

    ಸವಿಲ್ ಮಿಲಿಟರಿ ಹಾಗೂ ವಾಣಿಜ್ಯ ಕುರಿತು ಅಧಿಕಾರಿಗಳಿಗೆ ಮಾರ್ಗದರ್ಶನ ಮಾಡುತ್ತಿದ್ದನು. ಹಳೆಯದನ್ನು ಉತ್ತಮ ಪಡಿಸುವದು ಹೊಸದನ್ನು ಅನುಷ್ಠಾನಕ್ಕೆ ತರುತ್ತಿದ್ದನು. ಪಾಶ್ಚಿಮಾತ್ಯ ಆಡಳಿತದ ಪದ್ಧತಿಯನ್ನು ಉತ್ತಮ ಪಡಿಸುವಲ್ಲಿ ಹಿಂದು ಮುಂದು ನೋಡುತ್ತಿರಲಿಲ್ಲ. ಹೊಸನಾಣ್ಯ ಪದ್ಧತಿ, ಮಧ್ಯಪಾನೀಯ ಮಾರಾಟಗಳ ನಿಷೇದ, ಪಂಚಾಂಗದ ಸುಧಾರಣೆ, ಹೊಸರೀತಿ ಅಳತೆ ಹಾಗೂ ತೂಕ ಪದ್ಧತಿ, ನೂತನ ಕಂದಾಯ ಪದ್ಧತಿ, ವಾಣಿಜ್ಯ, ಕಾನೂನು, ಆಧುನೀಕರಣದ ಬಗೆಗಿನ ಆಸಕ್ತಿ ಇವೆಲ್ಲವನ್ನು ನೋಡಲಾಗಿ ಪ್ರಸಿದ್ಧ ರಾಜರುಗಳ ಬಗೆಗೆ ಹೋಲಿಸಿದಾಗ ಅವರಿಗಿಂತ ಯಾವುದರಲ್ಲಿಯೂ ಕಡಿಮೆಯಿಲ್ಲದೆ ಎಲ್ಲರಿಗಿಂತ ಮೊದಲ ಸ್ಥಾನದಲ್ಲಿ ಟಿಪ್ಪು ಸುಲ್ತಾನ್ ನಿಲ್ಲುವುದರಲ್ಲಿ ಯಾವುದೇ ಸಂಶಯವಿಲ್ಲ.

   ಹೈದರ ಮತ್ತು ಟಿಪ್ಪುವಿನ ಆಡಳಿತ ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ಕೂಡಿತ್ತು. ಆಡಳಿತ ಕೇಂದ್ರೀಕೃತವಾಗದೇ ವಿಕೇಂದ್ರಿತ ಆಡಳಿತವನ್ನು ಅನುಸರಿಸಿತ್ತು. ಅಂದರೆ ಸ್ಥಳೀಯ ಕಟ್ಟಳೆಯನ್ನು ಅನುಸಾರವಾಗಿ ಆಡಳಿತ ನಡೆಯುತ್ತಿತ್ತು.ನಾಣ್ಯಗಳ ಮೇಲೆ ಶಿವ ಪಾರ್ವತಿಯರ ಚಿತ್ರ ಉಳಿಸಿಕೊಂಡು ಬಂದಿದ್ದನು ಟಿಪ್ಪುಸುಲ್ತಾನ್. ಇದರಿಂದ ನಾವು ಅವರಲ್ಲಿ ಸರ್ವಧರ್ಮ ಬಗೆಗಿನ ಸಮನ್ವಯತೆಯನ್ನು ಕಾಣಬಹುದಾಗಿದೆ. ಮೊಹರು ಹಾಗೂ ರೂಪಾಯಿಗಳನ್ನು ಜಾರಿಗೆ ತಂದ ಕೀರ್ತಿ ಟಿಪ್ಪುವಿಗೆ ಸಲ್ಲುತ್ತದೆ. ಅಷ್ಠೇ ಅಲ್ಲದೆ ಮೊಟ್ಟಮೊದಲ ಬಾರಿಗೆ ಬೆಳ್ಳಿ ನಾಣ್ಯಗಳನ್ನು ಚಲಾವಣೆಗೆ ತಂದ ಸುಲ್ತಾನನೆಂಬ ಹೆಗ್ಗಳಿಗೆಗೆ ಪಾತ್ರವಾಗಿದ್ದಾನೆ.

   ಕೇಂದ್ರಗಳಲ್ಲಿ ಒಟ್ಟು ೧೮ ಇಲಾಖೆಗಳಿದ್ದವು, ಪೋಲಿಸ್ ಹಣಕಾಸು,ನಾಗರಿಕ ವ್ಯವಹಾರಗಳು ವ್ಯವಸ್ಥಿತವಾಗಿ ಕೂಡಿತ್ತು. ಟಿಪ್ಪು ಶಾಸಕಾಂಗ , ನ್ಯಾಯಾಂಗ, ಕಾರ್ಯಾಂಗಳಿಗೆ ತಾನೇ ಸರ್ವೋಚ್ಛ ನಾಯಕನಾಗಿದ್ದನು. ಕಾಗದ ಪತ್ರಗಳನ್ನು ಖುದ್ದಾಗಿ ಪರಿಶೀಲಿಸುತ್ತಿದ್ದನು. ವೇಶ್ಯಾವೃತ್ತಿಯನ್ನು ತೊಡೆದು ಹಾಕಿದ ಮೊದಲ ದೊರೆಯಾಗಿದ್ದನು. ಮೊದಲು ಟಿಪ್ಪು ತನ್ನ ರಾಜ್ಯವನ್ನು ೭ ಪ್ರಾಂತಗಳಾಗಿ ವಿಂಗಡಿಸಿದನು. ನಂತರ ೯ಕ್ಕೆ ಏರಿತು. ತದನಂತರ ಅವುಗಳ ಸಂಖ್ಯೆಯನ್ನು ೧೭ಕ್ಕೆ ಹೆಚ್ಚಿಸಿದನು. ೧೭೯೪ ರಲ್ಲಿ ಪ್ರಾಂತಗಳ ಸಂಖ್ಯೆ ೩೭ಕ್ಕೆ ಏರಿತು. ಪ್ರತಿಯೊಂದು ಪ್ರಾಂತಕ್ಕೆ ಒಬ್ಬ ಸಿವಿಲ್ ಗೌರ‍್ನರ್ ಒಬ್ಬ ಮಿಲಿಟರಿ ಗೌರ‍್ನರ್ ನೇಮಕ ಮಾಡಿದ್ದನು. ಕಂದಾಯ ಆಡಳಿತವನ್ನು ಆಸಿಫ್ ನೋಡಿಕೊಳ್ಳುತ್ತಿದ್ದನು. ಶಾಂತಿ ಪಾಲನಾ ಕರ್ತವ್ಯವನ್ನು ಫೌಜದಾರ ನಿರ್ವಹಿಸುತ್ತಿದ್ದನು. ಆಸಿಫರ ಕೈಕೆಳಗೆ ಶಿರಸ್ತೆದಾರ್, ಗುಮಾಸ್ತರು ಮತ್ತು ಸೇವಕರು ಇರುತ್ತಿದ್ದರು.ಗ್ರಾಮಾಡಳಿತವನ್ನು ಪಟೇಲರು, ಶ್ಯಾನುಬೋಗರು ನೋಡಿಕೊಳ್ಳುತ್ತಿದ್ದರು.

    ಟಿಪ್ಪು ವಾಣಿಜ್ಯ ವ್ಯಾಪಾರಗಳ ಬಗೆಗೆ ಹೆಚ್ಚಿನ ಆಸಕ್ತಿ ತೋರಿದನು. ಮೆಣಸು, ಮೆಣಸಿನಕಾಯಿ,ಶ್ರೀಗಂಧ,ಏಲಕ್ಕಿ ಹಾಗೂ ಅಕ್ಕಿಗಳ ರಫ್ತಿಗೆ ಸಕ್ರೀಯವಾಗಿ ಪ್ರೋತ್ಸಾಹ ನೀಡಿದನು.ವ್ಯಾಪಾರಿ ಸಂಸ್ಥೆಯೊಂದನ್ನು ಸ್ಥಾಪಿಸಿ ಅದರಲ್ಲಿ ಆಸಕ್ತರಾಗುವಂತೆ ಪ್ರೋತ್ಸಾಹಿಸಿದನು. ಟಿಪ್ಪು ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡಿದನು.ವ್ಯಾಪಾರಿ ಸಂಸ್ಥೆಯೊಂದನ್ನು ಸ್ಥಾಪಿಸಿ ಅದರಲ್ಲಿ ಆಸಕ್ತರಾಗುವಂತೆ ಪ್ರೋತ್ಸಾಹಿಸಿದನು.ಟಿಪ್ಪು ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡಿದನು.ಟರ್ಕಿ, ಫ್ರಾನ್ಸ ಮತ್ತು ಇರಾನ್‌ಗಳಿಂದ ಕುಶಲಕರ್ಮಿಗಳನ್ನು ಕರೆಸಿಕೊಂಡಿದ್ದನು. ಶ್ರೀರಂಗಪಟ್ಟಣ, ಬೆಂಗಳೂರು, ಬಿದನೂರ ಮತ್ತು ಚಿತ್ರದುರ್ಗಗಳಲ್ಲಿ ಸ್ಥಾಪಿಸಿದ ಕಾರಖಾನೆಗಳು ಕತ್ತರಿ,ಮದ್ದುಗುಂಡು, ತುಪಾಕಿ, ಕೋವಿ, ಕಾಗದ, ಗಡಿಯಾರ ಹಾಗೂ ದಿನಬಳಕೆ ವಸ್ತುಗಳನ್ನು ತಯಾರಿಸುತ್ತಿದ್ದರು. ಬರೀ ಇಷ್ಠೇ ಅಲ್ಲದೆ ಟಿಪ್ಪು ಒಳ್ಳೆಯ ರಸ್ತೆಗಳನ್ನು ನಿರ್ಮಿಸಿದನು. ಕೋಟೆಗಳನ್ನು ಭದ್ರಪಡಿಸಿದನು. ಉದ್ಯಾನ, ನಗರ ಸೌಂದರ್ಯ,ಲಾಲ್‌ಬಾಗ್, ಕೆರೆಕಟ್ಟೆಗಳು ಟಿಪ್ಪುವಿನಿಂದಲೇ ನಿರ್ಮಾಣವಾದವು.
   ಟಿಪ್ಪುವಿನ ರಾಜ್ಯದಲ್ಲಿ ಎಲ್ಲ ಮತದವರಿಗೂ ಅವಕಾಶವಿತ್ತು. ಯಾರಿಗೂ ಅನ್ಯಾಯವಾಗಲು ಅವಕಾಶ ಇರಲಿಲ್ಲ. ಶ್ರೀರಂಗಪಟ್ಟಣದ ರಂಗನಾಥ ದೇವಾಲಯದ ನಿರ್ಮಾಣ ಶಾರದಾ ಮಂದಿರದ ಮೂರ್ತಿಯನ್ನು ಪುನರ್ ಪ್ರತಿಷ್ಠಾಪನೆಗೆ ಉದಾರವಾಗಿ ಹಣವನ್ನು ಮಠಾಧೀಶರಿಗೆ ನೀಡಿದನು. ಶೃಂಗೇರಿ ಮಠಾಧೀಶರಿಗೆ ಟಿಪ್ಪು ಬರೆದಿರುವ ಪತ್ರಗಳು ಹಿಂದು ಧರ್ಮದ ಬಗ್ಗೆ ಅವನಲ್ಲಿದ್ದ ಗೌರವಯುತವಾದ ಭಾವನೆಗಳನ್ನು ತೋರ್ಪಡಿಸುತ್ತವೆ. ಹಿಂದುಗಳಿಗೆ ಉನ್ನತ ಹುದ್ದೆಗಳನ್ನು ಬ್ರಾಹ್ಮಣರಿಗೆ ದಾನದತ್ತಿಗಳನ್ನು ನೀಡಿದ್ದು ಅವನ ಪರಮತ ಸಹಿಷ್ಣುತೆಯನ್ನು ತೋರಿಸುತ್ತದೆ.

    ಅಪರಾಧಿಗಳಿಗೆ ಶಿಕ್ಷೆ ವಿಶಿಷ್ಟವಾಗಿತ್ತು. ೧೭೯೨ರಲ್ಲಿ ಟಿಪ್ಪು ಹೊರಡಿಸಿದ ಒಂದು ನವೀನ ನಿಬಂಧನೆಯಲ್ಲಿ ಈ ರೀತಿ ಹೇಳಲಾಗಿದೆ. ತಪ್ಪು ಮಾಡಿದವರಿಗೆ ನಿಮ್ಮ ಸರ್ಕಾರ ದಂಡ ಹಾಕುವ ಪದ್ಧತಿ ಈಗ ಇದೆ. ಇನ್ನು ಮುಂದೆ ತಪ್ಪು ಮಾಡಿದವರಿಗೆ ದಂಡ ವಸೂಲು ಮಾಡುವುದರ ಬದಲು ಅಪರಾಧ ಮಾಡಿದ ವ್ಯಕ್ತಿಯು ತನ್ನ ಗ್ರಾಮದ ಬಳಿ ಮಾವಿನ ಗಿಡಗಳನ್ನು ಮತ್ತು ಎರಡು ಹಲಸಿನ ಗಿಡಗಳನ್ನು ನೆಡತಕ್ಕದ್ದು ಮತ್ತು ಆ ಗಿಡಗಳು ಮೂರು ಮಳ ಎತ್ತರ ಬೆಳೆಯುವವರೆಗೂ ಅಪರಾಧಿಯು ಆ ಗಿಡಗಳಿಗೆ ನೀರು ಹಾಕುತ್ತ ಸಂರಕ್ಷಿಸಬೇಕು. ಇಂತಹ ನವೀನ ರೀತಿಯ ದಂಡನೆಯ ಮೂಲಕ ಮೈಸೂರಿನಲ್ಲಿ ಹಸಿರು ಕ್ರಾಂತಿಗೆ ಅವಕಾಶ ಮಾಡಿಕೊಟ್ಟನು.

   ಇಷ್ಠೆಲ್ಲಾ ಜನಪರ ಕಾರ್ಯಗಳನ್ನು ರೂಪಿಸುವುದರ ಜೊತೆಗೆ ಅವುಗಳನ್ನು ಕಾರ್ಯರೂಪಕ್ಕೆ ತಂದು ನೊಂದಜನರ, ಬಡಜನರ ಬಾಳಲ್ಲಿ ಬೆಳಕು ಮೂಡಿಸಿದ  , ದೇಶಕ್ಕಾಗಿ ಪ್ರಾಣವನ್ನೇ ಅರ್ಪಿಸಿದ ಸರ್ವಧರ್ಮ ಪ್ರೇಮಿ, ಮಾನವತಾವಾದಿ, ಧೀನದಲಿತರ ಆಶಾಜ್ಯೋತಿ ಮೈಸೂರುಹುಲಿ ಟಿಪ್ಪು ಸುಲ್ತಾನ್ ಇಂದು ಕೋಮುವಾದಿಗಳ ಕೈಯಲ್ಲಿ ನಲುಗುತ್ತಿರುವುದು,ಒಂದು ಜಾತಿಗೆ ಸೀಮಿತವಾಗಿರುವುದು, ಕೋಮುವಾದಿ, ದೇಶದ್ರೋಹಿ ಎಂದು ಕರೆಯಲ್ಪಡುತ್ತಿರುವುದು , ಜನರು ಹಾಗೂ ಸರ್ಕಾರ ಇಂದು ಟಿಪ್ಪುವನ್ನು ಮರೆಯುತ್ತಿರುವುದು ನೋವಿನ ಸಂಗತಿಯಾಗಿದೆ. ಸರ್ಕಾರವು ಟಿಪ್ಪುವಿನ ಇತಿಹಾಸದ ಕುರಿತು ಇನ್ನಷ್ಟು ಸಂಶೋಧನೆ ನಡೆಸಿ ಕೋಮುವಾದಿಗಳಿಗೆ ನಿಜ ಇತಿಹಾಸವನ್ನು ತಿಳಿಸುವುದರ ಮೂಲಕ ಕಣ್ತೆರೆಸಬೇಕೆಂದು ಆಶಿಸುತ್ತಾ. ಜನರು ಮತಾಂಧರ ಕೊಂಕು ಮಾತಿಗೆ ಬೆಲೆ ಕೋಡುವುದಿಲ್ಲವೆಂದು ಭಾವಿಸಿ ನವೆಂಬರ್ ೧೦ ಟಿಪ್ಪು ಜನ್ಮ ದಿನವಾದ ಈ ಸಂದರ್ಭದಲ್ಲಿ ಆ ಮಹನೀಯನಿಗೆ ಹೃದಯ ಪೂರ್ವಕ ಅಭಿನಂದನೆಗಳನ್ನು ಅರ್ಪಿಸೋಣ.

ಕೆ.ಎನ್.ಅಕ್ರಂಪಾಷ
ರಾಜ್ಯಪ್ರಶಸ್ತಿ ಪುರಸ್ಕೃತ ಬರಹಗಾರ
ಚಿಂತಾಮಣಿ-೫೬೩೧೨೫
ಮೊ: ೯೬೧೧೧೭೫೩೮೦


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ