ಬುಧವಾರ, ಡಿಸೆಂಬರ್ 13, 2017

ಯಾರು ಕಳ್ಳ? - ಸಣ್ಣ ಕಥೆ

ಒಂದು ಊರಿನಲ್ಲಿ ಒಬ್ಬ ವಯಸ್ಸಾದ ರೈತ ವಾಸಿಸುತ್ತಿದ್ದನು. ಆತನಿಗೆ ನಾಲ್ಕು ಜನ ಗಂಡು ಮಕ್ಕಳಿದ್ದರು. ಒಮ್ಮೆ ಆ ರೈತನಿಗೆ ತೀವ್ರವಾಗಿ ಆರೋಗ್ಯ ಕೆಟ್ಟಿತು. ಎಷ್ಟು ಜನ ವೈದ್ಯರ ಬಳಿ ತೋರಿಸಿದರೂ ಬದುಕುವುದು ಕಷ್ಟ ಎಂದರು.
ಒಂದು ದಿನ ನಾಲ್ಕು ಜನ ಗಂಡುಮಕ್ಕಳನ್ನು ಹತ್ತಿರ ಬನ್ನಿ ಎಂದು ಕರೆದನು ರೈತ. ನಾನು ಇನ್ನೂ ಹೆಚ್ಚು ಕಾಲ ಬದುಕುವುದಿಲ್ಲ ನನ್ನ ಜೀವನದಲ್ಲಿ ಬೆವರು ಸುರಿಸಿ ನಾನು ಸ್ವಲ್ಪ ಹಣ ಮತ್ತು ನಾಕ್ಕು ವಜ್ರಗಳನ್ನು ಸಂಪಾದಿಸಿದ್ದೆನೆ, ಅದನ್ನು ಒಂದು ಪಟ್ಟಿಗೆಯಲ್ಲಿ ಭದ್ರವಾಗಿಟ್ಟಿದ್ದೇನೆ. ನಿಮಗೆ ಅವಶ್ಯಕವಾದಾಗ ನಿಮ್ಮ ತಾಯಿಯನ್ನು ಕೇಳಿ ನಾಲ್ಕು ಜನರು ಸಮಾನವಾಗಿ ಹಂಚಿಕೊಳ್ಳಿ ಎಂದು ಹೇಳಿ ಮರಣ ಹೊಂದಿದನು.


ಕೆಲವುದಿನಗಳ ನಂತರ ನಾಲ್ಕು ಜನರು ಬೇರೆಯಾಗಿ ವ್ಯಾಪಾರಗಳನ್ನು ಪ್ರಾರಂಭಿಸಬೇಕೆಂದುಕೊಂಡರು. ಬಂಡವಾಳಕ್ಕಾಗಿ ತಂದೆ ಸಂಪಾದಿಸಿದ ಹಣ ಮತ್ತು ವಜ್ರಗಳನ್ನು ಹಂಚಿಕೊಳ್ಳೋಣವೆಂದು ನಿರ್ಣಯಿಸಿಕೊಂಡು ನಾಲ್ಕು ಜನರಲ್ಲಿ ಕಿರಿಯ ಸಹೋದರನಿಗೆ ಹಣದ ಪೆಟ್ಟಿಗೆ ತೆಗೆದುಕೊಂಡು ಬರುವಂತೆ ಮನೆಗೆ ಕಳುಹಿಸಿದರು. ಜಗಳವಾಡದೆ ಹಂಚಿಕೊಳ್ಳಿ ಮಕ್ಕಳೇಎಂದು ಹೇಳುತ್ತಾ ಕಿರಿಯ ಮಗನ ಕೈಯಲ್ಲಿ ಹಣದ ಪೆಟ್ಟಿಗೆ ಇಟ್ಟಳು ಅವರ ತಾಯಿ.
ಮನೆಯಿಂದ ಹೊರಗೆ ಬರುವುದರೊಳಗೆ ಆ ಪೆಟ್ಟಿಗೆಯಲ್ಲಿದ್ದ ವಜ್ರಗಳಲ್ಲಿ ಒಂದನ್ನು ಕದ್ದನು. ನಂತರ ಪೆಟ್ಟಿಗೆ ತೆರೆದು ನೋಡಿದ ಉಳಿದ ಮೂವರು ಸಹೋದರರು ಚಕಿತರಾದರು. ಇನ್ರ್ನೇಂದು ವಜ್ರ ಏನಾಯಿತುಎಂದು ಕಿರಿಯ ಸಹೋದರನಿಗೆ ಕೇಳಿದಾಗ ತನಗೆ ಗೊತ್ತಿಲ್ಲವೆಂದು ಹೇಳಿದನು.

ಯಾರು ಕಳ್ಳನೆಂದು ತಿಳಿಯಬೇಕಾದರೆ ನಾವು ಊರಿನ ಗೌಡರಾದ ರಾಮಯ್ಯನ ಬಳಿ ಹೋಗಬೇಕು ಎಂದನು ಹಿರಿಯ ಸಹೋದರ ಸರಿ ಎಂದು ನಾಲ್ಕು ಜನರು ರಾಮಯ್ಯನ ಬಳಿ ಹೋದರು, ಹೋಗಿ ನಡೆದ ಸಂಗತಿಯನ್ನು ರಾಮಯ್ಯನಿಗೆ ತಿಳಿಸಿದರು. ಆ ಸಹೋದರರು ಹೇಳಿದ ಸಂಗತಿಯನ್ನು ಜಾಗ್ರುಕತೆಯಿಂದ ಆಲಿಸಿದನು ರಾಮಯ್ಯ. ನನ್ನ ಬಳಿ ಒಂದು ಮಂತ್ರದ ಕೋಲಿದೆ ಅದನ್ನು ನಾಲ್ಕು ತುಂಡುಗಳಾಗಿ ಮಾಡಿ ಒಂದೊಂದು ಕುಂಡದಲ್ಲಿ ಹಾಕುತ್ತೇನೆ, ಆ ಕುಂಡವನ್ನು ನೀವು ನಾಲ್ಕು ಜನ ತಲೆಯ ಮೇಲೆ ಇಟ್ಟುಕೊಂಡು ಊರಿನ ಆಚೆ ಇರುವ ದೇವಾಲಯದವರೆಗೆ ಹೋಗಿ ಹಿಂತಿರುಗಿ ಬರಬೇಕು. ಇಲ್ಲಿಗೆ ಬರುವಷ್ಟರಲ್ಲಿ ಯಾರ ಕುಂಡದಲ್ಲಿ ಕೋಲು ಎರಡರಷ್ಟು ಉದ್ದ ಬೆಳೆಯುತ್ತದೊ ಅವರೆ ನಿಜವಾದ ಕಳ್ಳ ಎಂದು ಅವರಿಗೆ ರಾಮಯ್ಯ ಹೇಳಿದನು.

ನಾಲ್ಕು ಜನ ಸಹೋದರರು ಕುಂಡಗಳನ್ನು ಹೊತ್ತು ಹೊರಟರು. ಊರಿನ ಆಚೆಗೆ ಬರುವಷ್ಟರಲ್ಲಿ ಕಳ್ಳತನ ಮಾಡಿದ್ದ ರೈತನ ಕಿರಿಯ ಮಗನಿಗೆ ಒಂದು ಆಲೋಚನೆ ಬಂದಿತು. ಕಳ್ಳತನ ಮಾಡಿದ್ದು ನಾನೇ ಅಲ್ಲವ!ಅಂದರೆ ನನ್ನ ಕುಂಡದಲ್ಲಿ ಕೋಲು ಉದ್ದವಾಗಿ ಬಿಡುತ್ತದೆ. ಆದ್ದರಿಂದ ಈ ಕೋಲನ್ನು ಆರ್ಧಕ್ಕೆ ಮುರಿದು ಬಿಟ್ಟರೆ ಸರಿಹೋಗುತ್ತದೆ ಎಂದು ಕೊಂಡು ಕೋಲನ್ನು ಮುರಿದು ಬಿಟ್ಟನು.

ನಂತರ ನಾಲ್ಕು ಜನರು ರಾಮಯ್ಯನ ಬಳಿ ಹೋದರು ಕುಂಡಗಳಲ್ಲಿದ್ದ ಕೋಲುಗಳನ್ನು ತೆಗೆದು ನೋಡಿದಾಗ ಕಿರಿಯ ಸಹೋದರನ ಕೋಲು ಸ್ವಲ್ಪ ಚಿಕ್ಕದಾಗಿ ಕಾಣಿಸಿತು. ವಜ್ರವನ್ನು ಕದ್ದ ಕಳ್ಳಯಾರೆಂದು ಎಲ್ಲರಿಗೂ ಅರ್ಥವಾಯಿತು.

ನಂತರ ರಾಮಯ್ಯ ನಿಜವಾಗಿ ಈ ಕೋಲಿನಲ್ಲಿ ಯಾವುದೇ ರೀತಿಯ ಮಾಯಾಮಂತ್ರವಿಲ್ಲ,ನಿಜವಾದ ಕಳ್ಳನನ್ನು ಹಿಡಿಯ ಬೇಕೆಂದು ಈ ರೀತಿ ನಾಟಕವಾಡಿದೆ ಎಂದು ವಿವರಿಸಿದನು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ