ಗುರುವಾರ, ಆಗಸ್ಟ್ 31, 2017

ಸರ್ಕಾರಿ ನೌಕರರ ಮಕ್ಕಳು ಸರ್ಕಾರಿ ಶಾಲೆಗೆ ಸೇರಲಿ


             ಒಂದು ಕಾಲವಿತ್ತು ಸರ್ಕಾರಿ ಶಾಲೆಗಳು ಮಕ್ಕಳಿಂದ ತುಂಬಿ ತುಳುಕುತ್ತಿದ್ದವು.ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಅವರನ್ನು ಸತ್ಪ್ರಜೆಗಳನ್ನಾಗಿಸುತ್ತಿದ್ದವು. ಆದರೆ ಅಂತಹ ಪರಿಸ್ಥಿತಿ ಇಂದು ಮಾಯವಾಗಿದೆ. ಜೊತೆಗೆ ಇಂದು ಸರ್ಕಾರಿ ಶಾಲೆಗಳು ಅಳಿವಿನಂಚಿಕೆ ಸಾಗುತ್ತಿರುವುದು ನೋವಿನ ಸಂಗತಿಯಾಗಿದೆ. ಈಗ ಸರ್ಕಾರಿ ಶಾಲೆಗಳನ್ನು ಹಿಂದಿನಂತೆ ಮತ್ತೆ ಬಲವರ್ಧನೆ ಹೇಗೆ ಮಾಡುವುದೆಂಬ ಚಿಂತೆ ಜನತೆಗೆ ಮತ್ತು ಸರ್ಕಾರಕ್ಕೆ ಮೂಡಿದೆ.

   ಸರ್ಕಾರಿ ಶಾಲೆಗಳು ಇಂದು ಅವನತಿಯ ಅಂಚಿಗೆ ಹೋಗಿವೆ ಎಂದರೆ ಇದಕ್ಕೆ ಸರ್ಕಾರಿ ನೌಕರರು ಮತ್ತು ಸರ್ಕಾರಿ ಶಿಕ್ಷಕರೇ ಹೊಣೆಗಾರರು. ಹೇಗೆಂದರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಆಯ್ಕೆಯಾಗಿ ಶಿಕ್ಷಕರಾಗಿರುವವರು ತಮ್ಮ ಮೇಲೆ ನಂಬಿಕೆಯಿಲ್ಲದೆ ತಮ್ಮ ಮಕ್ಕಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಆಯ್ಕೆಯಾಗದ , ಕಡಿಮೆ ವಿದ್ಯಾರ್ಹತೆ ಹೊಂದಿರುವ ಶಿಕ್ಷಕರ ಮೇಲೆ ನಂಬಿಕೆಯಿಟ್ಟು ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳುಹಿಸುತ್ತಿದ್ದಾರೆ. ಲಕ್ಷಾಂತರ ಸರ್ಕಾರಿ ನೌಕರರು ಮತ್ತು ಶಿಕ್ಷಕರಿರುವ ನಮ್ಮ ರಾಜ್ಯದಲ್ಲಿ ಬೆರಳೆಣಿಕೆಯಷ್ಟು ಸರ್ಕಾರಿ ನೌಕರರ ಮಕ್ಕಳು ಸಹ ಸರ್ಕಾರಿ ಶಾಲೆಗಳಲ್ಲಿ ಓದುತ್ತಿಲ್ಲವೆಂಬುದು ನಾಚಿಕೆಯ ವಿಷಯವಾಗಿದೆ. ಇದನ್ನೆಲ್ಲಾ ಗಮನಿಸುತ್ತಿರುವ ಜನತೆ ಸರ್ಕಾರಿ ಶಾಲಾ ಶಿಕ್ಷಕರ ಮಕ್ಕಳೇ ಖಾಸಗಿ ಶಾಲೆಗಳಲ್ಲಿ ಓದುತ್ತಿರುವಾಗ ನಮ್ಮ ಮಕ್ಕಳಿಗೆ ಸರ್ಕಾರಿ ಶಾಲೆಗಳಲ್ಲಿ ಉತ್ತಮ ವಿದ್ಯಾಭ್ಯಾಸ ದೊರೆಯಲು ಹೇಗೆ ಸಾಧ್ಯವೆಂದು ಭಾವಿಸಿ ಬಡಜನರೂ ಸಹ ಸಾಲಸೋಲ ಮಾಡಿ ತಮ್ಮ ಮಕ್ಕಳನ್ನೂ ಸಹ ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಇದನ್ನು ಗಮನಿಸಿದರೆ ಸರ್ಕಾರದಿಂದ ಸಾವಿರಾರು ರೂಗಳು ಸಂಬಳ ಪಡೆಯುವ ಶಿಕ್ಷಕರು ಮತ್ತು ನೌಕರರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಲ್ಲಿ ಓದಿಸುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ. ಆದ್ದರಿಂದ ಸರ್ಕಾರಗಳು ಈ ಬಗ್ಗೆ ಚಿಂತಿಸಿ ಇತ್ತೀಚೆಗೆ ಅಲಹಾಬಾದ್ ನ್ಯಾಯಾಲಯವು ಅಭಿಪ್ರಾಯಪಟ್ಟಂತೆ ಸರ್ಕಾರಿ ನೌಕರರ ಮಕ್ಕಳು ಸರ್ಕಾರಿ ಶಾಲೆಗಳಲ್ಲೇ ವ್ಯಾಸಂಗ ಮಾಡಬೇಕೆಂಬ ಕಠಿಣ ಕಾನೂನು ಜಾರಿ ಮಾಡಬೇಕು.ಕಾನೂನು ಮೀರಿದವರನ್ನು ಸೇವೆಯಿಂದಲೇ ವಜಾ ಮಾಡಬೇಕು.ಇದನ್ನು ಮಾಡದೆ ಸರ್ಕಾರಿ ಶಾಲೆಗಳು ಏಕೆ ಅಳಿವಿನಂಚಿಗೆ ಸಾಗಿವೆ ಎಂದು ಮೂರ್ಖರಂತೆ ಯೋಚಿಸುವುದು ವ್ಯರ್ಥವಾಗುತ್ತದೆ. ಇದರ ಜೊತೆಗೆ ಸರ್ಕಾರಿ ಶಾಲೆಗಳು ಹಿಂದಿನಂತೆ ಬಲವರ್ಧನೆಯಾಗಬೇಕಾದರೆ ಸರ್ಕಾರಿ ಶಾಲೆಗಳಿಗೆ ಮೂಲ ಸೌಲಭ್ಯಗಳಾದ ಕುಡಿಯುವ ನೀರು, ಶೌಚಾಲಯ, ಆಟದ ಮೈದಾನ, ಸುಸರ್ಜಿತ ಕಟ್ಟಡ ಮುಂತಾದವುಗಳನ್ನು ಸರ್ಕಾರ ಒದಗಿಸಬೇಕು.

     ಪಠ್ಯವಸ್ತುವು ಮಕ್ಕಳ ಮಾನಸಿಕ ಮತ್ತು ವಯಸ್ಸಿಗೆ ಅನುಗುಣವಾಗಿ ಪೂರಕವಾಗಿರಬೇಕು. ಶಾಲೆಗಳಲ್ಲಿ ಪಠ್ಯ ಬೋಧನೆಗೆ ಹೆಚ್ಚು ಒತ್ತು ನೀಡಬೇಕು.ಈಗಾಗಲೇ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರನ್ನು ಸಿ.ಆರ್.ಪಿ ಮತ್ತು ಬಿ.ಆರ್.ಸಿ ಗಳಾಗಿ ನೇಮಿಸದೆ ಆ ಹುದ್ದೆಗಳಿಗೆ ತಕ್ಕ ವಿದ್ಯಾರ್ಹತೆ ಇರುವ ಇತರರನ್ನು ನೇಮಿಸಬೇಕು.

     ಸೇವಾಭಾವನೆಯುಳ್ಳ ಶಿಕ್ಷಕರನ್ನು ನೇಮಿಸಬೇಕು. ಖಾಸಗಿ ಶಾಲೆಗಳಂತೆ ಸರ್ಕಾರಿ ಶಾಲೆಗಳಲ್ಲೂ ಒಂದನೇ ತರಗತಿಯಿಂದಲೇ ಆಂಗ್ಲ ಭಾಷೆಗೆ ಹೆಚ್ಚಿನ ಒತ್ತನ್ನು ನೀಡಬೇಕು.  ಸರ್ಕಾರಿ ಶಾಲೆಗೆ ಬರುತ್ತಿದ್ದ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳುಹಿಸಿರುವ ಸರ್ಕಾರ ಜಾರಿಗೆ ತಂದಿರುವ ಆರ್.ಟಿ.ಇ ಕಾಯ್ದೆಯನ್ನು ರದ್ದುಗೊಳಿಸಿ ಖಾಸಗಿ ಶಾಲೆಗಳಿಗೆ ಹೋಗುವ ಶೇ ೨೫% ರಷ್ಟು ಮಕ್ಕಳನ್ನು ಮರಳಿ ಸರ್ಕಾರಿ ಶಾಲೆಗಳಿಗೆ ತರಬೇಕು.


   ಶಿಕ್ಷಕರೂ ಸಹ ಜಾತಿ ಬೇಧ ತೋರದೆ ಶಿಕ್ಷಣ ಸೇವೆಯೇ ದೇವರ ಸೇವೆಯಂದು ಭಾವಿಸಿ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸವನ್ನು ನೀಡಬೇಕು. ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿದವರಿಗೆ ಉದ್ಯೋಗಗಳಲ್ಲಿ ಮೀಸಲಾತಿಯನ್ನು ನೀಡುವ ಕಾಯ್ದೆ ಜಾರಿಗೆ ತರಬೇಕು. ಈ ಎಲ್ಲಾ ಅಂಶಗಳನ್ನು ಪಾಲಿಸಿದರೆ ಆಗ ಮಕ್ಕಳು ಸರ್ಕಾರಿ ಶಾಲೆಗಳಿಗೆ ದಾಖಲಾಗಿ ಸರ್ಕಾರಿ ಶಾಲೆಗಳು ಬಲಗೊಂಡು ಹಿಂದಿನಂತೆ ಮಕ್ಕಳಿಂದ ತುಂಬಿ ತುಳುಕುತ್ತವೆ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ