ರಾಮನಾಥಪುರ ಎಂಬ ಹಳ್ಳಿಯಲ್ಲಿ ಭೀಮಯ್ಯ ಎಂಬ ರೈತ ವಾಸಿಸುತ್ತಿದ್ದನು. ಭೀಮಯ್ಯನಿಗೆ ಒಂದು
ತೋಟವಿತ್ತು.
ಭೀಮಯ್ಯನ ತೋಟದಲ್ಲಿನ ಒಂದು ಮರದ ಮೇಲೆ ಒಂದು ಪಕ್ಷಿ ಗೂಡನ್ನು ಕಟ್ಟಿಕೊಂಡು ಮರಿಗಳನ್ನು
ಹಾಕಿತ್ತು. ಒಂದಿನ ಮಗನ ಜೊತೆ ತೋಟಕ್ಕೆ ಬಂದನು. ಮರಗಳನ್ನು ನೋಡಿದ ಭೀಮಯ್ಯ “ಅಯ್ಯೋ!ಮರಗಳೆಲ್ಲಾ ಒಣಗಿಹೋಗಿವೆ. ನಾಳೆ
ನಮ್ಮ ಬಂಧುಗಳನ್ನು ಕರೆದುಕೊಂಡು ಬಂದು ಈ ಮರಗಳನ್ನು ಕಡಿಸಿ ನಂತರ ಹೊಸಮರಗಳನ್ನು ನೆಡೋಣ” ವೆಂದು ಮಗನಿಗೆ ಹೇಳಿದನು.
ಮರಿಗಳಿಗೆ ಆಹಾರವನ್ನು ತರಲು ಹೋಗಿದ್ದ ತಾಯಿಪಕ್ಷಿ ಮರಳಿ ಗೂಡಿಗೆ ಬಂದಾಗ “ಅಮ್ಮ!ಈ ದಿನ ತೋಟಕ್ಕೆ ತೋಟದ ಮಾಲೀಕ ಭೀಮಯ್ಯ
ಮತ್ತು ಆತನ ಮಗ ಬಂದಿದ್ದರು, ಬಂಧುಗಳನ್ನು ಕರೆಯತಂದು ನಾಳೆ ಈ ಮರಗಳನ್ನು ಕಡಿದು ಹಾಕುತ್ತಾರಂತೆ” ಎಂದು ಮರಿಗಳು ಹೇಳಿದವು.
ತಾಯಿಪಕ್ಷಿ ಅವರ ಮಾತುಗಳನ್ನು ಕೇಳಿ ಸುಮ್ಮನಾಯಿತು.
ಮರುದಿನ ಭೀಮಯ್ಯ ಮಗನ ಜೊತೆಗೂಡಿ ತೋಟಕ್ಕೆ ಬಂದು “ನಾಳೆ ಕೂಲಿಯವರನ್ನು ಕರೆತಂದು ಈ ಮರಗಳನ್ನು ಕಡಿಸಿಬಿಡೋಣ!”ಎಂದು ಭೀಮಯ್ಯ ಮಗನಿಗೆ ಹೇಳಿದನು. ಅವರ
ಮಾತುಗಳನ್ನು ಕೇಳಿಸಿಕೊಂಡ ಮರಿಗಳು ,ಆಹಾರಕ್ಕಾಗಿ ಹೋಗಿದ್ದ ತಾಯಿ ಪಕ್ಷಿ ಮರಳಿ ಗೂಡಿಗೆ ಬಂದಾಗ
ಮರಿಗಳು ಆ ವಿಷಯವನ್ನು ಹೇಳಿದರು. ಆದರೆ ತಾಯಿ ಪಕ್ಷಿ ಆ ವಿಷಯವನ್ನು ಕೇಳಿ ಸುಮ್ಮನಾಯಿತು. ಮೂರನೆ
ದಿನ ಭೀಮಯ್ಯ ಮಗನೊಂದಿಗೆ ತೋಟಕ್ಕೆ ಬಂದು “ನಾಳೆ ಸ್ನೇಹಿತರನ್ನು ಕರೆತಂದು ಮರಗಳನ್ನು ಕಡಿಸೋಣ!”ಎಂದನು. ಎಂದಿನಂತೆ ತಾಯಿಪಕ್ಷಿಗೆ ಮರಗಳು ಈ
ವಿಷಯವನ್ನು ಹೇಳಿದರು ಆ ವಿಷಯವನ್ನೂ ಕೇಳಿ ತಾಯಿ ಪಕ್ಷಿ ಸುಮ್ಮನಾಯಿತು.
ನಾಲ್ಕನೆ ದಿನ ಮತ್ತೆ ಭೀಮಯ್ಯ ಮಗನೊಂದಿಗೆ ತೋಟಕ್ಕೆ ಬಂದು “ಲಾಭವಿಲ್ಲ! ನಾಳೆ ನಾವೇ ಮರಗಳನ್ನು ಕಡಿದು
ಬಿಡೋಣ!” ಎಂದು ಮಗನಿಗೆ ಹೇಳಿದನು. ಆ
ವಿಷಯವನ್ನು ತಾಯಿ ಪಕ್ಷಿ ಮರಳಿ ಗೂಡಿಗೆ ಬಂದಾಗ ಮರಿಗಳು ಹೇಳಿದವು. ಆ ವಿಷಯವನ್ನು ಕೇಳಿದ ತಕ್ಷಣ
ತಾಯಿ ಪಕ್ಷಿ ತನ್ನ ಮರಿಗಳನ್ನು ಎತ್ತಿಕೊಂಡು ಹೋಗಿ ಬೇರೆ ಮರದ ಮೇಲೆ ಗೂಡನ್ನು ಕಟ್ಟಿ ಅದರಲ್ಲಿ
ಇಟ್ಟಿತು.
ಆ ಪಕ್ಷಿಯ ಮರಿಗಳು “ಅಮ್ಮ! ಮೊದಲನೆ ದಿನ, ಎರಡನೇ ದಿನ, ಮೂರನೇ ದಿನ , ನಾವು ಹೇಳಿದನ್ನು ಕೇಳಿ ಸುಮ್ಮನಿದ್ದ
ನೀನು ಈ ನಮ್ಮನ್ನು ಎತ್ತಿಕೊಂಡು ಬಂದೆಯಲ್ಲ ಏಕೆ” ಎಂದು ಪ್ರಶ್ನಿಸಿದವು. ಅದಕ್ಕೆ ತಾಯಿಪಕ್ಷಿ “ಬಂಧುಗಳನ್ನು, ಸ್ನೇಹಿತರನ್ನು,
ಕೂಲಿಯವರನ್ನು ನಂಬಿಕೊಂಡರೆ ಕೆಲಸಗಳು ನಡೆಯಲಾರವು, ಯಾರ ಕೆಲಸ ಅವರೇ ಮಾಡಿಕೊಳ್ಳೋಣವೆಂದರೆ ತಕ್ಷಣ
ಆಗುತ್ತದೆ” ಎಂದು ಉತ್ತರಿಸಿತು.


ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ