ಗುರುವಾರ, ಡಿಸೆಂಬರ್ 28, 2017

ರಾಷ್ಟ್ರಕವಿ ಕುವೆಂಪುರವರಿಗೆ ಗೂಗಲ್ ಗೌರವ


ವಿಶ್ವಮಾನವ ರಾಷ್ಟ್ರಕವಿ ಕುವೆಂಪುರವರ ೧೧೩ನೇ ಜಯಂತಿಯ ಸ್ಮರಣಾರ್ಥವಾಗಿ ಪ್ರಖ್ಯಾತ ಗೂಗಲ್ ಸಂಸ್ಥೆಯು ತನ್ನ ಮುಖ್ಯಪುಟದ ಡೂಡಲ್ ಚಿತ್ರದಲ್ಲಿ ಕುವೆಂಪು ಭಾವಚಿತ್ರ ಮತ್ತು ಕನ್ನಡ ದಲ್ಲಿ "ಗೂಗಲ್" ಶಬ್ದವನ್ನು ಬಳಸಿ ತನ್ನ ಗೌರವವನ್ನು ಸೂಚಿಸಿದೆ. ಈ ಚಿತ್ರದಲ್ಲಿ ಕುವೆಂಪುರವರು ಕುಪ್ಪಳ್ಳಿಯ ಪ್ರಕೃತಿಯ ನಡುವೆ ಕುಳಿತು ಸಾಹಿತ್ಯ ರಚಿಸುತ್ತಿರುವಂತೆ ಪ್ರದರ್ಶಿಸಲಾಗಿದೆ. ಪ್ರತಿದಿನ ಕೋಟ್ಯಾಂತರ ಮಂದಿ ಗೂಗಲ್ ಬಳಸಿದಾಗ ಈ ಚಿತ್ರವು ಅವರ ಮುಂದೆ ಪ್ರಕಟಗೊಳ್ಳುತ್ತದೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯಮಟ್ಟದಲ್ಲಿ ಕುವೆಂಪುರವರ ಪರಿಚಯಕ್ಕೆ ಇದು ಸಹಕಾರಿಯಾಗಲಿದೆ.

ರಾಷ್ಟ್ರಕವಿ ಕುವೆಂಪು ಜಯಂತಿಯ ಶುಭಾಶಯಗಳು

ಕನ್ನಡ ಕವಿವಾಣಿ ಪತ್ರಿಕೆಯ ವತಿಯಿಂದ ವಿಶ್ವಮಾನವ ರಾಷ್ಟ್ರಕವಿ ಕುವೆಂಪುರವರ ೧೧೩ನೇ ಜಯಂತಿಯ ಶುಭಾಶಯಗಳು.


ಭಾನುವಾರ, ಡಿಸೆಂಬರ್ 24, 2017

ಬುಧವಾರ, ಡಿಸೆಂಬರ್ 13, 2017

ಯುವರಾಣಿಗೆ ಪಟ್ಟಾಭಿಷೇಕ - ಸಣ್ಣ ಕಥೆ

ಅಮರಾವತಿ ಎಂಬ ರಾಜ್ಯವನ್ನು ವಿಜಯವರ್ಮ ಎಂಬ ರಾಜ ಆಳುತ್ತಿದ್ದನು. ಆತನಿಗೆ ಇಬ್ಬರು ಗಂಡು ಮಕ್ಕಳು, ಒಂದು ಹೆಣ್ಣು ಮಗು ಇತ್ತು. ವಿಜಯವರ್ಮ ಅರವತ್ತು ವರ್ಷಗಳ ಕಾಲ ಉತ್ತಮ ಆಡಳಿತ ನಡೆಸಿ ಜನರ ಹೃದಯವನ್ನು ಗೆದ್ದ ರಾಜ ವೃದ್ಧನಾದನು. ತನ್ನ ಮರಣದ ನಂತರ ರಾಜನಾಗಿ ಯಾರಿಗೆ ಪಟ್ಟಾಭಿಷೇಕ ಮಾಡುವು ಎಂಬ ವಿಷಯದ ಕುರಿತು ವಿಜಯ ವರ್ಮನಲ್ಲಿ ಆಲೋಚನೆ ಮೂಡಿತು.



ದೊಡ್ಡ ಮಗ ನರಸಿಂಹನು ಯಾವಾಗಲೂ ಹುಡಿಗಿಯರೊಂದಿಗೆ ನೃತ್ಯ ಮಾಡುವುದು, ಸಂಗೀತ ಕೇಳುವುದು, ಹೊಟ್ಟೆ ತುಂಬಾ ತಿನ್ನುವುದನ್ನು ಬಿಟ್ಟರೆ ಪ್ರಜೆಗಳ ಬಗ್ಗೆ, ರಾಜಕೀಯದ ಬಗ್ಗೆ ಆತನಿಗೆ ಶ್ರದ್ಧೆಯೇ ಇರಲಿಲ್ಲ. ಎರಡನೇ ಮಗ ರಾಯಣ್ಣ ಯಾವಾಗಲೂ ಬೇಟೆಗೆ ಹೋಗುತ್ತಿದ್ದನಲ್ಲದೆ, ಮದ್ಯಪಾನಕ್ಕೆ ಶರಣಾಗಿದ್ದನು. ಹೀಗೆ ತನ್ನ ಇಬ್ಬರು ಕುಮಾರರು ರಾಜ್ಯವನ್ನಾಳಲು ಯೋಗ್ಯರಲ್ಲ ಎಂಬ ವಿಷಯವನ್ನು ತಿಳಿದು ವಿಜಯವರ್ಮ ತುಂಬಾ ದುಃಖ ಪಟ್ಟನು. ಒಂದು ದಿನ ತನ್ನ ಮಂತ್ರಿಯೊಂದಿಗೆ ಪ್ರಸ್ತಾಪಿಸುತ್ತಾ ನನ್ನ ಇಬ್ಬರು ಕುಮಾರರು ಅಯೋಗ್ಯರು. ರಾಜ್ಯವನ್ನಾಳುವ ಆಸಕ್ತಿ ಇಲ್ಲದವರು, ಇನ್ನು ನಮ್ಮ ರಾಜ್ಯದ ಗತಿ ಏನು? ಎಂದನು.

ಅದಕ್ಕೆ ಮಹಾಮಂತ್ರಿ ನಿಜವೇ ಮಹಾರಾಜ! ಇಬ್ಬರು ಯುವರಾಜರಲ್ಲೂ ಒಬ್ಬರಿಗೂ ರಾಜ್ಯವನ್ನಾಳುವ ಸಾಮರ್ಥ್ಯ ಇಲ್ಲ. ಆದರೆ ನೀವು ತಮ್ಮ ಮಗಳಾದ ಯುವರಾಣಿಯ ವಿಷಯವನ್ನು ಮರೆತ್ತಿದ್ದೀರಿ. ಯುವರಾಣಿ ಬಹಳ ಬುದ್ಧಿವಂತೆ, ರಾಜಕೀಯದ ಬಗ್ಗೆ ಅಪಾರ ಆಸಕ್ತಿ ಉಳ್ಳವಳು, ಪ್ರತಿದಿನ ಪ್ರಜೆಗಳೊಂದಿಗೆ ಮಾತನಾಡಿ ಅವರ ಕಷ್ಟ ಸುಖಗಳನ್ನು ವಿಚಾರಿಸುತ್ತಾಳೆ. ಬಹಳ ಕ್ರಮಶಿಕ್ಷಣವಿದೆ. ನಾಯಕಿಯಾಗುವ ಅರ್ಹತೆ ಆಕೆಯಲ್ಲಿದೆ ಎಂಬುದು ನನ್ನ ನಂಬಿಕೆ ಎಂದನು.


ಮಂತ್ರಿಯ ಮಾತುಗಳನ್ನು ಆಲಿಸಿದ ಮಹಾರಾಜ ಆದರೆ ಯುವರಾಜರೇ ಹೊರತು ಯುವರಾಣಿ ರಾಜ್ಯವನ್ನಾಳುವುದು ನಮ್ಮ ಸಂಪ್ರದಾಯವಲ್ಲ! ಎಂದನು. ಅದಕ್ಕೆ ಮಂತ್ರಿ ಮಹಾರಾಜ! ಸಂಪ್ರದಾಯಗಳು ನಾಲ್ಕು ಜನರಿಗೆ ಒಳ್ಳೆಯದನ್ನು ಮಾಡುವ ಉದ್ದೇಶದಿಂದ ರೂಪಿತವಾಗಿವೆ. ಅದನ್ನು ಬದಲಿಸುವುದರಿಂದಾಗಿ ರಾಜ್ಯಕ್ಕೆ ಮತ್ತು ಪ್ರಜೆಗಳಿಗೆ ಒಳ್ಳೆಯದಾಗುತ್ತದೆ ಅಂದರೆ ಅದರಲ್ಲಿ ತಪ್ಪೇನು ಇಲ್ಲ ಎಂದನು. ಆಗ ವಿಜಯವರ್ಮ ಸಂತೋಷದಿಂದ ಯುವರಾಣಿಗೆ ಪಟ್ಟಾಭಿಷೇಕ ಮಾಡಿದನು.

ಪ್ರಾಣ ರಕ್ಷಿಸಿದ ಪೊದೆಗಳು - ಸಣ್ಣ ಕಥೆ

ಒಂದು ಕಾಡಿನಲ್ಲಿ  ಒಂದು ಸುಂದರವಾದ ಜಿಂಕೆ ವಾಸಿಸುತ್ತಿತ್ತು. ಅದು ದಿನವೆಲ್ಲಾ ಆಡುತ್ತಾ ನಲಿಯುತ್ತ ಸಂತೋಷದಿಂದ ಕಳೆಯುತ್ತಿತ್ತು. ಒಂದು ದಿನ  ಬೇಟೆಗಾರನೊಬ್ಬ ಆ ಕಾಡಿಗೆ ಬೇಟೆಗೆಂದು ಬಂದನು. ಅವನಿಗೆ ಒಂದು ಮರದ ಕೆಳಗೆ ಹುಲ್ಲು ಮೇಯುತ್ತಿದ್ದ ಜಿಂಕೆ ಕಾಣಿಸಿತು. ಜಿಂಕೆಗೂ ಸಹ ಆ ಬೇಟೆಗಾರ ಕಾಣಿಸಿದನು. ತಕ್ಷಣ ಅಲ್ಲಿಂದ ಜಿಂಕೆ ಓಡಲು ಆರಂಭಿಸಿತು. ಬೇಟೆಗಾರನೂ ಸಹ ವೇಗವಾಗಿ ಜಿಂಕೆಯನ್ನು ಹಿಂಬಾಲಿಸಿದನು. ಅದನ್ನು ಕಂಡು ಜಿಂಕೆ ಮತ್ತಷ್ಟು ವೇಗವಾಗಿ ಓಡಿ ದಾರಿಯ ಪಕ್ಕದಲ್ಲಿ ದಟ್ಟವಾಗಿ ಬೆಳೆದಿದ್ದ ಪೊದೆಗಳಲ್ಲಿ ಅವಿತುಕೊಂಡಿತು.


ಕೆಲವು ಕ್ಷಣಗಳ ನಂತರ ಬೇಟೆಗಾರನು ಆ ಪೊದೆಗಳ ಬಳಿಗೆ ಬಂದನು. ಆದರೆ ಆ ಪೊದೆಗಳು ಬಹಳ ದಟ್ಟವಾಗಿದ್ದರಿಂದ ಅಲ್ಲಿದ್ದ ಜಿಂಕೆ ಅವನಿಗೆ ಕಾಣಿಸಲಿಲ್ಲ. ನಂತರ ಬೇಟೆಗಾರ ಜಿಂಕೆಯನ್ನು ಹುಡುಕುತ್ತಾ ಮುಂದಕ್ಕೆ ಹೊರಟು ಹೋದನು. ಬೇಟೆಗಾರನು ಹೋದ ತಕ್ಷಣ  ಜಿಂಕೆ ಅಬ್ಬಾ! ಅಪಾಯ ತಪ್ಪಿತು, ಬದುಕಿತು ಬಡಜೀವ ಎಂದು ನಿಟ್ಟುಸಿರು ಬಿಟ್ಟಿತಲ್ಲದೆ ಅಲ್ಲಿಯೇ ನಿಂತು ಅ ಪೊದೆಗಳಿಗೆ ಆವರಿಸಿಕೊಂಡಿದ್ದ ಎಲೆ ಮತ್ತು ಹುಲ್ಲನ್ನು ಮೇಯಲಾರಂಭಿಸಿತು. ಆ ಸಂದರ್ಭದಲ್ಲಿ ಪೊದೆಗಳು ಅಲುಗಾಡಿದ್ದರಿಂದ ಶಬ್ದ ಬಂದಿತು . ಆ ಶಬ್ದವು ಹತ್ತಿರದಲ್ಲೇ ಇದ್ದ ಬೇಟೆಗಾರನಿಗೆ ಕೇಳಿಸಿತು. ಜಿಂಕೆ ಆ ಪೊದೆಗಳಲ್ಲಿಯೇ ಇದೇ ಎಂದು ಗ್ರಹಿಸಿದ ಆ ಬೇಟೆಗಾರ ತಕ್ಷಣ ಪೊದೆಯತ್ತ ಬಾಣವನ್ನು ಬಿಟ್ಟನು. ಆ ಬಾಣ ಗುರಿತಪ್ಪಿ ಜಿಂಕೆಯ ಪಕ್ಕದಿಂದ ಹಾದು ಹೋಯಿತು. ಇದರಿಂದ ಜಿಂಕೆಯು ಪ್ರಾಣಾಪಾಯದಿಂದ  ಪಾರಾಯಿತು. ನಂತರ ಕ್ಷಣವೂ ಆಲಸ್ಯ ಮಾಡದೆ ಅದು ಅಲ್ಲಿಂದ ಓಡಿಹೋಯಿತು.

ಅಪಾಯದಲ್ಲಿದ್ದ ನನ್ನನ್ನು ಆ ದಟ್ಟವಾದ ಪೊದೆಗಳು ರಕ್ಷಿಸಿದವು, ಆದರೆ ನಾನು ಕೃತಜ್ಞತೆಗಳನ್ನು ಹೇಳದೆ ಆ ಪೊದೆಗಳಿಗೆ ಆವರಿಸಿದ್ದ ಎಲೆ ಮತ್ತು ಹುಲ್ಲನ್ನೇ ತಿಂದಿದ್ದರಿಂದಲೇ ನಾನು ಪ್ರಾಣಾಪಾಯಕ್ಕೆ ಸಿಲುಕಬೇಕಾಯಿತು. ಆದರೆ ತನ್ನ ಅದೃಷ್ಟ ಚೆನ್ನಾಗಿದ್ದರಿಂದಾಗಿ ತನಗೇನು ಆಗಲಿಲ್ಲವೆಂದು ಮನದಲ್ಲೇ  ಹೇಳಿಕೊಂಡು, ತನ್ನ ಜೀವ ರಕ್ಷಿಸಿದ ಆ ಪೊದೆಗಳಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತ ಮುಂದೆ ಸಾಗಿತು  ಆ ಜಿಂಕೆ.

ಪಕ್ಷಿ ಹೇಳಿದ ನೀತಿ ಮಾತು - ಸಣ್ಣ ಕಥೆ

ರಾಮನಾಥಪುರ ಎಂಬ ಹಳ್ಳಿಯಲ್ಲಿ ಭೀಮಯ್ಯ ಎಂಬ ರೈತ ವಾಸಿಸುತ್ತಿದ್ದನು. ಭೀಮಯ್ಯನಿಗೆ ಒಂದು ತೋಟವಿತ್ತು.
ಭೀಮಯ್ಯನ ತೋಟದಲ್ಲಿನ ಒಂದು ಮರದ ಮೇಲೆ ಒಂದು ಪಕ್ಷಿ ಗೂಡನ್ನು ಕಟ್ಟಿಕೊಂಡು ಮರಿಗಳನ್ನು ಹಾಕಿತ್ತು. ಒಂದಿನ ಮಗನ ಜೊತೆ ತೋಟಕ್ಕೆ ಬಂದನು. ಮರಗಳನ್ನು ನೋಡಿದ ಭೀಮಯ್ಯ ಅಯ್ಯೋ!ಮರಗಳೆಲ್ಲಾ ಒಣಗಿಹೋಗಿವೆ. ನಾಳೆ ನಮ್ಮ ಬಂಧುಗಳನ್ನು ಕರೆದುಕೊಂಡು ಬಂದು ಈ ಮರಗಳನ್ನು ಕಡಿಸಿ ನಂತರ ಹೊಸಮರಗಳನ್ನು ನೆಡೋಣವೆಂದು ಮಗನಿಗೆ ಹೇಳಿದನು.


ಮರಿಗಳಿಗೆ ಆಹಾರವನ್ನು ತರಲು ಹೋಗಿದ್ದ ತಾಯಿಪಕ್ಷಿ ಮರಳಿ ಗೂಡಿಗೆ ಬಂದಾಗ ಅಮ್ಮ!ಈ ದಿನ ತೋಟಕ್ಕೆ ತೋಟದ ಮಾಲೀಕ ಭೀಮಯ್ಯ ಮತ್ತು ಆತನ ಮಗ ಬಂದಿದ್ದರು, ಬಂಧುಗಳನ್ನು ಕರೆಯತಂದು ನಾಳೆ ಈ ಮರಗಳನ್ನು ಕಡಿದು ಹಾಕುತ್ತಾರಂತೆಎಂದು ಮರಿಗಳು ಹೇಳಿದವು. ತಾಯಿಪಕ್ಷಿ ಅವರ ಮಾತುಗಳನ್ನು ಕೇಳಿ ಸುಮ್ಮನಾಯಿತು.

ಮರುದಿನ ಭೀಮಯ್ಯ ಮಗನ ಜೊತೆಗೂಡಿ ತೋಟಕ್ಕೆ ಬಂದು ನಾಳೆ ಕೂಲಿಯವರನ್ನು ಕರೆತಂದು ಈ ಮರಗಳನ್ನು ಕಡಿಸಿಬಿಡೋಣ!ಎಂದು ಭೀಮಯ್ಯ ಮಗನಿಗೆ ಹೇಳಿದನು. ಅವರ ಮಾತುಗಳನ್ನು ಕೇಳಿಸಿಕೊಂಡ ಮರಿಗಳು ,ಆಹಾರಕ್ಕಾಗಿ ಹೋಗಿದ್ದ ತಾಯಿ ಪಕ್ಷಿ ಮರಳಿ ಗೂಡಿಗೆ ಬಂದಾಗ ಮರಿಗಳು ಆ ವಿಷಯವನ್ನು ಹೇಳಿದರು. ಆದರೆ ತಾಯಿ ಪಕ್ಷಿ ಆ ವಿಷಯವನ್ನು ಕೇಳಿ ಸುಮ್ಮನಾಯಿತು. ಮೂರನೆ ದಿನ ಭೀಮಯ್ಯ ಮಗನೊಂದಿಗೆ ತೋಟಕ್ಕೆ ಬಂದು ನಾಳೆ ಸ್ನೇಹಿತರನ್ನು ಕರೆತಂದು ಮರಗಳನ್ನು ಕಡಿಸೋಣ!ಎಂದನು. ಎಂದಿನಂತೆ ತಾಯಿಪಕ್ಷಿಗೆ ಮರಗಳು ಈ ವಿಷಯವನ್ನು ಹೇಳಿದರು ಆ ವಿಷಯವನ್ನೂ ಕೇಳಿ ತಾಯಿ ಪಕ್ಷಿ ಸುಮ್ಮನಾಯಿತು.

ನಾಲ್ಕನೆ ದಿನ ಮತ್ತೆ ಭೀಮಯ್ಯ ಮಗನೊಂದಿಗೆ ತೋಟಕ್ಕೆ ಬಂದು ಲಾಭವಿಲ್ಲ! ನಾಳೆ ನಾವೇ ಮರಗಳನ್ನು ಕಡಿದು ಬಿಡೋಣ!ಎಂದು ಮಗನಿಗೆ ಹೇಳಿದನು. ಆ ವಿಷಯವನ್ನು ತಾಯಿ ಪಕ್ಷಿ ಮರಳಿ ಗೂಡಿಗೆ ಬಂದಾಗ ಮರಿಗಳು ಹೇಳಿದವು. ಆ ವಿಷಯವನ್ನು ಕೇಳಿದ ತಕ್ಷಣ ತಾಯಿ ಪಕ್ಷಿ ತನ್ನ ಮರಿಗಳನ್ನು ಎತ್ತಿಕೊಂಡು ಹೋಗಿ ಬೇರೆ ಮರದ ಮೇಲೆ ಗೂಡನ್ನು ಕಟ್ಟಿ ಅದರಲ್ಲಿ ಇಟ್ಟಿತು.


ಆ ಪಕ್ಷಿಯ ಮರಿಗಳು ಅಮ್ಮ! ಮೊದಲನೆ ದಿನ, ಎರಡನೇ ದಿನ, ಮೂರನೇ ದಿನ , ನಾವು ಹೇಳಿದನ್ನು ಕೇಳಿ ಸುಮ್ಮನಿದ್ದ ನೀನು ಈ ನಮ್ಮನ್ನು ಎತ್ತಿಕೊಂಡು ಬಂದೆಯಲ್ಲ ಏಕೆಎಂದು ಪ್ರಶ್ನಿಸಿದವು. ಅದಕ್ಕೆ ತಾಯಿಪಕ್ಷಿ ಬಂಧುಗಳನ್ನು, ಸ್ನೇಹಿತರನ್ನು, ಕೂಲಿಯವರನ್ನು ನಂಬಿಕೊಂಡರೆ ಕೆಲಸಗಳು ನಡೆಯಲಾರವು, ಯಾರ ಕೆಲಸ ಅವರೇ ಮಾಡಿಕೊಳ್ಳೋಣವೆಂದರೆ ತಕ್ಷಣ ಆಗುತ್ತದೆಎಂದು ಉತ್ತರಿಸಿತು.

ಅಣ್ಣನ ಒಳ್ಳೆಯತನ - ಸಣ್ಣ ಕಥೆ

ಕೃಷ್ಣಾಪುರ ಗ್ರಾಮದಲ್ಲಿ ರಾಮಯ್ಯ ಎಂಬ ವೃದ್ದ ವಾಸಿಸುತ್ತಿದ್ದನು. ಅವನಿಗೆ ಇಬ್ಬರು ಗಂಡುಮಕ್ಕಳು, ಸೂರ್ಯ & ಚಂದ್ರ. ಒಮ್ಮೆ ರಾಮಯ್ಯನ ಆರೋಗ್ಯ ಕ್ಷೀಣಿಸಿತು. ತಾನು ಇನ್ನು ಬದುಕುವುದಿಲ್ಲವೆಂದು ಭಾವಿಸಿದ ರಾಮಯ್ಯ ತನ್ನ ಹಿರಿಯ ಮಗ ಸೂರ್ಯನನ್ನು ಹತ್ತಿರ ಕರೆದು ಅದೇನೊ ಹೇಳಿ ಮರಣಹೊಂದಿದನು. ಅಣ್ಣನಿಗೆ ತಂದೆ ಏನು ಹೇಳಿರಬಹುದು? ಎಂದು ಚಂದ್ರನಿಗೆ ಅನುಮಾನ ಹುಟ್ಟಿತು. ಆ ಅನುಮಾನ ಭೂತವಾಗಿ ಬೆಳೆಯಿತು.

 ಚಂದ್ರ ಅಣ್ಣನಿಗೆ ಅಣ್ಣ ! ತಂದೆ ನಿನ್ನನ್ನು ಹತ್ತಿರ ಕರೆದು ಒಂದು ಒಡವೆಯ ಪೆಟ್ಟಿಗೆಯನ್ನು ಬಚ್ಚಿಟ್ಟಿರುವ ವಿಷಯ ಹೇಳಿದರಲ್ಲವಾ ! ನನಗೆಲ್ಲ ಗೊತ್ತು. ಆ ಒಡವೆಗಲ್ಲಿ ಒಂದು ಭಾಗವನ್ನು ನನಗೆ ಎಲ್ಲಿ ಕೊಡಬೇಕಾಗುತ್ತದೋ ಎಂದು ನೀನು ಆ ವಿಷಯವನ್ನು ನನಗೆ ಹೇಳುತ್ತಿಲ್ಲ ಎಂದನು ಕೋಪದಿಂದ. ತಮ್ಮನ ಮಾತುಗಳನ್ನು ಕೇಳಿದ ಸೂರ್ಯ ಬೆರಗಾಗಿಹೋದನು. ಅಂದಿನಿಂದ ಚಂದ್ರ ಸಣ್ಣ ಸಣ್ಣ ವಿಷಯಕ್ಕೆ ಅಣ್ಣನೊಂದಿಗೆ ಜಗಳವಾಡ ತೊಡಗಿದನು.
ಒಂದು ದಿನ ಸೂರ್ಯ ತಮ್ಮನಿಗೆ ಒಂದು ಹಳೆಯ ಪೆಟ್ಟಿಗೆಯನ್ನು ಕೊಟ್ಟು ಇದೇ ತಂದೆ ನನಗೆ ಕೊಟ್ಟ ಒಡವೆಗಳುಎಂದು ಕೊಟ್ಟನು. ಚಂದ್ರ ಆ ಒಡವೆಗಳನ್ನು ಮಾರಿ ಹಣ ತಂದುಕೊಳ್ಳಬೇಕೆಂದು ಯೇಚಿಸಿ ಪಕ್ಕದ ಊರಿನಲ್ಲಿ ಇದ್ದ ಒಬ್ಬ ವ್ಯಾಪಾರಿಯ ಹತ್ತಿರ ಹೋದನು. ವ್ಯಾಪಾರಿ ಆ ಒಡವೆಗಳನ್ನು ನೋಡಿದ ತಕ್ಷಣ ಅನುಮಾನಗೊಂಡು ರಹಸ್ಯವಾಗಿ  ಒಬ್ಬ ವ್ಯಕ್ತಿಗೆ ತಿಳಿಸಿದನು. ಅವರು ಬಂದರು. ಆ ವ್ಯಕ್ತಿ ಬೇರೆ ಯಾರೂ ಅಲ್ಲ ಚಂದ್ರನ ಅತ್ತಿಗೆಯ ತಂದೆ ಅಂದರೆ ಸೂರ್ಯನ ಮಾವ.


  ತಪ್ಪು ಹುಡುಗನೆ! ಮನೆಯ ಒಡವೆಗಳನ್ನು ಮಾರಬಾರದುಎಂದು ಹೇಳಿ ಅವರು ಚಂದ್ರನನ್ನು ಊರಿಗೆ ಕರೆದುಕೊಂಡು ಹೋದರು. ಈ ವಿಷಯ ತಿಳಿದ ಸೂರ್ಯ ತಮ್ಮನೆ ! ಆ ಒಡವೆಗಳು ನಿನ್ನ ಅತ್ತಿಗೆಯದು. ಮಾವನವರು ಆ ವ್ಯಾಪಾರಿಯ ಬಳಿ ಮಾಡಿಸಿದ ಒಡವೆಗಳು. ತಂದೆ ನನಗೆ ಒಡವೆಗಳನ್ನು ಕೊಟ್ಟಿದ್ದಾರೆಂದು ಅನುಮಾನದಿಂದ ನೀನು ನನ್ನ ಜೊತೆ ಜಗಳವಾಡಿದೆ. ಅದಕ್ಕೆ ನಿನ್ನ ಅತ್ತಿಗೆಯ ಒಡವೆಗಳನ್ನು ನಿನಗೆ ಕೊಟ್ಟು, ತಂದೆ ಕೊಟ್ಟಿದ್ದಾಗಿ ಹೇಳಿದೆ. ಇಷ್ಟಕ್ಕೂ ಆ ದಿನ ತಂದೆ ನನಗೆ ಹೇಳಿದ್ದು ಏನೆಂದರೆ ತಮ್ಮನಿಗೆ ಇನ್ನೂ ಅಣ್ಣ ಮತ್ತು ತಂದೆ ಎರಡು ನೀನೆ, ಅವನನ್ನು ಕಣ್ಣಿನ ರೆಪ್ಪೆಯಂತೆ ನೋಡಿಕೊಎಂದು. ಅದು ನಡೆದ ವಿಷಯ ಎಂದನು. ಚಂದ್ರ ಅಣ್ಣನ ಒಳ್ಳೆಯತನವನ್ನು ತಿಳಿದು, ಅಣ್ಣನ ಕಾಲಿನ ಮೇಲೆ ಬಿದ್ದು ಕ್ಷಮೆಯಾಚಿಸಿದನು.

ಕತ್ತೆಯ ಉಪಕಾರ - ಸಣ್ಣ ಕಥೆ

ರಂಗಾಪುರ ಎಂಬ ನಗರದಲ್ಲಿ ರಾಮು ಎಂಬ ಉಪ್ಪಿನ ವ್ಯಾಪಾರಿ ವಾಸಿಸುತ್ತಿದ್ದ. ಅವನು ಪ್ರತಿದಿನ ಕತ್ತೆಯ ಮೇಲೆ ಉಪ್ಪಿನ ಮೂಟೆಯನ್ನು ಹಾಕಿ ಕೊಂಡು ಗ್ರಾಮಗಳೆಲ್ಲ ಸುತ್ತಿ ಮಾರುತ್ತಿದ್ದನು. ಕೆಲವು ದಿನಗಳಲ್ಲಿ ಆತನ ಖರ್ಚು ಹೋಗಿ ನೂರಾರು ರೂಪಾಯಿ ಉಳಿಯಿತಿತ್ತು. ಆತನು ವಾಸಿಸುತ್ತಿದ್ದ ಗುಡಿಸಲು ಮುರಿದು ಬೀಳುವ ಹಾಗೆ ಇತ್ತು. ಆದ್ದರಿಂದ ತನ್ನ ಬಳಿ ಉಳಿದಿರುವ ಹಣವನ್ನು ಈ ಗುಡಿಸಿಲಿನಲ್ಲಿ ಇಡುವುದು ಕ್ಷೇಮವಲ್ಲ ಎಂದು ಕೊಂಡು ಪಕ್ಕದ ಊರಿನಲ್ಲಿ ವಾಸಿಸುತ್ತಿದ್ದ ತನ್ನ ಸ್ನೇಹಿತ ಬಟ್ಟೆ ವ್ಯಾಪಾರಿ ಸೋಮುವಿನ ಬಳಿ ಹೋಗಿ.

ಸೋಮು,ಈ ಹಣವನ್ನು ನಿನ್ನ ಬಳಿ ಇಟ್ಟುಕೋ ಇನ್ನು ಹತ್ತು ದಿನಗಳಲ್ಲಿ ಸರಕನ್ನು ಕೊಳ್ಳುವಾಗ ಬಂದು ತೆಗೆದುಕೊಳ್ಳುತ್ತೇನೆಎಂದು ರಾಮು ತನ್ನ ಹಣವನ್ನು ಕೊಟ್ಟನು. ಹತ್ತು ದಿನಗಳು ಕಳೆದ ನಂತರ ಹೋಗಿ ತನ್ನ ಹಣವನ್ನು ಕೊಡುವಂತೆ ಸೋಮುವಿಗೆ ಕೇಳಿದನು ರಾಮು. ಆಗ ಸೋಮು ನೀನು ನನಗೆ ಯಾವಾಗ ಕೊಟ್ಟೆ? ಸಾಕ್ಷಿ ತೋರಿಸುಎಂದು ಹೇಳಿದನು ಈ ಮಾತನ್ನು ಕೇಳಿ ಚಕಿತನಾದ ರಾಮು ಒಂದು ವೇಳೆ ಪೋಲಿಸರಿಗೆ ದೂರು ನೀಡಿದರೂ ಸಾಕ್ಷಿ ಇಲ್ಲವೆಂದು ಭಾವಿಸಿ ನಿರುತ್ಸಾಹದಿಂದ ತನ್ನು ಮನೆಗೆ ಹಿಂದಿರುಗಿ ಬಂದನು.


   ನಂತರ ಕೆಲವು ದಿನಗಳಲ್ಲಿ ಮತ್ತೆ ರಾಮುವಿನ ಹತ್ತಿರ ಸ್ವಲ್ಪ ಹಣ ಉಳಿಯಿತು. ಈ ಬಾರಿ ಮಾತುಬಾರದ ತನ್ನ ಕತ್ತೆಯನ್ನು ನಂಬಿಕೊಂಡರೆ ಒಳ್ಳೆಯದೆಂದುಕೊಂಡನು. ಹಗಲೆಲ್ಲ ತನ್ನ ಬಳಿಯೇ ಹಣವನ್ನು ಇಟ್ಟುಕೊಂಡು ರಾತ್ರಿ ಹೊತ್ತು ಒಂದು ಬಟ್ಟೆಯಲ್ಲಿ ಗಂಟುಕಟ್ಟಿ ಕತ್ತೆಯ ಕೊರಳಲ್ಲಿ ಕಟ್ಟುತ್ತಿದ್ದನು ಇದರಿಂದ ನಿಶ್ಚಿಂತವಾಗಿ ನಿದ್ರೆಮಾಡುತ್ತಿದ್ದನು.
ಒಂದು ದಿನ ಸಂತೆಯಲ್ಲಿ ರಾಮು ತನ್ನ ಸೊಂಟಕ್ಕೆ ಕಟ್ಟಿಕೊಂಡ ಗಂಟಿನಲ್ಲಿ ಹಣವನ್ನು ಇಟ್ಟುಕೊಂಟಿದ್ದನ್ನು ಗಮನಿಸಿದ ಒಬ್ಬ ಕಳ್ಳ ರಾಮುವನ್ನು ತನ್ನ ಮನೆಯ ವರೆಗೆ ಹಿಂಬಾಲಿಸಿದನು. ಅರ್ಧರಾತ್ರಿ ಕತ್ತಿ ಹಿಡಿದು ರಾಮುವಿನ ಗುಡಿಸಲಿಗೆ ನುಗ್ಗಿ ಗುಡಿಸಿಲಿನೆಲ್ಲ ಹುಡುಕಿದನು. ಅಲ್ಲಿ ಹಣ ಸಿಗದಿದ್ದಾಗ ಕೋಪಗೊಂಡ ಕಳ್ಳ ರಾಮುವನ್ನು ಎಬ್ಬಿಸಿ ಕತ್ತಿಯನ್ನು ಕತ್ತಿನ ಮೇಲೆ ಇಟ್ಟು ನಿನ್ನ ಹತ್ತಿರ ಹಣದ ಗಂಟನ್ನು ನೋಡಿದೆ ಅದನ್ನು ಎಲ್ಲಿ ಬಚ್ಚಿಟ್ಟಿರುವೆ ಹೇಳದೆ ಹೋದರೆ ನಿನ್ನನ್ನು ಕೊಂದು ಬಿಡುತ್ತೇನೆಎಂದು ಬೆದರಿಸಿದನು.

ಇನ್ನು ಹೇಳುವುದು ತಪ್ಪುವುದಿಲ್ಲವೆಂದುಕೊಂಡ ರಾಮು ನಾನು  ಕತ್ತೆಯ ಕಷ್ಟದಿಂದ ಬದುಕುತ್ತಿದ್ದೇನೆ, ಅದೇ ನನ್ನನ್ನು ಪೋಷಿಸುತ್ತಿದೆ, ಅದೇ ನನ್ನ ಯಜಮಾನಿಯಾದ್ದರಿಂದ ಅದರ ಹತ್ತಿರ ಇಟ್ಟಿದ್ದೆನೆ ಅದು ಕೊಡುತ್ತೇನೆಂದರೆ ತೆಗೆದುಕೊಎಂದನು. ಕತ್ತೆಯ ಕೊರಳಲ್ಲಿನ ಗಂಟನ್ನು ನೋಡಿದ ಕಳ್ಳ ನೆಮ್ಮದಿಯಾಗಿ ಅದನ ಹತ್ತಿರ ಹೋದನು. ಹೊಸ ಮನುಷ್ಯನನ್ನು ನೋಡಿದ ತಕ್ಷಣ ಕತ್ತೆ ನಿದ್ರೆಯಿಂದ ತಟ್ಟನೆ ಎದ್ದಿತು. ಒಂದೇ ಸಮನೆ ಕೂಗತೊಡಗಿತು. ಕತ್ತೆಯನ್ನು ಹಿಡಿಯಲು ಪ್ರಯತ್ನಿಸಿದಾಗ ಕತ್ತೆ ಕಳ್ಳನಿಗೆ ಒದ್ದು ಬಿಟ್ಟಿತು. ಆ ನೋವನ್ನು ತಾಳಲಾರದೆ ಕಳ್ಳ ಅಯ್ಯೊ ಅಯ್ಯೋ!ಎಂದು ಚೀರಿದನು. ಇವನ ಕೂಗುಗಳಿಗೆ ಎದ್ದ ಸುತ್ತಮುತ್ತಲಿನ ಜನ ಕಳ್ಳನನ್ನು  ಹಿಡಿದು ಪೋಲಿಸರಿಗೆ ಒಪ್ಪಿಸಿದರು.


 ಮನುಷ್ಯನನ್ನು ನಂಬಿದ್ದಕ್ಕೆ ನನ್ನ ಮೋಸಮಾಡಿದರು ಕತ್ತೆಯನ್ನು ನಂಬಿದ್ದಕ್ಕೆ ನನ್ನ ಹಣವನ್ನು ನನಗೆ ಕ್ಷೇಮವಾಗಿ ಒಪ್ಪಸಿದ್ದಲ್ಲದೆ ಕಳ್ಳನನ್ನು ಹಿಡಿದುಕೊಟ್ಟಿತುಎಂದುಕೊಂಡ ರಾಮು ತನ್ನ ಕತ್ತೆಯನ್ನು ಮುತ್ತಿಟ್ಟು ಅದರ ಉಪಕಾರವನ್ನು ಕೊಂಡಾಡಿದನು.

ಸಿಕ್ಕ ಕಳ್ಳರು! - ಸಣ್ಣ ಕಥೆ

ಮಣಿದ್ವೀಪ ಎಂಬ ರಾಜ್ಯವನ್ನು ನರಸಿಂಹ ಎಂಬ ರಾಜ ಆಳುತ್ತಿದ್ದನು. ಆತನು ರಾಜ್ಯಪಾಲನೆಯ ಮೇಲೆ ಶ್ರದ್ದೆ ತೋರಿಸುತ್ತರಲಿಲ್ಲ, ಅದನ್ನೆ ನೆಪವಾಗಿಸಿ ಕೊಂಡ ರಾಜ್ಯದಲ್ಲಿ ಅಧಿಕಾರಿಗಳು ಯಥೇಚ್ಚವಾಗಿ ತಮಗೆ ತೋಚಿದಷ್ಟು  ಅವರು ಆಕ್ರಮಣ ಮಾಡಲು ಆರಂಭಿಸಿದರು. ಇದರಿಂದ ರಾಜ್ಯದಲ್ಲಿ ತೀವ್ರ ಅಶಾಂತಿ ಉಂಟಾಯಿತು.

  ಫಣಿ ಎಂಬ ಕಳ್ಳ ಒಂದು ದಿನ ಕಳ್ಳತನಕ್ಕೆ ಹೊರಟನು. ಅರ್ಧರಾತ್ರಿ ವೇಳೆ ಅವನು ಸೇನಾಧಿಪತಿಯ ಮನೆಗೆ ನುಗಿ ಹಣ, ಒಡವೆ ಕದ್ದುಕೊಂಡು ಹೋದನು. ಈ ಒಡವೆಗಳನ್ನು ಈಗಲೇ ಮಾರಿದರೆ ಯಾರಾದರು ಹಿಡಿದುಕೊಳ್ಳುತ್ತಾರೆ, ಇನ್ನೂ ಸ್ವಲ್ಪ ದಿನಗಳು ಕಳೆದ ಮೇಲೆ ಇನ್ನಷ್ಟು ಕಳ್ಳತನಗಳನ್ನು ಮಾಡಿ ಈ ಊರನ್ನು ಬಿಟ್ಟು ಬೇರೆ ಸ್ಥಳಕ್ಕೆ ಹೋಗಿ ಬಿಡಬಹುದುದೆಂದುಕೊಂಡನು ಫಣಿ.


   ಮರುದಿನ ಒಬ್ಬ ವ್ಯಾಪಾರಿಯ ಮನೆಯಲ್ಲಿ ಕಳ್ಳತನ ಮಾಡಿದನು ಫಣ, ಆ ಒಡವೆಗಳನ್ನು ಸಹ ತನ್ನ ಮನೆಯಲ್ಲಿ ರಹಸ್ಯವಾಗಿ ಬಚ್ಚಿಟ್ಟನು. ಇನ್ನೊಂದು ದಿನ ರೈತನ ಮನೆಯಲ್ಲಿ ಕಳ್ಳತನ ಮಾಡಿದನು. ಆ ನಂತರ ಒಬ್ಬ ಕೂಲಿಯವನ ಮನೆಯಲ್ಲಿ ಕಳ್ಳತನ ಮಾಡಿದನು ಫಣಿ. ಬೆಳಗಾಗುತ್ತಲೆ ಕೂಲಿಯವನು ಹೋಗಿ ರಾಜನಿಗೆ ಫಿರ್ಯಾದು ಮಾಡಿದನು.

   ನಿನ್ನ ಮನೆಯಲ್ಲಿ ಏನೇನು ಕಳುವಾಗಿದೆ?ಎಂದು ಕೇಳಿದನು ರಾಜ. ಅದಕ್ಕೆ ನಾಕ್ಕು ಬೆಳ್ಳಿಯ ಚಂಬುಗಳು ಕಳುವಾಗಿದೆ ಮಹಾರಾಜ!ಎಂದನು ಆ ಕೂಲಿಯವನು. ರಾಜ ತನ್ನ ಸೇನಾಧಿಪತಿಗಳನ್ನು ಕಳುಹಿಸಿ ಹುಡುಕಿಸಿದಾಗ ಕಳ್ಳತನ ಮಾಡುತ್ತಿದ್ದ ಫಣಿ ಮನೆಯಲ್ಲಿ ನಾಲ್ಕು ಬೆಳ್ಳಿಚೆಂಬುಗಳು ಜೊತೆಗೆ ಅಮೂಲ್ಯವಾದ ವಸ್ತುಗಳು ಲಭಿಸಿದವು. ಸೇನಾಧಿಪತಿಗಳು ಹೊಡೆದಾಗ ಆ ವಸ್ತುಗಳನ್ನು ಎಲ್ಲೆಲ್ಲಿ ಕಳ್ಳತನ ಮಾಡಿದ್ದನೋ ಅವನೆಲ್ಲ ಹೇಳಿ ಬಿಟ್ಟನು ಫಣಿ.


ಆದರೆ ಸೇನಾಧಿಪತಿ, ವ್ಯಾಪಾರಿ, ರೈತ ಅಕ್ರಮ ಸಂಪಾದನೆ ಯಾದರಿಂದಲೇ ಫಿರ್ಯಾದು ಮಾಡಲಿಲ್ಲವೆಂದು ತಿಳಿದು ರಾಜ ಆಶ್ಚರ್ಯಗೊಂಡನು. ಅಂದಿನಿಂದ ರಾಜ್ಯಪಾಲನೆಯ ಮೇಲೆ ದೃಷ್ಟಿ ಇಟ್ಟ ರಾಜ ಲಂಚತೆಗೆದುಕೊಳ್ಳುವವರನ್ನು , ಜನರಿಗೆ ಮಾಸ ಮಾಡುವವರನ್ನು ಕಠಿಣವಾಗಿ ಶಿಕ್ಷಿಸಲು ಆರಂಭಿಸಿದನು. ಅದರಿಂದ ರಾಜ್ಯದಲ್ಲಿ ಶಾಂತಿ ಭದ್ರತೆ ನೆಲೆಸಿತು , ಜನರು ಸುಖ-ಶಾಂತಿಯಿಂದ ಜೀವನ ಸಾಗಿಸ ತೊಡಗಿದರು.

ಯಾರು ಕಳ್ಳ? - ಸಣ್ಣ ಕಥೆ

ಒಂದು ಊರಿನಲ್ಲಿ ಒಬ್ಬ ವಯಸ್ಸಾದ ರೈತ ವಾಸಿಸುತ್ತಿದ್ದನು. ಆತನಿಗೆ ನಾಲ್ಕು ಜನ ಗಂಡು ಮಕ್ಕಳಿದ್ದರು. ಒಮ್ಮೆ ಆ ರೈತನಿಗೆ ತೀವ್ರವಾಗಿ ಆರೋಗ್ಯ ಕೆಟ್ಟಿತು. ಎಷ್ಟು ಜನ ವೈದ್ಯರ ಬಳಿ ತೋರಿಸಿದರೂ ಬದುಕುವುದು ಕಷ್ಟ ಎಂದರು.
ಒಂದು ದಿನ ನಾಲ್ಕು ಜನ ಗಂಡುಮಕ್ಕಳನ್ನು ಹತ್ತಿರ ಬನ್ನಿ ಎಂದು ಕರೆದನು ರೈತ. ನಾನು ಇನ್ನೂ ಹೆಚ್ಚು ಕಾಲ ಬದುಕುವುದಿಲ್ಲ ನನ್ನ ಜೀವನದಲ್ಲಿ ಬೆವರು ಸುರಿಸಿ ನಾನು ಸ್ವಲ್ಪ ಹಣ ಮತ್ತು ನಾಕ್ಕು ವಜ್ರಗಳನ್ನು ಸಂಪಾದಿಸಿದ್ದೆನೆ, ಅದನ್ನು ಒಂದು ಪಟ್ಟಿಗೆಯಲ್ಲಿ ಭದ್ರವಾಗಿಟ್ಟಿದ್ದೇನೆ. ನಿಮಗೆ ಅವಶ್ಯಕವಾದಾಗ ನಿಮ್ಮ ತಾಯಿಯನ್ನು ಕೇಳಿ ನಾಲ್ಕು ಜನರು ಸಮಾನವಾಗಿ ಹಂಚಿಕೊಳ್ಳಿ ಎಂದು ಹೇಳಿ ಮರಣ ಹೊಂದಿದನು.


ಕೆಲವುದಿನಗಳ ನಂತರ ನಾಲ್ಕು ಜನರು ಬೇರೆಯಾಗಿ ವ್ಯಾಪಾರಗಳನ್ನು ಪ್ರಾರಂಭಿಸಬೇಕೆಂದುಕೊಂಡರು. ಬಂಡವಾಳಕ್ಕಾಗಿ ತಂದೆ ಸಂಪಾದಿಸಿದ ಹಣ ಮತ್ತು ವಜ್ರಗಳನ್ನು ಹಂಚಿಕೊಳ್ಳೋಣವೆಂದು ನಿರ್ಣಯಿಸಿಕೊಂಡು ನಾಲ್ಕು ಜನರಲ್ಲಿ ಕಿರಿಯ ಸಹೋದರನಿಗೆ ಹಣದ ಪೆಟ್ಟಿಗೆ ತೆಗೆದುಕೊಂಡು ಬರುವಂತೆ ಮನೆಗೆ ಕಳುಹಿಸಿದರು. ಜಗಳವಾಡದೆ ಹಂಚಿಕೊಳ್ಳಿ ಮಕ್ಕಳೇಎಂದು ಹೇಳುತ್ತಾ ಕಿರಿಯ ಮಗನ ಕೈಯಲ್ಲಿ ಹಣದ ಪೆಟ್ಟಿಗೆ ಇಟ್ಟಳು ಅವರ ತಾಯಿ.
ಮನೆಯಿಂದ ಹೊರಗೆ ಬರುವುದರೊಳಗೆ ಆ ಪೆಟ್ಟಿಗೆಯಲ್ಲಿದ್ದ ವಜ್ರಗಳಲ್ಲಿ ಒಂದನ್ನು ಕದ್ದನು. ನಂತರ ಪೆಟ್ಟಿಗೆ ತೆರೆದು ನೋಡಿದ ಉಳಿದ ಮೂವರು ಸಹೋದರರು ಚಕಿತರಾದರು. ಇನ್ರ್ನೇಂದು ವಜ್ರ ಏನಾಯಿತುಎಂದು ಕಿರಿಯ ಸಹೋದರನಿಗೆ ಕೇಳಿದಾಗ ತನಗೆ ಗೊತ್ತಿಲ್ಲವೆಂದು ಹೇಳಿದನು.

ಯಾರು ಕಳ್ಳನೆಂದು ತಿಳಿಯಬೇಕಾದರೆ ನಾವು ಊರಿನ ಗೌಡರಾದ ರಾಮಯ್ಯನ ಬಳಿ ಹೋಗಬೇಕು ಎಂದನು ಹಿರಿಯ ಸಹೋದರ ಸರಿ ಎಂದು ನಾಲ್ಕು ಜನರು ರಾಮಯ್ಯನ ಬಳಿ ಹೋದರು, ಹೋಗಿ ನಡೆದ ಸಂಗತಿಯನ್ನು ರಾಮಯ್ಯನಿಗೆ ತಿಳಿಸಿದರು. ಆ ಸಹೋದರರು ಹೇಳಿದ ಸಂಗತಿಯನ್ನು ಜಾಗ್ರುಕತೆಯಿಂದ ಆಲಿಸಿದನು ರಾಮಯ್ಯ. ನನ್ನ ಬಳಿ ಒಂದು ಮಂತ್ರದ ಕೋಲಿದೆ ಅದನ್ನು ನಾಲ್ಕು ತುಂಡುಗಳಾಗಿ ಮಾಡಿ ಒಂದೊಂದು ಕುಂಡದಲ್ಲಿ ಹಾಕುತ್ತೇನೆ, ಆ ಕುಂಡವನ್ನು ನೀವು ನಾಲ್ಕು ಜನ ತಲೆಯ ಮೇಲೆ ಇಟ್ಟುಕೊಂಡು ಊರಿನ ಆಚೆ ಇರುವ ದೇವಾಲಯದವರೆಗೆ ಹೋಗಿ ಹಿಂತಿರುಗಿ ಬರಬೇಕು. ಇಲ್ಲಿಗೆ ಬರುವಷ್ಟರಲ್ಲಿ ಯಾರ ಕುಂಡದಲ್ಲಿ ಕೋಲು ಎರಡರಷ್ಟು ಉದ್ದ ಬೆಳೆಯುತ್ತದೊ ಅವರೆ ನಿಜವಾದ ಕಳ್ಳ ಎಂದು ಅವರಿಗೆ ರಾಮಯ್ಯ ಹೇಳಿದನು.

ನಾಲ್ಕು ಜನ ಸಹೋದರರು ಕುಂಡಗಳನ್ನು ಹೊತ್ತು ಹೊರಟರು. ಊರಿನ ಆಚೆಗೆ ಬರುವಷ್ಟರಲ್ಲಿ ಕಳ್ಳತನ ಮಾಡಿದ್ದ ರೈತನ ಕಿರಿಯ ಮಗನಿಗೆ ಒಂದು ಆಲೋಚನೆ ಬಂದಿತು. ಕಳ್ಳತನ ಮಾಡಿದ್ದು ನಾನೇ ಅಲ್ಲವ!ಅಂದರೆ ನನ್ನ ಕುಂಡದಲ್ಲಿ ಕೋಲು ಉದ್ದವಾಗಿ ಬಿಡುತ್ತದೆ. ಆದ್ದರಿಂದ ಈ ಕೋಲನ್ನು ಆರ್ಧಕ್ಕೆ ಮುರಿದು ಬಿಟ್ಟರೆ ಸರಿಹೋಗುತ್ತದೆ ಎಂದು ಕೊಂಡು ಕೋಲನ್ನು ಮುರಿದು ಬಿಟ್ಟನು.

ನಂತರ ನಾಲ್ಕು ಜನರು ರಾಮಯ್ಯನ ಬಳಿ ಹೋದರು ಕುಂಡಗಳಲ್ಲಿದ್ದ ಕೋಲುಗಳನ್ನು ತೆಗೆದು ನೋಡಿದಾಗ ಕಿರಿಯ ಸಹೋದರನ ಕೋಲು ಸ್ವಲ್ಪ ಚಿಕ್ಕದಾಗಿ ಕಾಣಿಸಿತು. ವಜ್ರವನ್ನು ಕದ್ದ ಕಳ್ಳಯಾರೆಂದು ಎಲ್ಲರಿಗೂ ಅರ್ಥವಾಯಿತು.

ನಂತರ ರಾಮಯ್ಯ ನಿಜವಾಗಿ ಈ ಕೋಲಿನಲ್ಲಿ ಯಾವುದೇ ರೀತಿಯ ಮಾಯಾಮಂತ್ರವಿಲ್ಲ,ನಿಜವಾದ ಕಳ್ಳನನ್ನು ಹಿಡಿಯ ಬೇಕೆಂದು ಈ ರೀತಿ ನಾಟಕವಾಡಿದೆ ಎಂದು ವಿವರಿಸಿದನು.

ನಿಧಾನವೇ ಪ್ರಧಾನ - ಸಣ್ಣ ಕಥೆ

ವಿದ್ಯಾರಣ್ಯಪುರ ಎಂಬ ನಗರದಲ್ಲಿ ಶಂಕರ ಭಟ್ಟ ಎಂಬ ವ್ಯಾಪಾರಿ ವಾಸಿಸುತ್ತಿದ್ದನು. ಆತನು ಸುತ್ತಮುತ್ತಲಿನ ಹಳ್ಳಿಗಳಿಗೆ ಹೋಗಿ ಹಣ್ಣು ,ತರಕಾರಿ,ಹೂವು ಮುಂತಾದವುಗಳನ್ನು ಖರೀದಿಸಿಕೊಂಡು ಮತ್ತೆ ವಿದ್ಯಾರಣ್ಯಪುರಕ್ಕೆ ಬಂದು ಮಾರುತ್ತಿದ್ದನು. ಒಂದು ಸಾರಿ ಸೀತಾಪುರ ಎಂಬ ಗ್ರಾಮದಲ್ಲಿ ತೆಂಗಿನ ಕಾಯಿಗಳು ಅತಿ ಕಡಿಮೆ ಬೆಲೆಗೆ ದೊರಕುತ್ತಿವೆ ಎಂಬ ವಿಷಯ ತಿಳಿದ ಆ ಗ್ರಾಮಕ್ಕೆ ಹೋಗಿ ಹೆಚ್ಚು ತೆಂಗಿನ ಕಾಯಿಗಳನ್ನು ಕೊಳ್ಳುತ್ತಾನೆ. ಅವನ್ನು ತನ್ನ ಎತ್ತಿನ ಬಂಡಿಗೆ ತುಂಬಿಸಿ ಮತ್ತೆ ವಿದ್ಯಾರಣ್ಯಪುರಕ್ಕೆ  ಹೊರಟನು ಭಟ್ಟ.

 ಸೀತಾಪುರ ಗ್ರಾಮ ಶಂಕರ ಭಟ್ಟನಿಗೆ ಹೊಸತು ಆದ್ದರಿಂದ ಹಿಂತಿರುಗಿ ಹೋಗುವ ದಾರಿ ಅವನಿಗೆ ಗೊತ್ತಾಗಲಿಲ್ಲ. ದಾರಿಯಲ್ಲಿ ಒಬ್ಬ ಬಾಲಕ ಕುರಿಗಳನ್ನು ಮೇಯಿಸುತ್ತಿರುವುದು ಕಾಣಿಸಿತು. ಶಂಕರಭಟ್ಟ ಆ ಬಾಲಕನಿಗೆ ಕರೆದು ವಿದ್ಯಾರಣ್ಯ ಪುರಕ್ಕೆ ಹೋಗುವ ದಾರಿ ಇದೇನಾ?ಎಂದು ಕೇಳಿದನು. ಹೌದುಎಂದನು ಆ ಬಾಲಕ. ವಿದ್ಯಾರಣ್ಯಪುರಕ್ಕೆ ಹೋಗಿ ಸೇರಲು ಎಷ್ಟು ಸಮಯ ಹಿಡಿಯುತ್ತದೆ ಎಂದು ಕೇಳಿದನು ಶಂಕರಭಟ್ಟ.
  ನಿಧಾನವಾಗಿ ಹೋದರೆ ಒಂದು ತಾಸು ಹಿಡಿಯುತ್ತದೆ,ವೇಗವಾಗಿ ಹೋದರೆ ಎರಡು ತಾಸು ಹಿಡಿಯುತ್ತದೆಎಂದನು ಬಾಲಕ. ಅವನ ಮಾತನ್ನು ಕೇಳಿದ ಶಂಕರಭಟ್ಟ ಅಯ್ಯೋ ಮೂರ್ಖಎಂದು ಹೇಳಿ ಬಂಡಿಯನ್ನು  ವೇಗವಾಗಿ ಓಡಿಸುತ್ತ ಹೋರಟನು.

ಸ್ವಲ್ಪ ದೂರ ತಲುಪುತ್ತಲೆ ಬಂಡಿಯ ಚಕ್ರಕ್ಕೆ ಒಂದು ಕಲ್ಲು ಅಡ್ಡ ಬಂದಿತು ಅದರಿಂದ ಬಂಡಿ ಪಕ್ಕಕ್ಕೆ ವಾಲಿ ಬಂಡಿಯಲ್ಲಿದ್ದ ತೆಂಗಿನ ಕಾಯಿಗಳೆಲ್ಲ ಚಲ್ಲಾಪಿಲ್ಲಿಯಾಗಿ ನೆಲಕ್ಕೆ ಬಿದ್ದವು. ಬಂಡಿಯಿಂದ ಇಳಿದ ಭಟ್ಟ ಅವುಗಳನ್ನೆಲ್ಲ ಮತ್ತೆ ಬಂಡಿಗೆ ತುಂಬಿಸಿ ಬಂಡಿಯ ಚಕ್ರವನ್ನು ಸರಿಪಡಿಸಿ ವಿದ್ಯಾರಣ್ಯಪುರಕ್ಕೆ ಹೋಗಿ ಸೇರಲು ಎರಡು ತಾಸು ಹಿಡಿಯಿತು.


   ಆ ಕುರಿ ಮೇಯಿಸುವ ಬಾಲಕನು ಹೇಳಿದ ಮಾತುಗಳ ಅರ್ಥ ಶಂಕರಭಟ್ಟನಿಗೆ ಆಗ ಅರ್ಥವಾಯಿತು. ಸ್ವಲ್ಪ ನಿಧಾನವಾಗಿ ಬಂಡಿ ಓಡಿಸಿದ್ದಿದ್ದರೆ ಒಂದು ತಾಸಿನಲ್ಲಿ ವಿದ್ಯಾರಣ್ಯಪುರ ತಲುಪುತ್ತಿದ್ದ,ವೇಗವಾಗಿ ಓಡಿಸಿದ ಪರಿಣಾಮವಾಗಿ ಬಂಡಿಯ ಚಕ್ರಕ್ಕೆ ಕಲ್ಲು ಅಡ್ಡ ಬಂದು ಅಲಸ್ಯವಾಯಿತು. ನಿಧಾನವೇ ಪ್ರಧಾನಎಂಬ ಮಾತಿಗೆ ಅರ್ಥ ಶಂಕರ ಭಟ್ಟನಿಗೆ ಆ ರೀತಿಯಾಗಿ ಅರ್ಥವಾಯಿತು.

ಅಹಂಕಾರಿ ನೊಣ - ಸಣ್ಣ ಕಥೆ

ಒಂದು ಕಾಡಿನಲ್ಲಿ ಒಂದು ಜೇನು ನೊಣ ವಾಸಿಸುತಿತ್ತು. ಅದು ತುಂಬಾ ಸೋಮಾರಿಯಾಗಿತ್ತು. ಅದಕ್ಕೆ ಕೆಲಸ ಮಾಡಲು ಬರುತ್ತಿರಲಿಲ್ಲ. ಏನೂ ಕೆಲಸ ಮಾಡದಿರುವುದರಿಂದ ವಿಧ-ವಿಧವಾಗಿ ಆಲೋಚಿಸುತ್ತಾ ಕಾಲಹರಣ ಮಾಡುತಿತ್ತು. ಅಷ್ಟೇ ಅಲ್ಲದೆ ಅದಕ್ಕೆ ತನ್ನ ಶಕ್ತಿ ಸಾಮರ್ಥ್ಯದ ಮೇಲೆ ಅಪಾರವಾದ ನಂಬಿಕೆ ಇತ್ತು.

ಒಂದು ದಿನ ಎಂದಿನಂತೆ ಜೇನು ನೊಣ ಖಾಲಿಯಾಗಿ ಮರದ ಕೊಂಬೆಯ ಮೇಲೆ ಕುಳಿತಿತ್ತು. ಅಷ್ಟರಲ್ಲಿ ಹುಲ್ಲನ್ನು ಮೇಯುತ್ತ ಹಸುವೊಂದು ಆ ಮರದ ಕೆಳಕ್ಕೆ ಬಂದಿತು. ಅದನ್ನು ನೋಡಿದ ಜೇನು ನೊಣ ತಕ್ಷಣ ತನ್ನ ರೆಕ್ಕೆಗಳನ್ನ ಆಡಿಸುತ್ತ ಹಾರಿ ಹೋಗಿ ಆ ಹಸುವಿನ ಕೊಂಬಿನ ಮೇಲೆ ಕುಳಿತುಕೊಂಡಿತು. ಮಿತ್ರನೇ!ನೀನು ಹೇಗಿದ್ದಿಯಾ?ಇಷ್ಟಕ್ಕೂ ನೀನು ಇಲ್ಲಿಗೆ ಏಕೆ ಬಂದೆ?" ಎಂದು ಕೇಳಿತು ನೊಣ. ಹಸು ಅದರ ಮಾತುಗಳನ್ನು ಕೇಳಿಸಿಕೊಳ್ಳುವುದಿರಲಿ ನಿಜವಾಗಿ ತನ್ನ ಕೊಂಬಿನ ಮೇಲೆ ಜೇನು ನೊಣ ಕುಳಿತು ಕೊಂಡಿದೆ ಎಂಬುದೇ ತಿಳಿಯಲಿಲ್ಲ. "ನನ್ನ ಭಾರವನ್ನು ನೀನು ಸಹಿಸುಕೊಳ್ಳುತ್ತೀಯ?ನಿನಗೆ ನೋವಾದರೆ ಮುಚ್ಚು ಮರೆಯಿಲ್ಲದೆ ಹೇಳು ನಾನು ಹಾರಿಹೋಗುತ್ತೇನೆ" ಜೇನು ನೊಣ ಹೇಳಿತು.

ಹಸು ಅದರ ಮಾತನ್ನು ಕಿವಿಗೆ ಹಾಕಿಕೊಳ್ಳದೆ ಹುಲ್ಲನ್ನು ಮೇಯುವುದರಲ್ಲಿ ತಲ್ಲೀನವಾಗಿತ್ತು. ಅಷ್ಟರಲ್ಲಿ ಜೋರಾಗಿ ಗಾಳಿ ಬೀಸಿತು. ಆಗಾಳಿಯ ರಭಸಕ್ಕೆ ಜೇನುನೊಣ ಒಂದು ಸಾರಿ ಮೇಲಕ್ಕೆ ಹಾರಿ ಮತ್ತೆ ಹಸುವಿನ ಕೊಂಬಿನ ಮೇಲೆ ಕುಳಿತುಕೊಂಡಿತು. ತನ್ನ ರೆಕ್ಕೆಗಳನ್ನು ಪಟಪಟನೆ ಬೀಸುತ್ತ ಎಷ್ಟೇ ಪ್ರಯತ್ನ ಮಾಡಿದರು ಅದು ಕೊಂಬಿನ ಮೇಲೆ ಕುಳಿತುಕೊಳ್ಳಲಾಗಲಿಲ್ಲ. ಜೋರಾಗಿ ಬೀಸುತ್ತಿದ್ದ ಗಾಳಿ ಅದನ್ನು ಬಹಳ ದೂರದವರೆಗೆ ಎಳೆದುಕೊಂಡು ಹೋಗಿ ಬೀಳಿಸಿ ಬಿಟ್ಟಿತು. ಕೊನೆಗೆ ಜೇನು ನೊಣ ಒಂದು ಕೊಂಬೆಗೆ ಸಿಕ್ಕಿಕೊಂಡು ತನ್ನ ಪ್ರಾಣವನ್ನು ರಕ್ಷಿಸಿಕೊಂಡಿತು. ಆದರೆ ಅದಕ್ಕೆ ಮೊದಲು ಹಸು ಎಲ್ಲಿ ನಿಂತು ಹುಲ್ಲು ಮೇಯುತ್ತಿತ್ತೋ ಅಲ್ಲಿಯೇ ನಿಶ್ಚಿಂತವಾಗಿ ಹುಲ್ಲನ್ನು ಮೇಯುತ್ತಿರುವುದು ನೊಣಕ್ಕೆ ಕಾಣಿಸಿತು.


ಆಗ ಜೇನು ನೊಣಕ್ಕೆ ತನ್ನ ಶಕ್ತಿಯಂತಹದ್ದು ಎಂದು ಅರ್ಥವಾಯಿತು ಆದರೆ ಅದನ್ನು ಒಪ್ಪಿಕೊಳ್ಳಲು ಅದಕ್ಕೆ ಅಹಂಕಾರ ಅಡ್ಡ ಬಂದಿತು. ಆ.....ಒಂದು ಹಸು ಮಾತ್ರ ನನಗಿಂತ ಬಲವಾದದ್ದು ಎಂದುಕೊಂಡು ಕೊಂಬೆಯ ಮೇಲಿಂದ ಹಾರಿಹೋಯಿತು.

ಕವಿಪರಿಚಯ - ಕೆ.ಎನ್.ಅಕ್ರಂಪಾಷ

ಕವಿಪರಿಚಯ

ಹೆಸರು : ಕೆ.ಎನ್.ಅಕ್ರಂಪಾಷ
ಜನ್ಮ ದಿನಾಂಕ: ೯-೦೪-೧೯೯೫
ತಂದೆ-ತಾಯಿ : ಕೆ.ಸೈಯದ್ ನೂರುಲ್ಲಾ, ಜರೀನಾ ಬಾನು
ವಿದ್ಯಾರ್ಹತೆ: ಬಿಎಸ್ಸಿ , ಬಿ.ಎ ಪದವೀಧರ
ಮೊಬೈಲ್ ಸಂಖ್ಯೆ : ೯೬೧೧೧೭೫೩೮೦
ವಿಳಾಸ: ಕೆ.ಎನ್.ಅಕ್ರಂಪಾಷ, ಯುವಕವಿ, ವಾರ್ಡ್ ನಂ ೨೭, ಶಾಂತಿನಗರ, ಚಿಂತಾಮಣಿ-೫೬೩೧೨೫
ಇ-ಮೇಲ್: kannadaakram@gmail.com
ವೃತ್ತಿ : ಶಿಕ್ಷಕರು

ಪ್ರವೃತ್ತಿ:
ಕವನ ,ಕಥೆ , ಪರಿಚಯ ಲೇಖನ ,ಚುಟುಕು ,ಲೇಖನ ,ಚಿತ್ರಕಲೆ , ಮುಂತಾದವುಗಳ ರಚನೆ. ಈಗಾಗಲೇ ಕನ್ನಡದ ಪ್ರಮುಖ ವಿವಿಧ ಪತ್ರಿಕೆ , ಕವನ ಸಂಕಲನ , ಹಾಗು ಸ್ಮರಣ ಸಂಚಿಕೆಗಳಲ್ಲಿ ೨೦೦ ಕ್ಕೂ ಹೆಚ್ಚು  ಬರಹಗಳು ಪ್ರಕಟಗೊಂಡಿವೆ.

ಸಾಹಿತ್ಯ ಪ್ರಕಾರ: ಮಕ್ಕಳ ಕಥೆ, ಕವನ , ಚುಟುಕು, ಲೇಖನ ,ಅಂಕಣ ಬರಹ

ಅಂಕಣ ಬರಹಗಾರನಾಗಿ
೧.ಮಕ್ಕಳ ಪುಟ---ಜನಮನಸಂಚಲನ ಮಾಸ ಪತ್ರಿಕೆ, ಬೆಂಗಳೂರು
೨.ಸ್ತ್ರೀಜಾಗೃತಿ - ಮಾಸಪತ್ರಿಕೆ, ಬೆಂಗಳೂರು

ಪ್ರಶಸ್ತಿ-ಪುರಸ್ಕಾರಗಳು
೧. ಕುವೆಂಪು ಎಂಬ ಕವನಕ್ಕೆ ರಾಜ್ಯಮಟ್ಟದ ರಂಗಶ್ರೀ ಕಾವ್ಯ ಸೌರಭ ಪ್ರಶಸ್ತಿ ೨೦೧೩
೨. ರಾಜ್ಯಮಟ್ಟದ ಉತ್ತಮ ಚುಟುಕು ಕವಿ ಪ್ರಶಸ್ತಿ ೨೦೧೪
೩. ತಾಲ್ಲೂಕು ಆಡಳಿತದಿಂದ ೨೦೧೪ ರ ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ
೪. ರಾಜ್ಯಮಟ್ಟದ ಸಾಹಿತ್ಯ ಪ್ರತಿಭಾ ರತ್ನ ಪ್ರಶಸ್ತಿ ೨೦೧೫
೫. ರಾಜ್ಯಮಟ್ಟದ ಯುವ ಸಾಧಕ ರತ್ನ ಪ್ರಶಸ್ತಿ ೨೦೧೫
೬. ರಾಜ್ಯಮಟ್ಟದ ಕನ್ನಡ ಸಿರಿ ಪ್ರಶಸ್ತಿ ೨೦೧೫
೭. ರಾಜ್ಯ, ತಾಲೂಕು, ಜಿಲ್ಲಾ ಮಟ್ಟದ ಕವಿಗೋಷ್ಠಿಗಳಲ್ಲಿ ಹಾಗೂ ಸಾಹಿತ್ಯ ಸಮ್ಮೇಳನಗಳಲ್ಲಿ ಕವನ ವಾಚನ.
೮. ಹಲವು ಕನ್ನಡ ಪರ ಸಂಘಟನೆಗಳಿಂದ ಸನ್ಮಾನ.

ಬಿಡುಗಡೆಗೊಂಡ ಕೃತಿಗಳು
೧.ಚಂದ್ರನ ಮಗಳು (ಸ್ವರಚಿತ ಮಕ್ಕಳ ಕಥಾ ಸಂಕಲನ) ೨೦೧೪ ರಲ್ಲಿ ಬಿಡುಗಡೆ.
೨.ಕಾವ್ಯ ಸಿರಿ (ಸಂಪಾದಿತ),೨೦೧೪ರಲ್ಲಿ ಬಿಡುಗಡೆ.
೩.ಕನ್ನಡ ಸಿರಿ (ಸಂಪಾದಿತ), ೨೦೧೫ ರಲ್ಲಿ ಬಿಡುಗಡೆ
೪.ಮಿತ್ರವಾಣಿ (ಸಂಪಾದಿತ) ೨೦೧೩ ರಲ್ಲಿ ಬಿಡುಗಡೆ
೫.ಅಮರ ಜ್ಯೋತಿ (ಸಂಪಾದಿತ) ೨೦೧೬ ರಲ್ಲಿ ಬಿಡುಗಡೆ
೬.ಸವಿಗನ್ನಡ (ಸಂಪಾದಿತ ಕವನ ಸಂಕಲನ) ೨೦೧೬ ರಲ್ಲಿ ಬಿಡುಗಡೆ
೭.ಮೈಸೂರು ಹುಲಿ ಟಿಪ್ಪು (ಸಂಪಾದಿತ ಲೇಖನಗಳ ಸಂಗ್ರಹ) ೨೦೧೬ ರಲ್ಲಿ ಬಿಡುಗಡೆ
೮.ಹೂವಿನಂತೆ ಮಕ್ಕಳು (ಸ್ವರಚಿತ ಮಕ್ಕಳ ಕಥಾ ಸಂಕಲನ ಬಿಡುಗಡೆ ಹಂತದಲ್ಲಿ)

ಪ್ರಸ್ತುತ ಕನ್ನಡ ಸೇವೆ :
೧. ಚಿಂತಾಮಣಿ ತಾಲ್ಲೂಕು ಸಿರಿಗನ್ನಡ ವೇದಿಕೆಯ ಅಧ್ಯಕ್ಷನಾಗಿ
೨. ಚಿಂತಾಮಣಿ ತಾಲ್ಲೂಕು ಸ್ವಾಭಿಮಾನಿ ಕನ್ನಡ ಸೇವಾ ಸಮಿತಿ ಸಾಂಸ್ಕೃತಿಕ ಪ್ರತಿನಿಧಿಯಾಗಿ
೩. ಚಿಕ್ಕಬಳ್ಳಾಪುರ ಜಿಲ್ಲಾ  ಕರ್ನಾಟಕ ವಚನ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ
೪. ರಾಜ್ಯಮಟ್ಟದ ಕನ್ನಡ ಕವಿವಾಣಿ ಸಾಹಿತ್ಯ ಮಾಸಪತ್ರಿಕೆಯ ಸಂಪಾದಕನಾಗಿ
೫. ಚಿಂತಾಮಣಿ ತಾಲ್ಲೂಕು ಟಿಪ್ಪು ವಿಚಾರವೇದಿಕೆಯ ಸಂಚಾಲಕನಾಗಿ
೬. ಕನ್ನಡ ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಯನಾಗಿ 
೪. ಹವ್ಯಾಸಿ ಪತ್ರಕರ್ತನಾಗಿ ಕನ್ನಡ ಸೇವೆ

ಇತರೆ ಕನ್ನಡ ಸೇವೆ
೧. ಚಿಂತಾಮಣಿ ತಾಲೂಕು ತೃತೀಯ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆಯ ಸಂಪಾದಕನಾಗಿ (೨೦೧೪)

ದಾಖಲೆಯ ಸಾಧನೆಗಳು
೧. ರಾಜ್ಯದಲ್ಲೇ ೧೮ ವರ್ಷದ ವಯಸ್ಸಿಗೆ  ಪತ್ರಿಕೆಯನ್ನು ಪ್ರಾರಂಭಿಸಿದ ಮೊದಲ ಯುವಕ.
೨. ರಾಜ್ಯಮಲ್ಲೇ ಕಿರಿಯ ವಯಸ್ಸಿಗೆ ಮೊದಲ ಸಂಪಾದಕ
೩. ಕವಿವಾಣಿ ಪತ್ರಿಕೆಯು ೨೦ ಪುಟಗಳನ್ನೊಳಗೊಂಡಿದ್ದು, ಸಾಹಿತ್ಯ ಪತ್ರಿಕೆ ಯಾಗಿದೆ, ಪತ್ರಿಕೆಯಲ್ಲಿ ರಾಜ್ಯದ ಎಲ್ಲಾ ಉದಯೋನ್ಮುಖ, ಹಿರಿಯ-ಕಿರಿಯ , ವಿದ್ಯಾರ್ಥಿ-ವಿಧ್ಯಾರ್ಥಿನಿಯರಿಗೂ ಅವಕಾಶವನ್ನು ಕಲ್ಪಿಸಿಕೊಟ್ಟು ಅವರ ಬರಹಗಳನ್ನು ಪ್ರಕಟಿಸುತ್ತಿದ್ದೇನೆ ಹಾಗೂ ಎಲೆಮರೆಕಾಯಿಯಂತೆ ಅಮೂಲ್ಯ ಸೇವೆ ಸಾಧನೆ ಮಾಡುತ್ತಿರುವವರನ್ನು ಗುರುತಿಸಿ ಅವರ ಪರಿಚಯವನ್ನು ಪತ್ರಿಕೆಯಲ್ಲಿ ಪ್ರಕಟಿಸುವ ಮೂಲಕ ರಾಜ್ಯಕ್ಕೆ ತಿಳಿಯುವಂತೆ ಮಾಡುತ್ತಿದ್ದೇನೆ.ಪತ್ರಿಕೆಯನ್ನು ಉಚಿತವಾಗಿ ವಿತರಿಸುತ್ತಿದ್ದೇನೆ
೪. ಕಿರಿಯ ವಯಸ್ಸಿಗೆ ಹಲವಾರ ಪ್ರಶಸ್ತಿ ಪುರಸ್ಕಾರಗಳಿಗೆ ಆಯ್ಕೆ
೫. ಎಸ್.ಎಸ್.ಎಲ್.ಸಿ ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಉಚಿತ ಬೋಧನಾ ತರಗತಿಗಳು ಪ್ರತಿ ವರ್ಷ ನಡೆಸುತ್ತಿರುವುದು. (ಊಟವೂ ಉಚಿತ)
೬. ಹಲವು ಬೇಸಿಗೆ ಶಿಬಿರಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ
೭. ಮಕ್ಕಳಿಗಾಗಿ ಉಚಿತ ೩ ದಿನಗಳ ಬೇಸಿಗೆ ಶಿಬಿರ ಆಯೋಜನೆ
೮. ಡಿ.ಕೆ.ರವಿ ಸ್ಮರಣಾರ್ಥ ರಾಜ್ಯಮಟ್ಟದ ಕವನ ಸ್ಪರ್ಧೆ-೨೦೧೬ ಆಯೋಜನೆ.

ಬರಹಗಳು ಪ್ರಕಟ ಗೊಂಡ ಪ್ರಮುಖ ಪತ್ರಿಕೆಗಳು
ಸಂಯುಕ್ತ ಕರ್ನಾಟಕ , ವಿಜಯ ಕರ್ನಾಟಕ, ಉದಯವಾಣಿ, ಕನ್ನಡ ಪ್ರಭ, ವಿಜಯವಾಣಿ, ಆಯುಷ್ ಧಾತ, ಜನಮನದ ಸಂಚಲನ, ವಾರ್ತಾಭಾರತಿ, ಉದಯ ಮಿತ್ರ, ಕೋಲಾರ ಪತ್ರಿಕೆ, ಕೋಲಾರವಾಣಿ, ಅನನ್ಯ ನುಡಿ, ಕರ್ಮವೀರ, ಮಂಗಳ, ಸುಧಾ, ಚಿಂತಾಮಣಿ ವಾಣಿ, ಸ್ತ್ರೀಜಾಗೃತಿ ಮುಂತಾದವು.



ಮಂಗಳವಾರ, ಡಿಸೆಂಬರ್ 12, 2017

ಸಾಹಿತ್ಯದಲ್ಲಿ ವಿಶ್ವದಾಖಲೆಗಳ ಸರದಾರ - ಶ್ರೀ ವೀರನಗೌಡ ಪಾಟೀಲ (ಸಾಮ)

ಕವಿ ಪರಿಚಯ
veeranagouda patila saama kannada kavivani

ಹೆಸರು : ವೀರನಗೌಡ ಪಾಟೀಲ (ಸಾಮ)
ಕಾವ್ಯನಾಮ : ಸಾಮ
ಊರು : ಸೋಮನಕಟ್ಟಿ (ಹಾವೇರಿ-ತಾ/ಜಿ)
ವೃತ್ತಿ  : ದರ್ಜಿ (ಶಿವಾ ಟೈಲರ್)
ಪ್ರವೃತ್ತಿ : ಕಲಾ ಸೇವೆ, ಸಾಹಿತ್ಯ ಸೇವೆ, ಸಮಾಜಸೇವೆ.
ಸಾಹಿತ್ಯ : ಚುಟುಕು, ಕವನ, ಲೇಖನ, ಕಥೆಗಳು, ಪದಬಂಧ, ಅಕ್ಷರ ಚಮತ್ಕಾರ, ಗಜಲ್ ಮತ್ತು ವಿಶೇಷ ಬರಹಗಳು.

ಸಾಹಿತ್ಯ ಸೇವೆ :
• ಕಾರ್ಯದರ್ಶಿ, ಸಿರಿಗನ್ನಡ ವೇದಿಕೆ, ತಾಲೂಕ ಘಟಕ, ಹಾವೇರಿ(೨೦೧೪)
• ಕಾರ್ಯದರ್ಶಿ, ಸಿರಿಗನ್ನಡ ವೇದಿಕೆ, ಜಲ್ಲಾ ಘಟಕ, ಹಾವೇರಿ(೨೦೧೪)
• ಅಧ್ಯಕ್ಷರು, ಸಿರಿಗನ್ನಡ ವೇದಿಕೆ, ತಾಲೂಕ ಘಟಕ, ಸವಣೂರು(೨೦೧೫)
• ಗೌರವ ಸಂಪಾದಕರು, ಜ್ಞಾನ ಸಂಪದ ತ್ರೈಮಾಸಿಕ, ಸೋಮನಕಟ್ಟಿ(೨೦೧೬)
• ಸಾಂಸ್ಕೃತಿಕ ಕಾರ್ಯದರ್ಶಿ, ಹಾವೇರಿ ಜಿಲ್ಲಾ ಸಾಹಿತ್ಯ ಬಳಗ, ಹಾವೇರಿ.(೨೦೧೭)
• ಸಂಘಟನಾ ಕಾರ್ಯದರ್ಶಿ, ಸೃಜನಶೀಲ ಕನ್ನಡ ಸಾಹಿತ್ಯ ಬಳಗ, ತಾಲೂಕ ಘಟಕ,ಹಾವೇರಿ(೨೦೧೭)

ವಿಶೇಷತೆ :
ಸಾಹಿತ್ಯದಲ್ಲಿ ವಿಶ್ವದಾಖಲೆ
('ಹ.ಹಂಬಿನ ಹಂದರ' ಎಂಬ ೩೫೦ ಪುಟಗಳ ವಿಶೇಷ ಕಥಾ ರಚನೆಯಿಂದ ವಿಶ್ವದಾಖಲೆ.)
• ಗೋಲ್ಡ್ ಸ್ಟಾರ್ ಅಚೀವರ್ ಬುಕ್ ಆಫ್ ರೆಕಾರ್ಡ್ಸ್ - ೨೦೧೫ (ರಾಷ್ಟ್ರೀಯ ದಾಖಲೆ) .
• ಇನ್ ಕ್ರೆಡಿಬಲ್ ಬುಕ್ ಆಫ್ ರೆಕಾರ್ಡ್ಸ್ - ೨೦೧೬ (ವಿಶ್ವದಾಖಲೆ)
• ಎಕ್ಸಲೆಂಟ್ ಬುಕ್ ಆಫ್ ರೆಕಾರ್ಡ್ಸ್ - ೨೦೧೬ (ಏಷ್ಯಾ ವಿಶ್ವದಾಖಲೆ)

ಪತ್ರಿಕೆಗಳಲ್ಲಿ :
ನಾಡಿನ 29 ಕ್ಕೂ ಹೆಚ್ಚು ವಿವಿಧ ಪತ್ರಿಕೆಯಲ್ಲಿ ಬರಹಗಳು ಪ್ರಕಟ.

ದೂರದರ್ಶನದಲ್ಲಿ :
ವಿಶೇಷ ಸಾಹಿತ್ಯ ರಚನೆಯ ಪರಿಚಯ ಪ್ರಸಾರ ದೂರದರ್ಶನಗಳಲ್ಲಿ ಪ್ರಸಾರ.

ಪ್ರಶಸ್ತಿಗಳು :
• 'ಗಮನ ಶ್ರೀ ನಂದಿ' ಪ್ರಶಸ್ತಿ
• 'ಕರುನಾಡ ವಿಕೃಮ ಶ್ರೀ' ಪ್ರಶಸ್ತಿ
• 'ಕಾವ್ಯಾಂಜಲಿ' ರಾಜ್ಯ ಪ್ರಶಸ್ತಿ
• 'ಕನ್ನಡ ಸಾಹಿತ್ಯ ರತ್ನ ಶಿಖಿ' ರಾಜ್ಯ ಪ್ರಶಸ್ತಿ.
   
ಸದಸ್ಯತ್ವ :
ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.

ವಿಳಾಸ :
ವೀರನಗೌಡ ಪಾಟೀಲ (ಸಾಮ)
ಸಾಮ ನಿಕೇತನ, ಸೋಮನಕಟ್ಟಿ
ಅಂಚೆ : ಬೂದಗಟ್ಟಿ - ೫೮೧೧೨೮
ತಾ/ಜಿ : ಹಾವೇರಿ.
ಮೊ : ೯೫೯೧೬೯೮೯೩೫

ಇಮೇಲ್: veeranagoudapatil644@gmail.com