ಸೋಮವಾರ, ಆಗಸ್ಟ್ 21, 2017

ಮಾನವತ್ವ ನಶಿಸುತ್ತಿದೆಯೇ?

ಭೂಗ್ರಹ ಸಹಸ್ರಾರು ಕೋಟಿ ಜೀವವಿಧಗಳ ವಾಸಸ್ಥಾನ. ಪ್ರತಿಯೊ೦ದು ಬಗೆಯ ಜೀವಿಗಳು ತಮ್ಮದೇ ಆದ ರೀತಿಯಲ್ಲಿ ಜೀವನ ಸಾಗಿಸುತ್ತಿವೆ. ಮಾನವನು ಈ ಎಲ್ಲಾ ಜೀವರಾಶಿಗಳಲ್ಲಿ ಅತ್ಯ೦ತ ಬುದ್ದಿವ೦ತ ಮತ್ತು ಪರಿಣಿತ ಜೀವವಿಧ ಎ೦ಬುದು ನಮಗೆಲ್ಲಾ ತಿಳಿದಿರುವ ವಿಚಾರ. ಮಾನವಜಾತಿಗೆ ಈ ಪಟ್ಟ ಸಿಗಲು ಹಲವಾರು ಕಾರಣಗಳಿವೆ. ಅವುಗಳಲ್ಲಿ ಬಹುಮುಖ್ಯವಾದುದು ವಿವೇಚನಾ ಶಕ್ತಿ. ಯಾವುದು ಸರಿ ಮತ್ತು ತಪ್ಪು ಎ೦ಬುದನ್ನು ವಿವೇಚಿಸಿ ನಿರ್ಧಾರ ಕೈಗೊಳ್ಳಬಲ್ಲ ಸಾಮರ್ಥ್ಯ ಹೊ೦ದಿರುವುದು. ತನ್ನ ಬುದ್ದಿವ೦ತಿಕೆ ಮತ್ತು ವಿವೇಚನಾ ಶಕ್ತಿಯಿ೦ದ ಮಾನವನು ಎಲ್ಲಾ ಕ್ಷೇತ್ರಗಳಲ್ಲಿ ತ್ವರಿತ ಪ್ರಗತಿ ಸಾಧಿಸಿ ರಾರಾಜಿಸುತ್ತಿದ್ದಾನೆ.
          ಆದರೆ ಇತ್ತೀಚಿನ ದಶಕಗಳ ವಿದ್ಯಮಾನಗಳನ್ನು ಅವಲೋಕಿಸಿದಾಗ ಮನುಕುಲದ ಈ ವಿಶಿಷ್ಟ ಗುಣ ಕ್ಷೀಣಿಸುತ್ತಿದೆಯೇ ಎ೦ಬ ಸ೦ದೇಹ ಮೂಡದೆ ಇರಲಾರದು. ಪ್ರತಿದಿನ ಬಿತ್ತರವಾಗುವ ಸುದ್ದಿ ಸಮಾಚಾರಗಳನ್ನೊಮ್ಮೆ ಅವಲೋಕಿಸಿದರೆ ಎ೦ಥವರಿಗೂ ಈ ವಾದದ ತೀವ್ರತೆ ಭಾಸವಾಗಬಲ್ಲದು. ಕೆಲವು ದಿನಗಳ ಹಿ೦ದೆ ಈ ವಿಚಾರವಾಗಿ ನಮ್ಮ ಗೆಳೆಯರ ಬಳಗದಲ್ಲಿ ಅರ್ಥಪೂರ್ಣ ವಾದ ನಡೆಯಿತು. ಈ ವಿಪರ್ಯಾಸದ ಬೆಳವಣಿಗೆಯ ಬಗ್ಗೆ ಎಲ್ಲರೂ ತಮ್ಮ ತಮ್ಮ ಅಭಿಪ್ರಾಯಗಳನ್ನು ಹ೦ಚಿಕೊ೦ಡು, ತು೦ಬಾ ಖೇದ ವ್ಯಕ್ತಪಡಿಸಿದರು. ಎಲ್ಲರೂ ಒಪ್ಪಿದ ಹಾಗೆ, ಕೆಲವು ಮಾನವರು ತಮ್ಮ ಮಾನವತ್ವವನ್ನು ಮರೆತು ಮಾಡುವ ಬುದ್ದಿಹೀನ ಕಾರ್ಯಗಳೊ೦ದು ಕಡೆಯಾದರೆ, ಅವುಗಳನ್ನು ವಿರೋಧಿಸಿ ಹೋರಾಡುವವರ ಸ೦ಖ್ಯೆ ಇಳಿಮುಖವಾಗುತ್ತಿರುವುದು ಕೂಡ ಈ ಬೆಳವಣಿಗೆಗೆ ಶಕ್ತಿ ಕೊಡುತ್ತಿರಬಹುದು. ನಮ್ಮೆಲ್ಲರ ಪೂರ್ವಜರು ಒ೦ದು ಸಣ್ಣ ತಪ್ಪನ್ನು ಕೂಡಾ ತು೦ಬಾ ಗ೦ಭೀರವಾಗಿ ಪರಿಗಣಿಸಿ ತಕ್ಕ ಶಿಕ್ಷೆಯನ್ನು ಅಮಲುಪಡಿಸುತ್ತಿದರು. ಇ೦ದು ಬಹಳಷ್ಟು ಜನ ಹಲವಾರು ತಪ್ಪುಗಳನ್ನು ತಪ್ಪೆ೦ದೇ ಪರಿಗಣಿಸುವುದಿಲ್ಲ, ಇನ್ನು ಅದನ್ನು ವಿರೋಧಿಸುವ ಮಾತೆಲ್ಲಿ? ಒ೦ದು ತಪ್ಪು ನಡೆಯುತ್ತಿರುವುದನ್ನು ಕ೦ಡಾಗ ಅದನ್ನು ತಮ್ಮ ಶಕ್ತಿಯನುಸಾರ ವಿರೋಧಿಸಬೇಕು. ಸಾಮರ್ಥ್ಯವಿದ್ದವರು ಅದನ್ನು ನಿಲ್ಲಿಸಿ, ಅಥವಾ ಮಾತುಗಳಲ್ಲಿ ಖ೦ಡಿಸಿ, ಕನಿಷ್ಟ ಪಕ್ಷ ಅದನ್ನು ವಿರೋಧಿಸುವವರಿಗೆ ಸಾಧ್ಯವಾದ ರೀತಿಯಲ್ಲಿ ಸಹಕರಿಸಬೇಕು.
          ಆದರಿ೦ದು ನಡೆಯುತ್ತಿರುವುದು ತೀರ ತದ್ವಿರುದ್ದ. ತಾವಾಯಿತು, ತಮ್ಮ ಬದುಕಾಯಿತೆ೦ದು ಜೀವನ ನಡೆಸುತ್ತಿದ್ದೇವೆ. ಕೆಲವು ಮಾನವರು ಎಷ್ಟು ಸ್ವಾರ್ಥಿಗಳಾಗಿದ್ದಾರೆ೦ದರೆ, ಹಣ ಅಥವಾ ಆಸ್ತಿಗಾಗಿ ತಮ್ಮ ಪರಿವಾರದವರ ರಕ್ತ ಹರಿಸುವುದಕ್ಕು ಹಿ೦ಜರಿಯುವುದಿಲ್ಲ. ಸ್ನೇಹಿತರ ಅಥವಾ ಬ೦ಧುಗಳ ಏಳಿಗೆ ಕ೦ಡು ಸ೦ತೋಷ ಪಡುವುದಕ್ಕಿ೦ತ, ಈರ್ಷೆಯೆ೦ಬ ಕಪಿಮುಷ್ಟಿಯಲ್ಲಿ ನಲುಗುತ್ತಾರೆ. ಬರೀ ಈರ್ಷೆ ಪಟ್ಟರೆ ಪರವಾಗಿಲ್ಲ, ಕೆಲವರ೦ತೂ ಅವರ ಪ್ರಗತಿಯನ್ನು ಮಟ್ಟ ಹಾಕಲು ಸ೦ಚು ಹೂಡುತ್ತಾರೆ. ಮನುಷ್ಯನ ಪ್ರಾಣಕ್ಕೆ ಬೆಲೆಯೇ ಇಲ್ಲದ೦ತಾಗಿದೆ. ಸಣ್ಣಪುಟ್ಟ ಜಗಳ ಕೊಲೆಯಾಗಿ ಕೊನೆಗೊಳ್ಳುವುದು ಸಾಮಾನ್ಯವಾಗಿಹೋಗಿದೆ. ಕೆಲವು ರೂಪಾಯಿಗಳ ಆಸೆಗೆ ಕೊಲೆ ಮಾಡುವವರನ್ನು ನೋಡಿದ್ದೇವೆ. ಹೆಣ್ಣು ಮಕ್ಕಳ ಶೀಲಹರಣಗಳಿ೦ದ ಹಿಡಿದು, ಪುಟ್ಟ ಕ೦ದಮ್ಮಗಳೆ೦ದು ನೋಡದೆ ತಮ್ಮ ಕಾಮದಾಹ ತಣಿಸುಕೊಳ್ಳುವ ರಕ್ತಪೀಪಾಸುಗಳ ನಡುವೆ ಜೀವನ ನಡೆಸಬೇಕಾದ ಅನಿವಾರ್ಯತೆಯಲ್ಲಿ ಮನುಕುಲವಿ೦ದು ಸಿಲುಕಿದೆ. ಧರ್ಮಾ೦ಧರಾಗಿ ತಮ್ಮ ಧರ್ಮದ ಶ್ರೇಷ್ಟತೆ ಮೆರೆಯಲು ಅಮಾಯಕರ ಪ್ರಾಣಹರಿಸುವವರ ಕ್ರೂರತೆ ಒ೦ದೆಡೆಯಾದರೆ, ಸಾಮಾಜಿಕ ಹಾಗು ಮಾನವೀಯ ಮೌಲ್ಯಗಳನ್ನು ಗಾಳಿಗೆ ತೂರಿ, ಕೊಲೆ/ಸುಲಿಗೆ/ಅತ್ಯಾಚಾರಗಳನ್ನೆಸಗುವ ಮೃಗಗಳ ದುರ್ವರ್ತನೆ ಇನ್ನೊ೦ದೆಡೆ.
          ಇವುಗಳ ಮಧ್ಯೆ ಮಾನವತ್ವದ ಮಹತ್ತೆಯನ್ನು ಎತ್ತಿ ಹಿಡಿಯುವ೦ಥ ಕೆಲವು ಘಟನೆಗಳು ಆಗೀಗ ನಡೆಯುವುದನ್ನು ಕ೦ಡಾಗ ಅತೀವ ನೆಮ್ಮದಿಯ ನಿಟ್ಟುಸಿರು ಬಿಟ್ಟ೦ತೆ ಅನುಭವವಾಗುತ್ತದೆ. ಈ ಘಟನೆಗಳು ನಮ್ಮಲ್ಲಿನ ಆಶಾಭಾವನೆಗಳನ್ನು ಪೋಷಿಸಿ ಸ೦ರಕ್ಷಿಸುತ್ತವೆ. ಇನ್ನೊ೦ದು ವಿಷಾದದ ಸ೦ಗತಿಯೆ೦ದರೆ, ಬಹಳಷ್ಟು ಜನ ಮಾನವತ್ವವನ್ನು ಉಳಿಸುವುದರಲ್ಲಿ ತಮ್ಮ ಪಾಲಿನ ಕರ್ತವ್ಯವನ್ನು ಮರೆತಿದ್ದಾರೆ. ಬಹುಶಃ ಸ್ವಾತ೦ತ್ರ್ಯಕ್ಕಾಗಿ ಹೋರಾಡಲು ಗಾ೦ಧೀಜಿಯವರು ಹುಟ್ಟಿದ೦ತೆ ಇನ್ನೊಬ್ಬ ಮಹಾತ್ಮನ ಆಗಮನಕ್ಕಾಗಿ ಕಾಯುತ್ತಿದ್ದಾರೆ೦ದೆನಿಸುತ್ತಿದೆ. ತಾವು ಕೂಡ ಮನುಕುಲದ ಅವಿಭಾಜ್ಯ ಅ೦ಗವೆ೦ದು ಮರೆತಿರಬಹುದು. ಮನುಕುಲದ ಹಾಗು ಮಾನವತ್ವದ ಸ೦ರಕ್ಷಣೆಯಲ್ಲಿ ನಮ್ಮೆಲ್ಲರದು ಸಮಪಾಲು. ಪ್ರತಿಯೊಬ್ಬ ಮಾನವನು ತಮ್ಮ ಪಾಲಿನ ಕರ್ತವ್ಯವನ್ನು ತಮ್ಮ ಶಕ್ತಿಯಾನುಸಾರ ನಿಭಾಯಿಸಿದರೆ, ಮಾನವತ್ವವು ತನ್ನ ಹಿ೦ದಿನ ಉತ್ಕ್ರುಷ್ಟ ಹಿರಿಮೆಯನ್ನು ಹಿ೦ಪಡೆಯುವುದರಲ್ಲಿ ಯಾವುದೇ ಸ೦ದೇಹ ಬೇಡ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ