ಒಂದು ಕಾಡಿನಲ್ಲಿ ಒಂದು ಸುಂದರವಾದ ಜಿಂಕೆ
ವಾಸಿಸುತ್ತಿತ್ತು. ಅದು ದಿನವೆಲ್ಲಾ ಆಡುತ್ತಾ ನಲಿಯುತ್ತ ಸಂತೋಷದಿಂದ ಕಳೆಯುತ್ತಿತ್ತು. ಒಂದು
ದಿನ ಬೇಟೆಗಾರನೊಬ್ಬ ಆ ಕಾಡಿಗೆ ಬೇಟೆಗೆಂದು
ಬಂದನು. ಅವನಿಗೆ ಒಂದು ಮರದ ಕೆಳಗೆ ಹುಲ್ಲು ಮೇಯುತ್ತಿದ್ದ ಜಿಂಕೆ ಕಾಣಿಸಿತು. ಜಿಂಕೆಗೂ ಸಹ ಆ ಬೇಟೆಗಾರ
ಕಾಣಿಸಿದನು. ತಕ್ಷಣ ಅಲ್ಲಿಂದ ಜಿಂಕೆ ಓಡಲು ಆರಂಭಿಸಿತು. ಬೇಟೆಗಾರನೂ ಸಹ ವೇಗವಾಗಿ ಜಿಂಕೆಯನ್ನು
ಹಿಂಬಾಲಿಸಿದನು. ಅದನ್ನು ಕಂಡು ಜಿಂಕೆ ಮತ್ತಷ್ಟು ವೇಗವಾಗಿ ಓಡಿ ದಾರಿಯ ಪಕ್ಕದಲ್ಲಿ ದಟ್ಟವಾಗಿ
ಬೆಳೆದಿದ್ದ ಪೊದೆಗಳಲ್ಲಿ ಅವಿತುಕೊಂಡಿತು.
ಕೆಲವು ಕ್ಷಣಗಳ ನಂತರ ಬೇಟೆಗಾರನು ಆ ಪೊದೆಗಳ ಬಳಿಗೆ ಬಂದನು. ಆದರೆ ಆ ಪೊದೆಗಳು ಬಹಳ
ದಟ್ಟವಾಗಿದ್ದರಿಂದ ಅಲ್ಲಿದ್ದ ಜಿಂಕೆ ಅವನಿಗೆ ಕಾಣಿಸಲಿಲ್ಲ. ನಂತರ ಬೇಟೆಗಾರ ಜಿಂಕೆಯನ್ನು
ಹುಡುಕುತ್ತಾ ಮುಂದಕ್ಕೆ ಹೊರಟು ಹೋದನು. ಬೇಟೆಗಾರನು ಹೋದ ತಕ್ಷಣ ಜಿಂಕೆ “ಅಬ್ಬಾ! ಅಪಾಯ ತಪ್ಪಿತು, ಬದುಕಿತು ಬಡಜೀವ’ ಎಂದು ನಿಟ್ಟುಸಿರು ಬಿಟ್ಟಿತಲ್ಲದೆ
ಅಲ್ಲಿಯೇ ನಿಂತು ಅ ಪೊದೆಗಳಿಗೆ ಆವರಿಸಿಕೊಂಡಿದ್ದ ಎಲೆ ಮತ್ತು ಹುಲ್ಲನ್ನು ಮೇಯಲಾರಂಭಿಸಿತು. ಆ
ಸಂದರ್ಭದಲ್ಲಿ ಪೊದೆಗಳು ಅಲುಗಾಡಿದ್ದರಿಂದ ಶಬ್ದ ಬಂದಿತು . ಆ ಶಬ್ದವು ಹತ್ತಿರದಲ್ಲೇ ಇದ್ದ
ಬೇಟೆಗಾರನಿಗೆ ಕೇಳಿಸಿತು. ಜಿಂಕೆ ಆ ಪೊದೆಗಳಲ್ಲಿಯೇ ಇದೇ ಎಂದು ಗ್ರಹಿಸಿದ ಆ ಬೇಟೆಗಾರ ತಕ್ಷಣ
ಪೊದೆಯತ್ತ ಬಾಣವನ್ನು ಬಿಟ್ಟನು. ಆ ಬಾಣ ಗುರಿತಪ್ಪಿ ಜಿಂಕೆಯ ಪಕ್ಕದಿಂದ ಹಾದು ಹೋಯಿತು. ಇದರಿಂದ
ಜಿಂಕೆಯು ಪ್ರಾಣಾಪಾಯದಿಂದ ಪಾರಾಯಿತು. ನಂತರ
ಕ್ಷಣವೂ ಆಲಸ್ಯ ಮಾಡದೆ ಅದು ಅಲ್ಲಿಂದ ಓಡಿಹೋಯಿತು.
“ಅಪಾಯದಲ್ಲಿದ್ದ ನನ್ನನ್ನು ಆ ದಟ್ಟವಾದ
ಪೊದೆಗಳು ರಕ್ಷಿಸಿದವು, ಆದರೆ ನಾನು ಕೃತಜ್ಞತೆಗಳನ್ನು ಹೇಳದೆ ಆ ಪೊದೆಗಳಿಗೆ ಆವರಿಸಿದ್ದ ಎಲೆ
ಮತ್ತು ಹುಲ್ಲನ್ನೇ ತಿಂದಿದ್ದರಿಂದಲೇ ನಾನು ಪ್ರಾಣಾಪಾಯಕ್ಕೆ ಸಿಲುಕಬೇಕಾಯಿತು. ಆದರೆ ತನ್ನ
ಅದೃಷ್ಟ ಚೆನ್ನಾಗಿದ್ದರಿಂದಾಗಿ ತನಗೇನು ಆಗಲಿಲ್ಲವೆಂದು ಮನದಲ್ಲೇ ಹೇಳಿಕೊಂಡು, ತನ್ನ ಜೀವ ರಕ್ಷಿಸಿದ ಆ ಪೊದೆಗಳಿಗೆ
ಕೃತಜ್ಞತೆಗಳನ್ನು ಸಲ್ಲಿಸುತ್ತ ಮುಂದೆ ಸಾಗಿತು ಆ
ಜಿಂಕೆ.


ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ