ಬಂದು ನೋಡು ತಾಯಿ ,
ನಮ್ಮ ಬಡವರ ಮಗಳನ್ನು ,
ಅಳ್ತಾ ಕುಂತವ್ಳೆ ಮನೆಯೊಳಗೆ
ಎಂಬ ಅರ್ಥಗರ್ಭಿತ ಸಾಕ್ಷರ ಗೀತೆಯನ್ನು ತಮ್ಮ ಸುಶ್ರಾವ್ಯ ಕಂಠದಿಂದ ಹೃದಯ ಸ್ಪರ್ಶಿಯಾಗಿ ಗ್ರಾಮೀಣ
ಬಡಹೆಣ್ಣು ಮಗಳ ಮಗಳ ಬದುಕನ್ನು ಎಳೆ ಎಳೆಯಾಗಿ ಹಾಡುತ್ತಿದ್ದ ವ್ಯಕ್ತಿ ಡಾ||ಪ್ರೊ .ಸಿ.ಅಶ್ವತ್ಥಮ್ಮ
ಇವರು ಅವಿಭಾಜಿತ ಕೋಲಾರ ಜಿಲ್ಲೆಯ ಚಿಂತಾಮಣಿ ನಗರದ ಮಾಳಪ್ಪಲ್ಲಿಯಲ್ಲಿ ದಿನಾಂಕ :೦೧-೦೬-೧೯೫೪ ರಲ್ಲಿ
ಜನಸಿದರು. ಇವರು ತಮ್ಮ ಪ್ರಾಥಮಿಕ-ಪ್ರೌಢ ಶಿಕ್ಷಣವನ್ನು ಸರ್ಕಾರಿ ಕನ್ನಡ ಶಾಲೆಗಳಲ್ಲಿಯೇ ಪಡೆದವರು. ತಮ್ಮ
ಪದವಿಯನ್ನೂ ಸಹಾ ಇವರು ಚಿಂತಾಮಣಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿಯೇ ವ್ಯಾಸಂಗ ಮಾಡಿ ತಾವು
ಓದಿದ ಕಾಲೇಜಿನಲ್ಲಿಯೇ ಸುಮಾರು ೨೮ ವರ್ಷಗಳ ಕಾಲ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದವರು.
ತಮ್ಮ ಸೇವಾಧಿಯಲ್ಲಿ
ತಮ್ಮ ನಿರರ್ಗಳ ಉಪನ್ಯಾಸದಿಂದ ಇತಿಹಾಸದ ವಿಷಯದಲ್ಲಿ ಕಾಲೇಜು ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸಿದವರು.ಇವರು ತಮ್ಮ ಸೇವೆಯನ್ನು ಕೇವಲ ಉಪನ್ಯಾಸಕ್ಕೆ
ಸೀಮಿತಗೊಳಿಸದೆ ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು. ಕಾಲೇಜು ವಿದ್ಯಾರ್ಥಿನಿಯರನ್ನು
ವಾರಗಟ್ಟಲೇ ಗ್ರಾಮಾಂತರ ಪ್ರದೇಶಗಳಿಗೆ ಕರೆದೊಯ್ದು ಗ್ರಾಮೀಣ ಪ್ರದೇಶದಲ್ಲಿ ಬಡಅನಕ್ಷರಸ್ಥರ ಬಾಳನ್ನು
ಹತ್ತಿರದಿಂದ ನಗರ ಪ್ರದೇಶದ ವಿದ್ಯಾರ್ಥಿನಿಯರಿಗೆ ತೋರಿಸಿ ಗ್ರಾಮೀಣ ಪ್ರದೇಶವನ್ನು ಉತ್ತಮಗೊಳಿಸುವತ್ತ
ಪ್ರೇರೇಪಿಸಿದವರು. ಇವರು ಉತ್ತಮ ಎನ್.ಎಸ್.ಎಸ್. ಶಿಬಿರಾಧಿಕಾರಿಯಾಗಿ ಖ್ಯಾತಿಗಳಿಸಿದವರು ಇದೇ ಸಮಯದಲ್ಲಿ
ಕೋಲಾರ ಜಿಲ್ಲೆಯಲ್ಲಿ ೧೯೯೩ರಲ್ಲಿ ಅನುಷ್ಟಾನಗೊಂಡ ರಾಷ್ಟ್ರೀಯ ಸಾಕ್ಷರತಾ ಮಿಷನ್ನಿನ “ಅಕ್ಷರ ತೆನೆ” ಕಾರ್ಯಕ್ರಮದಲ್ಲಿ ಜಿಲ್ಲಾ ಸಂಪನ್ಮೂಲ
ವ್ಯಕ್ತಿಯಾಗಿ ,ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ಕಾರ್ಯಕ್ರಮದ ಪ್ರಾಥಮಿಕ
ಹಂತವಾದ ಪರಿಸರ ನಿರ್ಮಾಣದಲ್ಲಿ ಸಾಕ್ಷರಗೀತೆ ,ಬೀದಿನಾಟಕ ,ಉಪನ್ಯಾಸಗಳ ಮೂಲಕ ಸಾಕ್ಷರ ಜಾಥಾದಲ್ಲಿ
ಹಗಲು-ರಾತ್ರಿಗಳೆನ್ನದೆ ದಿನಕ್ಕೆ ೧೦-೧೨ ಹಳ್ಳಿಗಳಲ್ಲಿ ತಮ್ಮ ಕಾರ್ಯಕ್ರಮ ನೀಡಿ ಗ್ರಾಮೀಣ ಜನರಲ್ಲಿ
ಅಕ್ಷರ ,ಆರೋಗ್ಯ ,ಸ್ವಚ್ಛತೆ ,ಮಿತ ಕುಟುಂಬ ,ಬಾಲಕಾರ್ಮಿಕ ಪದ್ಧತಿ ,ಜೀತ ಪದ್ಧತಿ ಕಾನೂನು ಅರಿವು
,ವರದಕ್ಷಿಣೆ ಪಿಡುಗು ,ಹೆಣ್ಣುಭ್ರೂಣ ಹತ್ಯೆ ,ಏಡ್ಸ್ ಮಹಾಮಾರಿ ,ಜೀವ ಜಲ ಹಾಗೂ ಗುಟ್ಕಾ ಸೇವನೆಯಿಂದ
ಆಗುವ ತೊಂದರೆಗಳ ಬಗ್ಗೆ ಅರಿವು ಮೂಡಿಸಿದವರು.
ಇವರು ಅಕ್ಷರ ತೆನೆಯ ಸಾಕ್ಷರತಾ ಆಂದೋಲನ ,ಮುಂದುವರಿಕೆ
ಶಿಕ್ಷಣಕೇಂದ್ರ ,ಕನ್ನಡ ನಾಡು-ಸಾಕ್ಷರ ನಾಡು ಕಾರ್ಯಕ್ರಮಗಳಲ್ಲಿ ಜಿಲ್ಲೆಯ ಗ್ರಾಮ-ಗ್ರಾಮಗಳಿಗೂ ,ಗ್ರಾಮದ
ಮನೆ-ಮನೆಗೂ ಭೇಟಿ ನೀಡಿ ಬಡ ಮಹಿಳೆಯರಿಗೆ ಅಕ್ಷರದ ಅರಿವನ್ನು ಮೂಡಿಸಿ ಅವರಿಂದ ಅಕ್ಷರ ಬರೆಸಿ ತಮ್ಮ
ಮಕ್ಕಳನ್ನು ಶಾಲೆಗೆ ಅದರಲ್ಲೂ ಹೆಣ್ಣು ಮಕ್ಕಳನ್ನು ಕಳುಹಿಸುವಂತೆ ಪ್ರೇರೇಪಿಸುತ್ತಿದ್ದ ವೈಖರಿ ಅಭಿನಂದನೀಯವಾಗಿರುತ್ತಿತ್ತು. ಇವರು
ತಮ್ಮ ಭಾಷಣಗಳಲ್ಲಿ ಮಹಿಳಾ ಸಬಲೀಕರಣ ,ಮಹಿಳಾ ಸಾಕ್ಷರತೆ ಹಾಗೂ ರಾಜಕೀಯದಲ್ಲಿ ಮಹಿಳಾ ಮೀಸಲಾತಿಯ ಬಗ್ಗೆ
ನಿರ್ಭಿಡೆಯಿಂದ ಮಂಡಿಸುತ್ತಿದ್ದ ವಿಷಯ ಸಂಪದೀಕರಣದ ರೀತಿಯಿಂದಲೇ ಇವರಿಗೆ ೧೯೯೪ ರಲ್ಲಿ “ಕೋಲಾರ ಜಿಲ್ಲೆಯ ಕಿರಣ್ ಬೇಡಿ” ಪ್ರಶಸ್ತಿ ಲಭಿಸಿತು. ೨೦೦೨ರಲ್ಲಿ
“WOMEN OF THE YEAR” ಪ್ರಶಸ್ತಿ, ಮುಂಬೈ ಕನ್ನಡಿಗರಿಂದ “ಸುವರ್ಣ ಕನ್ನಡತಿ” ಪ್ರಶಸ್ತಿ, ನವದೆಹಲಿಯಿಂದ “ಇಂದಿರಾಗಾಂದಿ ಶಿರೋಮಣಿ” ಪ್ರಶಸ್ತಿ, ದೆಹಲಿ ಮೂಲದಿಂದ “ಸಮಾಜ ರತ್ನ” ಪ್ರಶಸ್ತಿ ಹಾಗೂ ೨೦೦೬-೦೭ರಲ್ಲಿ
ಬೆಂಗಳೂರಿನಿಂದ “ಜ್ಞಾನ ಸರಸ್ವತಿ ಮತ್ತು ಕರ್ನಾಟಕ ಜ್ಯೋತಿ” ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿ ಕೊಂಡವರು ಇವರು.
ಕೇವಲ ನಮ್ಮ ಜಿಲ್ಲೆಯಲ್ಲಷ್ಟೇ
ತಮ್ಮ ಸಾಮಾಜಿಕ-ಶೈಕ್ಷಣಿಕ ಸೇವೆ ಸಲ್ಲಿಸದೆ ರಾಜ್ಯದ ಶ್ರೀಕೃಷ್ಣನ ನೆಲೆವೀಡಾದ ಉಡುಪಿಯ ಡಾ||ಜಿ.ಶಂಕರ್
ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆಯಾಗಿ ೨೦೦೯ರಲ್ಲಿ ಸೇವೆಗೆ ಅಲ್ಲಿಯೂ ತಮ್ಮ
ಛಾಪನ್ನು ಮೂಡಿಸಿ ೮೫೦ ವಿದ್ಯಾರ್ಥಿಗಳಿದ್ದ ಸಂಖ್ಯೆಯನ್ನು ೨೩೦೦ಕ್ಕೆರಿಸಿದವರು, ಜೊತೆಗೆ ಉತ್ತಮ ಫಲಿತಾಂಶ
ನೀಡಿ ಖಾಸಗಿ ಕಾಲೇಜುಗಳಿಗೆ ಸರಿಸಮವಾಗಿ ಸರ್ಕಾರಿ ಕಾಲೇಜುಗಳೂ ಕಾರ್ಯ ನಿರ್ವಹಿಸಬಲ್ಲವು ಎಂಬುದನ್ನು
ಸಾಬೀತು ಪಡಿಸಿ ತಮ್ಮ ೫ ವರ್ಷಗಳ ಸೇವಾವಧಿಯಲ್ಲಿಯೇ ಡಾ||ಜಿ.ಶಂಕರ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು
ಸ್ನಾತಕೋತ್ತರ ವಿಭಾಗಗಳ “ಮಾದರಿ ಕಾಲೇಜು” ಆಗಿ ರೂಪಿಸಿ ಇದೇ ೩೧-೦೫-೨೦೧೪ ರಂದು ಸೇವೆಯಿಂದ ವಯೋ ನಿವೃತ್ತಿ ಹೊಂದಿ ನಮ್ಮ ವಾಣಿಜ್ಯ ,ಶೈಕ್ಷಣಿಕ
,ಸಾಂಸ್ಕೃತಿಕ ನಗರಿಯಾದ ಹಿಂತಿರುಗಿದ್ದಾರೆ. ಇವರ ಸೇವೆಯು ಇನ್ನೂ ಹೀಗೆಯೇ ಮುಂದುವರಿದು ನಮ್ಮ ಸರ್ಕಾರಿ
ಶಾಲಾ ಕಾಲೇಜುಗಳಿಗೆ ಮಾರ್ಗದರ್ಶಕರಾಗಿ ಕ್ಷೀಣಿಸುತ್ತಿರುವ ಸರ್ಕಾರಿ ಶಾಲೆಗಳ ದಾಖಲಾತಿಯನ್ನು ಹೆಚ್ಚಿಸುವಲ್ಲಿ
ನಿರಂತರವಾಗಿ ಕಾರ್ಯೋನ್ಮುಖರಾಗಿರುವಂತೆ ಆಶಿಸುತ್ತಾ ಡಾ|| ಸಿ.ಅಶ್ವತ್ಥಮ್ಮ ರವರ ಜೀವನ ಇಂದಿನ ಯುವ
ಪೀಳಿಗೆಗೆ ದಾರಿ ದೀಪವಾಗಲಿ “ಹೆಣ್ಣು ಅಬಲೆಯಲ್ಲ ಸಬಲೆ” “ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಧ್ಯೇಯ ವಾಕ್ಯಗಳನ್ನು ತಮ್ಮ ಅವಿರತ ಕರ್ತವ್ಯ
ನಿಷ್ಠೆಯಿಂದ ಅನುಷ್ಟಾನಗೊಳಿಸಿದ ಧೀಮಂತ ವ್ಯಕ್ತಿತ್ವವನ್ನು ಇಂದಿನ ಪೀಳಿಗೆ ಅರ್ಥ ಮಾಡಿಕೊಂಡು ಮುನ್ನಡೆದಾಗ
ಸಮಾಜದಲ್ಲಿ ಇಂದು ನಡೆಯುತ್ತಿರುವ ಮಹಿಳಾ ಶೋಷಣೆ ಕೊನೆಗೊಂಡು ಉತ್ತಮ ಸರ್ವಸಮಾನತೆಯ ಸಮಾಜ ನಿರ್ಮಾಣವಾಗುವುದು. ಡಾ||ಸಿ.ಅಶ್ವತ್ಥಮ್ಮ
ರವರಂತೆ ರಾಜ್ಯದ ದೇಶದ ಪ್ರತಿಯೊಂದು ಹೆಣ್ಣೂ ಸಾಕಾರಗೊಳ್ಳಲೆಂದು ಬಯಸುವೆ.


ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ