ಗುರುವಾರ, ಆಗಸ್ಟ್ 31, 2017

ಹಿರಿಯ ಸಾಹಿತಿ ಬಿ.ಟಿ.ಲಲಿತಾ ನಾಯಕ್ ರಿಗೆ " ಕಾವ್ಯಸಿರಿ" ಕವನ ಸಂಕಲನ


ಕರ್ನಾಟಕ ಜ್ಞಾನ-ವಿಜ್ಞಾನ ಸಮಿತಿ ಹಾಗೂ ರಾಜ್ಯ ಮಾನವ ಹಕ್ಕುಗಳ ಜಾಗೃತ ಸಮಿತಿಯ ಸಂಯುಕ್ತಾಶ್ರಯದಲ್ಲಿ ದೊಡ್ಡಬಳ್ಳಾಪುರದ ಬೆಸೆಂಟ್ ಪಾರ್ಕ್ ನಲ್ಲಿ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಸಾಹಿತ್ಯಿಕ ಹಾಗೂ ಶೈಕ್ಷಣಿಕ ಸಮ್ಮಿಲನ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಬಿ.ಟಿ.ಲಲಿತಾ ನಾಯಕ್ ರಿಗೆ, ಚಿಂತಾಮಣಿ ಸಿರಿಗನ್ನಡ ವೇದಿಕೆಯ ತಾಲ್ಲೂಕು ಅಧ್ಯಕ್ಷ ಹಾಗೂ ಕನ್ನಡ ಕವಿವಾಣಿ ಪತ್ರಿಕೆಯ ಪ್ರಧಾನ ಸಂಪಾದಕರಾದ ಮಾನ್ಯ ಕೆ.ಎನ್.ಅಕ್ರಂಪಾಷರವರು ಸಿರಿಗನ್ನಡ ವೇದಿಕೆಯಿಂದ ಹೊರತಂದ " ಕಾವ್ಯಸಿರಿ" ಕವನ ಸಂಕಲನವನ್ನು ನೀಡಿದರು.

ಅಕ್ರಂಪಾಷಾರವರ ಕೆಲವು ಕವನಗಳು


ವಿಪರ್ಯಾಸ
ಎಲ್ಲರೂ ಪ್ರಜಾಪ್ರಭತ್ವವಾದಿಗಳೇ
ಪ್ರಜಾಪ್ರಭುತ್ವದ ಸಿದ್ದಾಂತಗಳನ್ನು ನೇಣಿಗೆರಿಸುತ್ತಿದ್ದಾರೆ
ಎಲ್ಲರೂ ಪ್ರಜಾಸೇವಕರೆ
ಪ್ರಜೆಗಳ ರಕ್ತ ಹೀರುತ್ತಿದ್ದಾರೆ
ಎಲ್ಲರೂ ಲೌಕಿಕವಾದಿಗಳೇ
ಅಲೌಕಿಕವಾಗಿ ವರ್ತಿಸುತ್ತಿದ್ದಾರೆ
ಎಲ್ಲರೂ ತ್ಯಾಗಮೂರ್ತಿಗಳೇ
ಮನೆ ಮೇಲೆ ಮನೆ ಕಟ್ಟುತ್ತಿದ್ದಾರೆ
ಎಲ್ಲರೂ ಅಹಿಂಸಾವಾದಿಗಳೇ
ಆದರೂ ಹತ್ಯೆಗಳನ್ನು ಮಾಡುತ್ತಿದ್ದಾರೆ
ಎಲ್ಲರೂ ದೇಶಭಕ್ತರೆ
ದೇಶದುದ್ದಗಲಕ್ಕೂ ದೊಚುತ್ತಿದ್ದಾರೆ.
******

ಬೇಸಿಗೆ ರಜೆ
ಬೇಸಿಗೆ ರಜೆಯಲಿ
ಹಾಸಿಗೆ ಏತಕೆ
ತಣ್ಣಗೆ ನೆಲವೇ ಇಹುದಲ್ಲ
ತಿನ್ನಲು ಹಣ್ಣು
ಬೇರೆಯದೇತಕೆ
ಕಲ್ಲಂಗಡಿಯೇ ಇದೆಯಲ್ಲಾ
ತಣ್ಣನೆ ನೀರಿಗೆ
ಫ್ರಿಜ್ ಅದೇತಕೆ
ಮಣ್ಣಿನ ಮಡಿಕೆ ಇಹುದಲ್ಲಾ
ಮಾಜಾ,ಪೆಪ್ಸಿ ಕೋಲಾ ಏತಕೆ
ನಿಂಬೆ ಶರಬತ್ ಸಾಕಲ್ಲ
ಹಸಿಬಿಸಿ ಫ್ಯಾನಿನ
ಗಾಳಿಯ ದೇತಕೆ
ಬೇಸಣಿಗೆ ಕೈಯಲ್ಲಿದೆಯಲ್ಲ
ಬೇಸಿಗೆ ಎಂದರೆ
ಹೇದರುವುದೇತಕೆ
ಸ್ವಾಗತಿಸೋಣ
ಪ್ರೀತಿಯಿಂದ ಹೌದಲ್ಲ
*******
  
ನಿನ್ನ ನೆನಪಲಿ
 ಚೆಲುವೇ....
ಯಾವ ಜನುಮದ ಬಂಧವೋ
ನೀ ನನ್ನ ಬಾಳಿಗೆ ಬೆಳಕಾಗಿ ಬಂದೆ
ಕತ್ತಲಾಗಿದ್ದ ನನ್ನ ಹೃದಯದಲ್ಲಿ
ಜ್ಯೋತಿಯ ನೀ ಬೆಳಗಿಸಿದೆ.
ಬರಡಾಗಿದ್ದ ನನ್ನ ಜೀವಕ್ಕೆ
ಪ್ರೀತಿಯ ಹನಿಗಳನ್ನು ಸಿಂಚನಗೈದು
ಹೊಸ ಚೈತನ್ಯ ನೀಡಿದೆ
ಸರಳ ಮಾರ್ಗದಲ್ಲಿ ಬದುಕಲು
ಮಾರ್ಗದರ್ಶನ ನೀಡಿದೆ.
ಸುಂದರ ಬದುಕಿಗೆ
ಸೊಗಸಾದ ಪಾಠ ನೀ ಕಲಿಸಿದೆ
ಲಯ ತಪ್ಪಿದ ನನ್ನ ಪಯಣಕೆ
ಮಧುರ ಲಯವನಿಟ್ಟೆ
ವಿಧಿಯಾಟಕ್ಕೆ ಸಿಲುಕಿ
ನಲುಗಿದ ನನ್ನ ಬಾಳಲ್ಲಿ ಬಂದು
ನಿನ್ನ ಹೃದಯ ವೈಶಾಲ್ಯತೆಯನ್ನು ಮೆರೆದೆ
ನನ್ನೀ ಜೀವಕೆ ನೀ ಹೊಸ ಮೆರುಗನ್ನು ಕೊಟ್ಟೆ.|
***********
  
ಡಿಯ ಬೇಡಿರಣ್ಣ!
ಕಡಿಯ ಬೇಡಿರಣ್ಣ
ನೀವು ಮರಗಿಡಿಗಳನು ಕಡಿಯ ಬೇಡಿರಣ್ಣ||ಕ||
ಮರಗಿಡಿಗಳಿಲ್ಲದೆ
ಪರಿಸರಕ್ಕೆ ಹಸಿರಿಲ್ಲಣ್ಣ
ಹಸಿರಿಲ್ಲದೆ
ಜನರಿಗೆ ಉಸಿರಿಲ್ಲಣ್ಣ||ಕ||

ಮರಗಿಡಗಳಿಲ್ಲದೆ
ಭುವಿಗೆ ಮಳೆಯಿಲ್ಲಣ್ಣ
ಮಳೆಯಿಲ್ಲದಿದ್ದರೆ
ಬೆಳೆ ಬೆಳೆಯುವುದಿಲ್ಲಣ್ಣ||ಕ||
ಮರಗಿಡಗಳಿಲ್ಲದಿದ್ದರೆ
ಬರುವುದು ಭೂಕಂಪ,ಸುನಾಮಿ,ಚಂಡಮಾರುತ
ಆಗ ಆಗುವರೆಲ್ಲರು
ಅನಾಥರಣ್ಣ||ಕ||

ಜೀವ ಸಂಕುಲ ರಕ್ಷಿಸಲು
ಮರಗಿಡಗಳನ್ನು ಕಡಿಯ ಬೇಡಿರಣ್ಣ
ಗಿಡ ಮರಗಳನ್ನು ಬೆಳೆಸಿ
ಮಾಲಿನ್ಯ ತಡೆಯಿರಣ್ಣ|| ಕ||

********

ಮಹಿಳೆಯರ ಆಶಾ ಕಿರಣ : ಡಾ||ಸಿ.ಅಶ್ವತ್ಥಮ್ಮ



ಬಂದು ನೋಡು ತಾಯಿ ,
ನಮ್ಮ ಬಡವರ ಮಗಳನ್ನು ,
ಅಳ್ತಾ ಕುಂತವ್ಳೆ ಮನೆಯೊಳಗೆ
ಎಂಬ ಅರ್ಥಗರ್ಭಿತ ಸಾಕ್ಷರ ಗೀತೆಯನ್ನು ತಮ್ಮ ಸುಶ್ರಾವ್ಯ ಕಂಠದಿಂದ ಹೃದಯ ಸ್ಪರ್ಶಿಯಾಗಿ ಗ್ರಾಮೀಣ ಬಡಹೆಣ್ಣು ಮಗಳ ಮಗಳ ಬದುಕನ್ನು ಎಳೆ ಎಳೆಯಾಗಿ ಹಾಡುತ್ತಿದ್ದ ವ್ಯಕ್ತಿ ಡಾ||ಪ್ರೊ .ಸಿ.ಅಶ್ವತ್ಥಮ್ಮ ಇವರು ಅವಿಭಾಜಿತ ಕೋಲಾರ ಜಿಲ್ಲೆಯ ಚಿಂತಾಮಣಿ ನಗರದ ಮಾಳಪ್ಪಲ್ಲಿಯಲ್ಲಿ ದಿನಾಂಕ :೦೧-೦೬-೧೯೫೪ ರಲ್ಲಿ ಜನಸಿದರು. ಇವರು ತಮ್ಮ ಪ್ರಾಥಮಿಕ-ಪ್ರೌಢ ಶಿಕ್ಷಣವನ್ನು ಸರ್ಕಾರಿ ಕನ್ನಡ ಶಾಲೆಗಳಲ್ಲಿಯೇ ಪಡೆದವರು. ತಮ್ಮ ಪದವಿಯನ್ನೂ ಸಹಾ ಇವರು ಚಿಂತಾಮಣಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿಯೇ ವ್ಯಾಸಂಗ ಮಾಡಿ ತಾವು ಓದಿದ ಕಾಲೇಜಿನಲ್ಲಿಯೇ ಸುಮಾರು ೨೮ ವರ್ಷಗಳ ಕಾಲ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದವರು.


       ತಮ್ಮ ಸೇವಾಧಿಯಲ್ಲಿ ತಮ್ಮ ನಿರರ್ಗಳ ಉಪನ್ಯಾಸದಿಂದ ಇತಿಹಾಸದ ವಿಷಯದಲ್ಲಿ ಕಾಲೇಜು ವಿದ್ಯಾರ್ಥಿಗಳಲ್ಲಿ  ಆಸಕ್ತಿ ಮೂಡಿಸಿದವರು.ಇವರು ತಮ್ಮ ಸೇವೆಯನ್ನು ಕೇವಲ ಉಪನ್ಯಾಸಕ್ಕೆ ಸೀಮಿತಗೊಳಿಸದೆ ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು. ಕಾಲೇಜು ವಿದ್ಯಾರ್ಥಿನಿಯರನ್ನು ವಾರಗಟ್ಟಲೇ ಗ್ರಾಮಾಂತರ ಪ್ರದೇಶಗಳಿಗೆ ಕರೆದೊಯ್ದು ಗ್ರಾಮೀಣ ಪ್ರದೇಶದಲ್ಲಿ ಬಡಅನಕ್ಷರಸ್ಥರ ಬಾಳನ್ನು ಹತ್ತಿರದಿಂದ ನಗರ ಪ್ರದೇಶದ ವಿದ್ಯಾರ್ಥಿನಿಯರಿಗೆ ತೋರಿಸಿ ಗ್ರಾಮೀಣ ಪ್ರದೇಶವನ್ನು ಉತ್ತಮಗೊಳಿಸುವತ್ತ ಪ್ರೇರೇಪಿಸಿದವರು. ಇವರು ಉತ್ತಮ ಎನ್.ಎಸ್.ಎಸ್. ಶಿಬಿರಾಧಿಕಾರಿಯಾಗಿ ಖ್ಯಾತಿಗಳಿಸಿದವರು ಇದೇ ಸಮಯದಲ್ಲಿ ಕೋಲಾರ ಜಿಲ್ಲೆಯಲ್ಲಿ ೧೯೯೩ರಲ್ಲಿ ಅನುಷ್ಟಾನಗೊಂಡ ರಾಷ್ಟ್ರೀಯ ಸಾಕ್ಷರತಾ ಮಿಷನ್ನಿನ ಅಕ್ಷರ ತೆನೆ ಕಾರ್ಯಕ್ರಮದಲ್ಲಿ ಜಿಲ್ಲಾ ಸಂಪನ್ಮೂಲ ವ್ಯಕ್ತಿಯಾಗಿ ,ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ಕಾರ್ಯಕ್ರಮದ ಪ್ರಾಥಮಿಕ ಹಂತವಾದ ಪರಿಸರ ನಿರ್ಮಾಣದಲ್ಲಿ ಸಾಕ್ಷರಗೀತೆ ,ಬೀದಿನಾಟಕ ,ಉಪನ್ಯಾಸಗಳ ಮೂಲಕ ಸಾಕ್ಷರ ಜಾಥಾದಲ್ಲಿ ಹಗಲು-ರಾತ್ರಿಗಳೆನ್ನದೆ ದಿನಕ್ಕೆ ೧೦-೧೨ ಹಳ್ಳಿಗಳಲ್ಲಿ ತಮ್ಮ ಕಾರ್ಯಕ್ರಮ ನೀಡಿ ಗ್ರಾಮೀಣ ಜನರಲ್ಲಿ ಅಕ್ಷರ ,ಆರೋಗ್ಯ ,ಸ್ವಚ್ಛತೆ ,ಮಿತ ಕುಟುಂಬ ,ಬಾಲಕಾರ್ಮಿಕ ಪದ್ಧತಿ ,ಜೀತ ಪದ್ಧತಿ ಕಾನೂನು ಅರಿವು ,ವರದಕ್ಷಿಣೆ ಪಿಡುಗು ,ಹೆಣ್ಣುಭ್ರೂಣ ಹತ್ಯೆ ,ಏಡ್ಸ್ ಮಹಾಮಾರಿ ,ಜೀವ ಜಲ ಹಾಗೂ ಗುಟ್ಕಾ ಸೇವನೆಯಿಂದ ಆಗುವ ತೊಂದರೆಗಳ ಬಗ್ಗೆ ಅರಿವು ಮೂಡಿಸಿದವರು.

    ಇವರು ಅಕ್ಷರ ತೆನೆಯ ಸಾಕ್ಷರತಾ ಆಂದೋಲನ ,ಮುಂದುವರಿಕೆ ಶಿಕ್ಷಣಕೇಂದ್ರ ,ಕನ್ನಡ ನಾಡು-ಸಾಕ್ಷರ ನಾಡು ಕಾರ್ಯಕ್ರಮಗಳಲ್ಲಿ ಜಿಲ್ಲೆಯ ಗ್ರಾಮ-ಗ್ರಾಮಗಳಿಗೂ ,ಗ್ರಾಮದ ಮನೆ-ಮನೆಗೂ ಭೇಟಿ ನೀಡಿ ಬಡ ಮಹಿಳೆಯರಿಗೆ ಅಕ್ಷರದ ಅರಿವನ್ನು ಮೂಡಿಸಿ ಅವರಿಂದ ಅಕ್ಷರ ಬರೆಸಿ ತಮ್ಮ ಮಕ್ಕಳನ್ನು ಶಾಲೆಗೆ ಅದರಲ್ಲೂ ಹೆಣ್ಣು ಮಕ್ಕಳನ್ನು ಕಳುಹಿಸುವಂತೆ ಪ್ರೇರೇಪಿಸುತ್ತಿದ್ದ ವೈಖರಿ ಅಭಿನಂದನೀಯವಾಗಿರುತ್ತಿತ್ತು. ಇವರು ತಮ್ಮ ಭಾಷಣಗಳಲ್ಲಿ ಮಹಿಳಾ ಸಬಲೀಕರಣ ,ಮಹಿಳಾ ಸಾಕ್ಷರತೆ ಹಾಗೂ ರಾಜಕೀಯದಲ್ಲಿ ಮಹಿಳಾ ಮೀಸಲಾತಿಯ ಬಗ್ಗೆ ನಿರ್ಭಿಡೆಯಿಂದ ಮಂಡಿಸುತ್ತಿದ್ದ ವಿಷಯ ಸಂಪದೀಕರಣದ ರೀತಿಯಿಂದಲೇ ಇವರಿಗೆ ೧೯೯೪ ರಲ್ಲಿ ಕೋಲಾರ ಜಿಲ್ಲೆಯ ಕಿರಣ್ ಬೇಡಿ ಪ್ರಶಸ್ತಿ ಲಭಿಸಿತು. ೨೦೦೨ರಲ್ಲಿ WOMEN OF THE YEAR ಪ್ರಶಸ್ತಿ, ಮುಂಬೈ ಕನ್ನಡಿಗರಿಂದ ಸುವರ್ಣ ಕನ್ನಡತಿ” ಪ್ರಶಸ್ತಿ, ನವದೆಹಲಿಯಿಂದ ಇಂದಿರಾಗಾಂದಿ ಶಿರೋಮಣಿ” ಪ್ರಶಸ್ತಿ, ದೆಹಲಿ ಮೂಲದಿಂದ ಸಮಾಜ ರತ್ನ” ಪ್ರಶಸ್ತಿ ಹಾಗೂ ೨೦೦೬-೦೭ರಲ್ಲಿ ಬೆಂಗಳೂರಿನಿಂದ ಜ್ಞಾನ ಸರಸ್ವತಿ ಮತ್ತು ಕರ್ನಾಟಕ ಜ್ಯೋತಿ” ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿ ಕೊಂಡವರು ಇವರು.

      ಕೇವಲ ನಮ್ಮ ಜಿಲ್ಲೆಯಲ್ಲಷ್ಟೇ ತಮ್ಮ ಸಾಮಾಜಿಕ-ಶೈಕ್ಷಣಿಕ ಸೇವೆ ಸಲ್ಲಿಸದೆ ರಾಜ್ಯದ ಶ್ರೀಕೃಷ್ಣನ ನೆಲೆವೀಡಾದ ಉಡುಪಿಯ ಡಾ||ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆಯಾಗಿ ೨೦೦೯ರಲ್ಲಿ ಸೇವೆಗೆ ಅಲ್ಲಿಯೂ ತಮ್ಮ ಛಾಪನ್ನು ಮೂಡಿಸಿ ೮೫೦ ವಿದ್ಯಾರ್ಥಿಗಳಿದ್ದ ಸಂಖ್ಯೆಯನ್ನು ೨೩೦೦ಕ್ಕೆರಿಸಿದವರು, ಜೊತೆಗೆ ಉತ್ತಮ ಫಲಿತಾಂಶ ನೀಡಿ ಖಾಸಗಿ ಕಾಲೇಜುಗಳಿಗೆ ಸರಿಸಮವಾಗಿ ಸರ್ಕಾರಿ ಕಾಲೇಜುಗಳೂ ಕಾರ್ಯ ನಿರ್ವಹಿಸಬಲ್ಲವು ಎಂಬುದನ್ನು ಸಾಬೀತು ಪಡಿಸಿ ತಮ್ಮ ೫ ವರ್ಷಗಳ ಸೇವಾವಧಿಯಲ್ಲಿಯೇ ಡಾ||ಜಿ.ಶಂಕರ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು ಸ್ನಾತಕೋತ್ತರ ವಿಭಾಗಗಳ ಮಾದರಿ ಕಾಲೇಜು ಆಗಿ ರೂಪಿಸಿ ಇದೇ ೩೧-೦೫-೨೦೧೪ ರಂದು ಸೇವೆಯಿಂದ ವಯೋ ನಿವೃತ್ತಿ ಹೊಂದಿ ನಮ್ಮ ವಾಣಿಜ್ಯ ,ಶೈಕ್ಷಣಿಕ ,ಸಾಂಸ್ಕೃತಿಕ ನಗರಿಯಾದ ಹಿಂತಿರುಗಿದ್ದಾರೆ. ಇವರ ಸೇವೆಯು ಇನ್ನೂ ಹೀಗೆಯೇ ಮುಂದುವರಿದು ನಮ್ಮ ಸರ್ಕಾರಿ ಶಾಲಾ ಕಾಲೇಜುಗಳಿಗೆ ಮಾರ್ಗದರ್ಶಕರಾಗಿ ಕ್ಷೀಣಿಸುತ್ತಿರುವ ಸರ್ಕಾರಿ ಶಾಲೆಗಳ ದಾಖಲಾತಿಯನ್ನು ಹೆಚ್ಚಿಸುವಲ್ಲಿ ನಿರಂತರವಾಗಿ ಕಾರ್ಯೋನ್ಮುಖರಾಗಿರುವಂತೆ ಆಶಿಸುತ್ತಾ ಡಾ|| ಸಿ.ಅಶ್ವತ್ಥಮ್ಮ ರವರ ಜೀವನ ಇಂದಿನ ಯುವ ಪೀಳಿಗೆಗೆ ದಾರಿ ದೀಪವಾಗಲಿ ಹೆಣ್ಣು ಅಬಲೆಯಲ್ಲ ಸಬಲೆ ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಧ್ಯೇಯ ವಾಕ್ಯಗಳನ್ನು ತಮ್ಮ ಅವಿರತ ಕರ್ತವ್ಯ ನಿಷ್ಠೆಯಿಂದ ಅನುಷ್ಟಾನಗೊಳಿಸಿದ ಧೀಮಂತ ವ್ಯಕ್ತಿತ್ವವನ್ನು ಇಂದಿನ ಪೀಳಿಗೆ ಅರ್ಥ ಮಾಡಿಕೊಂಡು ಮುನ್ನಡೆದಾಗ ಸಮಾಜದಲ್ಲಿ ಇಂದು ನಡೆಯುತ್ತಿರುವ ಮಹಿಳಾ ಶೋಷಣೆ ಕೊನೆಗೊಂಡು ಉತ್ತಮ ಸರ್ವಸಮಾನತೆಯ ಸಮಾಜ ನಿರ್ಮಾಣವಾಗುವುದು. ಡಾ||ಸಿ.ಅಶ್ವತ್ಥಮ್ಮ ರವರಂತೆ ರಾಜ್ಯದ ದೇಶದ ಪ್ರತಿಯೊಂದು ಹೆಣ್ಣೂ ಸಾಕಾರಗೊಳ್ಳಲೆಂದು ಬಯಸುವೆ.



                                                                                              

ಸರ್ಕಾರಿ ನೌಕರರ ಮಕ್ಕಳು ಸರ್ಕಾರಿ ಶಾಲೆಗೆ ಸೇರಲಿ


             ಒಂದು ಕಾಲವಿತ್ತು ಸರ್ಕಾರಿ ಶಾಲೆಗಳು ಮಕ್ಕಳಿಂದ ತುಂಬಿ ತುಳುಕುತ್ತಿದ್ದವು.ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಅವರನ್ನು ಸತ್ಪ್ರಜೆಗಳನ್ನಾಗಿಸುತ್ತಿದ್ದವು. ಆದರೆ ಅಂತಹ ಪರಿಸ್ಥಿತಿ ಇಂದು ಮಾಯವಾಗಿದೆ. ಜೊತೆಗೆ ಇಂದು ಸರ್ಕಾರಿ ಶಾಲೆಗಳು ಅಳಿವಿನಂಚಿಕೆ ಸಾಗುತ್ತಿರುವುದು ನೋವಿನ ಸಂಗತಿಯಾಗಿದೆ. ಈಗ ಸರ್ಕಾರಿ ಶಾಲೆಗಳನ್ನು ಹಿಂದಿನಂತೆ ಮತ್ತೆ ಬಲವರ್ಧನೆ ಹೇಗೆ ಮಾಡುವುದೆಂಬ ಚಿಂತೆ ಜನತೆಗೆ ಮತ್ತು ಸರ್ಕಾರಕ್ಕೆ ಮೂಡಿದೆ.

   ಸರ್ಕಾರಿ ಶಾಲೆಗಳು ಇಂದು ಅವನತಿಯ ಅಂಚಿಗೆ ಹೋಗಿವೆ ಎಂದರೆ ಇದಕ್ಕೆ ಸರ್ಕಾರಿ ನೌಕರರು ಮತ್ತು ಸರ್ಕಾರಿ ಶಿಕ್ಷಕರೇ ಹೊಣೆಗಾರರು. ಹೇಗೆಂದರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಆಯ್ಕೆಯಾಗಿ ಶಿಕ್ಷಕರಾಗಿರುವವರು ತಮ್ಮ ಮೇಲೆ ನಂಬಿಕೆಯಿಲ್ಲದೆ ತಮ್ಮ ಮಕ್ಕಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಆಯ್ಕೆಯಾಗದ , ಕಡಿಮೆ ವಿದ್ಯಾರ್ಹತೆ ಹೊಂದಿರುವ ಶಿಕ್ಷಕರ ಮೇಲೆ ನಂಬಿಕೆಯಿಟ್ಟು ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳುಹಿಸುತ್ತಿದ್ದಾರೆ. ಲಕ್ಷಾಂತರ ಸರ್ಕಾರಿ ನೌಕರರು ಮತ್ತು ಶಿಕ್ಷಕರಿರುವ ನಮ್ಮ ರಾಜ್ಯದಲ್ಲಿ ಬೆರಳೆಣಿಕೆಯಷ್ಟು ಸರ್ಕಾರಿ ನೌಕರರ ಮಕ್ಕಳು ಸಹ ಸರ್ಕಾರಿ ಶಾಲೆಗಳಲ್ಲಿ ಓದುತ್ತಿಲ್ಲವೆಂಬುದು ನಾಚಿಕೆಯ ವಿಷಯವಾಗಿದೆ. ಇದನ್ನೆಲ್ಲಾ ಗಮನಿಸುತ್ತಿರುವ ಜನತೆ ಸರ್ಕಾರಿ ಶಾಲಾ ಶಿಕ್ಷಕರ ಮಕ್ಕಳೇ ಖಾಸಗಿ ಶಾಲೆಗಳಲ್ಲಿ ಓದುತ್ತಿರುವಾಗ ನಮ್ಮ ಮಕ್ಕಳಿಗೆ ಸರ್ಕಾರಿ ಶಾಲೆಗಳಲ್ಲಿ ಉತ್ತಮ ವಿದ್ಯಾಭ್ಯಾಸ ದೊರೆಯಲು ಹೇಗೆ ಸಾಧ್ಯವೆಂದು ಭಾವಿಸಿ ಬಡಜನರೂ ಸಹ ಸಾಲಸೋಲ ಮಾಡಿ ತಮ್ಮ ಮಕ್ಕಳನ್ನೂ ಸಹ ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಇದನ್ನು ಗಮನಿಸಿದರೆ ಸರ್ಕಾರದಿಂದ ಸಾವಿರಾರು ರೂಗಳು ಸಂಬಳ ಪಡೆಯುವ ಶಿಕ್ಷಕರು ಮತ್ತು ನೌಕರರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಲ್ಲಿ ಓದಿಸುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ. ಆದ್ದರಿಂದ ಸರ್ಕಾರಗಳು ಈ ಬಗ್ಗೆ ಚಿಂತಿಸಿ ಇತ್ತೀಚೆಗೆ ಅಲಹಾಬಾದ್ ನ್ಯಾಯಾಲಯವು ಅಭಿಪ್ರಾಯಪಟ್ಟಂತೆ ಸರ್ಕಾರಿ ನೌಕರರ ಮಕ್ಕಳು ಸರ್ಕಾರಿ ಶಾಲೆಗಳಲ್ಲೇ ವ್ಯಾಸಂಗ ಮಾಡಬೇಕೆಂಬ ಕಠಿಣ ಕಾನೂನು ಜಾರಿ ಮಾಡಬೇಕು.ಕಾನೂನು ಮೀರಿದವರನ್ನು ಸೇವೆಯಿಂದಲೇ ವಜಾ ಮಾಡಬೇಕು.ಇದನ್ನು ಮಾಡದೆ ಸರ್ಕಾರಿ ಶಾಲೆಗಳು ಏಕೆ ಅಳಿವಿನಂಚಿಗೆ ಸಾಗಿವೆ ಎಂದು ಮೂರ್ಖರಂತೆ ಯೋಚಿಸುವುದು ವ್ಯರ್ಥವಾಗುತ್ತದೆ. ಇದರ ಜೊತೆಗೆ ಸರ್ಕಾರಿ ಶಾಲೆಗಳು ಹಿಂದಿನಂತೆ ಬಲವರ್ಧನೆಯಾಗಬೇಕಾದರೆ ಸರ್ಕಾರಿ ಶಾಲೆಗಳಿಗೆ ಮೂಲ ಸೌಲಭ್ಯಗಳಾದ ಕುಡಿಯುವ ನೀರು, ಶೌಚಾಲಯ, ಆಟದ ಮೈದಾನ, ಸುಸರ್ಜಿತ ಕಟ್ಟಡ ಮುಂತಾದವುಗಳನ್ನು ಸರ್ಕಾರ ಒದಗಿಸಬೇಕು.

     ಪಠ್ಯವಸ್ತುವು ಮಕ್ಕಳ ಮಾನಸಿಕ ಮತ್ತು ವಯಸ್ಸಿಗೆ ಅನುಗುಣವಾಗಿ ಪೂರಕವಾಗಿರಬೇಕು. ಶಾಲೆಗಳಲ್ಲಿ ಪಠ್ಯ ಬೋಧನೆಗೆ ಹೆಚ್ಚು ಒತ್ತು ನೀಡಬೇಕು.ಈಗಾಗಲೇ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರನ್ನು ಸಿ.ಆರ್.ಪಿ ಮತ್ತು ಬಿ.ಆರ್.ಸಿ ಗಳಾಗಿ ನೇಮಿಸದೆ ಆ ಹುದ್ದೆಗಳಿಗೆ ತಕ್ಕ ವಿದ್ಯಾರ್ಹತೆ ಇರುವ ಇತರರನ್ನು ನೇಮಿಸಬೇಕು.

     ಸೇವಾಭಾವನೆಯುಳ್ಳ ಶಿಕ್ಷಕರನ್ನು ನೇಮಿಸಬೇಕು. ಖಾಸಗಿ ಶಾಲೆಗಳಂತೆ ಸರ್ಕಾರಿ ಶಾಲೆಗಳಲ್ಲೂ ಒಂದನೇ ತರಗತಿಯಿಂದಲೇ ಆಂಗ್ಲ ಭಾಷೆಗೆ ಹೆಚ್ಚಿನ ಒತ್ತನ್ನು ನೀಡಬೇಕು.  ಸರ್ಕಾರಿ ಶಾಲೆಗೆ ಬರುತ್ತಿದ್ದ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳುಹಿಸಿರುವ ಸರ್ಕಾರ ಜಾರಿಗೆ ತಂದಿರುವ ಆರ್.ಟಿ.ಇ ಕಾಯ್ದೆಯನ್ನು ರದ್ದುಗೊಳಿಸಿ ಖಾಸಗಿ ಶಾಲೆಗಳಿಗೆ ಹೋಗುವ ಶೇ ೨೫% ರಷ್ಟು ಮಕ್ಕಳನ್ನು ಮರಳಿ ಸರ್ಕಾರಿ ಶಾಲೆಗಳಿಗೆ ತರಬೇಕು.


   ಶಿಕ್ಷಕರೂ ಸಹ ಜಾತಿ ಬೇಧ ತೋರದೆ ಶಿಕ್ಷಣ ಸೇವೆಯೇ ದೇವರ ಸೇವೆಯಂದು ಭಾವಿಸಿ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸವನ್ನು ನೀಡಬೇಕು. ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿದವರಿಗೆ ಉದ್ಯೋಗಗಳಲ್ಲಿ ಮೀಸಲಾತಿಯನ್ನು ನೀಡುವ ಕಾಯ್ದೆ ಜಾರಿಗೆ ತರಬೇಕು. ಈ ಎಲ್ಲಾ ಅಂಶಗಳನ್ನು ಪಾಲಿಸಿದರೆ ಆಗ ಮಕ್ಕಳು ಸರ್ಕಾರಿ ಶಾಲೆಗಳಿಗೆ ದಾಖಲಾಗಿ ಸರ್ಕಾರಿ ಶಾಲೆಗಳು ಬಲಗೊಂಡು ಹಿಂದಿನಂತೆ ಮಕ್ಕಳಿಂದ ತುಂಬಿ ತುಳುಕುತ್ತವೆ.


ಡೊನೇಷನ್ ಹಾವಳಿ ಬಗ್ಗೆ ಸರ್ಕಾರವನ್ನು ಪ್ರಶ್ನಿಸುವ ನೈತಿಕತೆ ಯಾರಿಗೂ ಇಲ್ಲ

ಪ್ರತಿವರ್ಷ ಶೈಕ್ಷಣಿಕ ವರ್ಷ ಆರಂಭವಾಗುತ್ತಲೇ ಸುನಾಮಿಯಂತೆ ಬೋರ್ಗರೆಯುವ ಕೂಗು ಖಾಸಗಿ ಶಾಲೆಗಳಲ್ಲಿ ಡೊನೇಷನ್ ಹಾವಳಿ ಜಾಸ್ತಿಯಾಗಿದೆಯೆಂಬುದು. ಈ ವಿಷಯವನ್ನೇ ಮುಂದಿಟ್ಟುಕೊಂಡು ಪ್ರತಿಭಟನೆ, ಮುತ್ತಿಗೆ, ಧರಣಿಗಳು ನಡೆಯುತ್ತವೆ.ಇದನ್ನು ನೋಡಿದರೆ ನಗುಬರುವುದಂತೂ ಸತ್ಯ.ಇಂತಹ ಧರಣಿಗಳು ಹಾಸ್ಯಾಸ್ಪದವಲ್ಲದೆ ಬೇರೇನು ಅಲ್ಲ.
    ಖಾಸಗಿ ಶಾಲೆಗಳಲ್ಲಿ ಡೊನೇಷನ್ ಹಾವಳಿ ಹೆಚ್ಚಾಗಿದೆ ಎಂದು ಪೋಷಕರು ಶಿಕ್ಷಣ ಸಚಿವರ ಮನೆಗಳ ಎದುರು, ಸರ್ಕಾರಿ ಕಛೇರಿಗಳ ಮುಂದೆ ಕುಳಿತು ಸರ್ಕಾರವನ್ನು ಬಾಯಿಗೆ ಬಂದಂತೆ ತೆಗಳುತ್ತಿರುವುದು ನಾವು ಕಾಣುತ್ತಿದ್ದೇವೆ. ಡೊನೇಷನ್ ಹಾವಳಿ ಕುರಿತು ಧರಣಿಮಾಡುವ ಪೋಷಕರಿಗೆ ತಾಮಗೆ ಸರ್ಕಾರವನ್ನು ಪ್ರಶ್ನಿಸುವ ನೈತಿಕತೆಯಿದೆಯೇ? ಎಂಬ ಕನಿಷ್ಠ ಜ್ಞಾನವೂ ಇಲ್ಲದಿರುವುದು ವಿರ್ಪಯಾಸದ ಸಂಗತಿ. ಇದಕ್ಕೆ ಸರ್ಕಾರವನ್ನು ಹೊಣೆ ಮಾಡುವ ಮೊದಲು ತಾವುಗಳು ಮಾಡಿರುವ ಕೆಲಸದ ಬಗ್ಗೆ ಒಮ್ಮೆ ಯೋಚಿಸಿದರೆ ಈ ಸಮಸ್ಯೆಗೆ ಕಡಿವಾಣ ಬೀಳುವುದರಲ್ಲಿ ಸಂಶಯವಿಲ್ಲ.
    ಖಾಸಗಿ ಶಾಲೆಗಳ ಕಟ್ಟಡಗಳನ್ನು, ಅವರ ಮರಳು ಮಾತುಗಳನ್ನು ನಂಬಿ ತಮ್ಮ ಅಪೇಕ್ಷೆಯಂತೆಯೇ ಆಂಗ್ಲ ಭಾಷೆಯ ವ್ಯಾಮೋಹದಿಂದಾಗಿ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿರುವ ಪೋಷಕರಿಗೆ ಆ ಶಾಲೆಗಳಲ್ಲಿ ಇರುವ ಡೊನೇಷನ್ ಬಗ್ಗೆ ಆಗ ಅರಿವಿರಲಿಲ್ಲವೇ?ಎಂಬುದು ಪ್ರಜ್ಞಾವಂತರ ಪ್ರಶ್ನೆಯಾಗಿದೆ.
   ಡೊನೇಷನ್ ಹಾವಳಿಯೆಂಬ ಈ ವಿಷಯದಲ್ಲಿ ಸರ್ಕಾರದ್ದಾಗಲಿ, ಖಾಸಗಿ ಶಾಲೆಗಳದ್ದಾಗಲಿ ಯಾವುದೇ ತಪ್ಪಿಲ್ಲ.ಏಕೆಂದರೆ ಸರ್ಕಾರವು ಪ್ರತಿಯೊಬ್ಬ ಮಗುವು ಶಿಕ್ಷಣವಂತನಾಗಬೇಕೆಂಬ ಉದ್ದೇಶದಿಂದ ಸರ್ಕಾರಿ ಶಾಲೆಗಳನ್ನು ಆರಂಭಿಸಿ, ಆ ಶಾಲೆಗಳಿಗೆ ಸಮರ್ಥ ಅರ್ಹ ಶಿಕ್ಷಕರನ್ನು ನೇಮಿಸಿದೆಯಲ್ಲದೆ, ಉಚಿತವಾಗಿ ಬಿಸಿಯೂಟ, ಸೈಕಲ್, ಸಮವಸ್ತ್ರಾ, ಕ್ಷೀರಭಾಗ್ಯ, ಶೂಭಾಗ್ಯ, ವಿದ್ಯಾರ್ಥಿವೇತನ ಸೇರಿದಂತೆ ಅನೇಕ ಸೌಲಭ್ಯಗಳನ್ನು ಜೊತೆಗೆ ಮೂಲಭೂತ ಸೌಕರ್ಯಗಳನ್ನು ಸಹ ಒದಗಿಸುತ್ತಿದ್ದರೂ ಆಂಗ್ಲ ಭಾಷಾ ವ್ಯಾಮೋಹದಿಂದ ಸರ್ಕಾರಿ ಶಾಲೆಗಳನ್ನು ತತ್ಸಾರದಿಂದ ಕಂಡು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಸರಿಯಿಲ್ಲವೆಂದು ಹೇಳಿ ತಮ್ಮ ಮಕ್ಕಳನ್ನು ಪ್ರತಿಷ್ಠೆಗಾಗಿಯಾದರೂ ಖಾಸಗಿ ಶಾಲೆಗಳಿಗೆ ಕಳುಹಿಸುತ್ತಿದ್ದಾರೆಯೇ ಹೊರತು ಸರ್ಕಾರವೇನು ಖಾಸಗಿ ಶಾಲೆಗಳಿಗೆ ಸೇರಿಸಿಯೆಂಬ ಕಾನೂನಾಗಲೀ, ಆದೇಶವಾಗಲಿ ಮಾಡಿಲ್ಲವೆಂಬುದನ್ನು ಮೊದಲು ಅರ್ಥಮಾಡಿಕೊಳ್ಳಬೇಕು.
    ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಸರಿಯಿಲ್ಲವೆಂದು ಖಾಸಗಿ ಶಾಲೆಗಳಿಗೆ ಸೇರಿಸುವ ಜನರಿಗೆ ಸರ್ಕಾರಿ ಶಾಲೆಗಳಲ್ಲಿ ಅದರಲ್ಲೂ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಅನೇಕ ಮಂದಿ ಇಂದು ಅತ್ಯುನ್ನತ ಹುದ್ದೆಗಳಲ್ಲಿ ಇದ್ದಾರೆಂಬುದು ಕಾಣುತ್ತಿಲ್ಲವೇ.
     ಖಾಸಗಿ ಶಾಲೆಯವರು ಸಹ ಪೋಷಕರಿಗೆ ತಮ್ಮ ಶಾಲೆಗೆ ಸೇರಿಸಿ ಎಂದು ಮನವಿ ಮಾಡುತ್ತಾರೆಯೇ ಹೊರತು ಸೇರಿಸಲೇ ಬೇಕೆಂಬು ಒತ್ತಡವೇನು ಹೇರುವುದಿಲ್ಲ. ಮಾಡುವ ತಪ್ಪೆಲ್ಲ ಜನರೇ ಮಾಡಿ ನಂತರ ಡೊನೇಷನ್ ಹಾವಳಿ ಎಂದು ಬೊಬ್ಬೆಹೊಡೆಯುವ ಪೋಷಕರಿಗೆ ಏನೆಂದು ಹೇಳುವುದೋ ಅರ್ಥವಾಗದಂತಾಗಿದೆ. ಇವರ ಈ ಕೂಗಿಗೆ ಜೊತೆಗೂಡುವ ಕೆಲವು ಕನ್ನಡ ಪರ ಸಂಘಟನೆಯವರು ಕನ್ನಡದ ಶಾಲೆಗಳನ್ನು ಹಾಕಿಕೊಂಡು ಮಹಾನ್ ನಾಡರಕ್ಷಕರಂತೆ ಖಾಸಗಿ ಶಾಲೆಗಳ ವಿರುದ್ಧ ಹೋರಾಟಕ್ಕೆ ಮುಂದಾಗಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿಯಾಗಿದೆ.
    ನಾಡು ನುಡಿಗೆ ಧಕ್ಕೆ ಬಂದರೆ ಸಿಡಿದೇಳುತ್ತೇವೆ, ನಾಡರಕ್ಷಣೆಗಾಗಿ ನಮ್ಮ ಸಂಘಟನೆ ಎಂಬ ಉದ್ದೇಶದಿಂದ ಆರಂಭವಾಗಿರುವ ಸಂಘಟನೆಗಳು ನಾಡು ನುಡಿಗೆ ಧಕ್ಕೆ ಬಂದಾಗ ತುಟಿಬಿಚ್ಚದೆ ಕಾಣೆಯಾಗುವ ಇವರು, ಕರ್ನಾಟಕದಲ್ಲಿ ಕನ್ನಡ ಶಾಲೆಗಳು ಮುಚ್ಚಲ್ಪಡುತ್ತಿದ್ದರೂ, ಸರ್ಕಾರಿ ಶಾಲೆಗಳು ಅಳಿವಿನಂಚಿಗೆ ಹೋಗುತ್ತಿದ್ದರೂ ಕಣ್ಣಿದ್ದು ಕುರುಡರಂತಿರುವ ಇವರು ಡೊನೇಷನ್ ಬಗ್ಗೆ ಹೋರಾಟ ಮಾಡುವ ನೈತಿಕತೆ ತಮಗಿದೆಯೇ? ನಮ್ಮ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆಯೇ? ನಮ್ಮ ಮಕ್ಕಳಿಗೆ ನಾವು ಕನ್ನಡ ಕಲಿಸುತ್ತಿದ್ದೇವೆಯೇ? ಎಂಬುದನ್ನು ಒಮ್ಮ ತಮಗೆ ತಾವೇ ಪ್ರಶ್ನಿಸಿಕೊಳ್ಳಬೇಕಾಗಿದೆ.
   ಇನ್ನಾದರೂ ಹೀಗೆ ಖಾಸಗಿ ಶಾಲೆಗಳ ವಿರುದ್ಧ ಧ್ವನಿಯೆತ್ತುವ ಬದಲು ಸರ್ಕಾರಿ ಶಾಲೆಗಳ ಮಹತ್ವವನ್ನು ಸಾರಿ ಪೋಷಕರ ಮನವೋಲಿಸಿ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸುವ ಕಾರ್ಯವನ್ನು, ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಭಾಷೆಗೆ ಆದ್ಯತೆ ನೀಡುವಂತೆ ಸರ್ಕಾರದ ಮೇಲೆ ಒತ್ತಡ ಹೇರುವ ಕಾರ್ಯವನ್ನು ಸಂಘಟನೆಯವರು ಮಾಡಬೇಕಾಗಿದೆ.
   ಪೋಷಕರು ಸಹ ಡೊನೇಷನ್ ಕಟ್ಟುವ ಸಾಮರ್ಥ್ಯವಿದ್ದರೆ ಮಾತ್ರ ಖಾಸಗಿ ಶಾಲೆಗಳಿಗೆ ಸೇರಿಸಬೇಕು ಇಲ್ಲದಿದ್ದರೆ ಸರ್ಕಾರಿ ಶಾಲೆಗಳಿಗೆ ಸೇರಿಸಬೇಕಾಗಿದೆ ಅದನ್ನು ಬಿಟ್ಟು ಈ ರೀತಿಯಾಗಿ ದರಣಿಗಳನ್ನು ಮಾಡುವುದು ಸಮಂಜಸವಲ್ಲ.

    ಶಿಕ್ಷಣ ಇಲಾಖೆಯ ಅಧಿಕಾರಿಗಳು ಸಹ ಹೀಗೆ ಡೊನೇಷನ್ ಹಾವಳಿ ಕುರಿತು ಸರ್ಕಾರಿ ಕಛೇರಿಗಳ ಮಂದೆ ಧರಣಿಗಳನ್ನು ಮಾಡುವವರ ಮೇಲೆ ಕಾನೂನು ರಿತ್ಯ ಕ್ರಮಕೈಗೊಳ್ಳಬೇಕು. ಜೊತೆಗೆ ಇಂತ ಪ್ರತಿಭಟನೆಗಳ ಬಗ್ಗೆ ಸರ್ಕಾರವು ತಲೆಕೆಡಿಸಿಕೊಳ್ಳಬಾರದು.   ಒಟ್ಟಾರೆ ಹೇಳಬೇಕಾದರೆ ಡೊನೇಷನ್ ಹಾವಳಿಯ ಬಗ್ಗೆ ಸರ್ಕಾರವನ್ನು ಪ್ರಶ್ನಿಸುವ ನೈತಿಕತೆ ಯಾವ ನಾಗರಿಕನಿಗೂ ಇಲ್ಲವೆಂಬುದನ್ನು ಅರಿತರೆ ಸೂಕ್ತವಾದೀತು.


ಚಿಕ್ಕಬಳ್ಳಾಪುರ ಜಿಲ್ಲೆ ಚೆಂದ - ಕವನ

ಕನ್ನಡ ನಾಡು ಚೆಂದ
ಕನ್ನಡ ನುಡಿಯು ಚೆಂದ
ಕನ್ನಡ ನಾಡಲ್ಲಿ
ನಮ್ಮ ಚಿಕ್ಕಬಳ್ಳಾಪುರ ಜಿಲ್ಲೆ ಚೆಂದ ||ಪ||

ಚೆಂಡೂ ಮಲ್ಲಿಗೆ ನೋಡ
ಚಿಂತಾಮಣಿಯ ನೋಡ
ಚಿಂತಾಮಣಿಯಲ್ಲಿ ಶ್ರೀಕ್ಷೇತ್ರ ಕೈವಾರ
ನೀ ಒಮ್ಮ ಬಂದುನೋಡ

ಶೀಗೆ ಹೂವನೋಡ
ಶಿಡ್ಲಘಟ್ಟದ ನೋಡ
ಶಿಡ್ಲಘಟ್ಟದಲ್ಲಿ ರೇಷ್ಮೆ ಕೈಗಾರಿಕೆ
ನೀ ಒಮ್ಮೆ ಒಂದು ನೋಡ

ಚಕ್ಕೋತ ಹೂವ ನೋಡ
ಚಿಕ್ಕಬಳ್ಳಾಪುರ ನೋಡ
ಚಿಕ್ಕಬಳ್ಳಾಪುರದ ನಂದಿ ಬೆಟ್ಟಕ್ಕೆ
ನೀ ಒಮ್ಮೆ ಬಂದು ನೋಡ

ಗುಲಾಬಿ ಹೂವ ನೋಡ
ಗುಡಿಬಂಡೆಯ ನೋಡ
ಗುಡಿಬಂಡೆಯಲ್ಲಿನ ಅಮಾನಿಸಾಗರ
ನೀ ಒಮ್ಮೆ ಬಂದು ನೋಡ

ಗೌರಿಯ ಹೂವ ನೋಡ
ಗೌರಿಬಿದನೂರು ನೋಡ
ಗೌರಿಬಿದನೂರಿನ ವಿದುರಾಶ್ವತ್ಥಕಟ್ಟೆ
ನೀ ಒಮ್ಮೆ ಬಂದು ನೋಡ

ಬಾಳೆಯ ಹೂವ ನೋಡ
ಬಾಗೇಪಲ್ಲಿಯ ನೋಡ
ಬಾಗೇಪಲ್ಲಿಯಲ್ಲಿ ಗುಮ್ಮನಾಯಕನ ಕೋಟೆ
ನೀ ಒಮ್ಮೆ ಬಂದು ನೋಡ


ಬುಧವಾರ, ಆಗಸ್ಟ್ 30, 2017

ಭರವಸೆಯ ಬರಹಗಾರ್ತಿ ಜೀನತ್‌ಉನ್ನೀಸಾ

      
ಶ್ರೀಮತಿ ಜೀನತ್‌ಉನ್ನೀಸಾ ಓರ್ವ ಉದಯೋನ್ಮುಖ ಬರಹಗಾರ್ತಿಯಾಗಿದ್ದು  ಹಲವು ವರ್ಷಗಳಿಂದ ಚಿಂತಾಮಣಿ ನಗರದಲ್ಲಿ ವಾಸವಾಗಿದ್ದಾರೆ. ಎಂ.ಎ.(ಹಿಂದಿ), ಪದವಿಧರೆಯಾಗಿರುವ ಇವರು ಈಗ  ಶಿಕ್ಷಕಿಯಾಗಿ ಚಿಂತಾಮಣಿ ನಗರದ ಎಂ.ಕೆ.ಬಿ.ಪಬ್ಲಿಕ್ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ವೃತ್ತಿಯಲ್ಲಿ ಶಿಕ್ಷಕಿಯಾದರೂ ಪ್ರವೃತ್ತಿಯಲ್ಲಿ ಉದಯೋನ್ಮುಖ ಬರಹಗಾರ್ತಿಯಾಗಿ  ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.

    ಬಾಲ್ಯದಿಂದಲೇ ಸಾಹಿತ್ಯದ ಬಗ್ಗೆ ಆಸಕ್ತಿಯನ್ನು ಹೊಂದಿದ ಇವರು ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುವ ಸಂದರ್ಭದಲ್ಲೇ ಹಲವಾರು ಸ್ವರಚಿತ ಕವನಗಳನ್ನು ರಚಿಸಿ ಎಲ್ಲರಿಂದಲ್ಲೂ ಸೈ ಎನಿಸಿಕೊಂಡಿದ್ದಾರೆ,ಪ್ರಚಲಿತ ವಿದ್ಯಮಾನಗಳ ,ನೈಜ ಘಟನೆಗಳ ಹಾಗು ಸ್ತ್ರೀಪರವಾದ ಅರ್ಥಪೂರ್ಣ ಕವನಗಳನ್ನು ರಚಿಸುವ ಮೂಲಕ ಕಾವ್ಯಾಸಕ್ತರ ಮನಸೂರೆಗೊಂಡಿದ್ದಾರೆ. ಹಲವು ಕವನಗಳು ಈಗಾಗಲೇ ನಾಡಿನ ಕೆಲವು ಪತ್ರಿಕೆ ಹಾಗು ವಿಶೇಷಾಂಕಗಳಲ್ಲಿ ಬೆಳಕು ಕಂಡಿವೆ. ತಾಲ್ಲೂಕು ಮತ್ತು ಜಿಲ್ಲೆಯಲ್ಲಿ ನಡೆಯುವ ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮ ಕವನಗಳನ್ನು ವಾಚಿಸುವುದರ ಮೂಲಕ ಕಾವ್ಯ ಪ್ರೇಮವನ್ನು ತೋರಿದ್ದಾರಲ್ಲದೆ, ಕೇಳುಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.


        ಜೀನತ್ ಉನ್ನೀಸಾ ರವರ ವಿಶೇಷವೇನೆಂದರೆ ಮಾತೃಭಾಷೆ ಉರ್ದು ಆಗಿದ್ದರೂ, ವ್ಯಾಸಂಗದ ಭಾಷೆ ಇಂಗ್ಲೀಷ್ ಆಗಿದ್ದರೂ, ಬೋಧಿಸುವ ಭಾಷೆ ಹಿಂದಿಯಾಗಿದ್ದರೂ, ಸಾಹಿತ್ಯದ ಭಾಷೆಯನ್ನಾಗಿ ಕನ್ನಡವನ್ನು ಆಯ್ಕೆ ಮಾಡಿಕೊಂಡಿರುವ ಇವರು ಅಚ್ಚಕನ್ನಡದಲ್ಲಿ ಬರಹಗಳನ್ನು ರಚಿಸುವ ಮೂಲಕ ತಮ್ಮ ಕನ್ನಡಾಭಿಮಾನವನ್ನು ಮೆರೆಯುತ್ತಿದ್ದಾರೆ. ಇತ್ತೀಚೆಗೆ ಕುವೆಂಪು ಜನ್ಮದಿನೋತ್ಸವದ ಅಂಗವಾಗಿ ಚಿಕ್ಕಬಳ್ಳಾಪುರದ ಕರ್ನಾಟಕ ವಚನ ಸಾಹಿತ್ಯ ಪರಿಷತ್ತಿನ ವತಿಯಿಂದ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ ಅತ್ಯುತ್ತಮವಾಗಿ ಪ್ರಬಂಧ ಬರೆಯುವ ಮೂಲಕ ದ್ವಿತೀಯ ಸ್ಥಾನವನ್ನು ಪಡೆದು ತಾಲ್ಲೂಕಿಗೆ ಕೀರ್ತಿ ತಂದಿದ್ದಾರೆ. ಮೂಲತಃ ತುಮಕೂರು ಜಿಲ್ಲೆಯವರಾಗಿರುವ ಇವರು ಸರಳ ವ್ಯಕ್ತಿತ್ವದ ಮೃದು ಸ್ವಭಾವದ ಹಸನ್ಮುಖಿಯಾಗಿರುವ ಇವರು ಸ್ನೇಹಪರ ಜೀವಿಯಾಗಿದ್ದಾರೆ.ಎಲ್ಲರೊಂದಿಗೂ ನಗು ನಗುತ್ತಾ ಮಾತನಾಡುವ ಇವರು ವಿದ್ಯಾರ್ಥಿಗಳಿಗೂ ಅಚ್ಚಮೆಚ್ಚಿನ ಶಿಕ್ಷಕಿಯಾಗಿದ್ದಾರೆ. ಶಾಲೆಯಲ್ಲಿಯೂ ಜಡ್.ಯು.ಮೇಡಂ ಎಂದೇ ಖ್ಯಾತರಾಗಿದ್ದರೆ. ಜೀನತ್ ಉನ್ನೀಸಾ ರವರು ಕರಕುಶಲ ಕಲೆಯಲ್ಲೂ ಸಹ ಎತ್ತಿದ ಕೈ ಎಂದರೆ ತಪ್ಪಾಗಲಾರದು ಏಕೆಂದರೆ ತಮ್ಮ ಶಾಲೆಯ ಮಕ್ಕಳಿಗೆ ತ್ಯಾಜ್ಯ ವಸ್ತುಗಳಿಂದ, ಕಾಗದದಿಂದ, ನೀರಿನ ಬಾಟಲ್ ಗಳಿಂದ ವಿವಿಧ ರೀತಿಯ ಕರಕುಶಲ ಕಲೆಯನ್ನು ಕಲಿಸುತ್ತಿದ್ದಾರೆ.


     ಹಲವು ವರ್ಷಗಳ ಕಾಲ ಸ್ಥಗಿತಗೊಂಡಿದ್ದ ತನ್ನ ಸಾಹಿತ್ಯಿಕ ಚಟುವಟಿಕೆಯೂ ಮತ್ತೆ ಮುಂದುವರಿಯುವುದಕ್ಕೆ ಚಿಂತಾಮಣಿ ತಾಲ್ಲೂಕು ಕನ್ನಡ ಸಾಹಿತ್ಯ ಬಳಗ ಹಾಗು ಸಿರಿಗನ್ನಡ ವೇದಿಕೆಗಳು ಸಹಕಾರ ನೀಡುತ್ತಿರುವುದೇ ಮುಖ್ಯ ಕಾರಣವಾಗಿದೆ ಎಂಬುದು ಜೀನತ್‌ಉನ್ನೀಸಾ ರವರ ಮನದಾಳದ ಮಾತಾಗಿದೆ. ಇವರಿಗೆ ಇವರ ಪತಿ ಸೈಯದ್ ಅನ್ವರ್ ಪಾಷ ರವರು ಸಹ ಬೆನ್ನೆಲುಬಾಗಿ ನಿಂತು ಸಹಕರಿಸುತ್ತಿರುವುದು ಇವರ ಸಾಹಿತ್ಯ ಕೃಷಿಯು ಇಮ್ಮಡಿಯಾಗಲು ಕಾರಣವಾಗಿದೆ. ತಾನು ಈ ಮಟ್ಟದಲ್ಲಿ ಸಾಧನೆ ಮಾಡಲು ಇವರ ಶಿಕ್ಷಕರಾದ ಸಂಪತ್ ಕುಮಾರ್ ರವರ ಸಹಕಾರವನ್ನು ಜೀನತ್ ಉನ್ನೀಸಾ ರವರು ಸದಾ ನೆನೆಯುತ್ತಾ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುವುದನ್ನು ಮರೆಯುವುದಿಲ್ಲ. ಪ್ರಸ್ತುತ ಜೀನತ್‌ಉನ್ನೀಸಾರವರು ಚಿಂತಾಮಣಿ ಕನ್ನಡ ಕವಿವಾಣಿ ಪತ್ರಿಕೆಯ ಚಿಂತಾಮಣಿ ತಾಲ್ಲೂಕು ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
    ಕೋಲಾರ ಮತ್ತು ಚಿಕ್ಕಬಳ್ಳಾಪುರ ಈ ಉಭಯ ಜಿಲ್ಲೆಗಳಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರ ಬಹುತೇಕ ಕಡಿಮೆಯಾಗುತ್ತಿರುವ ಈ ಸಂದರ್ಭದಲ್ಲಿ ಪ್ರತಿಭಾವಂತ ಬರಗಾರ್ತಿಯಾಗಿ ಹೊರ ಬರುತ್ತಿರುವ ಜೀನತ್‌ಉನ್ನೀಸಾ ರವರಿಗೆ ಮುಂದಿನ ದಿನಗಳಲ್ಲೂ ಸಹಕಾರ ಮತ್ತು ಪ್ರೋತ್ಸಾಹಗಳು ದೊರೆತಲ್ಲಿ ಅವರೊಬ್ಬ ಮಾದರಿ ಕವಯತ್ರಿಯಾಗುವುದರಲ್ಲಿ ಸಂದೇಹವಿಲ್ಲ.

********************** ಮುಕ್ತಾಯ **********************


ಜೀನತ್ ಉನ್ನೀಸಾರಿಗೆ "ಸಾಹಿತ್ಯ ಸಾಧಕಿ" ಪ್ರಶಸ್ತಿ

2017ನೇ ಸಾಲಿನ "ಸಾಹಿತ್ಯ ಸಾಧಕಿ"
ಕನ್ನಡ ಕವಿವಾಣಿ ಪತ್ರಿಕೆ ವತಿಯಿಂದ ಉದಯೋನ್ಮುಖ ಲೇಖಕಿ, ಕವಿಯತ್ರಿಯಾದ ಶ್ರೀಮತಿ ಜೀನತ್ ಉನ್ನೀಸಾರಿಗೆ 2017ನೇ ಸಾಲಿನ "ಸಾಹಿತ್ಯ ಸಾಧಕಿ" ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಪತ್ರಿಕೆಯ ಸಂಪಾದಕರಾದ ಶ್ರೀ ಕೆ.ಎನ್.ಅಕ್ರಂಪಾಷ, ಉಪಸಂಪಾದಕರಾದ ಶ್ರೀಮತಿ ಹಸೀನಾ ಬೇಗಂ, ಪತ್ರಿಕೆಯ ಗೌರವ ಸಲಹೆಗಾರರಾದ ಶ್ರೀ ಸಿ.ಬಿ.ಹನುಮಂತಪ್ಪ ಹಾಗೂ ಶ್ರೀ ಶಿ.ಮ.ಮಂಜುನಾಥ್ ರವರು, ಮತ್ತು ಇತರ ಕನ್ನಡ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.

ಪ್ರಶಸ್ತಿ ಪ್ರದಾನ ಸಮಾರಂಭ


ಮಾದರಿ ಶಿಕ್ಷಕಿ ಬಿ.ಟಿ.ಗೀತಮ್ಮ



ಬಿ.ಟಿ.ಗೀತಮ್ಮನವರು ಮಾದರಿ ಶಿಕ್ಷಕಿ ಎಂದೇ ಪ್ರಸಿದ್ಧರಾದವರು. ಬಿ.ಟಿ.ಗೀತಮ್ಮ  ಎಂದರೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಜನರಿಗೆ ಅಚ್ಚುಮೆಚ್ಚಿನ ವ್ಯಕ್ತಿಯಾಗಿದ್ದಾರೆ. ಎಂ.ಎ ಪದವೀಧರೆಯಾಗಿರುವ ಗೀತಮ್ಮನವರು  ಪ್ರಸ್ತುತ ಶಿಕ್ಷಕಿಯಾಗಿ ದಾವಣಗೆರೆ ಜಿಲ್ಲೆಯ ಬೆಣ್ಣೆಹಳ್ಳಿಯ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸದರಿ ಶಾಲೆಯಲ್ಲಿ ಮಕ್ಕಳಿಗೆ ಪ್ರೀತಿಯ ಶಿಕ್ಷಕಿಯಾಗಿದ್ದಾರೆ. ತಾನು ಕೆಲಸ ನಿರ್ವಹಿಸುತ್ತಿರುವ ಶಾಲೆಯನ್ನು ಖಾಸಗಿ ಶಾಲೆಗಳನ್ನು ಮೀರಿಸುವಂತೆ ಮಾಡಿರುವುದು ಗಮನಾರ್ಹ ಅಂಶವಾಗಿದೆ. ಮಕ್ಕಳೊಂದಿಗೆ ಮಗುವಂತೆ ಬೆರೆತು ಉತ್ತಮವಾಗಿ ಕಲಿಸುತ್ತಿರುವ ಅಪರೂಪದ ಅದರ್ಶ ಶಿಕ್ಷಕಿಯಾಗಿದ್ದಾರೆ.



     ಇಷ್ಟೇ ಅಲ್ಲದೆ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ ಅವರನ್ನು ಮತ್ತೆ ಶಾಲೆಗೆ ಕರೆತರುವ ಮೂಲಕ ಅನೇಕ ಬಡಮಕ್ಕಳ ಬಾಳಲ್ಲಿ ಬೆಳಕನ್ನು ಮೂಡಿಸಿದ್ದಾರೆ. ಜೊತೆಗೆ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುವ ಬೇಸಿಗೆ ಶಿಬಿರವನ್ನು ತಾನು ಕೆಲಸ ಮಾಡುವ ಶಾಲೆಯಲ್ಲಿಯೇ ನಿರ್ವಹಿಸಿ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಜೊತೆಗೆ ಸಮುದಾಯದ ಸಹಕಾರದಿಂದ ಸರ್ಕಾರಿ ಶಾಲೆಗಳನ್ನು ಇನ್ನಷ್ಟು ಉತ್ತಮಪಡಿಸಲು ಮತ್ತು ಮಕ್ಕಳ ಕಲಿಕಾ ಪ್ರಗತಿಯನ್ನು ಹೆಚ್ಚಿಸಲು ಸಮುದಾಯದಿಂದ ದೇಣಿಗೆ ಸಂಗ್ರಹಿಸುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಷಯವಾಗಿದೆ. ಪ್ರತಿಭಾವಂತ ವಿದ್ಯಾರ್ಥಿಗಳು ಬಡತನದಿಂದ ಶಾಲೆ ಬಿಟ್ಟರೆ ಅವರ ಮನೆಗೆ ತೆರಳಿ ಅವರ ಪೋಷಕರಿಗೆ ಬುದ್ಧಿ ಹೇಳಿ ಬಡತನ ಶಿಕ್ಷಣಕ್ಕೆ ಅಡ್ಡಿಯಾಗುವುದಿಲ್ಲ ಎಂದು ತಿಳಿಸಿ ಆ ವಿದ್ಯಾರ್ಥಿಯ ವ್ಯಾಸಂಗದ ಜವಾಬ್ದಾರಿಯನ್ನು ತಾನು ವಹಿಸಿದ್ದಾರೆ.

    ಅಷ್ಟೇ ಅಲ್ಲದೆ ಮಕ್ಕಳಿಗೆ ಕಲಿಕೆಯಲ್ಲಿ ಇರಬಹುದಾದ ಸಮಸ್ಯೆಗಳನ್ನು ಗುರುತಿಸಿ ಕ್ರಿಯಾಸಂಶೋಧಕನೆಯ ಮೂಲಕ ಕಲಿಕಾ ಸಮಸ್ಯೆಯನ್ನು ಪರಿಹರಿಸಿ ಸಹಕರಿಸುತ್ತಿದ್ದಾರೆ. ಗೀತಮ್ಮ ನವರು ಮಾಡುತ್ತಿರುವ ಇಂತಹ ಕಾರ್ಯಗಳಲ್ಲಿ ಬಹಳ ಮುಖ್ಯವಾದುದೆಂದರೆ ಇತ್ತೀಚೆಗೆ ಪೋಷಕರು ಖಾಸಗಿ ಶಾಲೆಗಳ ವ್ಯಾಮೋಹಕ್ಕೆ ಒಳಗಾಗಿ ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸದಿರುವುದನ್ನು ನಾವು ಕಾಣುತ್ತಿದ್ದೇವೆ. ಆದರೆ ಗೀತಮ್ಮನವರು ತಾನು ಕಾರ್ಯನಿರ್ವಹಿಸುವ ಸರ್ಕಾರಿ ಶಾಲೆಯು ಯಾವುದೇ ಕಾನ್ವೆಂಟ್ ಶಾಲೆಗಿಂತ ಕಡಿಮೆಯಿಲ್ಲವೆಂಬಂತೆ ಖಾಸಗಿ ಶಾಲಾ ಮಕ್ಕಳಿಗೆ ಇರುವಂತೆಯೇ ಇವರ ಶಾಲಾ ಮಕ್ಕಳಿಗು ವಿಶೇಷ ಸಮವಸ್ತ್ರ, ಟೈ, ಬೆಲ್ಟ್, ಶೂಗಳನ್ನು ನೀಡುತ್ತಿದ್ದಾರೆ. ಗೀತಮ್ಮ ನವರು ಕರಕುಶಲ ಕಲೆಯಲ್ಲೂ ಸಹ ಎತ್ತಿದ ಕೈ ಎಂದರೆ ತಪ್ಪಾಗಲಾರದು ಏಕೆಂದರೆ ತಮ್ಮ ಶಾಲೆಯ ಮಕ್ಕಳಿಗೆ ತ್ಯಾಜ್ಯ ವಸ್ತುಗಳಿಂದ, ಕಾಗದದಿಂದ, ನೀರಿನ ಬಾಟಲ್ ಗಳಿಂದ ವಿವಿಧ ರೀತಿಯ ಕರಕುಶಲ ಕಲೆಯನ್ನು ಕಲಿಸುತ್ತಿದ್ದಾರೆ.ಅಷ್ಟೇ ಅಲ್ಲದೆ ತಾಲ್ಲೂಕು ಜಿಲ್ಲಾ ಮಟ್ಟದಲ್ಲಿ ನಡೆದಿರುವ ಕರಕುಶಲ ಕಲೆಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಅನೇಕ ಬಹುಮಾನಗಳನ್ನು ಪಡೆದಿರುವುದು ಗಮನಾರ್ಹ ಅಂಶವಾಗಿದೆ.



    ಬರೀ ಇಷ್ಟೇ ಅಲ್ಲದೇ ಬಿ.ಟಿ.ಗೀತಮ್ಮನವರು ಸಾಹಿತ್ಯ ಕೃಷಿಯಲ್ಲೂ ತೊಡಗಿರುವುದು ಸಂತೋಷದ ಸಂಗತಿಯಾಗಿದೆ. ಗೀತಮ್ಮನವರು ವಿಚಾರ ಪೂರ್ಣ, ಪ್ರಚಲಿತ, ಸಾಮಾಜಿಕ ಸಮಸ್ಯೆ, ಮಹಿಳೆಯ ದೌರ್ಜನ್ಯ, ವರದಕ್ಷಿಣೆ, ಬಾಲ್ಯ ವಿವಾಹ ಸೇರಿದಂತೆ ಹಲವಾರು ವಿಚಾರ ಪೂರ್ಣ ಕವನ, ಚುಟುಕು ಲೇಖನಗಳಿಂದ ಪ್ರಸಿದ್ದಿಯಾಗಿದ್ದಾರೆ. ಇವರ ಹಲವು ಬರಹಗಳು ಈಗಾಗಲೇ ನಾಡಿನ ಹಲವು ಪತ್ರಿಕೆಗಳಲ್ಲಿ, ನಿಯತಕಾಲಿಕೆಗಳಲ್ಲಿ, ಕವನಸಂಕಲನಗಳಲ್ಲಿ ಹಾಗೂ ಸ್ಮರಣ ಸಂಚಿಕೆಗಳಲ್ಲಿ ,ವಾರಪತ್ರಿಕೆ ,ಮಾಸಪತ್ರಿಕೆಗಳಲ್ಲಿ ಬೆಳಕು ಕಂಡಿವೆ.

  ನೇರ ನುಡಿ, ಮೃದು ಸ್ವಭಾವದ, ಹಸನ್ಮುಖ ವ್ಯಕ್ತಿಯಾಗಿರುವ ಗೀತಮ್ಮ ರವರಿಗೆ ಹಲವಾರು ರಾಜ್ಯ ಹಾಗೂ ಜಿಲ್ಲಾ ಮಟ್ಟದ ಪ್ರಶಸ್ತಿಗಳು ಲಭಿಸಿವೆ. ಇತ್ತೀಚೆಗೆ ಬೀದರ್ ನ ದೇಶಪಾಂಡೆ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಇವರ ಸಾಹಿತ್ಯ ಮತ್ತು ಶಿಕ್ಷಣ ಸೇವೆಯನ್ನು ಗುರುತಿಸಿ ಕಾವ್ಯಶ್ರೀ ರತ್ನ  ಹಾಗೂ ಕನ್ನಡ ಕವಿವಾಣಿ ಪತ್ರಿಕೆಯ ವತಿಯಿಂದ ರಾಜ್ಯಮಟ್ಟದ ಕಾವ್ಯ ದೀಪ್ತಿ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಗೀತಮ್ಮನವರಿಗೆ ೨೦೦೮ರಲ್ಲಿ ಪಾಠೋಪಕರಣ ತಯಾರಿಕಾ ಸ್ಪರ್ಧೆಯಲ್ಲಿ ರಾಜ್ಯಪ್ರಶಸ್ತಿ, ೨೦೧೪ರಲ್ಲಿ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ, ಕನಕಕಣ್ಮಿ ಪ್ರಶಸ್ತಿ, ವಿಶ್ವಮಾನ್ಯಕನ್ನಡಿಗ ಪ್ರಶಸ್ತಿ, ಶಿಕ್ಷಣ ಸೇವಾ ರತ್ನ, ಸಾಧಕ ಸಿರಿ ರತ್ನ ಪ್ರಶಸ್ತಿಗಳು ಲಭಿಸಿವೆ.

    ಇಷ್ಟೆಲ್ಲಾ ಸೇವೆಯನ್ನು ಮಾಡುತ್ತಿರುವ ಗೀತಮ್ಮನವರು ರವರು ಎಂದೂ ಪ್ರಶಸ್ತಿ ಪುರಸ್ಕಾರಗಳನ್ನು ಬಯಸಿದವರಲ್ಲ.   ಸರ್ಕಾರಿ ಶಾಲೆ ಶಿಕ್ಷಕಿಯಾದರೂ ಯಾವುದೇ ಜಾತಿ ಬೇಧವಿಲ್ಲದೆ ಎಲ್ಲರೊಂದಿಗೆ ಬೆರೆಯುತ್ತಾ, ಗರ್ವದಿಂದ ಮೆರೆಯದೆ ಸರಳ ಜೀವನ ನಡೆಸುತ್ತಿದ್ದಾರೆ. ಗೀತಮ್ಮನವರಿಗೆ ಅವರ ಪತಿ ಕೆ.ಎಸ್.ಮಂಜಣ್ಣನವರು ಬೆನ್ನೆಲುಬಾಗಿ ನಿಂತು ಪ್ರೋತ್ಸಾಹಿಸುತ್ತಿರುವುದು ಸಂತೋಷದ ಹಾಗೂ ಅಭಿನಂದನೀಯ ವಿಷಯವಾಗಿದೆ .ಇಷ್ಟೆಲ್ಲಾ ಸಾಧನೆ ಸೇವೆ ಮಾಡುತ್ತಿರುವ ಗೀತಮ್ಮನವರ  ಬದುಕು ಸಾಧನೆ ಇತರರಿಗೆ ಮಾದರಿಯಾಗಿದೆ.

ಸಂಗ್ರಹ:
ಕೆ.ಎನ್.ಅಕ್ರಂಪಾಷ
ಸಂಪಾದಕರು
ಕನ್ನಡ ಕವಿವಾಣಿ ಪತ್ರಿಕೆ

ಮಂಗಳವಾರ, ಆಗಸ್ಟ್ 29, 2017

ಕರ್ನಾಟಕದ ನಾಡಗೀತೆ

ಪ್ರಿಯ ಓದುಗರೆ,

ಅಂತರ್ಜಾಲದ ಬಳಕೆ ಸಾಮಾನ್ಯವಾಗಿರುವ ಈಗಿನ ಯುಗದಲ್ಲಿ, ಪ್ರಪಂಚದ ಯಾವುದೇ ಮೂಲೆಯಿಂದ ಬೇಕಾದ ಮಾಹಿತಿಯನ್ನು ಪಡೆಯುವುದು ತುಂಬಾ ಸುಲಭವಾಗಿಬಿಟ್ಟಿದೆ. ಇದೇ ರೀತಿ, ರಾಷ್ಟ್ರಕವಿ ಕುವೆಂಪು ವಿರಚಿತ ನಮ್ಮ ನಾಡಗೀತೆಯನ್ನು ಪಡೆಯುವುದು ಕೂಡ ಸುಲಭ. ಆದರೂ , ಅಂತರ್ಜಾಲದಲ್ಲಿ ನಾಡಗೀತೆಯನ್ನು ಹುಡುಕುವವರಿಗೆ ಇನ್ನಷ್ಟು ಸುಲಭವಾಗಿ ಸಿಗುವಂತೆ ಮಾಡಲು ನಮ್ಮ ಅಳಿಲು ಸೇವೆಯಾಗಿ ನಾವು ಇಲ್ಲಿ ಇನ್ನೊಮ್ಮೆ ನಾಡಗೀತೆಯನ್ನು ವಿವಿಧ ತಾಂತ್ರಿಕ ರೂಪಗಳಲ್ಲಿ ಪ್ರಕಟಿಸುತ್ತಿದ್ದೇವೆ. ವಿವಿಧ ತಾಂತ್ರಿಕ ರೂಪಗಳಾದ ಪದ್ಯ (ಟೆಕ್ಸ್ಟ್), ಚಿತ್ರ (ಇಮೇಜ್), ಹಾಗೂ ದೃಶ್ಯ ( ವೀಡಿಯೋ) ಗಳಲ್ಲಿ ಪ್ರಕಟಿಸಲಾಗಿದೆ.

ಪದ್ಯ (ಟೆಕ್ಸ್ಟ್) ರೂಪದಲ್ಲಿ ನಾಡಗೀತೆಯನ್ನು ಈ ಕೆಳಗೆ ಕೊಡಲಾಗಿದೆ:
ಜಯ ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ!

ಜಯ ಸುಂದರ ನದಿ ವನಗಳ ನಾಡೇ,
ಜಯ ಹೇ ರಸಋಷಿಗಳ ಬೀಡೆ!
ಭೂದೇವಿಯ ಮುಕುಟದ ನವಮಣಿಯೆ,
ಗಂಧದ ಚಂದದ ಹೊನ್ನಿನ ಗಣಿಯೆ,
ರಾಘವ ಮಧುಸೂಧನ ರವತರಿಸಿದ
ಭಾರತ ಜನನಿಯ ತನುಜಾತೇ
ಜಯಹೇ ಕರ್ನಾಟಕ ಮಾತೆ

ಜನನಿಯ ಜೋಗುಳ ವೇದದ ಘೋಷ,
ಜನನಿಗೆ ಜೀವವು ನಿನ್ನಾವೇಶ!
ಹಸುರಿನ ಗಿರಿಗಳ ಸಾಲೇ,
ನಿನ್ನಯ ಕೊರಳಿನ ಮಾಲೆ!
ಕಪಿಲ ಪತಂಜಲ ಗೌತಮ ಜಿನನುತ,
ಭಾರತ ಜನನಿಯ ತನುಜಾತೆ!
ಜಯ ಹೇ ಕರ್ನಾಟಕ ಮಾತೆ!

ಶಂಕರ ರಾಮಾನುಜ ವಿದ್ಯಾರಣ್ಯ,
ಬಸವೇಶ್ವರ ಮಧ್ವರ ದಿವ್ಯಾರಣ್ಯ!
ರನ್ನ ಷಡಕ್ಷರಿ ಪೊನ್ನ,
ಪಂಪ ಲಕುಮಿಪತಿ ಜನ್ನ!
ಕುಮಾರವ್ಯಾಸರ ಮಂಗಳಧಾಮ!
ಕವಿಕೋಗಿಲೆಗಳ ಪುಣ್ಯಾರಾಮ!
ನಾನಕ ರಮಾನಂದ ಕಬೀರರ,
ಭಾರತ ಜನನಿಯ ತನುಜಾತೆ!
ಜಯ ಹೇ ಕರ್ನಾಟಕ ಮಾತೆ!

ತೈಲಪ ಹೊಯ್ಸಳರಾಳಿದ ನಾಡೆ,
ಡಂಕಣ ಜಕಣರ ನೆಚ್ಚಿನ ಬೀಡೆ!
ಕೃಷ್ಣ ಶರಾವತಿ ತುಂಗಾ,
ಕಾವೇರಿಯ ವರ ರಂಗ,
ಚೈತನ್ಯ ಪರಮಹಂಸ ವಿವೇಕರ
ಭಾರತ ಜನನಿಯ ತನುಜಾತೆ!
ಜಯ ಹೇ ಕರ್ನಾಟಕ ಮಾತೆ!

ಸರ್ವಜನಾಂಗದ ಶಾಂತಿಯ ತೋಟ,
ರಸಿಕರ ಕಂಗಳ ಸೆಳೆಯುವ ನೋಟ!
ಹಿಂದೂ ಕ್ರೈಸ್ತ ಮುಸಲ್ಮಾನ,
ಪಾರಸಿಕ ಜೈನರುದ್ಯಾನ
ಜನಕನ ಹೋಲುವ ದೊರೆಗಳ ಧಾಮ,
ಗಾಯಕ ವೈಣಿಕರಾರಾಮ.

ಕನ್ನಡ ನುಡಿ ಕುಣಿದಾಡುವ ಗೇಹ!
ಕನ್ನಡ ತಾಯಿಯ ಮಕ್ಕಳ ದೇಹ!
ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ!
ಜಯ ಸುಂದರ ನದಿ ವನಗಳ ನಾಡೆ,
ಜಯ ಹೇ ರಸಋಷಿಗಳ ಬೀಡೆ!


ಚಿತ್ರ (ಇಮೇಜ್) ರೂಪದಲ್ಲಿ ನಾಡಗೀತೆಯನ್ನು ಈ ಕೆಳಗೆ ಕೊಡಲಾಗಿದೆ:


ದೃಶ್ಯ ( ವೀಡಿಯೋ) ರೂಪದಲ್ಲಿ ನಮ್ಮ ನಾಡಗೀತೆಯನ್ನು ನೋಡಲು ಈ ಕೆಳಗಿನ ಯೂಟ್ಯೂಬ್ ಕೊಂಡಿ (ಲಿಂಕ್)ಯನ್ನು ಒತ್ತಿ:


ಭಾನುವಾರ, ಆಗಸ್ಟ್ 27, 2017

ಕನ್ನಡದ ಕಬೀರರು ಮೆಚ್ಚಿದ ಕವಿವಾಣಿ

"ಕನ್ನಡದ ಕಬೀರ" ಎಂದೇ ಪ್ರಸಿದ್ದರಾಗಿರುವ ಸೂಫಿ ಪರಂಪರೆಯ ಪುನರುಜ್ಜೀವನ ಹಾಗೂ ಸರ್ವಧರ್ಮ ಭಾವೈಕ್ಯತೆಗೆ ಶ್ರಮಿಸುತ್ತಿರುವ ಬಾಗಲಕೋಟೆಯ ಮಹಾಲಿಂಗಪುರದ ಇಬ್ರಾಹಿಂ ಸುತಾರಾ ರವರನ್ನು ಸಂಪಾದಕ ಕೆ.ಎನ್. ಅಕ್ರಂಪಾಷರವರು ಭೇಟಿಯಾಗಿ ಕವಿವಾಣಿ ಪತ್ರಿಕೆಯನ್ನು ನೀಡಿದರು. ಪತ್ರಿಕೆಯನ್ನು ಓದಿದ ಸುತಾರಾ ರವರು ಕವಿವಾಣಿ ಪತ್ರಿಕೆಯ ಕನ್ನಡ ಸಾಹಿತ್ಯ ಸೇವೆಯನ್ನು ಮುಕ್ತಕಂಠದಿಂದ ಕೊಂಡಾಡಿದರು. ಜೊತೆಗೆ ಸಂಪಾದಕರನ್ನು ಹಾಗೂ ಪತ್ರಿಕೆಯ ಬಳಗವನ್ನು ಅಭಿನಂದಿಸಿದರು.