ಬುಧವಾರ, ಡಿಸೆಂಬರ್ 13, 2017

ಅಹಂಕಾರಿ ನೊಣ - ಸಣ್ಣ ಕಥೆ

ಒಂದು ಕಾಡಿನಲ್ಲಿ ಒಂದು ಜೇನು ನೊಣ ವಾಸಿಸುತಿತ್ತು. ಅದು ತುಂಬಾ ಸೋಮಾರಿಯಾಗಿತ್ತು. ಅದಕ್ಕೆ ಕೆಲಸ ಮಾಡಲು ಬರುತ್ತಿರಲಿಲ್ಲ. ಏನೂ ಕೆಲಸ ಮಾಡದಿರುವುದರಿಂದ ವಿಧ-ವಿಧವಾಗಿ ಆಲೋಚಿಸುತ್ತಾ ಕಾಲಹರಣ ಮಾಡುತಿತ್ತು. ಅಷ್ಟೇ ಅಲ್ಲದೆ ಅದಕ್ಕೆ ತನ್ನ ಶಕ್ತಿ ಸಾಮರ್ಥ್ಯದ ಮೇಲೆ ಅಪಾರವಾದ ನಂಬಿಕೆ ಇತ್ತು.

ಒಂದು ದಿನ ಎಂದಿನಂತೆ ಜೇನು ನೊಣ ಖಾಲಿಯಾಗಿ ಮರದ ಕೊಂಬೆಯ ಮೇಲೆ ಕುಳಿತಿತ್ತು. ಅಷ್ಟರಲ್ಲಿ ಹುಲ್ಲನ್ನು ಮೇಯುತ್ತ ಹಸುವೊಂದು ಆ ಮರದ ಕೆಳಕ್ಕೆ ಬಂದಿತು. ಅದನ್ನು ನೋಡಿದ ಜೇನು ನೊಣ ತಕ್ಷಣ ತನ್ನ ರೆಕ್ಕೆಗಳನ್ನ ಆಡಿಸುತ್ತ ಹಾರಿ ಹೋಗಿ ಆ ಹಸುವಿನ ಕೊಂಬಿನ ಮೇಲೆ ಕುಳಿತುಕೊಂಡಿತು. ಮಿತ್ರನೇ!ನೀನು ಹೇಗಿದ್ದಿಯಾ?ಇಷ್ಟಕ್ಕೂ ನೀನು ಇಲ್ಲಿಗೆ ಏಕೆ ಬಂದೆ?" ಎಂದು ಕೇಳಿತು ನೊಣ. ಹಸು ಅದರ ಮಾತುಗಳನ್ನು ಕೇಳಿಸಿಕೊಳ್ಳುವುದಿರಲಿ ನಿಜವಾಗಿ ತನ್ನ ಕೊಂಬಿನ ಮೇಲೆ ಜೇನು ನೊಣ ಕುಳಿತು ಕೊಂಡಿದೆ ಎಂಬುದೇ ತಿಳಿಯಲಿಲ್ಲ. "ನನ್ನ ಭಾರವನ್ನು ನೀನು ಸಹಿಸುಕೊಳ್ಳುತ್ತೀಯ?ನಿನಗೆ ನೋವಾದರೆ ಮುಚ್ಚು ಮರೆಯಿಲ್ಲದೆ ಹೇಳು ನಾನು ಹಾರಿಹೋಗುತ್ತೇನೆ" ಜೇನು ನೊಣ ಹೇಳಿತು.

ಹಸು ಅದರ ಮಾತನ್ನು ಕಿವಿಗೆ ಹಾಕಿಕೊಳ್ಳದೆ ಹುಲ್ಲನ್ನು ಮೇಯುವುದರಲ್ಲಿ ತಲ್ಲೀನವಾಗಿತ್ತು. ಅಷ್ಟರಲ್ಲಿ ಜೋರಾಗಿ ಗಾಳಿ ಬೀಸಿತು. ಆಗಾಳಿಯ ರಭಸಕ್ಕೆ ಜೇನುನೊಣ ಒಂದು ಸಾರಿ ಮೇಲಕ್ಕೆ ಹಾರಿ ಮತ್ತೆ ಹಸುವಿನ ಕೊಂಬಿನ ಮೇಲೆ ಕುಳಿತುಕೊಂಡಿತು. ತನ್ನ ರೆಕ್ಕೆಗಳನ್ನು ಪಟಪಟನೆ ಬೀಸುತ್ತ ಎಷ್ಟೇ ಪ್ರಯತ್ನ ಮಾಡಿದರು ಅದು ಕೊಂಬಿನ ಮೇಲೆ ಕುಳಿತುಕೊಳ್ಳಲಾಗಲಿಲ್ಲ. ಜೋರಾಗಿ ಬೀಸುತ್ತಿದ್ದ ಗಾಳಿ ಅದನ್ನು ಬಹಳ ದೂರದವರೆಗೆ ಎಳೆದುಕೊಂಡು ಹೋಗಿ ಬೀಳಿಸಿ ಬಿಟ್ಟಿತು. ಕೊನೆಗೆ ಜೇನು ನೊಣ ಒಂದು ಕೊಂಬೆಗೆ ಸಿಕ್ಕಿಕೊಂಡು ತನ್ನ ಪ್ರಾಣವನ್ನು ರಕ್ಷಿಸಿಕೊಂಡಿತು. ಆದರೆ ಅದಕ್ಕೆ ಮೊದಲು ಹಸು ಎಲ್ಲಿ ನಿಂತು ಹುಲ್ಲು ಮೇಯುತ್ತಿತ್ತೋ ಅಲ್ಲಿಯೇ ನಿಶ್ಚಿಂತವಾಗಿ ಹುಲ್ಲನ್ನು ಮೇಯುತ್ತಿರುವುದು ನೊಣಕ್ಕೆ ಕಾಣಿಸಿತು.


ಆಗ ಜೇನು ನೊಣಕ್ಕೆ ತನ್ನ ಶಕ್ತಿಯಂತಹದ್ದು ಎಂದು ಅರ್ಥವಾಯಿತು ಆದರೆ ಅದನ್ನು ಒಪ್ಪಿಕೊಳ್ಳಲು ಅದಕ್ಕೆ ಅಹಂಕಾರ ಅಡ್ಡ ಬಂದಿತು. ಆ.....ಒಂದು ಹಸು ಮಾತ್ರ ನನಗಿಂತ ಬಲವಾದದ್ದು ಎಂದುಕೊಂಡು ಕೊಂಬೆಯ ಮೇಲಿಂದ ಹಾರಿಹೋಯಿತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ