ಬಿ.ಟಿ.ಗೀತಮ್ಮನವರು ಮಾದರಿ ಶಿಕ್ಷಕಿ ಎಂದೇ ಪ್ರಸಿದ್ಧರಾದವರು. ಬಿ.ಟಿ.ಗೀತಮ್ಮ ಎಂದರೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಜನರಿಗೆ ಅಚ್ಚುಮೆಚ್ಚಿನ ವ್ಯಕ್ತಿಯಾಗಿದ್ದಾರೆ. ಎಂ.ಎ ಪದವೀಧರೆಯಾಗಿರುವ ಗೀತಮ್ಮನವರು ಪ್ರಸ್ತುತ ಶಿಕ್ಷಕಿಯಾಗಿ ದಾವಣಗೆರೆ ಜಿಲ್ಲೆಯ ಬೆಣ್ಣೆಹಳ್ಳಿಯ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸದರಿ ಶಾಲೆಯಲ್ಲಿ ಮಕ್ಕಳಿಗೆ ಪ್ರೀತಿಯ ಶಿಕ್ಷಕಿಯಾಗಿದ್ದಾರೆ. ತಾನು ಕೆಲಸ ನಿರ್ವಹಿಸುತ್ತಿರುವ ಶಾಲೆಯನ್ನು ಖಾಸಗಿ ಶಾಲೆಗಳನ್ನು ಮೀರಿಸುವಂತೆ ಮಾಡಿರುವುದು ಗಮನಾರ್ಹ ಅಂಶವಾಗಿದೆ. ಮಕ್ಕಳೊಂದಿಗೆ ಮಗುವಂತೆ ಬೆರೆತು ಉತ್ತಮವಾಗಿ ಕಲಿಸುತ್ತಿರುವ ಅಪರೂಪದ ಅದರ್ಶ ಶಿಕ್ಷಕಿಯಾಗಿದ್ದಾರೆ.
ಇಷ್ಟೇ ಅಲ್ಲದೆ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ ಅವರನ್ನು ಮತ್ತೆ ಶಾಲೆಗೆ ಕರೆತರುವ ಮೂಲಕ ಅನೇಕ ಬಡಮಕ್ಕಳ ಬಾಳಲ್ಲಿ ಬೆಳಕನ್ನು ಮೂಡಿಸಿದ್ದಾರೆ. ಜೊತೆಗೆ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುವ ಬೇಸಿಗೆ ಶಿಬಿರವನ್ನು ತಾನು ಕೆಲಸ ಮಾಡುವ ಶಾಲೆಯಲ್ಲಿಯೇ ನಿರ್ವಹಿಸಿ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಜೊತೆಗೆ ಸಮುದಾಯದ ಸಹಕಾರದಿಂದ ಸರ್ಕಾರಿ ಶಾಲೆಗಳನ್ನು ಇನ್ನಷ್ಟು ಉತ್ತಮಪಡಿಸಲು ಮತ್ತು ಮಕ್ಕಳ ಕಲಿಕಾ ಪ್ರಗತಿಯನ್ನು ಹೆಚ್ಚಿಸಲು ಸಮುದಾಯದಿಂದ ದೇಣಿಗೆ ಸಂಗ್ರಹಿಸುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಷಯವಾಗಿದೆ. ಪ್ರತಿಭಾವಂತ ವಿದ್ಯಾರ್ಥಿಗಳು ಬಡತನದಿಂದ ಶಾಲೆ ಬಿಟ್ಟರೆ ಅವರ ಮನೆಗೆ ತೆರಳಿ ಅವರ ಪೋಷಕರಿಗೆ ಬುದ್ಧಿ ಹೇಳಿ ಬಡತನ ಶಿಕ್ಷಣಕ್ಕೆ ಅಡ್ಡಿಯಾಗುವುದಿಲ್ಲ ಎಂದು ತಿಳಿಸಿ ಆ ವಿದ್ಯಾರ್ಥಿಯ ವ್ಯಾಸಂಗದ ಜವಾಬ್ದಾರಿಯನ್ನು ತಾನು ವಹಿಸಿದ್ದಾರೆ.
ಅಷ್ಟೇ ಅಲ್ಲದೆ ಮಕ್ಕಳಿಗೆ ಕಲಿಕೆಯಲ್ಲಿ ಇರಬಹುದಾದ
ಸಮಸ್ಯೆಗಳನ್ನು ಗುರುತಿಸಿ ಕ್ರಿಯಾಸಂಶೋಧಕನೆಯ ಮೂಲಕ ಕಲಿಕಾ ಸಮಸ್ಯೆಯನ್ನು ಪರಿಹರಿಸಿ ಸಹಕರಿಸುತ್ತಿದ್ದಾರೆ.
ಗೀತಮ್ಮ ನವರು ಮಾಡುತ್ತಿರುವ ಇಂತಹ ಕಾರ್ಯಗಳಲ್ಲಿ ಬಹಳ ಮುಖ್ಯವಾದುದೆಂದರೆ ಇತ್ತೀಚೆಗೆ ಪೋಷಕರು ಖಾಸಗಿ
ಶಾಲೆಗಳ ವ್ಯಾಮೋಹಕ್ಕೆ ಒಳಗಾಗಿ ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸದಿರುವುದನ್ನು ನಾವು
ಕಾಣುತ್ತಿದ್ದೇವೆ. ಆದರೆ ಗೀತಮ್ಮನವರು ತಾನು ಕಾರ್ಯನಿರ್ವಹಿಸುವ ಸರ್ಕಾರಿ ಶಾಲೆಯು ಯಾವುದೇ ಕಾನ್ವೆಂಟ್
ಶಾಲೆಗಿಂತ ಕಡಿಮೆಯಿಲ್ಲವೆಂಬಂತೆ ಖಾಸಗಿ ಶಾಲಾ ಮಕ್ಕಳಿಗೆ ಇರುವಂತೆಯೇ ಇವರ ಶಾಲಾ ಮಕ್ಕಳಿಗು ವಿಶೇಷ
ಸಮವಸ್ತ್ರ, ಟೈ, ಬೆಲ್ಟ್, ಶೂಗಳನ್ನು ನೀಡುತ್ತಿದ್ದಾರೆ. ಗೀತಮ್ಮ ನವರು ಕರಕುಶಲ ಕಲೆಯಲ್ಲೂ ಸಹ ಎತ್ತಿದ
ಕೈ ಎಂದರೆ ತಪ್ಪಾಗಲಾರದು ಏಕೆಂದರೆ ತಮ್ಮ ಶಾಲೆಯ ಮಕ್ಕಳಿಗೆ ತ್ಯಾಜ್ಯ ವಸ್ತುಗಳಿಂದ, ಕಾಗದದಿಂದ, ನೀರಿನ
ಬಾಟಲ್ ಗಳಿಂದ ವಿವಿಧ ರೀತಿಯ ಕರಕುಶಲ ಕಲೆಯನ್ನು ಕಲಿಸುತ್ತಿದ್ದಾರೆ.ಅಷ್ಟೇ ಅಲ್ಲದೆ ತಾಲ್ಲೂಕು ಜಿಲ್ಲಾ
ಮಟ್ಟದಲ್ಲಿ ನಡೆದಿರುವ ಕರಕುಶಲ ಕಲೆಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಅನೇಕ ಬಹುಮಾನಗಳನ್ನು ಪಡೆದಿರುವುದು
ಗಮನಾರ್ಹ ಅಂಶವಾಗಿದೆ.
ಬರೀ ಇಷ್ಟೇ ಅಲ್ಲದೇ ಬಿ.ಟಿ.ಗೀತಮ್ಮನವರು
ಸಾಹಿತ್ಯ ಕೃಷಿಯಲ್ಲೂ ತೊಡಗಿರುವುದು ಸಂತೋಷದ ಸಂಗತಿಯಾಗಿದೆ. ಗೀತಮ್ಮನವರು ವಿಚಾರ ಪೂರ್ಣ, ಪ್ರಚಲಿತ,
ಸಾಮಾಜಿಕ ಸಮಸ್ಯೆ, ಮಹಿಳೆಯ ದೌರ್ಜನ್ಯ, ವರದಕ್ಷಿಣೆ, ಬಾಲ್ಯ ವಿವಾಹ ಸೇರಿದಂತೆ ಹಲವಾರು ವಿಚಾರ ಪೂರ್ಣ
ಕವನ, ಚುಟುಕು ಲೇಖನಗಳಿಂದ ಪ್ರಸಿದ್ದಿಯಾಗಿದ್ದಾರೆ. ಇವರ ಹಲವು ಬರಹಗಳು ಈಗಾಗಲೇ ನಾಡಿನ ಹಲವು ಪತ್ರಿಕೆಗಳಲ್ಲಿ,
ನಿಯತಕಾಲಿಕೆಗಳಲ್ಲಿ, ಕವನಸಂಕಲನಗಳಲ್ಲಿ ಹಾಗೂ ಸ್ಮರಣ ಸಂಚಿಕೆಗಳಲ್ಲಿ ,ವಾರಪತ್ರಿಕೆ ,ಮಾಸಪತ್ರಿಕೆಗಳಲ್ಲಿ
ಬೆಳಕು ಕಂಡಿವೆ.
ನೇರ ನುಡಿ, ಮೃದು ಸ್ವಭಾವದ, ಹಸನ್ಮುಖ ವ್ಯಕ್ತಿಯಾಗಿರುವ
ಗೀತಮ್ಮ ರವರಿಗೆ ಹಲವಾರು ರಾಜ್ಯ ಹಾಗೂ ಜಿಲ್ಲಾ ಮಟ್ಟದ ಪ್ರಶಸ್ತಿಗಳು ಲಭಿಸಿವೆ. ಇತ್ತೀಚೆಗೆ ಬೀದರ್
ನ ದೇಶಪಾಂಡೆ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಇವರ ಸಾಹಿತ್ಯ ಮತ್ತು ಶಿಕ್ಷಣ
ಸೇವೆಯನ್ನು ಗುರುತಿಸಿ ಕಾವ್ಯಶ್ರೀ ರತ್ನ ಹಾಗೂ ಕನ್ನಡ
ಕವಿವಾಣಿ ಪತ್ರಿಕೆಯ ವತಿಯಿಂದ ರಾಜ್ಯಮಟ್ಟದ ಕಾವ್ಯ ದೀಪ್ತಿ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಗೀತಮ್ಮನವರಿಗೆ
೨೦೦೮ರಲ್ಲಿ ಪಾಠೋಪಕರಣ ತಯಾರಿಕಾ ಸ್ಪರ್ಧೆಯಲ್ಲಿ ರಾಜ್ಯಪ್ರಶಸ್ತಿ, ೨೦೧೪ರಲ್ಲಿ ಜಿಲ್ಲಾ ಉತ್ತಮ ಶಿಕ್ಷಕಿ
ಪ್ರಶಸ್ತಿ, ಕನಕಕಣ್ಮಿ ಪ್ರಶಸ್ತಿ, ವಿಶ್ವಮಾನ್ಯಕನ್ನಡಿಗ ಪ್ರಶಸ್ತಿ, ಶಿಕ್ಷಣ ಸೇವಾ ರತ್ನ, ಸಾಧಕ
ಸಿರಿ ರತ್ನ ಪ್ರಶಸ್ತಿಗಳು ಲಭಿಸಿವೆ.
ಇಷ್ಟೆಲ್ಲಾ ಸೇವೆಯನ್ನು ಮಾಡುತ್ತಿರುವ ಗೀತಮ್ಮನವರು
ರವರು ಎಂದೂ ಪ್ರಶಸ್ತಿ ಪುರಸ್ಕಾರಗಳನ್ನು ಬಯಸಿದವರಲ್ಲ.
ಸರ್ಕಾರಿ ಶಾಲೆ ಶಿಕ್ಷಕಿಯಾದರೂ ಯಾವುದೇ ಜಾತಿ ಬೇಧವಿಲ್ಲದೆ ಎಲ್ಲರೊಂದಿಗೆ ಬೆರೆಯುತ್ತಾ,
ಗರ್ವದಿಂದ ಮೆರೆಯದೆ ಸರಳ ಜೀವನ ನಡೆಸುತ್ತಿದ್ದಾರೆ. ಗೀತಮ್ಮನವರಿಗೆ ಅವರ ಪತಿ ಕೆ.ಎಸ್.ಮಂಜಣ್ಣನವರು
ಬೆನ್ನೆಲುಬಾಗಿ ನಿಂತು ಪ್ರೋತ್ಸಾಹಿಸುತ್ತಿರುವುದು ಸಂತೋಷದ ಹಾಗೂ ಅಭಿನಂದನೀಯ ವಿಷಯವಾಗಿದೆ .ಇಷ್ಟೆಲ್ಲಾ
ಸಾಧನೆ ಸೇವೆ ಮಾಡುತ್ತಿರುವ ಗೀತಮ್ಮನವರ ಬದುಕು ಸಾಧನೆ
ಇತರರಿಗೆ ಮಾದರಿಯಾಗಿದೆ.
ಸಂಗ್ರಹ:
ಕೆ.ಎನ್.ಅಕ್ರಂಪಾಷ
ಸಂಪಾದಕರು
ಕನ್ನಡ ಕವಿವಾಣಿ ಪತ್ರಿಕೆ
ಕೆ.ಎನ್.ಅಕ್ರಂಪಾಷ
ಸಂಪಾದಕರು
ಕನ್ನಡ ಕವಿವಾಣಿ ಪತ್ರಿಕೆ



ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ