ಶನಿವಾರ, ಡಿಸೆಂಬರ್ 2, 2017

ವಿಶ್ವ ಮಾನವ ಸಂದೇಶ ಸಾರಿದ ಕನ್ನಡ ಚೇತನ ಕವಿ ಕುವೆಂಪು

ನಾಡಗೀತೆ ಬರವಣಿಗೆ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳೊಂದಿಗೆ ಅತಿಥಿ ಮತ್ತು ಗುರುವೃಂದ
    ಚಿಂತಾಮಣಿ: ವಿಶ್ವ ಮಾನವ ಸಂದೇಶ ಸಾರಿದ ಕನ್ನಡ ಚೇತನ ಕವಿ ಕುವೆಂಪು ಎಂಬುದಾಗಿ ರೆಲ್ಟನ್ ಕ್ವಾಲಿಟಿ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾದ ರಿಯಾಜ್ ಅಹಮದ್ ರವರು ತಿಳಿಸಿದರು. ತಾಲ್ಲೂಕಿನ ಮೈಲಾಂಡ್ಲಹಳ್ಳಿಯ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೋಲಾರದ ರೆಲ್ಟನ್ ಕ್ವಾಲಿಟಿ ಪ್ರೈವೇಟ್ ಲಿಮಿಟೆಡ್ ಹಾಗೂ ಚಿಂತಾಮಣಿಯ ಕನ್ನಡ ಕವಿವಾಣಿ ಮಾಸಪತ್ರಿಕೆಯ ಸಂಯುಕ್ತಾಶ್ರಯಲ್ಲಿ ರಾಜ್ಯೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ನಾಡಗೀತೆ ಬರವಣಿಗೆ ಸ್ಪರ್ಧೆ ಕಾರ್ಯಕ್ರಮವನ್ನು ಕನ್ನಡಾಂಬೆಗೆ ಮಾಲಾರ್ಪಣೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಜಗತ್ತು ಕಂಡ ಹತ್ತು ಹಲವು  ಅಗ್ರಗಣ್ಯ ಮಹಾನ್ ಚೇತನಗಳಲ್ಲಿ  ದಿವ್ಯ ಮಾನವ ಚೇತನ  ಕುವೆಂಪು ರವರೆಂದು ಎದೆಯುಬ್ಬಿಸಿ  ಹೆಮ್ಮೆಯಿಂದ ಹೇಳುವುದಕ್ಕೆ ಕರ್ನಾಟಕ ಜನೆತೆಗೆ ಅವಕಾಶ ನೀಡಿದ ಮಹಾನ್ ಜ್ಯೋತಿ ಕವಿ ಕುವೆಂಪುರವರು ಎಂದು ಹೇಳಿದರಲ್ಲದೆ, ಅವರು ರಚಿಸಿರುವ ಜಯ ಭಾರತ ಜನನಿಯ ತನುಜಾತೆ ಎಂಬ ಗೀತೆಯು ನಮ್ಮ ನಾಡಗೀತೆಯಾಗಿರುವುದು ಹೆಮ್ಮೆಯ ಸಂಗತಿ ಎಂದರಲ್ಲದೆ, ಕುವೆಂಪುರವರು ತಮ್ಮ ಈ ಗೀತೆಯಲ್ಲಿ ಕರ್ನಾಟಕದ ಸಮಗ್ರ ಇತಿಹಾಸ, ಸಾಹಿತ್ಯ, ಸಂಪ್ರದಾಯಗಳನ್ನೆಲ್ಲಾ ಅಕ್ಷರ ರೂಪದಲ್ಲಿ ತಿಳಿಸಿದ್ದಾರೆ ಎಂದರಲ್ಲದೆ,ತಾಯ್ನಾಡಿಗೆ ನೀಡುವಷ್ಟು ಗೌರವವನ್ನು ನಾಡಗೀತೆಗೂ ನೀಡಬೇಕೆಂದು ನುಡಿದರು.
  


         ಇತ್ತೀಚಿನ ದಿನಗಳಲ್ಲಿ ಒಂದೊಂದು ಪುಸ್ತಕದಲ್ಲಿ ಒಂದೊಂದು ರೀತಿಯಾಗಿ ನಮ್ಮ ನಾಡಗೀತೆಯ ಸಾಹಿತ್ಯವನ್ನು ನೀಡುತ್ತಿರುವುದು ಬೇಸರದ ಸಂಗತಿ ಎಂದರಲ್ಲದೆ, ಕುವೆಂಪುರವರು ರಚಿಸಿರುವ ಯಥಾವತ್ತಾದ ಸಾಹಿತ್ಯವನ್ನು ಪಡೆದು ಶಾಲೆಗಳಲ್ಲೂ ಹಾಡಿಸಬೇಕೆಂದು ಸಲಹೆ ನೀಡಿದರು.ನಮ್ಮ ನಾಡಗೀತೆಯನ್ನು ಹಾಡುತ್ತಿದ್ದರೆ ಮೈರೊಮಾಂಚನ ಗೊಳ್ಳುತ್ತದೆ ಎಂದರಲ್ಲದೆ ಅದನ್ನು ಗೌರವಿಸುವುದು ಕನ್ನಡಿಗರ ಆದ್ಯ ಕರ್ತವ್ಯವಾಗಬೇಕೆಂದು ಅಭಿಪ್ರಾಯಪಟ್ಟರು.

      ಮುಖ್ಯಅತಿಥಿಯಾಗಿ ಭಾಗವಹಿಸಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಅಂಬರೀಶ್ ರವರು ಮಾತನಾಡಿ ವಿದ್ಯಾರ್ಥಿಗಳಿಗಾಗಿ ನಾಡಗೀತೆ ಬರವಣಿಗೆ ಸ್ಪರ್ಧೆಯನ್ನು ಏರ್ಪಡಿಸುವ ಮೂಲಕ ಮಕ್ಕಳಲ್ಲಿ ನಾಡಪ್ರೇಮ , ಕನ್ನಡಾಭಿಮಾನವನ್ನು ಮೂಡಿಸುವ ಕಾರ್ಯವನ್ನು ಹಮ್ಮಿಕೊಂಡಿರುವ ರೆಲ್ಟನ್ ಸಂಸ್ಥೆ ಹಾಗೂ ಕವಿವಾಣಿ ಪತ್ರಿಕೆಯ ಕಾರ್ಯವನ್ನು ಶ್ಲಾಘಿಸಿದರಲ್ಲದೆ, ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದವರಿಗೆ ಉದ್ಯೋಗ ಕ್ಷೇತ್ರದಲ್ಲಿ ವಿಶೇಷ ಮಿಸಲಾತಿ ನೀಡಬೇಕು ಹಾಗೂ ಸರೋಜಿನಿ ಮಹಿಷಿ ವರದಿ ಶೀಘ್ರವಾಗಿ ಜಾರಿಮಾಡಬೇಕೆಂದು ಸರ್ಕಾರವನ್ನು ಆಗ್ರಹಿಸಿದರಲ್ಲದೆ, ಮಕ್ಕಳಿಗೆ ಅಂಗನವಾಡಿಯಿಂದಲೇ ಕನ್ನಡವನ್ನು ಕಲಿಸಬೇಕೆಂದು ಕಿವಿಮಾತಿ ಹೇಳಿದರು.ಇತರೆ ಭಾಷೆಗಳನ್ನು ಗೌರವಿಸಿ ಹಾಗೇ ಮೊದಲ ಆದ್ಯತೆ ನಮ್ಮ ಕನ್ನಡ ಭಾಷೆ ನೀಡಿ ಎಂದು ತಿಳಿಸಿದರು.

     
ಪ್ರಾಸ್ತಾವಿಕವಾಗಿ ಮಾತನಾಡಿದ ಕವಿವಾಣಿ ಸಂಪಾದಕ ಕೆ.ಎನ್.ಅಕ್ರಂಪಾಷ ರವರು ಮಕ್ಕಳಲ್ಲಿ ನಾಡಗೀತೆಯ ಮಹತ್ವದ ಅರಿವನ್ನು ಮೂಡಿಸುವ ಉದ್ದೇಶದಿಂದ ಈ ವಿನೂತನ ಕಾರ್ಯಕ್ರಮವನ್ನು ರೂಪಿಸಲಾಗಿದ್ದು, ಇದಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಕಿದೆ ಎಂದು ಹರ್ಷವ್ಯಕ್ತಪಡಿಸಿದರಲ್ಲದೆ, ಇತ್ತೀಚೆಗೆ ನಾಡಗೀತೆಯ ಕೆಲ ಸಾಲುಗಳನ್ನು ಕಡಿತಗೊಳಿಸಿ ಎಂಬ ಅಭಿಪ್ರಾಯಗಳಿ ಮೂಡುತ್ತಿರುವುದು ನಿಜಕ್ಕೂ ವಿರ್ಪಯಾಸದ ಸಂಗತಿ ಎಂದರಲ್ಲದೆ, ಮಕ್ಕಳು ಕನ್ನಡ ಭಾಷೆ ಮೇಲೆ ಅಭಿಮಾನವನ್ನು ಬೆಳಿಸಿಕೊಳ್ಳಬೇಕೆಂದು ಸಲಹೆ ನೀಡಿದರಲ್ಲದೆ, ಭಾಷೆಯನ್ನು ಬಳಸಿದಾಗ ಮಾತ್ರ ಅದನ್ನು ಉಳಿಸಲು ಸಾಧ್ಯವೆಂದರು. ತಮ್ಮ ಸಂಸ್ಥೆಗಳ ವತಿಯಿಂದ ಮುಂದೆಯೂ ಇದೇ ರೀತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ವಿವರಿಸಿದರು.

       
ಈ ಸಂದರ್ಭದಲ್ಲಿ ದೊಡ್ಡತಮ್ಮನ ಹಳ್ಳಿಯ ಯುವಕವಿ ಗಂಗರಾಜು ಮಾತನಾಡಿ ಮನುಷ್ಯನಿಗೆ ವಿದ್ಯೆ ಜೊತೆಗೆ ಸಂಸ್ಕಾರವು ಇದ್ದಾಗ ಮಾತ್ರ ಆತನ ಮಹಾನ್ ವ್ಯಕ್ತಿಯಾಗಲು ಸಾಧ್ಯವೆಂದು ತಿಳಿಸಿದರಲ್ಲದೆ ಹಲವು ಕನ್ನಡ ಗೀತೆಗಳನ್ನು ಹಾಡಿ ಗಾನಸುಧೆಯನ್ನು ಹರಿಸಿದರೆ, ಚುಟುಕು ಕವಿ ಶಿ.ಮ.ಮಂಜುನಾಥ ರವರು ಹಲವು ಹಾಸ್ಯ ಚಟಾಕಿಗಳನ್ನು ಹಾರಿಸುವ ಮೂಲಕ ಎಲ್ಲರನ್ನು ನಗೆಗಡಲಲ್ಲಿ ತೇಲಿಸಿದರು.

       ನಾಡಗೀತೆ ಬರವಣಿಗೆ ಸ್ಪರ್ಧೆಯಲ್ಲಿ ಸುಮಾರು ಇಪ್ಪತ್ತು ವಿದ್ಯಾರ್ಥಿಗಳು ಭಾಗವಹಿಸಿ ನಾಡಗೀತೆಯನ್ನು ಬರೆದರು. ಉತ್ತಮವಾಗಿ ವ್ಯಾಕರಣ, ಸಾಲುಗಳು ತಪ್ಪಿಲ್ಲದಂತೆ ಬರೆದು ಶಾಲೆಯ ವಿದ್ಯಾರ್ಥಿಗಳಾದ ಆರ್.ಎನ್.ಸಂತೋಷ ಪ್ರಥಮ ಸ್ಥಾನ, ಜಿ.ಎಂ.ನವನೀತ ದ್ವಿತೀಯ ಸ್ಥಾನ, ಜಿ.ಎಂ.ಅಂಬರೀಶ್ ಮತ್ತು ಮುಸ್ಕಾನ್ ತಾಜ್ ತೃತೀಯ ಸ್ಥಾನವನ್ನು ಗಳಿಸಿದರು. ಉಳಿದ ೧೬ ಮಂದಿ ಸಮಾಧಾನಕರ ಸ್ಥಾನಗಳನ್ನು ಪಡೆದರು. ೬ನೇ ತರಗತಿ ವರೆಗೆ ಉರ್ದು ಮಾಧ್ಯಮದಲ್ಲಿ ವ್ಯಾಸಂಗ ಮಾಡಿ ಇದೇ ವರ್ಷ ಕನ್ನಡ ಮಾಧ್ಯಮಕ್ಕೆ ಬಂದಿರುವ ಮುಸ್ಕಾನ್ ತಾಜ್ ಕನ್ನಡದಲ್ಲಿ ಇಡೀ ನಾಡಗೀತೆಯನ್ನು ಪೂರ್ಣವಾಗಿ ಬರೆಯುವ ಮೂಲಕ ತನ್ನ ಕನ್ನಡಾಭಿಮಾನವನ್ನು ಮೆರೆದು ಎಲ್ಲರ ಮೆಚ್ಚುಗೆ ಪಾತ್ರವಾದಳು.



      ಸ್ಪರ್ಧೆಯಲ್ಲಿ ವೀಜೆತರಾದ ಎಲ್ಲಾ ಮಕ್ಕಳಿಗೂ ನೆನಪಿನ ಕಾಣಿಕೆ, ಪ್ರಮಾಣ ಪತ್ರ ಹಾಗೂ ಲೇಖನಿಗಳನ್ನು ನೀಡಿ ಪುರಸ್ಕರಿಸಲಾಯಿತು. ಶಾಲೆಯ ವತಿಯಿಂದ ರೆಲ್ಟನ್ ಕ್ವಾಲಿಟಿ ಪ್ರೈವೇಟ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕರಾದ ರಿಯಾಜ್ ಅಹಮದ್‌ರವರನ್ನು ಸನ್ಮಾನಿಸಲಾಯಿತು. ಎಸ್.ಡಿ.ಎಂ.ಸಿ ಅಧ್ಯಕ್ಷ ಶಬ್ಬೀರ್ ರವರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕಿ ಹಸೀನಾಬೇಗಂ, ಸಹಶಿಕ್ಷಕ ಮಾರಪ್ಪರೆಡ್ಡಿ, ಅಂಗನವಾಡಿ ಶಿಕ್ಷಕಿ ಪದ್ಮ, ಹಿರಿಯ ಕವಿ ಮೈಲಾಂಡ್ಲಹಳ್ಳಿ ಅಶ್ವತ್ಥನಾರಾಯಣ , ಡಿ.ಎಡ್ ಪ್ರಶಿಕ್ಷಣಾರ್ಥಿಗಳಾದ ಸೋಮಶೇಖರ್, ರವಿ, ಉರ್ದುಶಾಲೆ ಶಿಕ್ಷಕಿ ಅಜುಂ ಖಾನಂ ರವರುಗಳು ಉಪಸ್ಥಿತರಿದ್ದರು.




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ