ಮಂಗಳವಾರ, ಆಗಸ್ಟ್ 29, 2017

ಕರ್ನಾಟಕದ ನಾಡಗೀತೆ

ಪ್ರಿಯ ಓದುಗರೆ,

ಅಂತರ್ಜಾಲದ ಬಳಕೆ ಸಾಮಾನ್ಯವಾಗಿರುವ ಈಗಿನ ಯುಗದಲ್ಲಿ, ಪ್ರಪಂಚದ ಯಾವುದೇ ಮೂಲೆಯಿಂದ ಬೇಕಾದ ಮಾಹಿತಿಯನ್ನು ಪಡೆಯುವುದು ತುಂಬಾ ಸುಲಭವಾಗಿಬಿಟ್ಟಿದೆ. ಇದೇ ರೀತಿ, ರಾಷ್ಟ್ರಕವಿ ಕುವೆಂಪು ವಿರಚಿತ ನಮ್ಮ ನಾಡಗೀತೆಯನ್ನು ಪಡೆಯುವುದು ಕೂಡ ಸುಲಭ. ಆದರೂ , ಅಂತರ್ಜಾಲದಲ್ಲಿ ನಾಡಗೀತೆಯನ್ನು ಹುಡುಕುವವರಿಗೆ ಇನ್ನಷ್ಟು ಸುಲಭವಾಗಿ ಸಿಗುವಂತೆ ಮಾಡಲು ನಮ್ಮ ಅಳಿಲು ಸೇವೆಯಾಗಿ ನಾವು ಇಲ್ಲಿ ಇನ್ನೊಮ್ಮೆ ನಾಡಗೀತೆಯನ್ನು ವಿವಿಧ ತಾಂತ್ರಿಕ ರೂಪಗಳಲ್ಲಿ ಪ್ರಕಟಿಸುತ್ತಿದ್ದೇವೆ. ವಿವಿಧ ತಾಂತ್ರಿಕ ರೂಪಗಳಾದ ಪದ್ಯ (ಟೆಕ್ಸ್ಟ್), ಚಿತ್ರ (ಇಮೇಜ್), ಹಾಗೂ ದೃಶ್ಯ ( ವೀಡಿಯೋ) ಗಳಲ್ಲಿ ಪ್ರಕಟಿಸಲಾಗಿದೆ.

ಪದ್ಯ (ಟೆಕ್ಸ್ಟ್) ರೂಪದಲ್ಲಿ ನಾಡಗೀತೆಯನ್ನು ಈ ಕೆಳಗೆ ಕೊಡಲಾಗಿದೆ:
ಜಯ ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ!

ಜಯ ಸುಂದರ ನದಿ ವನಗಳ ನಾಡೇ,
ಜಯ ಹೇ ರಸಋಷಿಗಳ ಬೀಡೆ!
ಭೂದೇವಿಯ ಮುಕುಟದ ನವಮಣಿಯೆ,
ಗಂಧದ ಚಂದದ ಹೊನ್ನಿನ ಗಣಿಯೆ,
ರಾಘವ ಮಧುಸೂಧನ ರವತರಿಸಿದ
ಭಾರತ ಜನನಿಯ ತನುಜಾತೇ
ಜಯಹೇ ಕರ್ನಾಟಕ ಮಾತೆ

ಜನನಿಯ ಜೋಗುಳ ವೇದದ ಘೋಷ,
ಜನನಿಗೆ ಜೀವವು ನಿನ್ನಾವೇಶ!
ಹಸುರಿನ ಗಿರಿಗಳ ಸಾಲೇ,
ನಿನ್ನಯ ಕೊರಳಿನ ಮಾಲೆ!
ಕಪಿಲ ಪತಂಜಲ ಗೌತಮ ಜಿನನುತ,
ಭಾರತ ಜನನಿಯ ತನುಜಾತೆ!
ಜಯ ಹೇ ಕರ್ನಾಟಕ ಮಾತೆ!

ಶಂಕರ ರಾಮಾನುಜ ವಿದ್ಯಾರಣ್ಯ,
ಬಸವೇಶ್ವರ ಮಧ್ವರ ದಿವ್ಯಾರಣ್ಯ!
ರನ್ನ ಷಡಕ್ಷರಿ ಪೊನ್ನ,
ಪಂಪ ಲಕುಮಿಪತಿ ಜನ್ನ!
ಕುಮಾರವ್ಯಾಸರ ಮಂಗಳಧಾಮ!
ಕವಿಕೋಗಿಲೆಗಳ ಪುಣ್ಯಾರಾಮ!
ನಾನಕ ರಮಾನಂದ ಕಬೀರರ,
ಭಾರತ ಜನನಿಯ ತನುಜಾತೆ!
ಜಯ ಹೇ ಕರ್ನಾಟಕ ಮಾತೆ!

ತೈಲಪ ಹೊಯ್ಸಳರಾಳಿದ ನಾಡೆ,
ಡಂಕಣ ಜಕಣರ ನೆಚ್ಚಿನ ಬೀಡೆ!
ಕೃಷ್ಣ ಶರಾವತಿ ತುಂಗಾ,
ಕಾವೇರಿಯ ವರ ರಂಗ,
ಚೈತನ್ಯ ಪರಮಹಂಸ ವಿವೇಕರ
ಭಾರತ ಜನನಿಯ ತನುಜಾತೆ!
ಜಯ ಹೇ ಕರ್ನಾಟಕ ಮಾತೆ!

ಸರ್ವಜನಾಂಗದ ಶಾಂತಿಯ ತೋಟ,
ರಸಿಕರ ಕಂಗಳ ಸೆಳೆಯುವ ನೋಟ!
ಹಿಂದೂ ಕ್ರೈಸ್ತ ಮುಸಲ್ಮಾನ,
ಪಾರಸಿಕ ಜೈನರುದ್ಯಾನ
ಜನಕನ ಹೋಲುವ ದೊರೆಗಳ ಧಾಮ,
ಗಾಯಕ ವೈಣಿಕರಾರಾಮ.

ಕನ್ನಡ ನುಡಿ ಕುಣಿದಾಡುವ ಗೇಹ!
ಕನ್ನಡ ತಾಯಿಯ ಮಕ್ಕಳ ದೇಹ!
ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ!
ಜಯ ಸುಂದರ ನದಿ ವನಗಳ ನಾಡೆ,
ಜಯ ಹೇ ರಸಋಷಿಗಳ ಬೀಡೆ!


ಚಿತ್ರ (ಇಮೇಜ್) ರೂಪದಲ್ಲಿ ನಾಡಗೀತೆಯನ್ನು ಈ ಕೆಳಗೆ ಕೊಡಲಾಗಿದೆ:


ದೃಶ್ಯ ( ವೀಡಿಯೋ) ರೂಪದಲ್ಲಿ ನಮ್ಮ ನಾಡಗೀತೆಯನ್ನು ನೋಡಲು ಈ ಕೆಳಗಿನ ಯೂಟ್ಯೂಬ್ ಕೊಂಡಿ (ಲಿಂಕ್)ಯನ್ನು ಒತ್ತಿ:


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ