ಪ್ರತಿವರ್ಷ ಶೈಕ್ಷಣಿಕ ವರ್ಷ ಆರಂಭವಾಗುತ್ತಲೇ ಸುನಾಮಿಯಂತೆ ಬೋರ್ಗರೆಯುವ ಕೂಗು ಖಾಸಗಿ ಶಾಲೆಗಳಲ್ಲಿ
ಡೊನೇಷನ್ ಹಾವಳಿ ಜಾಸ್ತಿಯಾಗಿದೆಯೆಂಬುದು. ಈ ವಿಷಯವನ್ನೇ ಮುಂದಿಟ್ಟುಕೊಂಡು ಪ್ರತಿಭಟನೆ, ಮುತ್ತಿಗೆ,
ಧರಣಿಗಳು ನಡೆಯುತ್ತವೆ.ಇದನ್ನು ನೋಡಿದರೆ ನಗುಬರುವುದಂತೂ ಸತ್ಯ.ಇಂತಹ ಧರಣಿಗಳು ಹಾಸ್ಯಾಸ್ಪದವಲ್ಲದೆ
ಬೇರೇನು ಅಲ್ಲ.
ಖಾಸಗಿ ಶಾಲೆಗಳಲ್ಲಿ ಡೊನೇಷನ್ ಹಾವಳಿ ಹೆಚ್ಚಾಗಿದೆ
ಎಂದು ಪೋಷಕರು ಶಿಕ್ಷಣ ಸಚಿವರ ಮನೆಗಳ ಎದುರು, ಸರ್ಕಾರಿ ಕಛೇರಿಗಳ ಮುಂದೆ ಕುಳಿತು ಸರ್ಕಾರವನ್ನು ಬಾಯಿಗೆ
ಬಂದಂತೆ ತೆಗಳುತ್ತಿರುವುದು ನಾವು ಕಾಣುತ್ತಿದ್ದೇವೆ. ಡೊನೇಷನ್ ಹಾವಳಿ ಕುರಿತು ಧರಣಿಮಾಡುವ ಪೋಷಕರಿಗೆ
ತಾಮಗೆ ಸರ್ಕಾರವನ್ನು ಪ್ರಶ್ನಿಸುವ ನೈತಿಕತೆಯಿದೆಯೇ? ಎಂಬ ಕನಿಷ್ಠ ಜ್ಞಾನವೂ ಇಲ್ಲದಿರುವುದು ವಿರ್ಪಯಾಸದ
ಸಂಗತಿ. ಇದಕ್ಕೆ ಸರ್ಕಾರವನ್ನು ಹೊಣೆ ಮಾಡುವ ಮೊದಲು ತಾವುಗಳು ಮಾಡಿರುವ ಕೆಲಸದ ಬಗ್ಗೆ ಒಮ್ಮೆ ಯೋಚಿಸಿದರೆ
ಈ ಸಮಸ್ಯೆಗೆ ಕಡಿವಾಣ ಬೀಳುವುದರಲ್ಲಿ ಸಂಶಯವಿಲ್ಲ.
ಖಾಸಗಿ ಶಾಲೆಗಳ ಕಟ್ಟಡಗಳನ್ನು, ಅವರ ಮರಳು
ಮಾತುಗಳನ್ನು ನಂಬಿ ತಮ್ಮ ಅಪೇಕ್ಷೆಯಂತೆಯೇ ಆಂಗ್ಲ ಭಾಷೆಯ ವ್ಯಾಮೋಹದಿಂದಾಗಿ ತಮ್ಮ ಮಕ್ಕಳನ್ನು ಖಾಸಗಿ
ಶಾಲೆಗಳಿಗೆ ಸೇರಿರುವ ಪೋಷಕರಿಗೆ ಆ ಶಾಲೆಗಳಲ್ಲಿ ಇರುವ ಡೊನೇಷನ್ ಬಗ್ಗೆ ಆಗ ಅರಿವಿರಲಿಲ್ಲವೇ?ಎಂಬುದು
ಪ್ರಜ್ಞಾವಂತರ ಪ್ರಶ್ನೆಯಾಗಿದೆ.
ಡೊನೇಷನ್ ಹಾವಳಿಯೆಂಬ ಈ ವಿಷಯದಲ್ಲಿ ಸರ್ಕಾರದ್ದಾಗಲಿ,
ಖಾಸಗಿ ಶಾಲೆಗಳದ್ದಾಗಲಿ ಯಾವುದೇ ತಪ್ಪಿಲ್ಲ.ಏಕೆಂದರೆ ಸರ್ಕಾರವು ಪ್ರತಿಯೊಬ್ಬ ಮಗುವು ಶಿಕ್ಷಣವಂತನಾಗಬೇಕೆಂಬ
ಉದ್ದೇಶದಿಂದ ಸರ್ಕಾರಿ ಶಾಲೆಗಳನ್ನು ಆರಂಭಿಸಿ, ಆ ಶಾಲೆಗಳಿಗೆ ಸಮರ್ಥ ಅರ್ಹ ಶಿಕ್ಷಕರನ್ನು ನೇಮಿಸಿದೆಯಲ್ಲದೆ,
ಉಚಿತವಾಗಿ ಬಿಸಿಯೂಟ, ಸೈಕಲ್, ಸಮವಸ್ತ್ರಾ, ಕ್ಷೀರಭಾಗ್ಯ, ಶೂಭಾಗ್ಯ, ವಿದ್ಯಾರ್ಥಿವೇತನ ಸೇರಿದಂತೆ
ಅನೇಕ ಸೌಲಭ್ಯಗಳನ್ನು ಜೊತೆಗೆ ಮೂಲಭೂತ ಸೌಕರ್ಯಗಳನ್ನು ಸಹ ಒದಗಿಸುತ್ತಿದ್ದರೂ ಆಂಗ್ಲ ಭಾಷಾ ವ್ಯಾಮೋಹದಿಂದ
ಸರ್ಕಾರಿ ಶಾಲೆಗಳನ್ನು ತತ್ಸಾರದಿಂದ ಕಂಡು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಸರಿಯಿಲ್ಲವೆಂದು ಹೇಳಿ
ತಮ್ಮ ಮಕ್ಕಳನ್ನು ಪ್ರತಿಷ್ಠೆಗಾಗಿಯಾದರೂ ಖಾಸಗಿ ಶಾಲೆಗಳಿಗೆ ಕಳುಹಿಸುತ್ತಿದ್ದಾರೆಯೇ ಹೊರತು ಸರ್ಕಾರವೇನು
ಖಾಸಗಿ ಶಾಲೆಗಳಿಗೆ ಸೇರಿಸಿಯೆಂಬ ಕಾನೂನಾಗಲೀ, ಆದೇಶವಾಗಲಿ ಮಾಡಿಲ್ಲವೆಂಬುದನ್ನು ಮೊದಲು ಅರ್ಥಮಾಡಿಕೊಳ್ಳಬೇಕು.
ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಸರಿಯಿಲ್ಲವೆಂದು
ಖಾಸಗಿ ಶಾಲೆಗಳಿಗೆ ಸೇರಿಸುವ ಜನರಿಗೆ ಸರ್ಕಾರಿ ಶಾಲೆಗಳಲ್ಲಿ ಅದರಲ್ಲೂ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ
ಮಾಡಿದ ಅನೇಕ ಮಂದಿ ಇಂದು ಅತ್ಯುನ್ನತ ಹುದ್ದೆಗಳಲ್ಲಿ ಇದ್ದಾರೆಂಬುದು ಕಾಣುತ್ತಿಲ್ಲವೇ.
ಖಾಸಗಿ ಶಾಲೆಯವರು ಸಹ ಪೋಷಕರಿಗೆ ತಮ್ಮ ಶಾಲೆಗೆ
ಸೇರಿಸಿ ಎಂದು ಮನವಿ ಮಾಡುತ್ತಾರೆಯೇ ಹೊರತು ಸೇರಿಸಲೇ ಬೇಕೆಂಬು ಒತ್ತಡವೇನು ಹೇರುವುದಿಲ್ಲ. ಮಾಡುವ
ತಪ್ಪೆಲ್ಲ ಜನರೇ ಮಾಡಿ ನಂತರ ಡೊನೇಷನ್ ಹಾವಳಿ ಎಂದು ಬೊಬ್ಬೆಹೊಡೆಯುವ ಪೋಷಕರಿಗೆ ಏನೆಂದು ಹೇಳುವುದೋ
ಅರ್ಥವಾಗದಂತಾಗಿದೆ. ಇವರ ಈ ಕೂಗಿಗೆ ಜೊತೆಗೂಡುವ ಕೆಲವು ಕನ್ನಡ ಪರ ಸಂಘಟನೆಯವರು ಕನ್ನಡದ ಶಾಲೆಗಳನ್ನು
ಹಾಕಿಕೊಂಡು ಮಹಾನ್ ನಾಡರಕ್ಷಕರಂತೆ ಖಾಸಗಿ ಶಾಲೆಗಳ ವಿರುದ್ಧ ಹೋರಾಟಕ್ಕೆ ಮುಂದಾಗಿರುವುದು ನಿಜಕ್ಕೂ
ನಾಚಿಕೆಗೇಡಿನ ಸಂಗತಿಯಾಗಿದೆ.
ನಾಡು ನುಡಿಗೆ ಧಕ್ಕೆ ಬಂದರೆ ಸಿಡಿದೇಳುತ್ತೇವೆ,
ನಾಡರಕ್ಷಣೆಗಾಗಿ ನಮ್ಮ ಸಂಘಟನೆ ಎಂಬ ಉದ್ದೇಶದಿಂದ ಆರಂಭವಾಗಿರುವ ಸಂಘಟನೆಗಳು ನಾಡು ನುಡಿಗೆ ಧಕ್ಕೆ
ಬಂದಾಗ ತುಟಿಬಿಚ್ಚದೆ ಕಾಣೆಯಾಗುವ ಇವರು, ಕರ್ನಾಟಕದಲ್ಲಿ ಕನ್ನಡ ಶಾಲೆಗಳು ಮುಚ್ಚಲ್ಪಡುತ್ತಿದ್ದರೂ,
ಸರ್ಕಾರಿ ಶಾಲೆಗಳು ಅಳಿವಿನಂಚಿಗೆ ಹೋಗುತ್ತಿದ್ದರೂ ಕಣ್ಣಿದ್ದು ಕುರುಡರಂತಿರುವ ಇವರು ಡೊನೇಷನ್ ಬಗ್ಗೆ
ಹೋರಾಟ ಮಾಡುವ ನೈತಿಕತೆ ತಮಗಿದೆಯೇ? ನಮ್ಮ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆಯೇ?
ನಮ್ಮ ಮಕ್ಕಳಿಗೆ ನಾವು ಕನ್ನಡ ಕಲಿಸುತ್ತಿದ್ದೇವೆಯೇ? ಎಂಬುದನ್ನು ಒಮ್ಮ ತಮಗೆ ತಾವೇ ಪ್ರಶ್ನಿಸಿಕೊಳ್ಳಬೇಕಾಗಿದೆ.
ಇನ್ನಾದರೂ ಹೀಗೆ ಖಾಸಗಿ ಶಾಲೆಗಳ ವಿರುದ್ಧ
ಧ್ವನಿಯೆತ್ತುವ ಬದಲು ಸರ್ಕಾರಿ ಶಾಲೆಗಳ ಮಹತ್ವವನ್ನು ಸಾರಿ ಪೋಷಕರ ಮನವೋಲಿಸಿ ಮಕ್ಕಳನ್ನು ಸರ್ಕಾರಿ
ಶಾಲೆಗಳಿಗೆ ಸೇರಿಸುವ ಕಾರ್ಯವನ್ನು, ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಭಾಷೆಗೆ ಆದ್ಯತೆ ನೀಡುವಂತೆ ಸರ್ಕಾರದ
ಮೇಲೆ ಒತ್ತಡ ಹೇರುವ ಕಾರ್ಯವನ್ನು ಸಂಘಟನೆಯವರು ಮಾಡಬೇಕಾಗಿದೆ.
ಪೋಷಕರು ಸಹ ಡೊನೇಷನ್ ಕಟ್ಟುವ ಸಾಮರ್ಥ್ಯವಿದ್ದರೆ
ಮಾತ್ರ ಖಾಸಗಿ ಶಾಲೆಗಳಿಗೆ ಸೇರಿಸಬೇಕು ಇಲ್ಲದಿದ್ದರೆ ಸರ್ಕಾರಿ ಶಾಲೆಗಳಿಗೆ ಸೇರಿಸಬೇಕಾಗಿದೆ ಅದನ್ನು
ಬಿಟ್ಟು ಈ ರೀತಿಯಾಗಿ ದರಣಿಗಳನ್ನು ಮಾಡುವುದು ಸಮಂಜಸವಲ್ಲ.
ಶಿಕ್ಷಣ ಇಲಾಖೆಯ ಅಧಿಕಾರಿಗಳು ಸಹ ಹೀಗೆ ಡೊನೇಷನ್
ಹಾವಳಿ ಕುರಿತು ಸರ್ಕಾರಿ ಕಛೇರಿಗಳ ಮಂದೆ ಧರಣಿಗಳನ್ನು ಮಾಡುವವರ ಮೇಲೆ ಕಾನೂನು ರಿತ್ಯ ಕ್ರಮಕೈಗೊಳ್ಳಬೇಕು. ಜೊತೆಗೆ
ಇಂತ ಪ್ರತಿಭಟನೆಗಳ ಬಗ್ಗೆ ಸರ್ಕಾರವು ತಲೆಕೆಡಿಸಿಕೊಳ್ಳಬಾರದು. ಒಟ್ಟಾರೆ ಹೇಳಬೇಕಾದರೆ ಡೊನೇಷನ್ ಹಾವಳಿಯ ಬಗ್ಗೆ ಸರ್ಕಾರವನ್ನು
ಪ್ರಶ್ನಿಸುವ ನೈತಿಕತೆ ಯಾವ ನಾಗರಿಕನಿಗೂ ಇಲ್ಲವೆಂಬುದನ್ನು ಅರಿತರೆ ಸೂಕ್ತವಾದೀತು.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ