ಭಾನುವಾರ, ಡಿಸೆಂಬರ್ 3, 2017

ಅಂಗವಿಕಲತೆಯನ್ನು ಮೆಟ್ಟಿ ನಿಂತ ಧೀರೆ : ರಹಮತ್ ಬೀ


ಚಿಂತಾಮಣಿ : ನಗರದ ೨೭ ನೇ ವಾರ್ಡ್‌ಗೆ ಸೇರಿ ಹೈದರಾಲಿನಗರದ ನಿವಾಸಿಯಾದ ಸುಮಾರು  ೩೫ ವರ್ಷ ಪ್ರಾಯದ ರಹಮತ್ ಬೀ (ಮುನ್ನಿ) ಎಂಬಾಕೆ ತನ್ನ ಬಾಲ್ಯದಲ್ಲಿಯೇ ಪೋಲಿಯೋ ಕಾಯಿಲೆಗೆ ತುತ್ತಾಗಿ ತನ್ನೆರಡು ಕಾಲುಗಳ ಸ್ವಾಧೀನವನ್ನು ಕಳೆದುಕೊಂಡರೂ ತನ್ನೆರಡು ಕೈಗಳನ್ನೇ ನೆಲದ ಮೇಲೂರಿ ತನ್ನ ದೇಹವನ್ನು ಕಾಮನ ಬಿಲ್ಲಿನಂತೆ ಬಾಗಿಸಿ ನಡೆಯುವುದನ್ನು ಕಂಡಾಗ ಎಂತಹ ಹೃದಯ ಹೀನರೂ ಸಹಾ ಒಂದು ಕ್ಷಣ ಅಯ್ಯೋ ಎಂಬ ಕರುಣಾ ಪೂರಿತ ಉದ್ಗಾರ ಹಾಕದಿರಲಾರರು.ತನ್ನ ಅಂಗವಿಕಲತೆ ಹಾಗೂ ಬಡತನದಿಂದಾಗಿ ಬಾಲ್ಯದಲ್ಲಿ ಶಾಲೆಗೆ ದಾಖಲಾಗುವ ಅವಕಾಶ ವಂಚಿತೆ.
  
ಆದರೆ ತನ್ನ ತಂದೆ ದಿವಂಗತ ಅಬ್ದುಲ್ ರಷೀದ್ ಹಾಗೂ ಈಗಲೂ ತನ್ನೊಟ್ಟಿಗಿರುವ ತಾಯಿ ಬೀಬೀಜಾನ್ ರವರಿಗಾಗಲೀ ಅಥವಾ ತನ್ನ ಒಡಹುಟ್ಟಿದ ಹಿರಿಯ ಇಬ್ಬರು ಸಹೋದರರಿಗಾಗಲೀ ಹೊರೆಯಾಗದೆ ಸ್ವಾವಲಂಬಿ ಜೀವನ ನಡೆಸುತ್ತಿರುವಾಕೆ.ಈಕೆ ತನ್ನ ಬಾಲ್ಯದಲ್ಲಿಯೇ ಕುಳಿತಲ್ಲೇ ಅಗರಬತ್ತಿ ಉಜ್ಜುವುದನ್ನು ಕಲಿತು ಹಣಗಳಿಸುವ ಸಾಮರ್ಥ್ಯವನ್ನು ಬೆಳೆಸಿಕೊಂಡಾಕೆ.

ದೈವಕೃಪೆಯಿಂದ ಈಕೆ ಸಾಕ್ಷರತಾ ಕಾರ್ಯಕ್ರಮದಲ್ಲಿ ತನ್ನ ನೆರೆ ಮನೆಯಲ್ಲಿ ನಡೆಸಲಾಗುತ್ತಿದ್ದ ಕಲಿಕಾ ಕೇಂದ್ರದಲ್ಲಿ ಸೇರ್ಪಡೆಗೊಂಡು ಅಕ್ಷರ ಜ್ಞಾನ ಪಡೆದು ಇಂದು ಅಲ್ಪ-ಸ್ವಲ್ಪ ಓದು ಕಲಿತ ನವಸಾಕ್ಷರಳು.ತನ್ನ ಅನಾರೋಗ್ಯದ ಕಾರಣದಿಂದಾಗಿ ಆಗಾಗ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾಗ ಪರಿಚಯವಾದ ಆರೋಗ್ಯ ಇಲಾಖೆಯ ಮಂಜುಳ ಮತ್ತು ನ್ಯಾಯಾಲಯದಲ್ಲಿ ಕೆಲಸ ನಿರ್ವಹಿಸುವ ಪದ್ಮಕ್ಕ ಎಂಬುವವರ ಸಹಕಾರ ಹಾಗೂ ಪ್ರೇರಣೆಯಿಂದಾಗಿ ಅಂಗವಿಕಲರ ಸಂಘದ ಸದಸ್ಯೆಯಾಗಿ ಬೆಂಗಳೂರು, ಶಿವಮೊಗ್ಗ ಸೇರಿದಂತೆ ರಾಜ್ಯದ ಇತರೆಡೆಗಳಲ್ಲಿ ಆಯೋಜಿಸಲಾಗುವ ಅಂಗವಿಕಲರ ತರಬೇತಿ ಕಾರ್ಯಾಗಾರಗಳಲ್ಲಿ ಭಾಗವಹಿಸಿ ಅಂಗವಿಕಲತೆ ಶಾಪವಲ್ಲ ಎಂಬುದನ್ನು ಅರಿತು ಜೀವನವನ್ನು ಉತ್ಸಾಹದಿಂದ ಎದುರಿಸುವ ಮನೋಸ್ಥೈರ್ಯವನ್ನು ಬೆಳೆಸಿಕೊಂಡಾಕೆ.ಜೊತೆಗೆ ಜೀವನವೆಂಬ ಸಾಗರವನ್ನು ಈಜಿ ದಡ ಸೇರುವುದನ್ನು ಸಾಬೀತು ಪಡಿಸಲು ನೀರಿನಲ್ಲಿ ಈಜುವುದನ್ನೂ ಕಲಿತುಕೊಂಡಾಕೆ.ಈ ತರಬೇತಿಗಳಿಗೆ ಧನ್ಯವಾದ ಅರ್ಪಿಸಲು ಮರೆಯಲಾರದಾಕೆ.

ರಹಮತ್ ಎಂದರೆ ಕರುಣೆ ಎಂಬ ಹೆಸರಿಗೆ ತಕ್ಕಂತೆ ತನ್ನ ಹಾಗೆಯೇ ಅಂಗವಿಕಲರಿಗೆ ಉಚಿತ ಬಸ್-ಪಾಸ್, ಪಿಂಚಣಿ ಗಳನ್ನು ಯಾವುದೇ ಪ್ರತಿಫಲಾಪೇಕ್ಷೆ ಬಯಸದೆ ನಿಸ್ವಾರ್ಥವಾಗಿ ಕಛೇರಿಗಳಿಗೆ ಅಲೆದಾಡಿ ಮಾಡಿಸಿ ಕೊಟ್ಟಿರುವಾಕೆ. ತಾನು ನಡೆಯಲಾಗದಿದ್ದರೂ ತನ್ನ ಸ್ವಂತ ಹಣದಿಂದ ಒಂದು ಹಳೆಯ ದ್ವಿಚಕ್ರ ವಾಹನವನ್ನು ಕೊಂಡು ತಂದು ಅದಕ್ಕೆ ಸ್ಥಳೀಯ ರಾಮು ಮತ್ತು ಸುರೇಶ್ ಎಂಬುವವರ ಸಹಕಾರದಿಂದ ಕೆಲವು ಮಾರ್ಪಾಡುಗಳನ್ನು ಮಾಡಿಸಿಕೊಂಡು ವಾಹನವನ್ನು ಓಡಿಸುವುದನ್ನೂ ಕಲಿತು ಠೀವಿಯಿಂದ ಮೆರೆಯುವಾಕೆ.ಜೊತೆಗೆ ಮನೆಯಲ್ಲಿ ಮಾತ್ರವಲ್ಲದೆ ತನ್ನ ಧೈರ್ಯವನ್ನು ಪ್ರೋತ್ಸಾಹಿಸಿದ ೨-೩ ಮನೆಗಳಲ್ಲಿ ಕಾಡಿ-ಬೇಡಿ ಮನೆಗೆಲಸವನ್ನು ಮಾಡಿ ಸಮರ್ಥವಾಗಿ ಕಸ-ಮುಸುರೆ , ಬಟ್ಟೆ ಒಗೆಯುವ ಕೆಲಸಗಳನ್ನು ನಿಭಾಯಿಸುವಲ್ಲಿ ಯಶಸ್ವಿಯಾದಾಕೆ.ಇಷ್ಟಕ್ಕೇ ಸುಮ್ಮನಾಗದೆ ತನ್ನ ಪರಿಚಯಸ್ಪರ ಪುಟಾಣಿಗಳನ್ನು ಶಾಲೆಗೆ ಕರೆದೊಯ್ಯುವ-ಕರೆತರುವ ಕೆಲಸವನ್ನು ಒಪ್ಪಿಕೊಂಡು ಆ ಮಕ್ಕಳನ್ನು ತನ್ನ ನಾಲ್ಕು ಚಕ್ರಗಳ ವಾಹನದಲ್ಲಿ ಕೂರಿಸಿಕೊಂಡು ನಗರದ ಎಸ್.ಎಫ಼್.ಎಸ್, ಎಮ್.ಡಬ್ಯು.ಎ ,ವಾಸವಿ, ಪ್ರೀತಿ ಪಬ್ಲಿಕ್ ಮುಂತಾದ ಶಾಲೆಗಳವರೆಗೂ ಪ್ರಯಾಣಿಸುವುದನ್ನು ಕಂಡಾಗ ಹೆಮ್ಮೆ ಎನಿಸುತ್ತದೆ.

   ಇವೆಲ್ಲಕ್ಕೂ ಮಿಗಿಲಾದ ಈಕೆಯ ಇನ್ನೊಂದು ಅಭಿನಂದನೀಯ ಕಾರ್ಯವೆಂದರೆ ಈಕೆ ನಡೆಸುತ್ತಿರುವ ಒಂದು ಅಗರ ಬತ್ತಿ ಕಂಪೆನಿ.ಈ ಕಂಪೆನಿ ನಡೆಸಲು ಈಕೆ ಒಂದು ಅತಿ ಹಳೆಯಾತಿ ಹಳೆಯ ಪುಟ್ಟ ಮನೆಯನ್ನು ಬಾಡಿಗೆಗೆ ಪಡೆದು ಸ್ಥಳೀಯ ೧೦-೧೫ ಬಡ ಮಹಿಳೆಯರಿಗೆ ದಿನಗೂಲಿ ಉದ್ಯೋಗವನ್ನು ನೀಡಿದ್ದು.ಕಂಪನಿಗೆ ಬೇಕಾದ ಕಚ್ಚಾ ಸಾಮಗ್ರಿಗಳನ್ನು ಸ್ಥಳೀಯ ಹೆಸರಾಂತ ಕಂಪನಿಯ ಮಾಲೀಕರಿಂದ ಬಂಡವಾಳ ರಹಿತವಾಗಿ ಎರವಲು ತಂದು ತಯಾರಿಸಿದ ಆಗರಬತ್ತಿಗಳನ್ನು ಹಿಂತಿರುಗಿಸಿ ಬಂದ ಅಲ್ಪ-ಸ್ವಲ್ಪ ಆದಾಯದಲ್ಲಿ ತಾನೂ ಬದುಕುತ್ತಾ ಇತರರಿಗೂ ಆರ್ಥಿಕ ಗಳಿಕೆಗೆ ಸಹಾಯ ಹಸ್ತ ಚಾಚಿರುವಾಕೆ.ಈ ಕಂಪನಿಯ ಎಲ್ಲಾ ವಹಿವಾಟುಗಳನ್ನೂ ತಾನೇ ಖುದ್ದಾಗಿ ಅಳತೆ, ತೂಕ ಮಾಡಿ ಸೈ ಎನಿಸಿಕೋಂಡಿರುವಾಕೆ.

   ಹೋರಾಟಗಳಲ್ಲೂ ಮುಂಚೂಣಿಯಲ್ಲಿರುವ ಈಕೆ ಇಂದು ಸಮಾಜದಲ್ಲಿ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ,ಕಿರುಕುಳ,ದೌರ್ಜನ್ಯ ,ವರದಕ್ಷಿಣೆ, ಬಾಲ್ಯವಿವಾಹ, ಭ್ರೂಣಹತ್ಯೆ ಮುಂತಾದವುಗಳ ವಿರುದ್ಧ ನಡೆಸಲಾಗುವ ಸಂಘ-ಸಂಸ್ಥೆಗಳ ಹೋರಾಟಗಳಲ್ಲೂ ಭಾಗವಹಿಸಿ ಧ್ವನಿಯೆತ್ತಿ ಘೋಷಣೆ ಕೂಗುವುದನ್ನು ಕಂಡಾಗ ಎಲ್ಲದರಲ್ಲೂ ಸಬಲರಾಗಿರುವವರ ಹೃದಯ ವಿಕಲತೆಯನ್ನು ಈಟಿಯಿಂದ ಚುಚ್ಚಿದಂತೆ ಭಾಸವಾಗುತ್ತದೆ. ಸ್ವಾಭಿಮಾನಿ-ಸ್ವಾವಲಂಬಿಯಾಗಿ ಹಗಲಿರಳೂ ದುಡಿಯುವ ಈಕೆಯನ್ನು ರಹಮತ್ ಬೀ ಎಂದು ಕರೆಯುವುದಕ್ಕಿಂತ ಮೆಹನತ್ ಬೀ ಎಂದು ಕರೆದರೆ ಅರ್ಥ ಪೂರ್ಣವೆನಿಸುತ್ತದೆ.ಈಕೆ ಎಂದೂ ಸರ್ಕಾರದಿಂದ ಸಿಗುವ ಸವಲತ್ತುಗಳಿಗೆ ಕೈಯೊಡ್ಡಿಲ್ಲ ಎಂದೇನೂ ಇಲ್ಲ ಆದರೆ ಯಾವ ಇಲಾಖೆಗಳಿಂದಲೂ ನೆರವು ಸಿಗದಿರುವುದು ಈಕೆಯ ದುರಾದೃಷ್ಠ ಎಂದು ಹೇಳಬಹುದಷ್ಠೆ.

   ಇಂದಿನ ಯುವ ಪೀಳಿಗೆ ಪ್ರತಿಯೊಂದಕ್ಕೂ ಪೋಷಕರು ಹಾಗೂ ಸರ್ಕಾರದಿಂದ ಸಿಗುವ ಸವಲತ್ತುಗಳಿಗೆ ಅವಲಂಬಿತರಾಗಿ  ಸಮಯವನ್ನು ವ್ಯರ್ಥ ಮಾಡಿಕೊಂಡು ಜೀವನೋತ್ಸಾಹವನ್ನು ಕಳೆದುಕೊಂಡು ಕಳ್ಳತನ, ಮೋಸ,ಭ್ರಷ್ಟಾಚಾರ,ಆತ್ಮಹತ್ಯೆ ಎಂಬಂತಹ ಕಾನೂನು ಬಾಹಿರ ಚಟುವಟಿಕೆಗಳಿಗೆ ಈಡಾಗಿ ಸರ್ಕಾರಕ್ಕೂ ಮತ್ತು ಸಮಾಜಕ್ಕೂ ತಲೆ ನೋವಾಗುವುದನ್ನು ಬಿಟ್ಟು ಅಂಗವಿಕಲತೆಯಾದರೂ ಸಬಲೆಯಾಗಿ ಚೈತನ್ಯದ ಚಿಲುಮೆಯಂತೆ ಉತ್ಸಾಹಿಯಾಗಿ ಬಾಳರಥವನ್ನು ನಡೆಸುತ್ತಿರುವ ರಹಮತ್ ಬೀ ಯವರಿಂದ ಪ್ರೇರಿತರಾಗಿ ಜೀವನೋತ್ಸಾಹವನ್ನು ಪಡೆದುಕೊಂಡರೆ ಬಾಳು ಹಸನಾಗೀತು.ಹಾಗೆಯೇ ಇಂತಹ ವಿಕಲಾಂಗರಿಗಾಗಿಯೇ ಇರುವ ಇಲಾಖೆಗಳೂ ಎಚ್ಚೆತ್ತು ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಿ ಸರ್ಕಾರಿ ಯೋಜನೆಗಳು ಸಾರ್ಥಕವಾಗಲು ದುಡಿದರೆ ಅವರ ಬಾಳೂ ಸಾರ್ಥಕವಾಗುತ್ತದೆ.ಇಲ್ಲವಾದರೆ ಇವರ ಪಾಲಿನ ಸವಲತ್ತುಗಳನ್ನು ತಮ್ಮ ಸ್ವಂತಕ್ಕೆ ಬಳಸಿ ಶ್ರೀಮಂತಿಕೆಯನ್ನು ಗಳಿಸಿದರೂ ನೀರ ಮೇಲಿನ ಗುಳ್ಳೆಯಂತೆ ಕ್ಷಣಿಕವಾಗಿದ್ದು ಒಂದಲ್ಲಾ ಒಂದುದಿನ ಕಾನೂನಿನ ಕಪಿಮುಷ್ಠಿಗೆ ಸಿಲುಕಿ ಶಿಕ್ಷೆಗೆ ಗುರಿಯಾಗುವುದರಲ್ಲಿ ಸಂದೇಹವಿಲ್ಲ. ಇತ್ತೀಚೆಗಷ್ಟೆ ರಹಮತ್-ಬೀ ಯವರು ಆಟೋಚಾಲನೆಯನ್ನು ಕೂಡ ಶುರುಮಾಡಿದ್ದು, ಚಿಂತಾಮಣಿಯ ಮೊಟ್ಟಮೊದಲ ಮಹಿಳಾ ಆಟೋ ಚಾಲಕಿಯಾಗಿ ಹೊರಹೊಮ್ಮಿ ’ಆಟೋರಾಣಿ’ ಯಾಗಿ ಸೈ ಎನಿಸಿಕೊಂಡಿದ್ದಾರೆ.

   ರಹಮತ್ ಬೀ ಯಂತೆ ಮೆಹನತ್ (ದುಡಿಮೆ) ಮಾಡೋಣ.ರಹಮತ್ ಬೀಗೆ ಇನ್ನಷ್ಟು ಉತ್ತಮ ಕಾರ್ಯ ನಿರ್ವಹಿಸುವ ಶಕ್ತಿಯನ್ನು ಆ ಕರುಣಾಮಯಿ ಭಗವಂತ ನೀಡಲಿ ಎಂದು ಪ್ರಾರ್ಥಿಸಿ ರಹಮತ್ ಬೀಗೆ ಶುಭ ಹಾರೈಸೋಣ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ