ಬುಧವಾರ, ಡಿಸೆಂಬರ್ 13, 2017

ಯುವರಾಣಿಗೆ ಪಟ್ಟಾಭಿಷೇಕ - ಸಣ್ಣ ಕಥೆ

ಅಮರಾವತಿ ಎಂಬ ರಾಜ್ಯವನ್ನು ವಿಜಯವರ್ಮ ಎಂಬ ರಾಜ ಆಳುತ್ತಿದ್ದನು. ಆತನಿಗೆ ಇಬ್ಬರು ಗಂಡು ಮಕ್ಕಳು, ಒಂದು ಹೆಣ್ಣು ಮಗು ಇತ್ತು. ವಿಜಯವರ್ಮ ಅರವತ್ತು ವರ್ಷಗಳ ಕಾಲ ಉತ್ತಮ ಆಡಳಿತ ನಡೆಸಿ ಜನರ ಹೃದಯವನ್ನು ಗೆದ್ದ ರಾಜ ವೃದ್ಧನಾದನು. ತನ್ನ ಮರಣದ ನಂತರ ರಾಜನಾಗಿ ಯಾರಿಗೆ ಪಟ್ಟಾಭಿಷೇಕ ಮಾಡುವು ಎಂಬ ವಿಷಯದ ಕುರಿತು ವಿಜಯ ವರ್ಮನಲ್ಲಿ ಆಲೋಚನೆ ಮೂಡಿತು.



ದೊಡ್ಡ ಮಗ ನರಸಿಂಹನು ಯಾವಾಗಲೂ ಹುಡಿಗಿಯರೊಂದಿಗೆ ನೃತ್ಯ ಮಾಡುವುದು, ಸಂಗೀತ ಕೇಳುವುದು, ಹೊಟ್ಟೆ ತುಂಬಾ ತಿನ್ನುವುದನ್ನು ಬಿಟ್ಟರೆ ಪ್ರಜೆಗಳ ಬಗ್ಗೆ, ರಾಜಕೀಯದ ಬಗ್ಗೆ ಆತನಿಗೆ ಶ್ರದ್ಧೆಯೇ ಇರಲಿಲ್ಲ. ಎರಡನೇ ಮಗ ರಾಯಣ್ಣ ಯಾವಾಗಲೂ ಬೇಟೆಗೆ ಹೋಗುತ್ತಿದ್ದನಲ್ಲದೆ, ಮದ್ಯಪಾನಕ್ಕೆ ಶರಣಾಗಿದ್ದನು. ಹೀಗೆ ತನ್ನ ಇಬ್ಬರು ಕುಮಾರರು ರಾಜ್ಯವನ್ನಾಳಲು ಯೋಗ್ಯರಲ್ಲ ಎಂಬ ವಿಷಯವನ್ನು ತಿಳಿದು ವಿಜಯವರ್ಮ ತುಂಬಾ ದುಃಖ ಪಟ್ಟನು. ಒಂದು ದಿನ ತನ್ನ ಮಂತ್ರಿಯೊಂದಿಗೆ ಪ್ರಸ್ತಾಪಿಸುತ್ತಾ ನನ್ನ ಇಬ್ಬರು ಕುಮಾರರು ಅಯೋಗ್ಯರು. ರಾಜ್ಯವನ್ನಾಳುವ ಆಸಕ್ತಿ ಇಲ್ಲದವರು, ಇನ್ನು ನಮ್ಮ ರಾಜ್ಯದ ಗತಿ ಏನು? ಎಂದನು.

ಅದಕ್ಕೆ ಮಹಾಮಂತ್ರಿ ನಿಜವೇ ಮಹಾರಾಜ! ಇಬ್ಬರು ಯುವರಾಜರಲ್ಲೂ ಒಬ್ಬರಿಗೂ ರಾಜ್ಯವನ್ನಾಳುವ ಸಾಮರ್ಥ್ಯ ಇಲ್ಲ. ಆದರೆ ನೀವು ತಮ್ಮ ಮಗಳಾದ ಯುವರಾಣಿಯ ವಿಷಯವನ್ನು ಮರೆತ್ತಿದ್ದೀರಿ. ಯುವರಾಣಿ ಬಹಳ ಬುದ್ಧಿವಂತೆ, ರಾಜಕೀಯದ ಬಗ್ಗೆ ಅಪಾರ ಆಸಕ್ತಿ ಉಳ್ಳವಳು, ಪ್ರತಿದಿನ ಪ್ರಜೆಗಳೊಂದಿಗೆ ಮಾತನಾಡಿ ಅವರ ಕಷ್ಟ ಸುಖಗಳನ್ನು ವಿಚಾರಿಸುತ್ತಾಳೆ. ಬಹಳ ಕ್ರಮಶಿಕ್ಷಣವಿದೆ. ನಾಯಕಿಯಾಗುವ ಅರ್ಹತೆ ಆಕೆಯಲ್ಲಿದೆ ಎಂಬುದು ನನ್ನ ನಂಬಿಕೆ ಎಂದನು.


ಮಂತ್ರಿಯ ಮಾತುಗಳನ್ನು ಆಲಿಸಿದ ಮಹಾರಾಜ ಆದರೆ ಯುವರಾಜರೇ ಹೊರತು ಯುವರಾಣಿ ರಾಜ್ಯವನ್ನಾಳುವುದು ನಮ್ಮ ಸಂಪ್ರದಾಯವಲ್ಲ! ಎಂದನು. ಅದಕ್ಕೆ ಮಂತ್ರಿ ಮಹಾರಾಜ! ಸಂಪ್ರದಾಯಗಳು ನಾಲ್ಕು ಜನರಿಗೆ ಒಳ್ಳೆಯದನ್ನು ಮಾಡುವ ಉದ್ದೇಶದಿಂದ ರೂಪಿತವಾಗಿವೆ. ಅದನ್ನು ಬದಲಿಸುವುದರಿಂದಾಗಿ ರಾಜ್ಯಕ್ಕೆ ಮತ್ತು ಪ್ರಜೆಗಳಿಗೆ ಒಳ್ಳೆಯದಾಗುತ್ತದೆ ಅಂದರೆ ಅದರಲ್ಲಿ ತಪ್ಪೇನು ಇಲ್ಲ ಎಂದನು. ಆಗ ವಿಜಯವರ್ಮ ಸಂತೋಷದಿಂದ ಯುವರಾಣಿಗೆ ಪಟ್ಟಾಭಿಷೇಕ ಮಾಡಿದನು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ