ಬುಧವಾರ, ಆಗಸ್ಟ್ 30, 2017

ಭರವಸೆಯ ಬರಹಗಾರ್ತಿ ಜೀನತ್‌ಉನ್ನೀಸಾ

      
ಶ್ರೀಮತಿ ಜೀನತ್‌ಉನ್ನೀಸಾ ಓರ್ವ ಉದಯೋನ್ಮುಖ ಬರಹಗಾರ್ತಿಯಾಗಿದ್ದು  ಹಲವು ವರ್ಷಗಳಿಂದ ಚಿಂತಾಮಣಿ ನಗರದಲ್ಲಿ ವಾಸವಾಗಿದ್ದಾರೆ. ಎಂ.ಎ.(ಹಿಂದಿ), ಪದವಿಧರೆಯಾಗಿರುವ ಇವರು ಈಗ  ಶಿಕ್ಷಕಿಯಾಗಿ ಚಿಂತಾಮಣಿ ನಗರದ ಎಂ.ಕೆ.ಬಿ.ಪಬ್ಲಿಕ್ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ವೃತ್ತಿಯಲ್ಲಿ ಶಿಕ್ಷಕಿಯಾದರೂ ಪ್ರವೃತ್ತಿಯಲ್ಲಿ ಉದಯೋನ್ಮುಖ ಬರಹಗಾರ್ತಿಯಾಗಿ  ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.

    ಬಾಲ್ಯದಿಂದಲೇ ಸಾಹಿತ್ಯದ ಬಗ್ಗೆ ಆಸಕ್ತಿಯನ್ನು ಹೊಂದಿದ ಇವರು ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುವ ಸಂದರ್ಭದಲ್ಲೇ ಹಲವಾರು ಸ್ವರಚಿತ ಕವನಗಳನ್ನು ರಚಿಸಿ ಎಲ್ಲರಿಂದಲ್ಲೂ ಸೈ ಎನಿಸಿಕೊಂಡಿದ್ದಾರೆ,ಪ್ರಚಲಿತ ವಿದ್ಯಮಾನಗಳ ,ನೈಜ ಘಟನೆಗಳ ಹಾಗು ಸ್ತ್ರೀಪರವಾದ ಅರ್ಥಪೂರ್ಣ ಕವನಗಳನ್ನು ರಚಿಸುವ ಮೂಲಕ ಕಾವ್ಯಾಸಕ್ತರ ಮನಸೂರೆಗೊಂಡಿದ್ದಾರೆ. ಹಲವು ಕವನಗಳು ಈಗಾಗಲೇ ನಾಡಿನ ಕೆಲವು ಪತ್ರಿಕೆ ಹಾಗು ವಿಶೇಷಾಂಕಗಳಲ್ಲಿ ಬೆಳಕು ಕಂಡಿವೆ. ತಾಲ್ಲೂಕು ಮತ್ತು ಜಿಲ್ಲೆಯಲ್ಲಿ ನಡೆಯುವ ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮ ಕವನಗಳನ್ನು ವಾಚಿಸುವುದರ ಮೂಲಕ ಕಾವ್ಯ ಪ್ರೇಮವನ್ನು ತೋರಿದ್ದಾರಲ್ಲದೆ, ಕೇಳುಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.


        ಜೀನತ್ ಉನ್ನೀಸಾ ರವರ ವಿಶೇಷವೇನೆಂದರೆ ಮಾತೃಭಾಷೆ ಉರ್ದು ಆಗಿದ್ದರೂ, ವ್ಯಾಸಂಗದ ಭಾಷೆ ಇಂಗ್ಲೀಷ್ ಆಗಿದ್ದರೂ, ಬೋಧಿಸುವ ಭಾಷೆ ಹಿಂದಿಯಾಗಿದ್ದರೂ, ಸಾಹಿತ್ಯದ ಭಾಷೆಯನ್ನಾಗಿ ಕನ್ನಡವನ್ನು ಆಯ್ಕೆ ಮಾಡಿಕೊಂಡಿರುವ ಇವರು ಅಚ್ಚಕನ್ನಡದಲ್ಲಿ ಬರಹಗಳನ್ನು ರಚಿಸುವ ಮೂಲಕ ತಮ್ಮ ಕನ್ನಡಾಭಿಮಾನವನ್ನು ಮೆರೆಯುತ್ತಿದ್ದಾರೆ. ಇತ್ತೀಚೆಗೆ ಕುವೆಂಪು ಜನ್ಮದಿನೋತ್ಸವದ ಅಂಗವಾಗಿ ಚಿಕ್ಕಬಳ್ಳಾಪುರದ ಕರ್ನಾಟಕ ವಚನ ಸಾಹಿತ್ಯ ಪರಿಷತ್ತಿನ ವತಿಯಿಂದ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ ಅತ್ಯುತ್ತಮವಾಗಿ ಪ್ರಬಂಧ ಬರೆಯುವ ಮೂಲಕ ದ್ವಿತೀಯ ಸ್ಥಾನವನ್ನು ಪಡೆದು ತಾಲ್ಲೂಕಿಗೆ ಕೀರ್ತಿ ತಂದಿದ್ದಾರೆ. ಮೂಲತಃ ತುಮಕೂರು ಜಿಲ್ಲೆಯವರಾಗಿರುವ ಇವರು ಸರಳ ವ್ಯಕ್ತಿತ್ವದ ಮೃದು ಸ್ವಭಾವದ ಹಸನ್ಮುಖಿಯಾಗಿರುವ ಇವರು ಸ್ನೇಹಪರ ಜೀವಿಯಾಗಿದ್ದಾರೆ.ಎಲ್ಲರೊಂದಿಗೂ ನಗು ನಗುತ್ತಾ ಮಾತನಾಡುವ ಇವರು ವಿದ್ಯಾರ್ಥಿಗಳಿಗೂ ಅಚ್ಚಮೆಚ್ಚಿನ ಶಿಕ್ಷಕಿಯಾಗಿದ್ದಾರೆ. ಶಾಲೆಯಲ್ಲಿಯೂ ಜಡ್.ಯು.ಮೇಡಂ ಎಂದೇ ಖ್ಯಾತರಾಗಿದ್ದರೆ. ಜೀನತ್ ಉನ್ನೀಸಾ ರವರು ಕರಕುಶಲ ಕಲೆಯಲ್ಲೂ ಸಹ ಎತ್ತಿದ ಕೈ ಎಂದರೆ ತಪ್ಪಾಗಲಾರದು ಏಕೆಂದರೆ ತಮ್ಮ ಶಾಲೆಯ ಮಕ್ಕಳಿಗೆ ತ್ಯಾಜ್ಯ ವಸ್ತುಗಳಿಂದ, ಕಾಗದದಿಂದ, ನೀರಿನ ಬಾಟಲ್ ಗಳಿಂದ ವಿವಿಧ ರೀತಿಯ ಕರಕುಶಲ ಕಲೆಯನ್ನು ಕಲಿಸುತ್ತಿದ್ದಾರೆ.


     ಹಲವು ವರ್ಷಗಳ ಕಾಲ ಸ್ಥಗಿತಗೊಂಡಿದ್ದ ತನ್ನ ಸಾಹಿತ್ಯಿಕ ಚಟುವಟಿಕೆಯೂ ಮತ್ತೆ ಮುಂದುವರಿಯುವುದಕ್ಕೆ ಚಿಂತಾಮಣಿ ತಾಲ್ಲೂಕು ಕನ್ನಡ ಸಾಹಿತ್ಯ ಬಳಗ ಹಾಗು ಸಿರಿಗನ್ನಡ ವೇದಿಕೆಗಳು ಸಹಕಾರ ನೀಡುತ್ತಿರುವುದೇ ಮುಖ್ಯ ಕಾರಣವಾಗಿದೆ ಎಂಬುದು ಜೀನತ್‌ಉನ್ನೀಸಾ ರವರ ಮನದಾಳದ ಮಾತಾಗಿದೆ. ಇವರಿಗೆ ಇವರ ಪತಿ ಸೈಯದ್ ಅನ್ವರ್ ಪಾಷ ರವರು ಸಹ ಬೆನ್ನೆಲುಬಾಗಿ ನಿಂತು ಸಹಕರಿಸುತ್ತಿರುವುದು ಇವರ ಸಾಹಿತ್ಯ ಕೃಷಿಯು ಇಮ್ಮಡಿಯಾಗಲು ಕಾರಣವಾಗಿದೆ. ತಾನು ಈ ಮಟ್ಟದಲ್ಲಿ ಸಾಧನೆ ಮಾಡಲು ಇವರ ಶಿಕ್ಷಕರಾದ ಸಂಪತ್ ಕುಮಾರ್ ರವರ ಸಹಕಾರವನ್ನು ಜೀನತ್ ಉನ್ನೀಸಾ ರವರು ಸದಾ ನೆನೆಯುತ್ತಾ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುವುದನ್ನು ಮರೆಯುವುದಿಲ್ಲ. ಪ್ರಸ್ತುತ ಜೀನತ್‌ಉನ್ನೀಸಾರವರು ಚಿಂತಾಮಣಿ ಕನ್ನಡ ಕವಿವಾಣಿ ಪತ್ರಿಕೆಯ ಚಿಂತಾಮಣಿ ತಾಲ್ಲೂಕು ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
    ಕೋಲಾರ ಮತ್ತು ಚಿಕ್ಕಬಳ್ಳಾಪುರ ಈ ಉಭಯ ಜಿಲ್ಲೆಗಳಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರ ಬಹುತೇಕ ಕಡಿಮೆಯಾಗುತ್ತಿರುವ ಈ ಸಂದರ್ಭದಲ್ಲಿ ಪ್ರತಿಭಾವಂತ ಬರಗಾರ್ತಿಯಾಗಿ ಹೊರ ಬರುತ್ತಿರುವ ಜೀನತ್‌ಉನ್ನೀಸಾ ರವರಿಗೆ ಮುಂದಿನ ದಿನಗಳಲ್ಲೂ ಸಹಕಾರ ಮತ್ತು ಪ್ರೋತ್ಸಾಹಗಳು ದೊರೆತಲ್ಲಿ ಅವರೊಬ್ಬ ಮಾದರಿ ಕವಯತ್ರಿಯಾಗುವುದರಲ್ಲಿ ಸಂದೇಹವಿಲ್ಲ.

********************** ಮುಕ್ತಾಯ **********************


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ